ಅತ್ಯಾಚಾರ ಪ್ರಕರಣ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸುಳ್ಳು ಮರಣ ಪ್ರಮಾಣಪತ್ರ ನೀಡಿ ಸಿಕ್ಕಿಬಿದ್ದ

ಮುಂಬೈ: ಅತ್ಯಾಚಾರ ಪ್ರಕರಣದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ತನ್ನದೇ ಸುಳ್ಳು ಮರಣ ಪ್ರಮಾಣಪತ್ರ ಸಲ್ಲಿಸಿದ್ದಾನೆಂದು ಹೇಳಲಾದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ರಾಷ್ಟ್ರದ ವಾಣಿಜ್ಯ ನಗರಿಯಲ್ಲಿ ವರದಿಯಾಗಿದೆ.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದಡಿಯಲ್ಲಿ 31 ವರ್ಷದ ವ್ಯಕ್ತಿಯನ್ನು ಪೊಕ್ಸೋ ಕಾಯ್ದೆ ಅಡಿಯಲ್ಲಿ ಏಪ್ರಿಲ್​ 2015 ರಲ್ಲಿ ಬಂಧಿಸಲಾಗಿತ್ತು. ಸಂತ್ರಸ್ತ ಬಾಲಕಿಗೆ ನಾಲ್ಕು ವರ್ಷದವಳಿದ್ದಾಗ ಅತ್ಯಚಾರ ನಡೆದಿತ್ತು ಎನ್ನಲಾಗಿದೆ. ಬಾಲಕಿಯು ಆರೋಪಿಯ ಮನೆ ಮುಂಭಾಗ ಆಟವಾಡುವಾಗ ಆಕೆಯನ್ನು ತನ್ನ ಮನೆಯೊಳಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆ ನಂತರ ಸಂತ್ರಸ್ತೆಯ ತಾಯಿ ಮಗಳಿಗಾಗಿ ಹುಡುಕಾಟ ನಡೆಸುವಾಗ ಆರೋಪಿಯ ಮನೆಯೊಳಗೆ ಆಕೆ ಅಳುವುದನ್ನು ಕಂಡು ವಿಚಾರಿಸಿದ್ದಾಳೆ. ಈ ವೇಳೆ ಬಾಲಕಿ ನಡೆದಿದ್ದೆಲ್ಲವನ್ನು ತಾಯಿ ಮುಂದೆ ಹೇಳಿದಾಗ ತಕ್ಷಣ ಆರೋಪಿಯ ಮೇಲೆ ದೂರು ದಾಖಲಿಸಿದ್ದಳು.

ಆರೋಪಿ ಆಗಸ್ಟ್​ 2015ರಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ. ಆದರೆ, ಆಗಾಗ ನಡೆಯುವ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್​ ತಿಳಿಸಿತ್ತು. ಆದರೆ, ಏಪ್ರಿಲ್​ 2018ರಲ್ಲಿ ಆತ ವಿಚಾರಣೆಗೆ ಬರುವುದನ್ನು ನಿಲ್ಲಿಸಿದ್ದ. ಆಗ ಆತನ ತಂದೆಯ ಅಂತ್ಯಕ್ರಿಯೆಗಾಗಿ ಉತ್ತರ ಪ್ರದೇಶದಲ್ಲಿರುವ ತನ್ನ ಮನೆಗೆ ಹೋಗಿರುವುದಾಗಿ ಪೊಲೀಸರು ಕೋರ್ಟ್​ಗೆ ತಿಳಿಸಿದ್ದರು. ಆದರೆ, ನಂತರದ ದಿನಗಳಲ್ಲೂ ಆತ ಕೋರ್ಟ್​ ಹಾಜರಾಗಲೇ ಇಲ್ಲ. ಈ ಬಗ್ಗೆ ಆರೋಪಿ ಪರ ವಕೀಲ ತನ್ನೊಂದಿಗೆ ಆತ ಸಂಪರ್ಕದಲ್ಲಿಲ್ಲ ಎಂದು ತಿಳಿಸಲು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್​ ಜೂನ್​ 2018ರಲ್ಲಿ ಜಾಮೀನು ರಹಿತ ವಾರಂಟ್​ ಜಾರಿಗೊಳಿಸಿತ್ತು.

ಆರೋಪಿ ಸಹೋದರ ಆತ ಮೃತಪಟ್ಟಿರುವುದಾಗಿ ನವೆಂಬರ್​ 2018ರಲ್ಲಿ ಮರಣ ಪ್ರಮಾಣಪತ್ರವನ್ನು ಸಲ್ಲಿಸಿದ್ದ. ಮತ್ತೆ ಕೋರ್ಟ್​ ಪ್ರಕರಣದ ಕುರಿತು ವಿಚಾರಣೆಗೆ ಕರೆದಾಗ ಆರೋಪಿ ಮೃತಪಟ್ಟಿರುವ ಬಗ್ಗೆ ಮಾಹಿತಿಯನ್ನು ಖಚಿತಪಡಿಸಿಕೊಂಡ ನಂತರ ವರದಿಯನ್ನು ಸಲ್ಲಿಸುವುದಾಗಿ ಪೊಲೀಸರು ಕಾಲಾವಕಾಶ ಪಡೆದುಕೊಂಡಿದ್ದರು. ನಂತರ ಓರ್ವ ಪೊಲೀಸ್​​ ಕಾನ್ಸ್​ಟೇಬಲ್​ರನ್ನು ಉತ್ತರ ಪ್ರದೇಶದಲ್ಲಿರುವ ಆರೋಪಿ ಮನೆಗೆ ಕಳುಹಿಸಿದಾಗ ಆತ ಜೀವಂತವಾಗಿರುವುದು ಬೆಳಕಿಗೆ ಬಂದಿದೆ.

ಆರೋಪಿಯನ್ನು ಸೋಮವಾರ ಬಂಧಿಸಿ ಎಫ್​​ಐಆರ್​ ದಾಖಲಿಸಲಾಗಿದೆ. ಅತ್ಯಾಚಾರ ಪ್ರಕರಣದ ವಿಚರಣೆಗೂ ಮುನ್ನ ಆತನನ್ನು ಸುಳ್ಳು ದಾಖಲಾತಿ ನೀಡಿದ ಆರೋಪದಡಿಯಲ್ಲಿ ಕೋರ್ಟ್​ಗೆ ಹಾಜರುಪಡಿಸಲಾಗಿದೆ.(ಏಜೆನ್ಸೀಸ್​)