ಶಿವಸೇನೆ ಪಕ್ಷದ ಹಾಲಿ ಸಂಸದನ ಪತ್ನಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಸೆಷನ್ಸ್​ ನ್ಯಾಯಾಲಯ

ಮುಂಬೈ: ಮಹಾರಾಷ್ಟ್ರದಲ್ಲಿ 2014ರ ನಡೆದ ಲೋಕಸಭಾ ಚುನಾವಣೆ ವೇಳೆಯ ಹಿಂಸಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಪಕ್ಷದ ಸಂಸದನ ಪತ್ನಿ ಹಾಗೂ ಪಕ್ಷದ 17 ಕಾರ್ಯಕರ್ತರಿಗೆ ಮಂಗಳವಾರ ಒಂದು ವರ್ಷ ಜೈಲು ಶಿಕ್ಷೆಯಾಗಿದೆ.

ಮುಂಬೈನ ದಕ್ಷಿಣ ಕೇಂದ್ರದ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಶಿವಸೇನೆ ಪಕ್ಷದ ನಾಯಕ ರಾಹುಲ್ ಶೆವಾಲೆ​ ಅವರ ಪತ್ನಿ ಕಾಮಿನಿ ಶೆವಾಲೆ ಮತ್ತು ಕಾರ್ಯಕರ್ತರಿಗೆ ಮುಂಬೈನ ಸೆಷನ್ಸ್​ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 149(ಕಾನೂನುಬಾಹಿರ ವಿಧಾನಸಭೆ) ಮತ್ತು ಸೆಕ್ಷನ್​ 427(ಕಿಡಿಗೇಡಿತನ) ಅಡಿಯಲ್ಲಿ ನ್ಯಾಯಾಧೀಶರಾದ ಡಿ.ಕೆ.ಗುಡಧೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಕೊಲೆ ಯತ್ನ ಸೇರಿದಂತೆ ಆರೋಪಿಗಳ ಮೇಲಿದ್ದ ಇನ್ನಿತರ ಪ್ರಕರಣಗಳಿಂದ ಅವರನ್ನು ಖುಲಾಸೆಗೊಳಿಸಲಾಗಿದೆ.

2014ರ ಏಪ್ರಿಲ್‌ನಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಮುಂಬೈನ ದಕ್ಷಿಣ ಕೇಂದ್ರ ಕ್ಷೇತ್ರದ ಉಪನಗರ ತ್ರೋಂಬೆಯಲ್ಲಿ ಮತದಾರರಿಗೆ ಹಣ ಹಂಚಲಾಗುತ್ತಿದೆ ಎಂಬ ವಿಚಾರವಾಗಿ ಶಿವಸೇನೆ ಹಾಗೂ ಮಹಾರಾಷ್ಟ್ರದ ನವನಿರ್ಮಾಣ ಸೇನೆ(ಎಂಎನ್​ಎಸ್​) ಪಕ್ಷಗಳ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ವಿಕಾಸ್​ ಥೋರ್ಬೊಲ್​ ಎಂಬ ಪೊಲೀಸ್​ ಕಾನ್​ಸ್ಟೇಬಲ್​ ಗಾಯಗೊಂಡಿದ್ದರು. ಬಳಿಕ ಕಾನ್ಸ್​ಟೇಬಲ್​ ಹೇಳಿಕೆ ಪ್ರಕಾರ ಕಾಮಿನಿ ಶೆವಾಲೆ ಮತ್ತು 18 ಮಂದಿ ಕಾರ್ಯಕರ್ತರ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. (ಏಜೆನ್ಸೀಸ್​)