ಟಾರ್ಗೆಟ್ ಕರ್ನಾಟಕ

ಬೆಂಗಳೂರು/ರಾಮನಗರ: ಸ್ವಾತಂತ್ಯೋತ್ಸವ ಸಂದರ್ಭದಲ್ಲಿ ದೇಶಾದ್ಯಂತ ರಕ್ತಪಾತ ನಡೆಸಲು ಪಾಕಿಸ್ತಾನಿ ಸೇನೆ ಪ್ರೇರೇಪಿತ ಉಗ್ರ ಪಡೆ ಗಡಿ ನುಸುಳುವ ಸಂಚು ರೂಪಿಸಿರುವ ರಹಸ್ಯವನ್ನು ಗುಪ್ತಚರ ದಳ ಭೇದಿಸಿದ ಬೆನ್ನಲ್ಲೇ ರಾಜಧಾನಿ ಪಕ್ಕದ ರಾಮನಗರದಲ್ಲಿ ಬಾಂಗ್ಲಾದೇಶ ಮೂಲದ ಮೋಸ್ಟ್ ವಾಂಟೆಡ್ ಶಂಕಿತ ಉಗ್ರನನ್ನು ಎನ್​ಐಎ ಬಲೆಗೆ ಕೆಡವಿದೆ. ಕರ್ನಾಟಕ ಉಗ್ರರ ಸ್ಲೀಪರ್ ಸೆಲ್ ಆಗುತ್ತಿದೆ ಎಂಬ ಶಂಕೆ ನಡುವೆಯೇ ಈ ಉಗ್ರ ಬೇಟೆ ದೇಶವನ್ನೇ ಬೆಚ್ಚಿಬೀಳಿಸಿದೆ.

ಎನ್​ಐಎ ಮತ್ತು ಕೇಂದ್ರ ಗುಪ್ತಚರ ಇಲಾಖೆಯ(ಐಬಿ) 50 ಅಧಿಕಾರಿಗಳ ತಂಡ ರಾಮನಗರ ಪೊಲೀಸರ ನೆರವಿನೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮುನೀರ್ ಶೇಖ್ (35) ಎಂಬಾತನನ್ನು ಭಾನುವಾರ ರಾತ್ರಿ 8.30ರಲ್ಲಿ ಈತ ವಾಸವಿದ್ದ ಮನೆಯಲ್ಲಿ ಬೆಂಗಳೂರು ಸೇರಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳ ಭೂಪಟ, ಮತ್ತಿತರ ಪರಿಕರಗಳು ಪತ್ತೆಯಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಲೇ ರಾಜ್ಯ ಹಾಗೂ ದೇಶಾದ್ಯಂತ ಅಲರ್ಟ್ ಘೋಷಿಸಲಾಗಿದೆ.

ಆಧಾರ್ ಕಾರ್ಡ್ ಇತ್ತು

ಬಾಂಗ್ಲಾದಿಂದ ಕಳ್ಳಮಾರ್ಗದಲ್ಲಿ ಭಾರತ ಪ್ರವೇಶಿಸಿದ್ದ ಮುನೀರ್​ನ ಬಳಿ ಆಧಾರ್ ಕಾರ್ಡ್ ಕೂಡ ಇತ್ತೆಂಬುದು ಗೊತ್ತಾಗಿದೆ. ಮನೆ ಬಾಡಿಗೆ ಪಡೆಯುವಾಗ ಮುನೀರ್​ನಿಂದ ಮನೆ ಮಾಲೀಕ ರಫೀಕ್ ಆಧಾರ್ ಕಾರ್ಡ್ ಪಡೆದಿದ್ದರು. ಆದರೆ, 4 ದಿನಗಳ ಬಳಿಕ ರೈಲು ಟಿಕೆಟ್ ಬುಕ್ ಮಾಡಲು ಆಧಾರ್ ಕಾರ್ಡ್ ಬೇಕಾಗಿದೆ ಎಂದು ಸುಳ್ಳು ಹೇಳಿ ವಾಪಸ್ ಪಡೆದುಕೊಂಡಿದ್ದ. ನಿಗದಿಯಾದಂತೆ 50 ಸಾವಿರ ರೂ. ಮುಂಗಡ ಹಣವನ್ನು ಪೂರ್ತಿ ಕೊಡದ ಹಿನ್ನೆಲೆಯಲ್ಲಿ ಮನೆ ಬಾಡಿಗೆ ನೀಡುವ ಕುರಿತ ಕರಾರು ಪತ್ರ ಮಾಡಿಕೊಂಡಿರಲಿಲ್ಲ ಎಂದು ಮನೆ ಮಾಲೀಕ ರಫೀಕ್ ಮಾಹಿತಿ ನೀಡಿದ್ದಾರೆ.

ಮನೆ ಕೊಡಿಸಿದ್ಯಾರು?

ಶಂಕಿತ ಉಗ್ರ ಮುನೀರ್​ಗೆ ಮನೆ ಬಾಡಿಗೆ ಕೊಡಿಸಿದ ಮಹಿಳೆ ಯಾರೆಂಬ ಪ್ರಶ್ನೆ ಹುಟ್ಟಿಕೊಂಡಿದೆ. ಮಹಿಳೆಯ ಕುರಿತು ಮನೆ ಮಾಲೀಕನಿಂದ ತನಿಖಾಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಮಹಿಳೆಗೂ ಮುನೀರ್​ಗೂ ಹೇಗೆ ಪರಿಚಯ. ಅವರ ನಡುವಿನ ಸಂಬಂಧವೇನು, ಮಹಿಳೆಯೂ ಉಗ್ರ ಸಂಘಟನೆಗೆ ಸೇರಿದ್ದಾಳೆಯೇ, ಮುನೀರ್ ಆಶ್ರಯ ಪಡೆಯಲು ಇನ್ನು ಯಾರ್ಯಾರು ಕೈಜೋಡಿಸಿದ್ದಾರೆ ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಎನ್​ಐಎ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಐವರಿಗೆ ಜೀವಾವಧಿ ಶಿಕ್ಷೆ

2013ರ ಬೋಧ್​ಗಯಾ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಉಗ್ರರಾದ ಇಮ್ತಿಯಾಜ್ ಅನ್ಸಾರಿ, ಹೈದರ್ ಅಲಿ, ಮುಜಿಬ್ ಉಲ್ಲಾಹ್, ಒಮೇರ್ ಸಿದ್ದಿಕಿ ಮತ್ತು ಅಜರುದ್ದೀನ್ ಖುರೇಶಿಗೆ ಪಟನಾದ ಎನ್​ಐಎ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಮಫ್ತಿಯಲ್ಲಿ ಖಾಕಿ ಪಡೆ ದಾಳಿ

ಹಲವು ದಿನಗಳಿಂದ ಮುನೀರ್​ಗಾಗಿ ಹುಡುಕಾಟ ನಡೆಸಿದ್ದ ಎನ್​ಐಎ ಅಧಿಕಾರಿಗಳಿಗೆ ಕರ್ನಾಟಕದಲ್ಲಿ ಆತ ಆಶ್ರಯ ಪಡೆದಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಯಿಂದ ಬಂದಿದ್ದ ಎನ್​ಐಎ, ಐಬಿ ಅಧಿಕಾರಿಗಳು ಭಾನುವಾರ ರಾತ್ರಿ ಕಾರ್ಯಾಚರಣೆಗೆ ಇಳಿಯುವ ಮುನ್ನ ರಾಮನಗರದ ಪೊಲೀಸರ ನೆರವು ಪಡೆದಿದ್ದರು. ಶಸ್ತ್ರ ಸಜ್ಜಿತ ಭದ್ರತಾ ಸಿಬ್ಬಂದಿ ಮನೆಯನ್ನು ಸುತ್ತುವರಿಯುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಮನೆ ಮಾಡಿತ್ತು. ಮುನೀರ್, ಆತನ ಪತ್ನಿ ಮತ್ತು ಮಕ್ಕಳನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಯಾರು ಈ ಮುನೀರ್?

ಬಿಹಾರದ ಜಮಾಲ್​ಪುರ್ ಜಿಲ್ಲೆ ಶೇಕ್ರುವಿಟಾ ಗ್ರಾಮದ ಬ್ರುಹಾನ್ ಅಲಿಯಾಸ್ ಮುನೀರ್ ಶೇಖ್ ಜೆಎಂಬಿ ಉಗ್ರ ಸಂಘಟನೆ ಮುಖ್ಯಸ್ಥ. ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮಾರಕಾಸ್ತ್ರದಿಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ಬಿಹಾರದ ಪಟನಾ ಜಿಲ್ಲೆ ಬೋಧಗಯಾದ ಬುದ್ಧ ಮಂದಿರ ಆವರಣದಲ್ಲಿ 2013 ಜು.7ರಂದು ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣ, ಪಶ್ಚಿಮ ಬಂಗಾಳದ ಬರ್ಧಮಾನ್​ನಲ್ಲಿ 2014ರಲ್ಲಿ ಸಂಭವಿಸಿದ್ದ ಬಾಂಬ್ ಸ್ಪೋಟಕ್ಕೆ ಐಇಡಿ ಬಾಂಬ್ ತಯಾರಿಸಿಕೊಟ್ಟಿದ್ದ. ಜಮತ್ ಉಲ್ ಮುಜಾಹಿದೀನ್( ಜೆಎಂಬಿ) ಹಾಗೂ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆ ಸದಸ್ಯನಾಗಿದ್ದ ಈತ ಬಾಂಗ್ಲಾದಿಂದ ಅಕ್ರಮವಾಗಿ ನುಸುಳಿ ಬಂದು ಬಿಹಾರದಲ್ಲಿ ನೆಲೆ ಕಂಡುಕೊಂಡಿದ್ದ. ಬೋಧಗಯಾ, ಬರ್ಧಮಾನ್ ಬಾಂಬ್ ಸ್ಫೋಟ ಪ್ರಕರಣಗಳ ಬಳಿಕ ಈತ ಕರ್ನಾಟಕಕ್ಕೆ ಬಂದು ಮಾಲೂರಿನ ಖಾಸಗಿ ಕಂಪನಿಯಲ್ಲಿ ಹೆಲ್ಪರ್ ಆಗಿ ಕೆಲಸಕ್ಕೆ ಸೇರಿದ್ದ. ಇದಾದ ಬಳಿಕ ರಾಮನಗರಕ್ಕೆ ಬಂದಿದ್ದನೆಂದು ತಿಳಿದು ಬಂದಿದೆ.

ಸೈಕಲ್ ಸವಾರಿ

ಮುನೀರ್ ಅಕ್ಕಪಕ್ಕದವರ ಜತೆ ಬೆರೆಯುತ್ತಿರಲಿಲ್ಲ. ಸೈಕಲ್​ನಲ್ಲಿ ಊರೂರು ಸುತ್ತಿ ಬಟ್ಟೆ ಮಾರಾಟ ಮಾಡುತ್ತಿದ್ದ. ಬೆಳಗ್ಗೆ 8ಕ್ಕೆ ವ್ಯಾಪಾರಕ್ಕೆ ಹೊರಟರೆ ಸಂಜೆ 4ಕ್ಕೆ ಬರುತ್ತಿದ್ದ. ಇವರ ಮನೆಗೆ ಸಂಬಂಧಿಕರು ಬರುತ್ತಿರಲಿಲ್ಲ ಎಂದು ಮನೆ ಮಾಲೀಕ ರಫೀಕ್ ತಿಳಿಸಿದ್ದಾರೆ.

ರಡು ತಿಂಗಳ ಹಿಂದೆ ಬಂದಿದ್ದ…

ರಾಮನಗರ ಟೌನ್​ನ ರೆಹಮಾನಿಯಾನಗರಕ್ಕೆ 2 ತಿಂಗಳ ಹಿಂದಷ್ಟೇ ಬಂದಿದ್ದ ಮುನೀರ್, ರಫೀಕ್ ಎಂಬುವವರಿಗೆ ಸೇರಿದ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ಪತ್ನಿ, 1 ವರ್ಷದ ಹೆಣ್ಣು ಮಗು ಹಾಗೂ 3 ವರ್ಷದ ಗಂಡು ಮಗು ಜತೆ ವಾಸವಿದ್ದ. ರಾಮನಗರಕ್ಕೆ ಬರುವ ಮುನ್ನ ಈತ ಬೇರೆ ಎಲ್ಲೆಲ್ಲಿ ಆಶ್ರಯ ಪಡೆದಿದ್ದ ಎಂಬ ಬಗ್ಗೆ ಎನ್​ಐಎ ಅಧಿಕಾರಿಗಳ ತಂಡ ವಿವರ ಸಂಗ್ರಹಿಸುತ್ತಿದೆ.

ಉಗ್ರನಿಗೆ ಮನೆ ಸಿಕ್ಕಿದ್ದು ಹೇಗೆ?

ರಾಮನಗರಕ್ಕೆ ಮೊದಲು ಒಬ್ಬನೇ ಬಂದಿದ್ದ ಮುನೀರ್ ಬ್ರೋಕರ್ ಮಹಿಳೆಯೊಬ್ಬರನ್ನು ಸಂರ್ಪಸಿ, ಬಾಡಿಗೆಗೆ ಮನೆ ಕೊಡಿಸುವಂತೆ ಕೇಳಿದ್ದ. ಹುಣಸನಹಳ್ಳಿ ಮುಖ್ಯರಸ್ತೆ ರೆಹಮಾನಿಯಾನಗರದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್​ಗೆ ಹೊಂದಿಕೊಂಡಂತಿರುವ ಕಟ್ಟಡ ಮಾಲೀಕ ರಫೀಕ್​ನನ್ನು ಆ ಮಹಿಳೆ ಸಂರ್ಪಸಿ ಮುನೀರ್​ಗೆ ಮನೆ ತೋರಿಸಿದ್ದರು. ಆದರೆ, ರಫೀಕ್, ಕುಟುಂಬಸ್ಥರಿಗೆ ಮಾತ್ರ ಬಾಡಿಗೆ ಕೊಡುವುದಾಗಿ ಹೇಳಿದ್ದರಿಂದ ಮುನೀರ್ ಪತ್ನಿ ಹಾಗೂ ಮಕ್ಕಳ ಸಮೇತ ಬಂದು ಬಾಡಿಗೆ ಮನೆ ಪಡೆದಿದ್ದ. 50 ಸಾವಿರ ರೂ. ಮುಂಗಡ ಮತ್ತು 5 ಸಾವಿರ ರೂ. ಬಾಡಿಗೆಯನ್ನು ಮಾಲೀಕರು ನಿಗದಿಪಡಿಸಿದ್ದರು.

ಏನೇನು ಸಿಕ್ಕಿದೆ?

ಮುನೀರ್ ವಾಸವಿದ್ದ ಮನೆಯಲ್ಲಿ ತನಿಖಾಧಿಕಾರಿಗಳು ಭಾರತದ ನಕ್ಷೆ, ಕರ್ನಾಟಕದ ಪ್ರವಾಸಿ ತಾಣಗಳು, ಪ್ರಮುಖ ಕಟ್ಟಡಗಳ ಮಾಹಿತಿ ಇದ್ದ ನಕ್ಷೆಗಳನ್ನು ವಶಪಡಿಸಿಕೊಂಡಿದ್ದಾರೆ. 2 ಲ್ಯಾಪ್​ಟಾಪ್, ನಕ್ಷೆ ಹಾಗೂ ಜಿಲೆಟಿನ್ ಬಾಕ್ಸ್ ಜಪ್ತಿ ಮಾಡಲಾಗಿದೆ.


ಲಷ್ಕರ್ ಉಗ್ರನ ಬಂಧನ

ನವದೆಹಲಿ: ಪಾಕಿಸ್ತಾನ ಪೋಷಿತ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಮುಖಂಡ ಹಬಿಬುರ್ ರೆಹಮಾನ್​ನನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್​ಐಎ ಬಂಧಿಸಿದೆ. ಸೌದಿ ಅರೇಬಿಯಾದಿಂದ ಗಡಿಪಾರಾಗಿದ್ದ ರೆಹಮಾನ್ ಭಾರತಕ್ಕೆ ಬರುತ್ತಿರುವ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಎನ್​ಐಎ ಅಧಿಕಾರಿಗಳು ದೆಹಲಿಯಲ್ಲಿ ಆರೋಪಿಯನ್ನು ಬಂಧಿಸಿ ಪಟಿಯಾಲ ಹೌಸ್ ಕೋರ್ಟ್​ಗೆ ಕರೆದೊಯ್ದರು. ಬಳಿಕ ನ್ಯಾಯಾಲಯ ಉಗ್ರನನ್ನು ಎನ್​ಐಎ ವಶಕ್ಕೆ ನೀಡಿದೆ.

ಲಷ್ಕರ್ ಮಾಸ್ಟರ್​ವೆುೖಂಡ್ : 2007ರಲ್ಲಿ ಇಬ್ಬರು ಪಾಕಿಸ್ತಾನಿಯರು ಹಾಗೂ ಒಬ್ಬ ಕಾಶ್ಮೀರಿ ಉಗ್ರನನ್ನು ಬಾಂಗ್ಲಾದೇಶದಿಂದ ಭಾರತದೊಳಗೆ ಗಡಿ ಮೂಲಕ ನುಸುಳಿಸಲು ಯತ್ನಿಸಿ ಲಷ್ಕರ್ ಉಗ್ರ ಶೇಕ್ ಅಬ್ದುಲ್ ನಯೀಮ್ ಅಲಿಯಾಸ್ ನೊಮಿ ಸಿಕ್ಕಿಬಿದ್ದಿದ್ದ. ಈತನಿಗೆ ನಿರ್ದೇಶನ ನೀಡುತ್ತಿದ್ದ ಕಮಾಂಡರ್ ಸದ್ಯ ಬಂಧಿತನಾಗಿರವ ರೆಹಮಾನ್ ಎಂದು ತಿಳಿದುಬಂದಿದೆ.

ಕಾಶ್ಮೀರದಲ್ಲೂ ಉಗ್ರನ ಬಂಧನ

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಪೊಲೀಸರು ಜೈಷ್-ಎ-ಮೊಹಮ್ಮದ್ ಉಗ್ರ ಸಂಘನೆಯ ಉಗ್ರನನ್ನು ಬಂಧಿಸಿದ್ದಾರೆ. ಆತನ ಬಳಿಯಿಂದ ಅಪಾರ ಪ್ರಮಾಣ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. 22 ವರ್ಷದ ಬಂದಿತ ಉಗ್ರ ಮುಜಾಮಿಲ್ ಅಹ್ಮದ್ ದರ್ , ಸ್ವಾತಂತ್ರ್ಯ ದಿನಾಚರಣೆಯಂದು ದಾಳಿಗೆ ಸಂಚು ರೂಪಿಸುತ್ತಿದ್ದ ಎನ್ನಲಾಗಿದೆ. ಸುಧಾರಿತ ಸ್ಪೋಟಕ ಸಾಧನಗಳು,(ಐಇಡಿ), ಚೀನಾ ನಿರ್ವಿುತ ಗ್ರೆನೇಡ್​ಗಳು ಆತನ ಬಳಿ ಸಿಕ್ಕಿದೆ. ಬಂಧಿಸಿದೆ.