ಪಡುಬಿದ್ರಿ: ಯಾವುದೇ ಕಾಮಗಾರಿಗಳಿಗೆ ಸಾಕಾಗುವಷ್ಟು ಅನುದಾನ ಮೀಸಲಿಡದೆ ಕೇವಲ ತೋರಿಕೆಗಾಗಿ ಮಾಜಿ ಸಚಿವರು ಶಂಕುಸ್ಥಾಪನೆ ನೆರವೇರಿಸಿದ ಕಾಮಗಾರಿಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಪೂರ್ಣಗೊಳಿಸಿ ಸಾರ್ವಜನಿಕ ಹಣದ ಸದ್ವಿನಿಯೋಗ ಗೊಳಿಸಲು ಕಾಮಗಾರಿಗಳಲ್ಲಿ ಬದಲಾವಣೆ ಮಾಡಲಾಗಿದೆ ಹೊರತು ಕಾಂಗ್ರೆಸ್ ಆರೋಪದಂತೆ ಯಾವುದೇ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಹಣ ವರ್ಗಾವಣೆ ಮಾಡಲಾಗಿಲ್ಲ ಎಂದು ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ ನಾಯಕ್ ತಿಳಿಸಿದ್ದಾರೆ.
ಕಾಪು ಪುರಸಭೆ ಮತ್ತು ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರುಗೊಂಡಿದ್ದ ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಮತ್ತು ವಿವಿಧ ತೆರಿಗೆಗಳನ್ನು ಏಕಾಏಕಿ ಹೆಚ್ಚಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ನೇತೃತ್ವದ ಪ್ರತಿಭಟನೆಯಲ್ಲಿ ತಮ್ಮ ತಪ್ಪನ್ನು ಮರೆಮಾಚಿ ಬಿಜೆಪಿ ಶಾಸಕರ ವಿರುದ್ಧ ವಿನಾ ಕಾರಣ ಮಾಜಿ ಸಚಿವ ವಿನಯಕುಮಾರ್ ಸೊರಕೆ ಆರೊಪ ಮಾಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಹೇಳಿಕೆಯಲ್ಲಿ ತಿರುಗೇಟು ನೀಡಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮಸ್ತ ಅಭಿವೃದ್ಧಿಗಾಗಿ ಮೀಸಲಿರಿಸಿದ 99 ಲಕ್ಷ ರೂ. ಅನುದಾನವನ್ನು 2018 ಫೆಬ್ರವರಿಯಲ್ಲೇ ಕಾರ್ಕಳ ಪುರಸಭೆಗೆ ವರ್ಗಾಯಿಸಲಾಗಿದ್ದ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರು, ಶಾಸಕರು, ಕಾಂಗ್ರೆಸಿನವರಿದ್ದುದು ಪುರಸಭಾ ದಾಖಲೆಗಳಿಂದಲೇ ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.