ಕಾಂಗ್ರೆಸ್ ನಾಯಕಿ ಮಗಳಿಗೆ ಅತ್ಯಾಚಾರ ಬೆದರಿಕೆ ಆರೋಪಿ ಸೆರೆ

ಮುಂಬೈ: ಕಾಂಗ್ರೆಸ್‌ ವಕ್ತಾರೆ ಪ್ರಿಯಾಂಕ ಚತುರ್ವೇದಿ ಮಗಳಿಗೆ ಅತ್ಯಾಚಾರ ಎಸಗುವುದಾಗಿ ಟ್ವಿಟರ್‌ನಲ್ಲಿ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈ ಪೊಲೀಸ್‌ ಮತ್ತು ದೆಹಲಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿ ಗಿರೀಶ್‌ ಎಂಬಾತನನ್ನು ಅಹಮದಾಬಾದ್‌ನಲ್ಲಿ ಬಂಧಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಮುಂಬೈ ಪೊಲೀಸರು ಟ್ವಿಟರ್‌ ಮೂಲಕ ಅತ್ಯಾಚಾರದ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಕೃತಜ್ಞತೆ ಸಲ್ಲಿಸಿದ ಪ್ರಿಯಾಂಕ

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕ ಚತುರ್ವೇದಿ, ಮುಂಬೈ ಮತ್ತು ದೆಹಲಿ ಪೊಲೀಸರ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಪ್ರಕರಣದಿಂದಾಗಿ ಯಾರೊಬ್ಬರು ಮಹಿಳೆಯರು ಮತ್ತು ಮಕ್ಕಳ ಮೇಲೆ ಬೆದರಿಕೆ ಒಡ್ಡುವ ಧೈರ್ಯ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಭಾನುವಾರವಷ್ಟೇ @GirishK1605 ಎಂಬ ಹೆಸರಿನ ಟ್ವೀಟಿಗ ಅವರ ಮಗಳನ್ನು ಅತ್ಯಾಚಾರ ಮಾಡುವುದಾಗಿ ಬೆದರಿಸಿದ್ದ. ಇದಾದ ನಂತರ ಟ್ವೀಟ್‌ನ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿಯೇ ಚರ್ಚೆ ಪ್ರಾರಂಭವಾಗಿತ್ತು. ಹಲವಾರು ರಾಜಕೀಯ ನಾಯಕರು ಮತ್ತು ನೆಟಿಜನ್ಸ್‌ಗಳು ಚತುರ್ವೇದಿಗೆ ಬೆಂಬಲ ಸೂಚಿಸಿದ್ದರು. (ಏಜೆನ್ಸೀಸ್)