ಶಾಲೆ ದತ್ತು ಸ್ವೀಕರಿಸಿದ ಇನ್ನರ್​ವೀಲ್

ಬಾಗಲಕೋಟೆ: ಇನ್ನರವೀಲ್ ಕ್ಲಬ್ ಬಳಗವು ಸರ್ಕಾರಿ ಶಾಲೆಗಳ ಅವಶ್ಯಕತೆಗೆ ಸ್ಪಂದಿಸಲು ಎರಡು ಶಾಲೆಗಳನ್ನು ದತ್ತು ಸ್ವೀಕರಿಸುವ ಮೂಲಕ ಜಿಲ್ಲೆಯಲ್ಲಿ ಸಮಾಜಮುಖಿ ಕಾರ್ಯಕ್ಕೆ ಹೊಸ ಅಧ್ಯಾಯ ಬರೆದಿದೆ.

ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇನರ್​ವಿಲ್ ಗ್ರಾಮೀಣ ಪ್ರದೇಶದಲ್ಲಿರುವ ಬಾಗಲಕೋಟೆ ತಾಲೂಕಿನ ಮುರನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಗಲಕೋಟೆ ನಗರದ ವಿದ್ಯಾಗಿರಿ 16ನೇ ಕ್ರಾಸ್​ನಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿದ್ದಾರೆ. ಇನ್ನರ್​ವೀಲ್ ಜಿಲ್ಲಾ ಚೇರಮನ್ ಗೋವಾದ ವನಿತಾ ತಲ್ಹೋಳ್ಳಿಕರ ನೃತೃತ್ವದಲ್ಲಿ ಇನ್ನರವೀಲ್ ಸದಸ್ಯರು ಹ್ಯಾಪಿ ಸ್ಕೂಲ್ ವಾತಾವರಣ ನಿರ್ವಣಕ್ಕೆ ಪೂರಕವಾದ ಸೌಲಭ್ಯ ನೀಡುವುದಾಗಿ ಘೊಷಣೆ ಮಾಡಿದರು.

ಇನ್ನರವೀಲ್ ಅಧ್ಯಕ್ಷೆ ವೀಣಾ ಮೋಟಗಿ, ಕಾರ್ಯದರ್ಶಿ ಗೀತಾ ಗಿರಿಜಾ ಮಾತನಾಡಿ, ಶುದ್ದ ಕುಡಿಯುವ ನೀರಿನ ಘಟಕ, ವಾಷ್​ಬೇಸಿನ್, ಪುಸ್ತಕಗಳು, ವಿಜ್ಞಾನ ಹಾಗೂ ಕ್ರೀಡಾ ಸಲಕರಣೆಗಳನ್ನು ನೀಡಲಾಗಿದ್ದು ಎಲ್ಲವೂ ಮಕ್ಕಳ ಅನುಕೂಲಕ್ಕೆ ಅನುಕೂಲಕರವಾಗಿದೆ. ಸಾರ್ವಜನಿಕರು, ಶಿಕ್ಷಣ ಇಲಾಖೆಯ ನೆರವು ಪಡೆದು ಸೌಲಭ್ಯ ವಂಚಿತ ಶಾಲೆಗಳನ್ನು ಗುರುತಿಸಿ ದತ್ತು ಸ್ವೀಕರಿಸಲಾಗಿದೆ. ವರ್ಷದುದ್ದಕ್ಕೂ ಇವುಗಳ ಬೆಳವಣಿಗೆಗೆ ಶ್ರಮಿಸಲಾಗುವುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡಬಸಪ್ಪ ನೀರಲಕೇರಿ ಮಾತನಾಡಿ, ಇದೊಂದು ಉತ್ತಮ ಕಾರ್ಯಕ್ರಮ. ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಬೇಕೆಂಬ ಸರ್ಕಾರದ ಕಾರ್ಯಕ್ರಮದಲ್ಲಿ ಸಮಾಜದ ಸಹಭಾಗಿತ್ವ ಅನುಕರಣೀಯ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಯೋಜನೆಯಲ್ಲಿಯೂ ಸಹ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಇನ್ನರ್​ವೀಲ್​ನ ಜಿಲ್ಲಾ ಪದಾಧಿಕಾರಿಗಳಾದ ಶಿಲ್ಪಾ ಪಟೇಲ, ಐ.ಎಸ್.ಒ. ಲತಾ ಹೆರಂಜಲ್ಲ, ಕೆ.ಎಸ್. ವರ್ಷಾ, ಮೋಹಿನಿ ಗಾಂವಕರ, ಜಿಲ್ಲಾ ಸಂಪಾದಕಿ ಜ್ಯೋತಿಕಿರಣ ದಾಸ, ಶೋಭಾ ಕಾಮರೆಡ್ಡಿ, ಶಾಲಾ ಶಿಕ್ಷಕರು, ಸಿಬ್ಬಂದಿ, ಮುಖ್ಯಗುರು ಎಚ್.ಎಂ. ಮಂಜಪ್ಪನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇನ್ನರ್​ವೀಲ್ ಪದಾಧಿಕಾರಿಗಳು ಪರಿಶ್ರಮ ಪಟ್ಟು ಹ್ಯಾಪಿ ಸ್ಕೂಲ್ ಯೋಜನೆಯಡಿ ಶಾಲೆಗಳನ್ನು ದತ್ತು ಸ್ವೀಕರಿಸಿದ್ದು ಸಂತಸ. ಮಕ್ಕಳು ಶಾಲೆಯಿಂದ ದೂರ ಉಳಿಯದೆ ಉತ್ತಮ ಭವಿಷ್ಯಕ್ಕಾಗಿ, ಸತ್ಪ್ರಜೆಗಳಾಗಲು ಶಿಕ್ಷಣ ಪಡೆಯಬೇಕು. ಅಗತ್ಯವಾದವುಗಳನ್ನು ನೀಡಲು ಸರ್ಕಾರ ಮತ್ತು ಸಮಾಜ ಸಮರ್ಥವಾಗಿದೆ.

| ವನಿತಾ ತಲ್ಹೋಳ್ಳಿಕರ ಜಿಲ್ಲಾ ಚೇರ್ಮನ್