20 ನಿಮಿಷದಲ್ಲಿ ಬರ ವೀಕ್ಷಣೆ ಮುಗಿಸಿದ ತಂಡ

ಬಾಗಲಕೋಟೆ:ಕಂದಾಯ ಸಚಿವ ಆರ್.ವಿ. ದೇಶಪಾಂಡೆ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಕೇವಲ 20 ನಿಮಿಷದಲ್ಲಿ ಜಿಲ್ಲೆಯಲ್ಲಿ ಬರ ವೀಕ್ಷಣೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಕೋಟೆನಾಡಲ್ಲಿ ಮುಂಗಾರು-ಹಿಂಗಾರು ಎರಡು ಹಂಗಾಮು ಮಳೆ, ಬೆಳೆ ಕೈಕೊಟ್ಟಿದೆ. ಜಿಲ್ಲೆಯಲ್ಲಿ ಸಂಪೂರ್ಣ ಬರಗಾಲ ಆವರಿಸಿ ರೈತರು ಪರಿತಪಿಸುವಂತಾ ಗಿದೆ. ಈ ಸಂದರ್ಭದಲ್ಲಿ ಬರ ವೀಕ್ಷಣೆಗೆ ಆಗಮಿಸಿದ್ದ ಸಂಪುಟ ಉಪ ಸಮಿತಿ ನೇತೃತ್ವದ ರಾಜ್ಯ ಸರ್ಕಾರ ಬರ ಅಧ್ಯಯನ ತಂಡ ತರಾತುರಿಯಲ್ಲಿ ಬರ ಅಧ್ಯಯನ ಮಾಡಿದ್ದು ಅನ್ನದಾತರ ಆಕ್ರೋಶಕ್ಕೆ ಕಾರಣವಾಯಿತು.

ಮಂಗಳವಾರ ವಿಜಯಪುರ ಜಿಲ್ಲೆಯಲ್ಲಿ ಬರ ಅಧ್ಯಯನ ಮುಗಿಸಿ ತಡವಾಗಿ ಜಿಲ್ಲೆಗೆ ಪ್ರವೇಶ ಮಾಡಿದ ಬರ ಅಧ್ಯಯನ ತಂಡ ಆರಂಭದಲ್ಲಿ ಬರದ ರುದ್ರನರ್ತನಕ್ಕೆ ಬಾಡಿ ಹೋಗಿರುವ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮ ವ್ಯಾಪ್ತಿಯ ಸೂರ್ಯಕಾಂತಿ, ಹಿಂಗಾರಿ ಜೋಳ ಬೆಳೆ ವೀಕ್ಷಣೆ ಮಾಡಿತು.

ನಂತರ ಬೀಳಗಿ ಶಾಸಕ ಮುರುಗೇಶ ನಿರಾಣಿ ಮನೆಗೆ ತೆರಳಿದ ಸಮಿತಿ ಸದಸ್ಯರು ಒಂದು ಗಂಟೆಗೂ ಹೆಚ್ಚು ಕಾಲ ಊಟ-ಉಪಾಹಾರ ಸವಿದರು. ಬಳಿಕ ಸುನಗ ಕ್ರಾಸ್​ನಲ್ಲಿ ಮೇವು ಬೆಳೆ ತಾಕುಗಳು ಹಾಗೂ ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವ ಸುಬೇದಾರ ಕೆರೆ ಹೂಳೆತ್ತುವ ಕಾಮಗಾರಿ, ಅನಗವಾಡಿ ಗ್ರಾಮ ವ್ಯಾಪ್ತಿಯ ಕೆರೆ ಹೂಳೆತ್ತುವ ಕಾಮಗಾರಿ, ಗದ್ದನಕೇರಿ ಗ್ರಾಮ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಕಾಮಗಾರಿ ವೀಕ್ಷಣೆ ಮಾಡಿತು. ಕೇವಲ ಇಪ್ಪತ್ತೇ ನಿಮಿಷದಲ್ಲಿ ಸಮಯ ಮೀಸಲಿಟ್ಟು ಕಾಟಾಚಾರಕ್ಕೆ ಅಧ್ಯಯನ ಮುಗಿಸಿದ್ದು ವಿಪರ್ಯಾಸ ಸಂಗತಿ.

ಬರ ಅಧ್ಯಯನ ವೇಳೆ ಸಂಪುಟ ಉಪ ಸಮಿತಿ ಸದಸ್ಯರಾದ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ, ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ, ಆರೋಗ್ಯ ಸಚಿವ ಶಿವಾನಂದ ಪಾಟೀಲ, ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ, ಬೀಳಗಿ ಶಾಸಕ ಮುರುಗೇಶ ನಿರಾಣಿ, ಮಾಜಿ ಶಾಸಕ ಎಚ್.ವೈ. ಮೇಟಿ, ಡಿಸಿಸಿ ಬ್ಯಾಂಕ್

ಅಧ್ಯಕ್ಷ ಅಜಯಕುಮಾರ ಸರನಾಯಕ, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಖೋತ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗಂಗಾರಾಮ ಬಡೇರಿಯಾ, ಬೆಳಗಾವಿ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ, ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ., ಸಿಇಒ ಗಂಗೂಬಾಯಿ ಮಾನಕರ ಸೇರಿದಂತೆಇತರರು ಇದ್ದರು.

ಯಾರದ್ದೋ ಹೊಲದಲ್ಲಿ ರೈತನಿಂದ ಮಾಹಿತಿ!:ಸಚಿವ ಸಂಪುಟ ಉಪ ಸಮಿತಿ ಬಾಡಗಂಡಿ ಗ್ರಾಮದ ವಿರೂಪಾಕ್ಷಿಗೌಡ ಪಾಟೀಲ ಅವರ ಜಮೀನಿಗೆ ಭೇಟಿ ನೀಡಲು ಅಧಿಕಾರಿಗಳು ಮೊದಲೇ ನಿರ್ಧಾರ ಮಾಡಿದ್ದರು. ಆದರೆ, ಸಚಿವ ದೇಶಪಾಂಡೆ ನೇತೃತ್ವದ ಸಮಿತಿ ಆಗಮಿಸುತ್ತಿದ್ದಂತೆ ನಿಗದಿಪಡಿಸಿದ್ದ ಹೊಲ ಬಿಟ್ಟು ಬೇರೆ ಹೊಲಕ್ಕೆ ಅಧಿಕಾರಿಗಳು ಕರೆದುಕೊಂಡು ಹೋದರು. ಈ ವೇಳೆ ರೈತ ವಿರೂಪಾಕ್ಷಿಗೌಡ ಪಾಟೀಲರನ್ನೇ ಆ ಹೊಲಕ್ಕೆ ಕರೆಯಿಸಿ ಸಚಿವರು ಬರದ ಮಾಹಿತಿ ಪಡೆದರು. ನಾಲ್ಕು ಎಕರೆ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆದಿದ್ದೇನೆ. 50 ಸಾವಿರ ನಷ್ಟವಾಗಿದೆ ಎಂದು ರೈತ ವಿರೂಪಾಕ್ಷಿ ತನ್ನ ಹೊಲದಲ್ಲಿ ಆದ ಬೆಳೆನಷ್ಟದ ಮಾಹಿತಿ ನೀಡಿದರು. ಸಮಿತಿ ಭೇಟಿ ನೀಡುವ ಮುನ್ನ ಅಧಿಕಾರಿಗಳು ಮಾಡಿದ ಆವಾಂತರಕ್ಕೆ ಸ್ವತಃ ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ. ಸಿಡಿಮಿಡಿಗೊಂಡ ಪ್ರಸಂಗ ಕೂಡ ನಡೆಯಿತು. ಬಾಗಲಕೋಟೆ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ .ವಿ. ಅವರನ್ನು ಡಿಸಿ ತೀವ್ರ ತರಾಟೆಗೆ ತೆಗೆದುಕೊಂಡರು. ಮೊದಲು ನಿಗದಿ ಮಾಡಿದ್ದ ಜಮೀನನ್ನು ಸಮಿತಿಗೆ ತೋರಿಸುವ ಬದಲು ಬೇರೆ ಜಮೀನು ತೋರಿಸುತ್ತಿರುವುದು ಸರಿಯಲ್ಲ ಎಂದು ಸಿಡಿಮಿಡಿಗೊಂಡರು.

ಅಧಿಕಾರಿಗಳ ಮೇಲೆ ಸಚಿವ ಗರಂ:ನರೇಗಾ ಯೋಜನಯಡಿ ಅನಗವಾಡಿ ಗ್ರಾಮ ವ್ಯಾಪ್ತಿಯ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಣೆಗೆ ಆಗಮಿಸಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಸಮಿತಿ ಸದಸ್ಯರು ಕೆರೆ ಅಂಗಳಕ್ಕೆ ಇಳಿಯಲಿಲ್ಲ. ತಾವಿದ್ದಲ್ಲೇ ಕಾರ್ವಿುಕರನ್ನು ಕರೆಸಿಕೊಂಡು ಕಾಮಗಾರಿ ಕುರಿತು ಪ್ರಶ್ನಿಸಿದರು. ಇಂದೇ ಕಾಮಗಾರಿ ಶುರುವಾಗಿದೆ. ಇವತ್ತಿನಿಂದ ಕೆಲಸಕ್ಕೆ ಬಂದಿದ್ದೇವೆ ಎಂದು ಕಾರ್ವಿುಕರು ತಿಳಿಸಿದರು. ಇದರಿಂದ ಕೆಂಡಾಮಂಡಲರಾದ ಸಚಿವ ಆರ್.ವಿ. ದೇಶಪಾಂಡೆ ಗ್ರಾಪಂ ಅಧಿಕಾರಿ ಜಿ.ಕೆ. ಬಗಲಿ ಅವರನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು. ನಾವು ಬೆಂಗಳೂರಿನಲ್ಲಿ ಇರುತ್ತೇವೆ. ನರೇಗಾ ಯೋಜನೆಗೆ ನೂರಾರು ಕೋಟಿ ರೂ. ಹಣ ಬಿಡುಗಡೆ ಮಾಡಲಾಗುತ್ತದೆ. ನೀವು ನೋಡಿದ್ರೇ ಬರ ಇದ್ದರೂ ಈಗ ಕಾಮಗಾರಿ ಆರಂಭ ಮಾಡಿದ್ದೀರಲ್ಲ ಎಂದು ಗರಂ ಆದರು.