ನಗರಸಭೆ ಕಚೇರಿ ಮುಂದಿನ ರಸ್ತೆಯಲ್ಲೇ ಗುಂಡಿ

  • ಕೊಳ್ಳೇಗಾಲ: ಪಟ್ಟಣದ ನಗರಸಭೆ ಆಡಳಿತ ತನ್ನ ಕಚೇರಿ ಮುಂಭಾಗದ ರಸ್ತೆಯಲ್ಲಿ ಗುಂಡಿ ಬಿದ್ದು 2 ತಿಂಗಳು ಕಳೆದರೂ ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದು, ಪರಿಣಾಮ ಸಾರ್ವಜನಿಕ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.
  • ಡಾ.ಅಂಬೇಡ್ಕರ್ ರಸ್ತೆಯ ಒಂದು ಬದಿಯಲ್ಲಿ ನಗರಸಭೆ ಕಾರ್ಯಾಲಯವಿದ್ದು, ಮತ್ತೊಂದು ಬದಿ ಸಪ್ತಗಿರಿ ಮೆಡಿಕಲ್ಸ್ ಬಳಿ ದೊಡ್ಡ ಪ್ರಮಾಣದಲ್ಲಿ ಗುಂಡಿ ಬಿದ್ದಿದೆ. ಇದರಿಂದ ಅಂಬೇಡ್ಕರ್ ರಸ್ತೆ, ಗೀತಾ ಪ್ರೈಮರಿ ಶಾಲೆ ರಸ್ತೆಗೆ ಸಂಚರಿಸುವ ನೂರಾರು ಸಾರ್ವಜನಿಕರು, ವಾಹನ ಸವಾರರಿಗೆ ತೊಡಕುಂಟಾಗಿದೆ.
  • ಇದೀಗ ಗುಂಡಿ ಬಿದ್ದಿರುವ ಸ್ಥಳದಲ್ಲಿ ಕೆಲವು ತಿಂಗಳ ಹಿಂದೆ ಒಳ ಚರಂಡಿ ಮ್ಯಾನ್‌ಹೋಲ್ ಸಮಸ್ಯೆ ಎದುರಾಗಿತ್ತು. ಒಳ ಚರಂಡಿ ತ್ಯಾಜ್ಯ ನೀರು ಸೋರಿಕೆಯಿಂದ ಗಬ್ಬು ನಾರುತ್ತಿತ್ತಲ್ಲದೆ, ಹಳ್ಳ ಸೃಷ್ಠಿಯಾಗಿತ್ತು. ಆ ವೇಳೆ 1 ತಿಂಗಳ ಕಾಲ ಸಂಚರಿಸಲು ಸಾರ್ವಜನಿಕರು ಬವಣೆ ಪಟ್ಟರು. ನಂತರ ಎಚ್ಚೆತ್ತ ನಗರಸಭೆ ಆಡಳಿತ ಒಳಚರಂಡಿ ನೀರು ಸೋರಿಕೆ ತಡೆದು ಸಮಸ್ಯೆಗೆ ಇತಿಶ್ರೀ ಹಾಡಿತು.
    ಈ ನಡುವೆ 2 ತಿಂಗಳಿಂದ ಇದೇ ಸ್ಥಳದಲ್ಲಿ ಮತ್ತೆ ಗುಂಡಿ ಕಾಣಿಸಿಕೊಂಡಿದ್ದು, ರಸ್ತೆ ಕೆಳಗೆ ಹೂತಿರುವ ಕಾವೇರಿ ಕುಡಿಯುವ ನೀರಿನ ಪೈಪ್ ಲೈನ್ ಹೊಡೆದಿದ್ದು, ಬೆಳಗ್ಗೆ 7 ರಿಂದ 9 ಗಂಟೆವರೆಗೆ ಪಟ್ಟಣಕ್ಕೆ ಪೂರೈಕೆಯಾಗುವ ನೀರು ಸೋರಿಕೆಯಿಂದ ರಸ್ತೆ ಮೇಲೆ ಬೊಬ್ಬೆಗಳಂತೆ ಹರಿಯುತ್ತಿದ್ದು, ಗುಂಡಿ ದ್ವಿಗುಣಗೊಂಡು ಸಮಸ್ಯೆ ಸೃಷ್ಟಿಸಿದೆ.
  • ನಗರಸಭೆ ಮುಂಭಾಗದ ಗುಂಡಿಯನ್ನು ನೋಡಿ ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ನೂರಾರು ಸಾರ್ವಜನಿಕರು ನಗರಸಭೆ ಆಡಳಿತದ ಬಗ್ಗೆ ಅಪಹಾಸ್ಯ ಮಾಡುತ್ತಿದ್ದು, ತನ್ನ ಕಚೇರಿ ಮುಂದಿನ ಗುಂಡಿಯನ್ನೇ ದುರಸ್ತಿಗೊಳಿಸದ ಅಧಿಕಾರಿಗಳು ಇನ್ಯಾವ ಕೆಲಸ ಮಾಡಬಲ್ಲರು ಎಂದು ಟೀಕಿಸತೊಡಗಿದ್ದಾರೆ.

  • ನಗರಸಭೆ ಕಚೇರಿ ಮುಂದಿನ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು ಗೊತ್ತಿದೆ. ಇದೇ ಸ್ಥಳದಲ್ಲಿ ಹಿಂದೆ 3 ಬಾರಿ ನೀರಿನ ಪೈಪ್‌ಲೈನ್ ಹೊಡೆದ ಪರಿಣಾಮ ಗುಂಡಿ ಬಿದ್ದಿತ್ತು. ಆಗ ಸರಿಪಡಿಸಲಾಗಿತ್ತು. ಮತ್ತೆ ಅದೆ ಸ್ಥಳದಲ್ಲಿ ಸಮಸ್ಯೆಯಾಗುತ್ತಿದೆ. ಬಹುಶಃ ಪೂರ್ತಿ ಪೈಪ್ ಬದಲಿಸಬೇಕಾಗುತ್ತದೆ ಎನಿಸುತ್ತದೆ. ತಕ್ಷಣ ಕ್ರಮ ಕೈಗೊಳ್ಳುತ್ತೇನೆ.
    ನಾಗಶೆಟ್ಟಿ, ನಗರಸಭೆ ಆಯುಕ್ತ, ಕೊಳ್ಳೇಗಾಲ

Leave a Reply

Your email address will not be published. Required fields are marked *