ಪ್ರವಾಸಿಗರ ಸ್ವರ್ಗ ಚಿಕ್ಕಮಗಳೂರಿಗೆ ಕೋಟೆ ಕೆರೆ ಕೊಳಚೆ ನೀರೇ ಕಪ್ಪುಚುಕ್ಕೆ

ಚಿಕ್ಕಮಗಳೂರು: ಕೆರೆಗಳು ಊರಿನ ಸಮೃದ್ಧಿಯನ್ನು ಸಾರುತ್ತವೆ ಎಂಬ ಮಾತಿದೆ. ಇದಕ್ಕೆ ಪೂರಕವಾಗಿ ಚಿಕ್ಕಮಗಳೂರಿನ ಪ್ರಮುಖ ಕೆರೆಗಳಲ್ಲಿ ಒಂದಾದ ಬೇಲೂರು ರಸ್ತೆಯಲ್ಲಿರುವ ಕೋಟೆ ಕೆರೆ ಅಭಿವೃದ್ಧಿಗೆ ಜಿಲ್ಲಾಡಳಿತ ಮುಂದಾಗಿದೆ.

ವಾರ್ಷಿಕ ಲಕ್ಷಾಂತರ ಪ್ರವಾಸಿಗರು ಬಂದು ಹೋಗುವ ನಗರದಲ್ಲಿ ಒಂದಾದರೂ ಸುಂದರ ಕೆರೆ ಇಲ್ಲವಲ್ಲ ಎಂಬ ಕೊರಗಿತ್ತು. ನಗರಕ್ಕೆ ಹೊಂದಿಕೊಂಡಿರುವ ಬಸವನಹಳ್ಳಿ ಹಾಗೂ ಕೋಟೆ ಕೆರೆಗಳೆರಡೂ ಒಳಚರಂಡಿ ತ್ಯಾಜ್ಯ ನೀರು ಸೇರಿ ಗಬ್ಬು ನಾರುತ್ತಿವೆ. ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕೋಟೆ ಕೆರೆ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಂಡಿದೆ.

ರಾಜ್ಯಸಭೆ ಸದಸ್ಯ ಜೈರಾಂ ರಮೇಶ್ ಕೆರೆ ಅಭಿವೃದ್ಧಿಗಾಗಿ 1.30 ಕೋಟಿ ರೂ. ಅನುದಾನ ನೀಡಿದ್ದಾರೆ. ಕಾಮಗಾರಿ ಜವಾಬ್ದಾರಿಯನ್ನು ನಿರ್ವಿುತಿ ಕೇಂದ್ರಕ್ಕೆ ವಹಿಸಿದ್ದು, ಈಗಾಗಲೆ ಆರಂಭವಾಗಿದೆ.

ಬಸವನಹಳ್ಳಿ ಕೆರೆಯ ತೂಬಿನ ಹಾಗೂ ಕೋಡಿ ಮೂಲಕ ಹರಿಯುವ ನೀರೇ ಕೋಟೆ ಕೆರೆಗೆ ಮೂಲ. ಆದರೆ ಇತ್ತೀಚೆಗೆ ನಗರದ ಒಳಚರಂಡಿ ನೀರು, ಅನುಪಯುಕ್ತ ತ್ಯಾಜ್ಯ ಸೇರುತ್ತಿತ್ತು. ಕೆರೆಯನ್ನೇ ಅಪೋಶನ ತೆಗೆದುಕೊಳ್ಳುವಷ್ಟು ತ್ಯಾಜ್ಯ ಹೆಚ್ಚಾಗಿತ್ತು. ಕೆರೆಗೆ ಒಳಚರಂಡಿ ನೀರು ಬಿಡದಂತೆ ನಗರಸಭೆಗೆ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಎರಡು ಬಾರಿ ನೋಟಿಸ್ ನೀಡಿದ್ದರೂ ಪ್ರಯೋಜನವಾಗಿಲ್ಲ.

ಮನಸ್ಸಿಗೆ ಮುದ ನೀಡುವ ನಗರದೊಳಗೊಂದು ಕೆರೆ ಇರಬೇಕೆಂಬ ಆಶಯ ಎಲ್ಲ ನಾಗರಿಕರದ್ದು. ನಾಗರಿಕರ ಅಪೇಕ್ಷೆಯಂತೆ ಸ್ವಚ್ಛ ಟ್ರಸ್ಟ್ ಜೈರಾಂ ರಮೇಶ್ ಅವರ ಮನವೊಲಿಸಿ ಅನುದಾನ ಬಿಡುಗಡೆ ಮಾಡಿಸಿ ಕೆರೆ ಜೀಣೋದ್ಧಾರಕ್ಕೆ ಚಾಲನೆ ನೀಡಿದೆ. ಆದರೆ ಟ್ರಸ್ಟ್​ವೊಂದರಿಂದಲೇ ಕೆರೆ ಅಭಿವೃದ್ಧಿ ಅಸಾಧ್ಯ. ಇದಕ್ಕೆ ನಾಗರಿಕರ, ನಗರಸಭೆ ಮತ್ತು ಇತರೆ ಇಲಾಖೆಗಳ ಸಹಕಾರ ಅಗತ್ಯವಿದೆ.

ಕೆರೆಯೊಳಗೆ, ಏರಿ ಮೇಲೆ, ಕೊಳಚೆಯಲ್ಲಿ ಗಿಡಗಂಟಿ ಬೆಳೆದಿವೆ. ಹಂದಿ, ವಿಷ ಜಂತುಗಳ ವಾಸ ಸ್ಥಾನವಾಗಿದೆ. ಈಗ ಪಾಚಿ, ಗಿಡಗಂಟಿ ತೆರವು ಕಾರ್ಯ ನಡೆಯುತ್ತಿದೆ. ಸ್ವಚ್ಛ ನೀರು ಸಂಗ್ರಹಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗುತ್ತಿದೆ.

ಕೆರೆ ಎಷ್ಟೇ ಸ್ವಚ್ಛ ಮಾಡಿ, ಸುಂದರಗೊಳಿಸಿದರೂ ಕೆರೆಗೆ ಸೇರುವ ಕೊಳಚೆ ನೀರು ನಿಲ್ಲದಿದ್ದರೆ ಪ್ರಯೋಜನವಿಲ್ಲ. ಕೊಳಚೆ ನೀರು ಕೆರೆಗೆ ಬಿಡದಂತೆ ನಗರಸಭೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕಿದೆ. ಇದಕ್ಕೆ ಸಣ್ಣ ನೀರಾವರಿ, ಪ್ರವಾಸೋದ್ಯಮ ಹಾಗೂ ಪರಿಸರ ಇಲಾಖೆಗಳ ಅಧಿಕಾರಿಗಳು ಒಟ್ಟಾಗಿ ನಿರ್ಧಾರ ಕೈಗೊಳ್ಳಬೇಕಿದೆ.

ತ್ಯಾಜ್ಯ ಸಂಗ್ರಹಿಸುವ ಫಿಲ್ಟರ್ ಮೀಡಿಯಾ: ಕೆರೆಗೆ ಬರುವ ನೀರಿಗೆ 25 ಲಕ್ಷ ರೂ. ವೆಚ್ಚದಲ್ಲಿ ಫಿಲ್ಟರ್ ಮೀಡಿಯಾ ಅಳವಡಿಕೆ ಕಾಮಗಾರಿ ಮಾಡಲಾಗುತ್ತಿದೆ. ಕೆರೆಯ ಮೇಲ್ಭಾಗದಲ್ಲಿ ಒಳಬರುವ ನೀರಿಗೆ ಎರಡು ಎಕರೆ ಜಾಗದಲ್ಲಿ ಫಿಲ್ಟರ್ ಮೀಡಿಯಾ ನಿರ್ವಿುಸಲಾಗುತ್ತಿದೆ. ನೀರು ಇಲ್ಲಿ ಶೋಧಿಸಲ್ಪಟ್ಟು ಅದರೊಳಗಿನ ಕಸ-ಕಡ್ಡಿ, ಪ್ಲಾಸ್ಟಿಕ್ ವಸ್ತುಗಳು ಇಲ್ಲಿ ಸಂಗ್ರಹವಾಗಿ ನೀರು ಮಾತ್ರ ಕೆರೆ ಬರುತ್ತದೆ. ಫಿಲ್ಟರ್ ಮೀಡಿಯಾದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ವರ್ಷಕ್ಕೊಮ್ಮೆ ಸ್ವಚ್ಛ ಮಾಡಬೇಕೆಂಬ ಉದ್ದೇಶವಿದೆ.

ವಾಕಿಂಗ್ ಪಾಥ್, ವ್ಯೂವ್ ಪಾಯಿಂಟ್: ಕೋಟೆ ಕೆರೆಯ ವಿಸ್ತೀರ್ಣ 50 ಎಕರೆ. ಸುತ್ತ 2.8 ಕಿಮೀ ಕೆರೆ ಏರಿ ಇದೆ. ಈ ಏರಿ ಮೇಲೆ ವಾಕಿಂಗ್ ಪಾಥ್ ಮಾಡುವ ಕಾಮಗಾರಿ ನಡೆಯುತ್ತಿದೆ. ಕೆರೆ ಏರಿ ಮೇಲ್ಭಾಗವನ್ನು ಅಗಲೀಕರಣ ಮಾಡುತ್ತಿದ್ದು, ವಾಯುವಿಹಾರಕ್ಕೆ ಅನುಕೂಲವಾಗುವಂತೆ ರಸ್ತೆ, ಅಲಲ್ಲಿ ಗಿಡ-ಮರ ಬೆಳೆಸಲು ನಿರ್ಧರಿಸಲಾಗಿದೆ. ಕೆರೆ ದಡದಲ್ಲಿ ವ್ಯೂವ್ ಪಾಯಿಂಟ್ ಹಾಗೂ ಎರಡು ಸಣ್ಣ ಪರಗೋಲು ಮಾಡಲು ಯೋಜನೆ ರೂಪಿಸಲಾಗಿದೆ. ಪ್ರವಾಸಿಗರು ಇಲ್ಲಿಯೇ ನಿಂತು ಕೆರೆ ಹಾಗೂ ದೂರದ ಚಂದ್ರದ್ರೋಣ ಪರ್ವತವನ್ನು ವೀಕ್ಷಿಸಬಹುದು.

Leave a Reply

Your email address will not be published. Required fields are marked *