ಹಗಲಲ್ಲಿ ಭಿಕ್ಷುಕ, ರಾತ್ರಿ ವೇಳೆ ಸುಲಿಗೆ

ಚಿಕ್ಕಮಗಳೂರು: ಹಗಲಿನಲ್ಲಿ ಭಿಕ್ಷೆ ಬೇಡಿ, ರಾತ್ರಿ ವೇಳೆ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಮದ್ಯ ಸೇವನೆಗೆ ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದಾನೆ. ತುಮಕೂರು ಜಿಲ್ಲೆ ತಿಪಟೂರಿನ ಮೊಹಮ್ಮದ್ ರಫೀಕ್ ಬಂಧಿತ ಆರೋಪಿ. ಈತ ಭಿಕ್ಷೆ ಬೇಡುವುದು ಹಾಗೂ ಒಂಟಿಯಾಗಿ ಸಿಗುವ ವ್ಯಕ್ತಿಗಳನ್ನು ಬೆದರಿಸಿ ಸುಲಿಗೆ ಮಾಡುವುದೇ ಈತನ ಕೆಲಸ.

ರಾಮನಹಳ್ಳಿಯ ರತ್ನಗಿರಿ ಬಡಾವಣೆ ನಿವಾಸಿ ಮೃತ ವ್ಯಕ್ತಿ ಸಿದ್ದಲಿಂಗಸ್ವಾಮಿ ತನ್ನ ಸ್ವಂತ ಕಾರನ್ನೇ ಬಾಡಿಗೆ ಓಡಿಸಿ ಜೀವನ ನಿರ್ವಹಿಸುತ್ತಿದ್ದ. ಈತ ಆರ್ಥಿಕ ಮುಗ್ಗಟ್ಟಿನಿಂದ ತನ್ನ ಕಾರನ್ನು ಬೇರೆಯವರಿಗೆ ಮಾರಾಟ ಮಾಡಿದ್ದ ಎನ್ನಲಾಗಿದೆ. ಆದರೆ ಕಾರನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ. ಈ ಮಧ್ಯೆ ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಪಕ್ಕದ ಹಳೇ ಜೈಲಿನ ಪಾಳು ಕಟ್ಟಡದಲ್ಲಿ ಜ.11ರಂದು ಸಿದ್ದಲಿಂಗಸ್ವಾಮಿ ಶವ ಪತ್ತೆಯಾಗಿತ್ತು. ಈ ಕೊಲೆ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೃತ ಸಿದ್ದಲಿಂಗಸ್ವಾಮಿ ಮೊಬೈಲ್​ನ ಸಿಮ್ ಸುಳಿವು ಹಿಡಿದು ತಿಪಟೂರಿನ ಶಾಂತಿನಗರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.