More

    ಡಿಐಜಿ ವಿರುದ್ಧ ಕಿರುಕುಳ ಆರೋಪ: ನಾಪತ್ತೆಯಾಗಿರೋ ಹುಡುಗಿ ಕುಟುಂಬಕ್ಕೆ ಸಿಎಂ​ ಠಾಕ್ರೆ ಚಾಲಕನಿಂದ ಬೆದರಿಕೆ ಆರೋಪ

    ಮುಂಬೈ: ಮುಂಬೈ ಡಿಐಜಿ ವಿರುದ್ಧ ಕಿರುಕುಳ ಆರೋಪ ಮಾಡಿರುವ 17 ವರ್ಷದ ಹುಡುಗಿಯೊಬ್ಬಳು ಸದ್ಯ ನಾಪತ್ತೆಯಾಗಿದ್ದು, ಮಂಗಳವಾರ ನ್ಯಾಯಾಲಯದಲ್ಲಿ ಡಿಜಿಐಯ ನಿರೀಕ್ಷಣಾ ಜಾಮಿನು ಕುರಿತು ನಡೆದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಅಗಮಿಸಿದ್ದ ಹುಡುಗಿಯ ಪಾಲಕರಿಗೆ ಸಿಎಂ ಉದ್ಧವ್​ ಠಾಕ್ರೆ ಕಾರು ಚಾಲಕ ಬೆದರಿಕೆಯೊಡ್ಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಪ್ರಕರಣ ಸಂಬಂಧ ಪನ್ವೇಲ್​ ಕೋರ್ಟ್​ನಲ್ಲಿ ಮಂಗಳವಾರ ವಿಚಾರಣೆ ಆರಂಭವಾಗುವ ಮುನ್ನ ಈ ಘಟನೆ ನಡೆಯಿತು. ಬಿಳಿ ವಸ್ತ್ರ ಧರಿಸಿದ್ದ ವ್ಯಕ್ತಿ ನನ್ನನ್ನು ದಿಟ್ಟಸಿ ನೋಡಿ ನನ್ನ ಬಳಿ ಬಂದು ನಾನು ಸಿಎಂ ಉದ್ಧವ್​ ಠಾಕ್ರೆ ಅವರ ಕಾರು ಚಾಲಕ, ನೀವು ಸುಮ್ಮನೇ ಇದ್ದು ಬಿಡಿ ಎಂದು ಬೆದರಿಕೆ ಹಾಕಿದ ಎಂದು ಹುಡುಗಿಯ ತಂದೆ ಮಾಧ್ಯಮಗಳಿಗೆ ಹೇಳಿದ್ದಾರೆ. ಅಲ್ಲದೆ, ಬೆದರಿಕೆ ಸಂಬಂಧ ತಲೋಜಾ ಪೊಲೀಸ್​ ಠಾಣೆಯಲ್ಲಿ ಹುಡುಗಿ ಕುಟುಂಬ ದೂರನ್ನು ಕೂಡ ದಾಖಲಿಸಿದೆ.

    ಬೆದರಿಕೆಯ ಬೆನ್ನಲ್ಲೇ ಉದ್ಧವ್​ ಕಾರು ಚಾಲಕನೆಂದು ಹೇಳಿಕೊಂಡ ವ್ಯಕ್ತಿಯ ವಿಡಿಯೋ ಚಿತ್ರೀಕರಣವನ್ನು ಕುಟುಂಬದವರು ಮಾಡಿಕೊಂಡಿದ್ದು, ವ್ಯಕ್ತಿಯ್ನನು ಮುಂಬೈ ಪೊಲೀಸ್​ ಮೋಟಾರ್​ ಟ್ರ್ಯಾಸ್ಸ್​ಪೋರ್ಟ್​ ಘಟಕದ ಕಾನ್​ಸ್ಟೆಬಲ್​ ದಿನಕರ್​ ಸಾಳ್ವೆ ಎಂದು ಗುರುತಿಸಲಾಗಿದೆ. ಉದ್ಧವ್​ ಠಾಕ್ರೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಅವರಿಗೆ ಚಾಲಕನಾಗಿ ಇವರನ್ನು ನೇಮಿಸಲಾಗಿದೆ.

    ಘಟನೆ ಸಂಬಂಧ ಸ್ಥಳೀಯ ಮಾಧ್ಯಮವೊಂದು ಸಾಳ್ವೆ ಅವರನ್ನು ಸಂಪರ್ಕಿಸಿದಾಗ ಕೆಲವು ನೋಂದಣಿ ಕೆಲಸ ಇದ್ದುದ್ದರಿಂದ ನಾನು ನ್ಯಾಯಾಲಯಕ್ಕೆ ಹೋಗಿದ್ದೆ. ಅಲ್ಲದೆ, ನನ್ನು ವಕೀಲರನ್ನು ಭೇಟಿ ಮಾಡಬೇಕಾಗಿತ್ತು. ನನಗೆ ಆ ಕುಟುಂಬದ ಬಗ್ಗೆ ಏನೋ ತಿಳಿದಿಲ್ಲ. ಅವರು ನನ್ನ ಹೆಸರನೇಕೆ ತೆಗೆದುಕೊಂಡರು ಎಂಬುದು ಗೊತ್ತಿಲ್ಲ. ನಾನು 22 ವರ್ಷದಿಂದ ಸರ್ಕಾರಿ ಸೇವೆಯಲ್ಲಿದ್ದೇನೆ. ದೀರ್ಘಕಾಲದಿಂದಲೂ ಠಾಕ್ರೆ ಅವರ ಕುಟುಂಬಕ್ಕೆ ಪರಿಚಿತನಾಗಿದ್ದೇನೆ. ಬಾಳಾ ಸಾಹೇಬ್​ ಠಾಕ್ರೆ ಅವರಿಗೆ ನೀಡಲಾಗುತ್ತಿದ್ದ ಸೆಕ್ಯುರಿಟಿಯಲ್ಲಿ ಸುಮಾರು 7 ವರ್ಷ ನಾನು ಕೂಡ ಭಾಗವಾಗಿದ್ದೆ. ಉದ್ಧವ್​ ಠಾಕ್ರೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ 15 ದಿನಗಳ ಮುಂಚಿನಿಂದಲೂ ನಾನು ಅವರ ಕಾರು ಚಾಲಕನಾಗಿದ್ದೇನೆ ಎಂದು ತಿಳಿಸಿದ್ದಾರೆ.

    ಇನ್ನು ಹುಡುಗಿ ಆರೋಪಿಸಿರುವ ಡಿಐಜಿ ನಿಶಿಕಾಂತ್​ ಬಗ್ಗೆ ಮಾತನಾಡಿರುವ ಸಾಳ್ವೆ ಅವರನ್ನು ಕಳೆದ 15 ವರ್ಷಗಳಿಂದಲೂ ಬಲ್ಲವನಾಗಿದ್ದೇನೆ. ಅವರು ನಾಗ್​ಪಾಡ್​ ಮೋಟಾರ್​ ಟ್ರಾನ್ಸ್​ಪೋರ್ಟ್ ಘಟಕದ ಎಸಿಪಿ ಆಗಿದ್ದಾಗ ಅವರ ಅಡಿಯಲ್ಲಿ ನಾನು ಸೇವೆ ಸಲ್ಲಿಸಿದ್ದೇನೆ ಎಂದಿದ್ದಾರೆ.

    ಸಾರಿಗೆ ಘಟಕಕ್ಕೂ ಹಾಗೂ ಉದ್ಧವ್​ ಠಾಕ್ರೆ ಸಿಎಂ ಸಂಪರ್ಕ ಇರುವುದನ್ನು ನಾಗ್​ಪಾಡ್​ ಸಾರಿಗೆ ಘಟಕ ಖಚಿತಪಡಿಸಿದೆ. ಅಲ್ಲದೆ, ಸಾಳ್ವೆ ಜನವರಿ 3 ರಿಂದ 7ರವರೆಗೆ ರಜೆಯಲ್ಲಿರುವುದನ್ನು ತಿಳಿಸಿದ್ದು, ಬುಧವಾರ ಕೆಲಸಕ್ಕೆ ಬರಬೇಕಾಗಿತ್ತು ಆದರೆ ಬರಲಿಲ್ಲ ಎಂದು ಸಾರಿಗೆ ಘಟಕದ ಸಬ್​ ಇನ್ಸ್​ಪೆಕ್ಟರ್​ ಬಜರಂಗ್​ ಜಾಧವ್​ ತಿಳಿಸಿದ್ದಾರೆ. ಸಿಎಂ ಕಚೇರಿಯಲ್ಲಿಯೂ ಸಾಳ್ವೆ ಉಪಸ್ಥಿತಿ ಇಲ್ಲದಿರುವುದು ಪ್ರಕರಣಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದು, ಈ ಸಂಬಂಧ ತನಿಖೆಗೆ ಮಾಧ್ಯಮ ಒತ್ತಾಯಿಸಿದೆ.

    ಇನ್ನೊಂದು ಕಡೆ ಮುಂಬೈ ಪೊಲೀಸ್​ ಜಂಟಿ ಆಯುಕ್ತ ನಾವಲ್​ ಬಜಾಜ್​ ಅವರು ಮಾತನಾಡಿ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು. ಆರೋಪ ಸಾಬೀತಾದರೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ. ಅಲ್ಲದೆ, ಮೂಲಗಳ ಪ್ರಕಾರ ಉದ್ಧವ್​ ಠಾಕ್ರೆಗೆ ಚಾಲಕನಾಗಿ ಇತ್ತೀಚೆಗೆ ಆಯ್ಕೆಯಾಗಿರುವ ಸಾಳ್ವೆ ಕುಟುಂಬದ ಡ್ರೈವರ್​ ಅಲ್ಲವೆಂದು ಶಿವಸೇನಾ ಮೂಲಗಳು ತಿಳಿಸಿವೆ.

    ಡಿಐಜಿ ನಿಶಿಕಾಂತ್​ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆ ನೋಟ್​ ಬರೆದಿಟ್ಟು ಹುಡುಗಿ ಸೋಮವಾರದಿಂದ ಕಾಣೆಯಾಗಿದ್ದಳೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ನಿಶಿಕಾಂತ್​ ಸಲ್ಲಿಸಿದ್ದ ನಿರೀಕ್ಷಣ ಜಾಮೀನು ಅರ್ಜಿ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡ ನ್ಯಾಯಾಲಯ ಶುಕ್ರವಾರಕ್ಕೆ ವಿಚಾರಣೆ ಮುಂದೂಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts