ಬೆಂಗಳೂರು: ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ರೌಡಿಶೀಟರ್ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ. ಹೊಸಕೆರೆಹಳ್ಳಿಯ ದ್ವಾರಕನಗರದಲ್ಲಿ ಸೋಮವಾರ ರಾತ್ರಿ ಕೃತ್ಯ ನಡೆದಿದ್ದು, ಪ್ರಕಾಶನಗರದ 17 ವರ್ಷದ ಯುವತಿ ಮೃತಪಟ್ಟವಳು.
ಮದುವೆಗೆ ಸಿದ್ಧತೆ ಮಾಡಿದ್ದ
ಪ್ರೇಯಸಿಯನ್ನು ವಿವಾಹವಾಗಲು ಯೋಚಿಸಿದ್ದ ಆರೋಪಿ, ಇದಕ್ಕಾಗಿ ಎರಡು ವಾರಗಳ ಹಿಂದಷ್ಟೆ ದ್ವಾರಕನಗರದಲ್ಲಿ ಮನೆ ಬಾಡಿಗೆ ಪಡೆದಿದ್ದ. ಮಾತನಾಡುವ ನೆಪದಲ್ಲಿ ರಾತ್ರಿ 7 ಗಂಟೆಗೆ ಪ್ರೇಯಸಿಯನ್ನು ಮನೆಯಿಂದ ಹೊರಗೆ ಕರೆಸಿಕೊಂಡು ಬಲವಂತವಾಗಿ ದ್ವಾರಕನಗರಕ್ಕೆ ಕರೆತಂದಿದ್ದ. ಅಷ್ಟರಲ್ಲಿ ಆ ಮನೆಯಲ್ಲಿ ಅರಿಶಿಣ ದಾರದ ತಾಳಿ ಸೇರಿ ಮದುವೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದನ್ನು ಕಂಡ ಯುವತಿ ಮದುವೆಗೆ ನಿರಾಕರಿಸಿದ್ದಾಳೆ. ಆಗ ಕೋಪಗೊಂಡು ಚೂರಿಯಿಂದ ನಾಲ್ಕು ಬಾರಿ ಇರಿದು ಹತ್ಯೆ ಮಾಡಿದ್ದಾನೆ.
ಹಂತಕ ಪ್ರಕಾಶನಗರದ ಮುನಿರಾಜು ಅಲಿಯಾಸ್ ಆದಿಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಮುನಿರಾಜು ಸೋಮವಾರ ರಾತ್ರಿ ಬಲವಂತವಾಗಿ ಪ್ರೇಯಸಿಗೆ ಅರಿಶಿಣದ ದಾರದ ತಾಳಿ ಕಟ್ಟಿ ಮದುವೆಯಾಗಲು ಯತ್ನಿಸಿದಾಗ ವಿರೋಧ ವ್ಯಕ್ತಪಡಿಸಿದ್ದಾಳೆ. ಕೆರಳಿದ ಮುನಿರಾಜು ಚೂರಿಯಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 6ಕ್ಕೂ ಹೆಚ್ಚು ಪ್ರಕರಣಗಳು ಮುನಿರಾಜು ಮೇಲಿವೆ.
ಪ್ರಕಾಶನಗರದಲ್ಲೇ ಯುವತಿಯ ಪಾಲಕರೂ ವಾಸಿಸುತ್ತಿದ್ದು, ಒಂದೇ ಏರಿಯಾದಲ್ಲಿ ವಾಸವಾಗಿದ್ದರಿಂದ ಆಕೆಗೆ ಮುನಿರಾಜು ಪರಿಚಯವಿತ್ತು. 3 ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಮುನಿರಾಜು ನಡವಳಿಕೆಯಿಂದ ಬೇಸತ್ತಿದ್ದ ಯುವತಿ, ಆತನಿಂದ ದೂರವಾಗಲು ಮುಂದಾಗಿದ್ದಳು. ಇದರಿಂದ ಕುಪಿತಗೊಂಡಿದ್ದ ಆತ, ಆಕೆಯ ಮನವೊಲೈಕೆಗೆ ಯತ್ನಿಸಿದ್ದ.
ಇದನ್ನೂ ಓದಿ: ಹಾಸಿಗೆ ಮಾರಾಟಕ್ಕೆ ಹೊರಟು 91,000 ರೂಪಾಯಿ ಕಳ್ಕೊಂಡ್ರು..
ದೂರು ನೀಡಿದ್ದ ಪಾಲಕರು: ಮಗಳು ನಾಪತ್ತೆಯಾಗಿದ್ದರಿಂದ ಕಂಗಾಲಾಗಿದ್ದ ಪಾಲಕರು ರಾಜಾಜಿನಗರ ಠಾಣೆಗೆ ದೂರು ನೀಡಿದ್ದರು. ಅಲ್ಲದೆ, ಮಗಳನ್ನು ಮುನಿರಾಜು ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದರು. ಈ ಬಗ್ಗೆ ರಾಜಾಜಿನಗರ ಪೊಲೀಸರು ತನಿಖೆ ಶುರು ಮಾಡಿದ್ದರು. ಅಷ್ಟರಲ್ಲಿ ಗಿರಿನಗರ ಪೊಲೀಸರಿಗೆ ಹೊಸಕೆರೆ ಸಮೀಪದ ದ್ವಾರಕನಗರದಲ್ಲಿ ಕೊಲೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯರಾಜಧಾನಿಯಲ್ಲಿ ಪೊಲೀಸರ ಜತೆ ಕೆಲಸ ಮಾಡುವಾಸೆಯೆ?- ಇಲ್ಲಿದೆ ಅವಕಾಶ!