ಮುನಿಶ್ರೀಗಳ ಕೊಡುಗೆ ಅನನ್ಯ- ಸಚಿವೆ ಶಶಿಕಲಾ ಜೊಲ್ಲೆ

ಶಿರಗುಪ್ಪಿ: ಜುಗೂಳ ಗ್ರಾಮದಲ್ಲಿ ಜನಿಸಿ, ದೇಶ ಸಂಚರಿಸಿ, ಕಠೋರ ತಪಸ್ಸು ಮಾಡಿ, ಕ್ರೂರ ಆದಿವಾಸಿಗಳನ್ನು ಮಾರ್ಗದರ್ಶನದಿಂದ ಶಾಖಾಹಾರಿಗಳನ್ನಾಗಿ ಮಾಡಿದ ಮಹಾನ್ ಸಂತರ ದರ್ಶನ ಪಡೆದಿದ್ದು ನಮ್ಮ ಪುಣ್ಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸಂತಸ ವ್ಯಕ್ತಪಡಿಸಿದ್ದಾರೆ.

ಜುಗೂಳ ಗ್ರಾಮದಲ್ಲಿ ಕಠಿಣ ಯಮ ಸಲ್ಲೇಖನ ವೃತದಲ್ಲಿರುವ ರಾಸ್ಟ್ರಸಂತ ಮುನಿಶ್ರೀ 108ಚಿನ್ಮಯಸಾಗರಜೀ (ಜಂಗಲ್‌ವಾಲೆ ಬಾಬಾ) ಮಹಾರಾಜರನ್ನು ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರೊಂದಿಗೆ ಭೇಟಿ ಮಾಡಿ ಶ್ರೀಗಳ ಆಶೀರ್ವಾದ ಪಡೆದು ಮಾತನಾಡಿ, 2014ರಲ್ಲಿ ಮುನಿಶ್ರೀಗಳು ಜುಗೂಳ ಗ್ರಾಮದಲ್ಲಿ ನಡೆದ ಪಂಚಕಲ್ಯಾಣ ಮಹೋತ್ಸವದಲ್ಲಿ ಭಾರತೀಯ ಸಂಸ್ಕೃತಿಯ ವಿಷಯದ ಮೇಲೆ ಮಾತನಾಡಲು ಹೇಳಿ, ರಾಜಕೀಯದಲ್ಲಿ ಅತೀ ಎತ್ತರಕ್ಕೆ ಬೆಳೆಯುವೆ ಎಂದು ಹಾರೈಸಿದ್ದರು ಎಂದು ಸ್ಮರಿಸಿದರು.

ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಅವರು ನನ್ನ ಮತ್ತು ಅಣ್ಣಾಸಾಬ ಜೊಲ್ಲೆ ಅವರನ್ನು ಗುರುತಿಸಿ ನೀವು ನಿಪ್ಪಾಣಿಯಿಂದ ಬಂದಿರುವಿರಿ ಎಂದು ಹೆಸರು ಉಲ್ಲೇಖಿಸಿ ಆಶೀರ್ವಾದ ನೀಡಿದ್ದು ಪುಣ್ಯ ಎಂದರು.
ಸಂಸದ ಅಣ್ಣಾಸಾಬ ಜೊಲ್ಲೆ ಮಾತನಾಡಿ, 50 ಲಕ್ಷ ಜನರಿಗೆ ವ್ಯಸನಮುಕ್ತಿ ಮತ್ತು ಶಾಖಾಹಾರಿಗಳಾಗಿ ಪರಿವರ್ತಿಸಲು ಮುನಿಶ್ರೀಗಳ ಪರಿಶ್ರಮ ಅವರನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ. ಕೇವಲ ಜೈನ ಧರ್ಮಕ್ಕೆ ಸೀಮಿತವಾಗಿರದೆ ಅರಣ್ಯದ ಆದಿವಾಸಿಗಳನ್ನು ಪ್ರೇರಣೆಯಿಂದ ಪರಿರ್ವತಿಸಿರುವುದು ದೊಡ್ಡ ಸಾಧನೆಯಾಗಿದೆ ಎಂದರು.

ಗಣ್ಯರ ಭೇಟಿ: ಸೋಮವಾರ ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ಉಪಾಧ್ಯಕ್ಷ ಹರ್ಷಾನಂದ ಸ್ವಾಮೀಜಿ, ಸದಲಗಾ ಗೀತಾಶ್ರಮದ ಶ್ರದ್ಧಾನಂದ ಸ್ವಾಮೀಜಿ, ಗುರುಲಿಂಗ ಸ್ವಾಮೀಜಿ, ಹುಲ್ಯಾಳ ಗುರುದೇವಾಶ್ರಮದ ಬಸವರಾಜ ಸ್ವಾಮೀಜಿ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ, ಕಾಗವಾಡ ಜಿಪಂ ಸದಸ್ಯ ಅಜಿತ ಚೌಗಲೆ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಜಿನಸೇನ ಮಹಾರಾಜರು, ಚಂದ್ರಪ್ರಭು ಮಹಾರಾಜರು, ಶುರಸಾಗರ ಮಹಾರಾಜರು, ಮುನಿಶ್ರೀ ಪಾವನಸಾಗರ ಮಹಾರಾಜರು, ಸಮರ್ಪನಸಾಗರ ಮಹಾರಾಜರು, ಅಜಿತಸೇನ ಮಹಾರಾಜರು, ಸುಮತಿಸಾಗರ ಮಹಾರಾಜರು, ಏಲಕ ಸಿದ್ಧಾಂತಸಾಗರ ಮಹಾರಾಜರು, ನಾಂದನಿ ಮಠದ ಜಿನಸೇನ ಭಟ್ಟಾರಕರು, ದೆಹಲಿ ತಿಜಾರಾ ಮಠದ ಸೌರಭಸೇನ ಭಟ್ಟಾರಕರು ಇತರರು ಉಪಸ್ಥಿತರಿದ್ದರು.

ಜುಗೂಳ ಗ್ರಾಮಕ್ಕೆ ಸಹಸ್ರಾರು ಭಕ್ತರ ಆಗಮನ ಮುನಿಶ್ರೀಗಳ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯ ಭಕ್ತರು ಜುಗೂಳ ಗ್ರಾಮಕ್ಕೆ ಆಗಮಿಸುತ್ತಿದ್ದು, ಪೊಲೀಸ್ ಇಲಾಖೆಯ ಸಿಬ್ಬಂದಿ ಮತ್ತು ವೀರಸೇವಾದಳದ ಸ್ವಯಂಸೇವಕರು ಹಾಗೂ ಜುಗೂಳ ಗ್ರಾಮದ ಎಲ್ಲ ನಾಗರಿಕರು ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *