ಮುಂಡಗೋಡ ಟಿಎಪಿಸಿಎಂಎಸ್​ನಲ್ಲಿ ಅವ್ಯವಹಾರ

ಮುಂಡಗೋಡ: ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಟಿಎಪಿಸಿಎಂಎಸ್) ದಲ್ಲಿ ಸಂಸ್ಥೆಯ ಹಣವನ್ನು ವ್ಯವಸ್ಥಾಪಕ ತನ್ನ ಖಾತೆಗೆ ಜಮಾ ಮಾಡಿಕೊಂಡ ಬಗೆಗೆ ತಡವಾಗಿ ಬೆಳಕಿಗೆ ಬಂದಿದೆ.

ಗೋವಿನ ಜೋಳ ಹಾಗೂ ಕ್ರಿಮಿನಾಶಕ ಔಷಧಿ ವ್ಯವಹಾರದ ಸುಮಾರು 4 ಲಕ್ಷ ರೂಪಾಯಿ ಹಣವನ್ನು ಸಂಸ್ಥೆಯ ವ್ಯವಸ್ಥಾಪಕ ಎಂ.ಎ. ನದಾಫ್ ತಮ್ಮ ವೈಯಕ್ತಿಕ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ.

ಇತ್ತೀಚಿನ ಲೆಕ್ಕ ಪರಿಶೋಧನೆಯ ಸಮಯದಲ್ಲಿ ಇದು ಬಹಿರಂಗವಾಯಿತು. ಈ ವಿಷಯ ಸಂಸ್ಥೆಯ ಆಡಳಿತ ಕಮಿಟಿಯ ಗಮನಕ್ಕೆ ಬರುತ್ತಿದ್ದಂತೆಯೇ ಬಡ್ಡಿ ಸಮೇತವಾಗಿ ಹಣವನ್ನು ಸಂಸ್ಥೆಯ ಖಾತೆಗೆ ಜಮಾ ಮಾಡುವಂತೆ ತಾಕೀತು ಮಾಡುವ ಮೂಲಕ ವ್ಯವಸ್ಥಾಪಕರಿಂದ ಹಣವನ್ನು ಭರಿಸಿಕೊಳ್ಳಲಾಗಿದೆ. ಅಲ್ಲದೆ, ಲೋಪವೆಸಗಿದ ವ್ಯವಸ್ಥಾಪಕ ಎಂ.ಎ. ನದಾಫ್ ಅವರ ಮೇಲೆ ಶಿಸ್ತು ಕಾನೂನು ಕ್ರಮ ಕೈಗೊಳ್ಳುವಂತೆ ಸಂಸ್ಥೆಯ ಆಡಳಿತ ಕಮಿಟಿ ಠರಾವು ಹೊರಡಿಸಿದ್ದು ಜಿಲ್ಲಾ ಮಧ್ಯವರ್ತಿ(ಕೆಡಿಸಿಸಿ) ಬ್ಯಾಂಕ್​ಗೆ ಪತ್ರ ಬರೆದಿದೆ.

ಜಿಲ್ಲೆಯಲ್ಲಿ ಪ್ರತಿಷ್ಠಿತ ಸಂಸ್ಥೆ ಎನಿಸಿಕೊಂಡಿರುವ ಈ ಸೊಸೈಟಿಯಲ್ಲಿ ಈ ಹಿಂದೆಯೂ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದು ಸಂಸ್ಥೆಯ ವ್ಯವಸ್ಥಾಪಕ ಹಾಗೂ ಕೆಲವು ಸಿಬ್ಬಂದಿಯನ್ನು ಅಮಾನತುಗೊಳಿಸಿ ಜಿಲ್ಲಾ ಮಧ್ಯವರ್ತಿ(ಕೆಡಿಸಿಸಿ) ಬ್ಯಾಂಕ್​ನ ಸಿಬ್ಬಂದಿಯನ್ನು ಸಂಸ್ಥೆಯ ವ್ಯವಸ್ಥಾಪಕರನ್ನಾಗಿ ನೇಮಿಸಲಾಗಿತ್ತು.

ಗೋವಿನ ಜೋಳದ ವ್ಯವಹಾರದಿಂದ ಬಂದ 4 ಲಕ್ಷಕ್ಕೂ ಅಧಿಕ ಹಣವನ್ನು ವ್ಯವಸ್ಥಾಪಕರು ತಮ್ಮ ಸ್ವಂತ ಖಾತೆಗೆ ಜಮಾ ಮಾಡಿಕೊಂಡಿದ್ದರು. ಈ ವಿಷಯ ನಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಬಡ್ಡಿ ಸಮೇತ ಹಣವನ್ನು ವ್ಯವಸ್ಥಾಪಕರಿಂದ ಸಂಸ್ಥೆಗೆ ಭರಿಸಿಕೊಳ್ಳಲಾಗಿದೆ. ತಪ್ಪು ಯಾರೇ ಮಾಡಿದರೂ ತಪ್ಪೇ. ಸಂಸ್ಥೆಗೆ ಕೆಟ್ಟ ಹೆಸರು ತರಲು ಯತ್ನಿಸಿದ ವ್ಯವಸ್ಥಾಪಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ

| ಪಿ.ಎಸ್. ಸಂಗೂರಮಠ, ಅಧ್ಯಕ್ಷ, ಟಿಎಪಿಸಿಎಂಎಸ್

ಮೇಲಿಂದ ಮೇಲೆ ಸಂಸ್ಥೆಯಲ್ಲಿ ಹೀಗೆ ಅವ್ಯವಹಾರ ನಡೆಯುತ್ತಿದ್ದರೆ ರೈತರಿಗೆ ಸಂಸ್ಥೆಯ ಮೇಲೆ ನಂಬಿಕೆ ಇಲ್ಲದಂತಾಗುತ್ತದೆ. ಸಂಸ್ಥೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅವ್ಯವಹಾರಗಳಿದ್ದು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು.

| ಮಲ್ಲಿಕಾರ್ಜುನ ಕುಟ್ರಿ ಮಾಜಿ ಅಧ್ಯಕ್ಷ, ಟಿಎಪಿಸಿಎಂಎಸ್