ಮಂಡ್ಯ: ಕೆರೆಯಂಗಳದ ಕರ್ನಾಟಕ ಗೃಹ ಮಂಡಳಿ ಕಾಲನಿಯನ್ನು 2019ರಲ್ಲಿ ನಗರಸಭೆ ಹಸ್ತಾಂತರ ಮಾಡಿಕೊಂಡಿರುವುದು ನಿಯಮಬಾಹಿರವಾಗಿದೆ. ಆದ್ದರಿಂದ ಇದನ್ನು ಪರಿಗಣಿಸಲು ಸಾಧ್ಯವಿಲ್ಲ. ಅಂತೆಯೇ ಕೆಎಚ್‌ಬಿ ಅಧಿಕಾರಿಗಳಿಗೆ ಪತ್ರ ಬರೆದು ವಾಪಸ್ ನೀಡಲು ನಗರಸಭೆ ಸಾಮಾನ್ಯಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಎಂ.ವಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕರ್ನಾಟಕ ಗೃಹ ಮಂಡಳಿ ಕಾಲನಿ ಕುರಿತು ಗಂಭೀರ ಚರ್ಚೆ ನಡೆಯಿತು. ಎಚ್.ಎಸ್.ಮಂಜು ಮಾತನಾಡಿ, ಕಾಲನಿಯನ್ನು 2019ರಲ್ಲಿ ನಗರಸಭೆಗೆ ಹಸ್ತಾಂತರ ಮಾಡಲಾಗಿದೆ. ಅಂದು ಕೇವಲ 5.50 ಕೋಟಿ ರೂ.ಗಳನ್ನು ನಿರ್ವಹಣೆಗೆಂದು ನೀಡಲಾಗಿದೆ. ಅಷ್ಟು ಹಣದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿಲ್ಲ. 2019ರಲ್ಲಿ ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳೇ ಇರಲಿಲ್ಲ. ಆ ಸಮಯದಲ್ಲಿ ಯಾವುದೇ ಚರ್ಚೆಗಳು ಆಗದೆ ಆಡಳಿತಾಧಿಕಾರಿ ನೇತೃತ್ವದಲ್ಲಿ ಹಸ್ತಾಂತರ ಮಾಡಲಾಗಿದೆ. ನಂತರವೂ ಅದನ್ನು ಸಭೆಯ ಗಮನಕ್ಕೆ ತಂದಿಲ್ಲ. ಹಾಗಾಗಿ ಇದನ್ನು ನಿಯಮಬಾಹಿರ ಎಂದರು.
ಇದಕ್ಕೆ ದನಿಗೂಡಿಸಿದ ಶ್ರೀಧರ್ ಹಾಗೂ ನಾಗೇಶ್, 1964ರ ಕಾಯ್ದೆಯಡಿ ಎಲ್ಲ ಮೂಲ ಸೌಲಭ್ಯಗಳಿದ್ದರೆ ಮಾತ್ರ ಹಸ್ತಾಂತರ ಮಾಡಿಕೊಳ್ಳಬಹುದು. ಆದರೆ, ಯಾವುದೇ ಮೂಲ ಸೌಲಭ್ಯಗಳನ್ನು ನೀಡದೆ ಕೇವಲ 5.50 ಕೋಟಿ ರೂ.ಗಳನ್ನು ನಗರಸಭೆಗೆ ನೀಡಿ ಹಸ್ತಾಂತರ ಮಾಡಲಾಗಿದೆ. ಇದರಿಂದ ಯಾವುದೇ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಕೆಎಚ್‌ಬಿ ಬಡಾವಣೆಯಲ್ಲಿರುವ ಮೂಲೆ ನಿವೇಶನಗಳು, ಸಿಎ ಜಾಗ ಸೇರಿದಂತೆ ಇತರೆ ಆಸ್ತಿಗಳು ಇನ್ನೂ ಕೆಹೆಚ್‌ಬಿಯಲ್ಲೇ ಉಳಿದುಕೊಂಡಿವೆ. ನಗರಸಭೆ ಹಸ್ತಾಂತರದ ಬಳಿಕವೂ ಮೂಲೆ ನಿವೇಶನಗಳನ್ನು ಮಾರಿ ಬಂದ ಹಣವನ್ನೂ ತಾವೇ ಇಟ್ಟುಕೊಳ್ಳುವುದಾದರೆ ಮೂಲಸೌಲಭ್ಯಗಳನ್ನು ಒದಗಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಇದಕ್ಕೆ ಗೃಹಮಂಡಳಿ ಸಹಾಯಕ ಇಂಜಿನಿಯರ್ ಲಾರೆನ್ಸ್ ಪ್ರತಿಕ್ರಿಯಿಸಿ, ಬಡಾವಣೆ ಹಸ್ತಾಂತರ ಸಮಯದಲ್ಲಿ 5.50 ಕೋಟಿ ರು. ಹಾಗೂ ಒಳಚರಂಡಿ ನಿರ್ಮಾಣಕ್ಕೆ 89 ಲಕ್ಷ ರು.ಗಳನ್ನು ನೀಡಲಾಗಿತ್ತು ಎಂದಾಗ, ಅಧ್ಯಕ್ಷ ಎಂ.ವಿ.ಪ್ರಕಾಶ್ ಪ್ರತಿಕ್ರಿಯಿಸಿ, ಆ ಹಣದಲ್ಲಿ ನಾಲ್ಕು ರಸ್ತೆಗಳನ್ನು ಮಾಡಲು ಆಗಲ್ಲ. ಇನ್ನು ಕುಡಿಯುವ ನೀರು, ಬೀದಿ ದೀಪ, ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು ಹೇಗೆ?. ನೀವೇನೋ ಸುಲಭವಾಗಿ ಹಸ್ತಾಂತರ ಮಾಡುತ್ತೀರಿ, ಅದನ್ನು ನಿರ್ವಹಣೆ ಮಾಡುವುದು ಹೇಗೆ ಎಂದು ಕರ್ನಾಟಕ ಗೃಹ ಮಂಡಳಿಯ ಅಧಿಕಾರಿ ಲಾರೆನ್ಸ್ ಅವರನ್ನು ಪ್ರಶ್ನಿಸಿದರು.
ನಯೀಂ ಮಾತನಾಡಿ, ನಗರದಲ್ಲಿರುವ ಕೊಳಚೆ ನಿರ್ಮೂಲನಾ ಮಂಡಳಿ ಸಂಪೂರ್ಣ ನಿಷ್ಕ್ರೀಯವಾಗಿದೆ. ನಗರ ವ್ಯಾಪ್ತಿಯಲ್ಲಿರುವ ಗಾಂಧಿನಗರ ಮುಸ್ಲಿಂ ಬ್ಲಾಕ್, ಕಲ್ಲಹಳ್ಳಿ ಮುಸ್ಲಿಂ ಬ್ಲಾಕ್ ಸೇರಿದಂತೆ ಇನ್ನಿತರ ಕೊಳಚೆ ಪ್ರದೇಶಗಳಲ್ಲಿ ಸುಮಾರು 500 ಮನೆ ನಿರ್ಮಿಸುವ ಜವಾಬ್ದಾರಿ ವಹಿಸಿಕೊಂಡು ಆರು ವರ್ಷ ಕಳೆದರೂ ಇದುವರೆಗೆ 200 ಮನೆಗಳನ್ನಷ್ಟೇ ಪೂರ್ಣಗೊಳಿಸಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಮಧ್ಯಪ್ರವೇಶಿಸಿದ ಎಚ್.ಎಸ್.ಮಂಜು, ಕೊಳಗೇರಿ ಮಂಡಳಿ ನಗರದೊಳಗೆ ನಿಷ್ಕ್ರೀಯವಾಗಿದೆ. ಮಂಡಳಿಯಿಂದ ನಡೆಸಲಾಗಿರುವ ಕಾಮಗಾರಿಗಳನ್ನು ಸಮಗ್ರ ತನಿಖೆಗೊಳಪಡಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆಯುವಂತೆ ನಿರ್ಣಯ ಮಾಡುವಂತೆ ಸಭೆಯನ್ನು ಒತ್ತಾಯಿಸಿದಾಗ ಎಲ್ಲರೂ ಬೆಂಬಲ ಸೂಚಿಸಿದರು.
ಅಧ್ಯಕ್ಷ ನಾಗೇಶ್ ಮಾತನಾಡಿ, ಮರಕಾಡುದೊಡ್ಡಿ ಬಡಾವಣೆ ನಗರಸಭೆ ವ್ಯಾಪ್ತಿಯಿಂದ ಹೊರಗಿದೆ. ಆದರೂ ಆ ಬಡಾವಣೆಯನ್ನು ನಗರಸಭೆಗೆ ಸೇರಿಸಿಕೊಂಡು ಮೂಲಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಿಲ್ಲ. ಬಡಾವಣೆ ನಗರಸಭೆ ವ್ಯಾಪ್ತಿಗೆ ಬಾರದಿರುವುದರಿಂದ ಅದನ್ನು ಬೇಲೂರು ಗ್ರಾಮ ಪಂಚಾಯಿತಿಗೆ ಸೇರಿಸಬೇಕು ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಪೌರಾಯುಕ್ತೆ ಪಂಪಾಶ್ರೀ ಇದ್ದರು.
