ಬಾಡಿಗೆ ಕಟ್ಟಡದ ಮಳಿಗೆಗೆ ಬೀಗ

ಚಿಕ್ಕಮಗಳೂರು: ವರ್ಷಗಟ್ಟಲೆ ಬಾಡಿಗೆ ಬಾಕಿ ಉಳಿಸಿಕೊಂಡಿರುವ ನಗರಸಭೆಗೆ ಸೇರಿದ ಅಂಗಡಿ ಮಳಿಗೆಗಳಿಗೆ ಶುಕ್ರವಾರ ದಾಳಿ ನಡೆಸಿದ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ಬೀಗ ಹಾಕಿದರು. ಕಾರ್ಯಾಚರಣೆ ವೇಳೆ ಹಲವು ಅಂಗಡಿ ಮಾಲೀಕರು 4.75 ಲಕ್ಷ ರೂ. ಬಾಡಿಗೆ ಹಣ ಕಟ್ಟಿದರು.

ನಗರದ ಕೆಎಂ ರಸ್ತೆ ಸೇರಿ ವಿವಿಧೆಡೆ ಮೂರು ಮಳಿಗೆದಾರರು ವರ್ಷದಿಂದ ಬಾಡಿಗೆ ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ನಗರಸಭೆ ಬಿಗಿ ನಿಲುವು ತಳೆದಿದ್ದು, ಬೀಗ ಹಾಕಲಾಗಿದೆ. ಬಾಕಿ ಉಳಿಸಿಕೊಂಡಿರುವ ಪೂರ್ಣ ಹಣವನ್ನು ಪಾವತಿಸಿದ ನಂತರ ಬೀಗ ತೆರವು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಡಿಗೆ ಬಾಕಿ ಮಾಡಿಕೊಂಡಿರುವ ಮಳಿಗೆದಾರರಿಗೆ ಈ ಹಿಂದೆಯೇ ನಗರಸಭೆಯಿಂದ ಅವರಿಗೆ ಹಲವು ಬಾರಿ ಮೌಖಿಕವಾಗಿ ಸೂಚನೆ ನೀಡಿದ್ದಲ್ಲದೆ ನೋಟಿಸ್ ಸಹ ಜಾರಿ ಮಾಡಲಾಗಿದೆ. ನಗರಸಭೆಗೆ ಸೇರಿದ ಒಟ್ಟು 274 ಮಳಿಗೆಗಳಿದ್ದು, ಕೆಲವೊಂದು ಮಳಿಗೆ ಬಾಡಿಗೆದಾರರು ಬಾಡಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ನಗರಸಭೆ ಈ ಕ್ರಮ ಕೈಗೊಂಡಿದೆ.

ನಗರಸಭೆ ನೋಟಿಸ್ ಜಾರಿ ಮಾಡಿದ ಸಂದರ್ಭ ಸ್ಪಂದಿಸಿದ ಕೆಲವು ಮಳಿಗೆದಾರರು ನಗರಸಭೆ ಬಂದು ಪೂರ್ಣ ಪ್ರಮಾಣದಲ್ಲಿ ಬಾಕಿ ಬಾಡಿಗೆ ಹಣವನ್ನು ಪಾವತಿಸಿ ಇತ್ಯರ್ಥಪಡಿಸಿಕೊಂಡಿದ್ದಾರೆ. ಆದರೆ ಕೆಲವರು ಬಾಡಿಗೆದಾರರು ನಗರಸಭೆ ನೋಟಿಸ್​ಗೂ ಮನ್ನಣೆ ನೀಡದೆ ತಾತ್ಸಾರ ತೋರಿದ್ದರೆನ್ನಲಾಗಿದೆ.

ಇದೀಗ ಕಾರ್ಯಾಚರಣೆ ಸಂದರ್ಭದಲ್ಲಿ ಸ್ಥಳದಲ್ಲೇ ಕೆಲವರು ಬಾಡಿಗೆ ಹಣ ಪಾವತಿಸಿದ್ದಾರೆ. ಮೂರು ಮಳಿಗೆಗಳಿಗೆ ಬೀಗ ಹಾಕಲಾಗಿದೆ. ಉಳಿದಂತೆ ನಿರಂತರವಾಗಿ ಈ ದಾಳಿ ಮುಂದುವರಿಯಲಿದ್ದು, ಬಾಡಿಗೆ ನೀಡದ ಮಳಿಗೆದಾರರು ಕೂಡಲೇ ಬಾಡಿಗೆ ಕಟ್ಟಿ ಅಂಗಡಿಯನ್ನು ನಡೆಸಿಕೊಂಡು ಹೋಗಬೇಕು. ಇಲ್ಲವಾದಲ್ಲಿ ಯಾರ ಮುಲಾಜಿಗೂ ಒಳಗಾಗದೆ ಅಂಗಡಿಗಳಿಗೆ ಬೀಗ ಹಾಕಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.