ಹಾವೇರಿ: ನಗರದಲ್ಲಿ ರಸ್ತೆ, ಚರಂಡಿ, ಪೈಪ್ಲೈನ್ ಸೇರಿ ಸಣ್ಣಪುಟ್ಟ ಕೆಲಸ ಕಾರ್ಯಗಳೂ ಆಗುತ್ತಿಲ್ಲ ಎಂದು ಆರೋಪಿಸಿ ನಗರಸಭೆ ಸದಸ್ಯರು ಮಂಗಳವಾರ ನಗರಸಭೆ ಎದುರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿದರು.
ನಾವು ಆಯ್ಕೆಯಾಗಿ ಒಂದೂವರೆ ವರ್ಷ ಕಳೆದಿದೆ. ಜನರಿಂದ ಆಯ್ಕೆಯಾದರೂ ನಮಗೆ ಇನ್ನೂ ಅಧಿಕಾರ ಸಿಕ್ಕಿಲ್ಲ. ಆದರೆ, ವಾರ್ಡ್ಗಳಲ್ಲಿನ ಸಣ್ಣಪುಟ್ಟ ಸಮಸ್ಯೆಗಳಿಗೆ ಸ್ಪಂದಿಸಬೇಕಾಗುತ್ತದೆ. ಬೋರ್ವೆಲ್ ರಿಪೇರಿ, ಪೈಪ್ಲೈನ್ ದುರಸ್ತಿ, ಬೀದಿದೀಪ, ಚರಂಡಿ ಮುಂತಾದ ಸಮಸ್ಯೆಗಳ ಬಗ್ಗೆ ಜನರು ನಮ್ಮನ್ನು ಕೇಳುತ್ತಾರೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಲ್ಲಿ ಹೇಳಿದರೆ ಇಲ್ಲಸಲ್ಲದ ಸಬೂಬು ಹೇಳುತ್ತ ಕಾಲಕಳೆಯುತ್ತಾರೆ. ಸಿಬ್ಬಂದಿ ನಿರ್ಲಕ್ಷ್ಯಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಸದಸ್ಯರ ಮಾತಿಗೆ ಬೆಲೆಯಿಲ್ಲದಿದ್ದರೂ ಸಾರ್ವಜನಿಕರ ಹಿತದೃಷ್ಟಿಯಿಂದಾದರೂ ನಗರಸಭೆ ಸಿಬ್ಬಂದಿ ಕೆಲಸ ಮಾಡಬೇಕಿತ್ತು. ನಾಲ್ಕಾರು ತಿಂಗಳಿಂದ ಹೇಳುತ್ತ ಬಂದರೂ ಒಂದೂ ಕೆಲಸ ಆಗುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ಇಲ್ಲಸಲ್ಲದ ನಿಯಮ ಹೇಳುತ್ತ ನಗರಸಭೆ ಸಿಬ್ಬಂದಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯಲ್ಲಿ ಕಟ್ಟಡ, ಅಂಗಡಿ ಪರವಾನಗಿ ಸೇರಿ ಯಾವ ಕೆಲಸಗಳನ್ನು ಬೇಗನೇ ಮಾಡಿಕೊಡುತ್ತಿಲ್ಲ. ಏಜೆಂಟರ ಹಾವಳಿ ಅಧಿಕವಾಗಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿ ಮತ್ತು ಸದಸ್ಯರ ನಡುವೆ ವಾಗ್ವಾದ ನಡೆಯಿತು. ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಸಾರ್ವಜನಿಕರೊಂದಿಗೆ ಬಂದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಮುಖರಾದ ಬಸವರಾಜ ಬೆಳವಡಿ, ಶಿವಯೋಗಿ ಹೂಲಿಕಂತಿಮಠ, ಚನ್ನಮ್ಮ ಬ್ಯಾಡಗಿ, ವಿಶಾಲಾಕ್ಷಿ ಆನವಟ್ಟಿ, ಪೀರಸಾಬ್ ಚೋಪದಾರ್, ಉಮೇಶ ಕುರುಬರ, ಶಂಭು ಹತ್ತಿ, ನಜೀರ್ ನದಾಫ್, ರವಿ ದೊಡ್ಮನಿ, ವೆಂಕಟೇಶ ಬಿಜಾಪುರ, ರವಿ ಪುತ್ರನ್ ಮತ್ತಿತರರು ಪಾಲ್ಗೊಂಡಿದ್ದರು.