ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ ಕಶ್ಯಪ್ ನಟಿಸಿದ್ದಾರೆ. ಸಾಮಾನ್ಯವಾಗಿ ಚಿತ್ರದ ಸಂಕಲನಕಾರರೇ ಅದರ ಟ್ರೇಲರ್ ಕಟ್ ಮಾಡುವುದು ವಾಡಿಕೆ. ಆದರೆ ಟ್ರೇಲರ್ ಎಡಿಟ್ ಮಾಡುವುದಕ್ಕೆಂದೇ ಒಂದು ಪ್ರತ್ಯೇಕ ವೃತ್ತಿಪರ ತಂಡದ ಮೊರೆ ಹೋಗಿದೆಯಂತೆ ‘ಮುಂದಿನ ನಿಲ್ದಾಣ’ ತಂಡ. ‘ಟ್ರೇಲರ್ ಎಂಬುದು ಆಮಂತ್ರಣ ಪತ್ರಿಕೆ ಇದ್ದಂತೆ. ಅದು ಚೆನ್ನಾಗಿ ಮೂಡಿಬರಬೇಕು ಎಂಬ ಕಾರಣಕ್ಕೆ ಈ ಪ್ರಯತ್ನ ಮಾಡಿದ್ದೇವೆ.
ಹಾಗಾಗಿ ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ’ ಎಂದಿದ್ದಾರೆ ನಿರ್ದೇಶಕ ವಿನಯ್ ಭಾರದ್ವಾಜ್. ಇದು ಅವರ ನಿರ್ದೇಶನದಲ್ಲಿ ಬರುತ್ತಿರುವ ಚೊಚ್ಚಲ ಚಿತ್ರ. ನಟಿ ಅನನ್ಯಾ ಕಶ್ಯಪ್ ಅವರಿಗೂ ನಾಯಕಿಯಾಗಿ ಇದು ಮೊದಲ ಸಿನಿಮಾ. ಈ ಹಿಂದೆ ‘ನೀರ್ದೋಸೆ’ ಚಿತ್ರದಲ್ಲೊಂದು ಚಿಕ್ಕ ಪಾತ್ರ ಮಾಡಿದ್ದರು. ‘ವೈಯಕ್ತಿಕವಾಗಿಯೂ ಈ ಸಿನಿಮಾದಿಂದ ನಾನು ಹೆಚ್ಚು ಕಲಿತಿದ್ದೇನೆ. ಸಿನಿಮಾ ನಿರ್ವಣದ ಹಲವು ವಿಭಾಗಗಳ ಬಗ್ಗೆ ತಿಳಿದುಕೊಂಡಿದ್ದೇನೆ.
ಅಹನಾ ಎನ್ನುವ ಈ ಪಾತ್ರಕ್ಕೆ ಸಾಕಷ್ಟು ಜನರಿಗೆ ಆಡಿಷನ್ ಮಾಡಿದ ಬಳಿಕ ನನ್ನನ್ನು ನಿರ್ದೇಶಕರು ಆಯ್ಕೆ ಮಾಡಿದರು. ನಾನು ಹೇಗೆ ಅಭಿನಯಿಸಿದ್ದೇನೆ ಎಂಬುದನ್ನು ಜನರೇ ನೋಡಿ ಹೇಳಬೇಕು. ದತ್ತಣ್ಣ ಮತ್ತ ನನ್ನ ಕಾಂಬಿನೇಷನ್ನಲ್ಲಿ ಇದು ಎರಡನೇ ಚಿತ್ರ ಎನ್ನೋದು ಖುಷಿಯ ಸಂಗತಿ’ ಎಂದು ಕಣ್ಣರಳಿಸುತ್ತಾರೆ ಅನನ್ಯಾ.
‘ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ಚಿತ್ರ ನಿರ್ವಣವಾಗಿದ್ದು, ಕನ್ನಡದ ಮೇಲಿನ ಅಭಿಮಾನಕ್ಕಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿರುವುದಾಗಿ ಹೇಳಿಕೊಳ್ಳುತ್ತಾರೆ ನಿರ್ವಪಕರಲ್ಲೊಬ್ಬರಾದ ಮುರಳಿ. ‘ಈ ಸಂಸ್ಥೆ ಮೂಲಕ ವಿನಯ್ ಭಾರದ್ವಾಜ್ ರೀತಿಯ ಪ್ರತಿಭಾನ್ವಿತ ನಿರ್ದೇಶಕರನ್ನು, ಅನನ್ಯಾ ರೀತಿಯ ಪ್ರತಿಭಾವಂತ ನಟಿಯನ್ನು ಪರಿಚಯಿಸುತ್ತಿರುವುದಕ್ಕೆ ಹೆಮ್ಮೆ ಇದೆ. ದತ್ತಣ್ಣ ಅಭಿನಯಿಸಿರುವುದು ನಮ್ಮ ಚಿತ್ರದ ಪ್ಲಸ್ ಪಾಯಿಂಟ್’ ಎಂಬುದು ಮುರಳಿ ಅಭಿಪ್ರಾಯ. ಹಾಡುಗಳ ಬಿಡುಗಡೆ ನಂತರ ವಿದೇಶದಲ್ಲಿರುವ ಕನ್ನಡಿಗರಿಂದ ಪ್ರೀಮಿಯರ್ ಶೋಗೆ ಬೇಡಿಕೆ ಬಂದಿದೆಯಂತೆ. ಇದು ತಂಡದ ಸಂತಸವನ್ನು ಹೆಚ್ಚಿಸಿದೆ. ನ.29ಕ್ಕೆ ಎಲ್ಲೆಡೆ ‘ಮುಂದಿನ ನಿಲ್ದಾಣ’ ಬಿಡುಗಡೆ ಆಗಲಿದೆ.