ನಗರಸಭೆ ಸದಸ್ಯೆಯಿಂದ ಪ್ರತಿಭಟನೆ

ರಾಣೆಬೆನ್ನೂರ: ದೂರು ನೀಡಲು ತೆರಳಿದ ಮಹಿಳೆಯರಿಗೆ ಪೊಲೀಸ್ ಪೇದೆಯೊಬ್ಬರು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ನಗರಸಭೆ ಸದಸ್ಯೆ ಪ್ರಭಾವತಿ ತಿಳವಳ್ಳಿ ಅವರು ನಗರದ ಪೊಲೀಸ್ ಠಾಣೆ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಇಬ್ಬರು ಮಹಿಳೆಯರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಸಮಸ್ಯೆಯನ್ನು ಪರಿಹರಿಸಲು ಠಾಣೆಗೆ ತೆರಳಿದ್ದಾರೆ. ಪೊಲೀಸ್ ಪೇದೆಯೊಬ್ಬರು ಏಕಾಏಕಿ ದೂರು ನೀಡಲು ತೆರಳಿದ್ದ ಇಬ್ಬರು ಮಹಿಳೆಯರಿಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಇದನ್ನು ವಿರೋಧಿಸಿ ಪ್ರಭಾವತಿ ತಿಳವಳ್ಳಿ ಠಾಣೆಯ ಮುಂಭಾಗದಲ್ಲಿಯೇ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ಸಿಪಿಐ ಲಿಂಗನಗೌಡ ನೆಗಳೂರ, ಪೇದೆಯನ್ನು ಕರೆದು ವಿಚಾರಿಸಿ, ಸಮಸ್ಯೆಯನ್ನು ಪರಿಹರಿಸಿದರು. ಈ ಸಂದರ್ಭದಲ್ಲಿ ಅಜಯ ಮಠದ, ಕರಬಸಪ್ಪ ಗಾಳಿ, ಮಂಜು, ಅಜಯ ತಿಮ್ಮಜ್ಜಿ ಮತ್ತಿತರರಿದ್ದರು.