ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಿದ ತಾಯಿ, ಅತ್ಯಾಚಾರವೆಸಗಿದ ಸೋದರ, ಕುಮ್ಮಕ್ಕು ನೀಡಿದ ಪತಿ: ಇದು ಬಾಲಕಿಯ ಕಣ್ಣೀರ ಕತೆ

ಮುಂಬೈ: ಬಾಲಕಿಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದ್ದಲ್ಲದೆ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಾಲಕಿಯ ಪತಿ, ತಾಯಿ ಮತ್ತು ಸೋದರ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

18 ವರ್ಷವಾಗದಿದ್ದರೂ ಬಾಲಕಿಯ ತಾಯಿ ಆಕೆಯನ್ನು ಬಲವಂತವಾಗಿ ವ್ಯಕ್ತಿಯೊಬ್ಬನ ಜತೆ 2018ರ ಏಪ್ರಿಲ್​ನಲ್ಲಿ ಮದುವೆ ಮಾಡಿಸಿದ್ದರು ಎಂದು ಮನ್​ಖುರ್ದ್​ ಠಾಣೆಯ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ದೈಹಿಕಸಂಪರ್ಕಕ್ಕೆ ಆಗ್ರಹಿಸಿ ಪತಿ ಪ್ರತಿದಿನವೂ ಬಾಲಕಿಗೆ ಕಿರುಕುಳ ಕೊಡುತ್ತಿದ್ದ. ಇದರಿಂದ ಬೇಸತ್ತ ಆಕೆ, ಮುಂಬೈನ ಮನ್​ಖುರ್ದ್​ನಲ್ಲಿರುವ ತವರಿಗೆ ಮರಳಿದ್ದಳು. ಅದಾದ ಕೆಲವೇ ತಿಂಗಳಲ್ಲಿ ಬಾಲಕಿಯ ತಾಯಿ ಆಕೆಯನ್ನು ಮಧ್ಯವರ್ತಿಯೊಬ್ಬನ ಬಳಿ ಕರೆದೊಯ್ದು, ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಿದ್ದಳು ಎಂದು ಸಂತ್ರಸ್ತೆ ಶನಿವಾರ ರಾತ್ರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾಳೆ.

ಹಣಕ್ಕಾಗಿ 60 ವರ್ಷದ ಮುದುಕನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಬಲವಂತ ಮಾಡಿದರು. ಅಲ್ಲದೆ, ನನ್ನ ಪತಿ ಮತ್ತು ಮಧ್ಯವರ್ತಿ ನಿರಂತರವಾಗಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ಈ ಬಗ್ಗೆ ತನ್ನ ಸೋದರನ ಬಳಿ ಹೇಳಿಕೊಂಡಾಗ ಆತ ನನ್ನ ನೆರವಿಗೆ ಬರುವ ಬದಲು ಅತ್ಯಾಚಾರ ಎಸಗಿ ವಿಷಯ ಬಾಯ್ಬಿಟ್ಟರೆ ಕತ್ತಿಯಲ್ಲಿ ಕಡಿದು ಕೊಲ್ಲುವುದಾಗಿ ಬೆದರಿಸಿದ್ದಾಗಿ ಬಾಲಕಿ ದೂರಿನಲ್ಲಿ ಹೇಳಿದ್ದಾಳೆ.

ಭಾರತೀಯ ದಂಡಸಂಹಿತೆ ಪ್ರಕಾರ ಅತ್ಯಾಚಾರ ಮತ್ತು ಅಸ್ವಾಭಾವಿಕ ಅಪರಾಧಗಳು, ಪೋಕ್ಸೊ, ಪಿಟಾ ಮತ್ತು ಬಾಲ್ಯ ವಿವಾಹ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *