ಶಂಕರಪುರ, ಲಕ್ಷ್ಮೀಶನಗರಕ್ಕೆ ಮೂಲ ಸೌಲಭ್ಯ ಒದಗಿಸಿ

ಚಿಕ್ಕಮಗಳೂರು: ಶಂಕರಪುರ ಮತ್ತು ಲಕ್ಷ್ಮೀಶನಗರ ಬಡಾವಣೆಗಳಿಗೆ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರು ಸೇರಿ ಮೂಲ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಸ್ಥಳೀಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಶಂಕರಪುರ ಮತ್ತು ಲಕ್ಷ್ಮೀಶನಗರ ನಾಗರಿಕರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಶಂಕರಪುರದಿಂದ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ ನಾಗರಿಕರು ನಗರಸಭೆ ಮುಂಭಾಗ ಧರಣಿ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆ ಕಾರ್ಯಾಧ್ಯಕ್ಷ ರುದ್ರಪ್ಪ ಮಾತನಾಡಿ, ಶಂಕರಪುರ ಮುಖಾಂತರ ಬೈಪಾಸ್ ರಸ್ತೆ ಸಂರ್ಪಸುವ ಮುಖ್ಯರಸ್ತೆ, ಗುಂಡಿ ಗೊಟರುಗಳಿಂದಾಗಿ ಸಂಪೂರ್ಣ ಹಾಳಾಗಿದೆ. ಇದರಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಬಡಾವಣೆಯಲ್ಲಿರುವ ಕಾಲುವೆ ಮತ್ತು ಚರಂಡಿಯನ್ನು 4 ವರ್ಷಗಳಿಂದ ಸ್ವಚ್ಛಗೊಳಿಸಿಲ್ಲ. ಚರಂಡಿಗಳಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಬಡಾವಣೆ ಸಾಂಕ್ರಾಮಿಕ ರೋಗಗಳ ಬೀಡಾಗಿದೆ ಎಂದು ದೂರಿದರು.

ವೇದಿಕೆ ಕಾರ್ಯದರ್ಶಿ ಚನ್ನಕೇಶವ ಮಾತನಾಡಿ, ಬಡಾವಣೆಯ ಎಲ್ಲೆಡೆ ಕಸದ ರಾಶಿ ಬಿದ್ದಿದೆ. ವಾರಕ್ಕೆ ಒಂದು ದಿನವಾದರೂ ನಗರಸಭೆಯಿಂದ ಸ್ವಚ್ಛತೆ ಮಾಡುತ್ತಿಲ್ಲ. ಮೂಲ ಸೌಲಭ್ಯಗಳನ್ನು ಒದಗಿಸುವಂತೆ ವರ್ಷದಿಂದ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರೂ ನಗರಸಭೆ ಅಧ್ಯಕ್ಷರು, ಆಯುಕ್ತರು, ಸ್ಥಳೀಯ ಸದಸ್ಯರು ಮತ್ತು ಅಧಿಕಾರಿಗಳು ಅತ್ತ ತಲೆ ಹಾಕುತ್ತಿಲ್ಲ ಎಂದು ದೂರಿದರು.

ಸ್ಥಳಕ್ಕಾಗಮಿಸಿ ಮನವೊಲಿಸಲು ಮುಂದಾದ ಸದಸ್ಯ ರಾಜಶೇಖರ್ ಮತ್ತು ಆಯುಕ್ತೆ ಎಂ.ವಿ.ತುಷಾರಮಣಿ ಅವರೊಂದಿಗೆ ವಾಗ್ವಾದ ನಡೆಸಿದ ಪ್ರತಿಭಟನಾಕಾರರು ಕೆಲಸ ಮಾಡದೆ ಸುಳ್ಳು ಹೇಳುವ ಅಧಿಕಾರಿಗಳನ್ನು ವಜಾ ಮಾಡುವಂತೆ ಒತ್ತಾಯಿಸಿದರು.

ನಗರಸಭೆ ಆಯುಕ್ತೆ ತುಷಾರಮಣಿ ಮಾತನಾಡಿ, ಶಂಕರಪುರ ಮತ್ತು ಲಕ್ಷ್ಮೀಶನಗರ ಬಡಾವಣೆಯಲ್ಲಿ ಕಸದ ಗಂಟೆ ಗಾಡಿಗೆ ಯಾರೂ ಹಣ ನೀಡುತ್ತಿಲ್ಲ. ಮನೆಯ ಕಸವನ್ನು ಗಾಡಿಗೆ ಅಥವಾ ತೊಟ್ಟಿಗೆ ಹಾಕುತ್ತಿಲ್ಲ. ಹೀಗಾದರೆ ಬಡಾವಣೆ ಹೇಗೆ ಸ್ವಚ್ಛವಾಗುತ್ತದೆ ಎಂದು ಪ್ರಶ್ನಿಸಿದರು.

ಇದೇ ವೇಳೆ ಉಪಾಧ್ಯಕ್ಷ ಸುಧಿರ್ ಅವರ ಮಾತಿನಿಂದ ಕೆರಳಿದ ಪ್ರತಿಭಟನಾಕಾರರು ಹೇಳಿಕೆಯನ್ನು ಹಿಂಪಡೆಯುವಂತೆ ಪಟ್ಟುಹಿಡಿದರು. ಮಧ್ಯ ಪ್ರವೇಶಿಸಿದ ಸದಸ್ಯ ರಾಜಶೇಖರ್ ಎರಡು ದಿನಗಳಲ್ಲಿ ನಾನು ಮತ್ತು ಅಧ್ಯಕ್ಷರು ಬಡಾವಣೆಗೆ ಆಗಮಿಸಿ ಕುಂದುಕೊರತೆ ಆಲಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.