ನವದೆಹಲಿ: ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಕನ್ನಡಿಗ ಕರುಣ್ ನಾಯರ್ (89 ರನ್, 40 ಎಸೆತ, 12 ಬೌಂಡರಿ, 5 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು 12 ರನ್‌ಗಳಿಂದ ಮುಗ್ಗರಿಸಿದೆ. ಇದರೊಂದಿಗೆ ಅಕ್ಷರ್ ಪಟೇಲ್ ಪಡೆಯ ಅಜೇಯ ಓಟ ಕೊನೆಗೊಂಡಿದ್ದು, ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಟೂರ್ನಿಯಲ್ಲಿ 2ನೇ ಗೆಲುವಿನೊಂದಿಗೆ
ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿತು.
ಫಿರೋಜ್ ಷಾ ಕೋಟ್ಲಾದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ
ಮುಂಬೈ, ಎಡಗೈ ಬ್ಯಾಟರ್ ತಿಲಕ್ ವರ್ಮ (59 ರನ್, 33 ಎಸೆತ, 6 ಬೌಂಡರಿ, 3 ಸಿಕ್ಸರ್) ಸತತ 2ನೇ ಅರ್ಧಶತಕ ಹಾಗೂ ನಮನ್‌ಧೀರ್ (38* ರನ್, 17 ಎಸೆತ, 3 ಬೌಂಡರಿ, 2 ಸಿಕ್ಸರ್) ಬಿರುಸಿನಾಟದಿಂದ 5 ವಿಕೆಟ್‌ಗೆ 205 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಕರುಣ್ ನಾಯರ್ ಬಿರುಸಿನಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ 12 ಓವರ್‌ಗಳಲ್ಲಿ 3 ವಿಕೆಟ್‌ಗೆ 140 ರನ್‌ಗಳಿಸಿ ಸುಸ್ಥಿತಿಯಲ್ಲಿತ್ತು. ಇಂಪ್ಯಾಕ್ಟ್ ಪ್ಲೇಯರ್ ಸ್ಪಿನ್ನರ್ ಕರ್ಣ್ ಶರ್ಮ (36ಕ್ಕೆ 3) ಸಹಿತ ಬೌಲರ್‌ಗಳ ದಾಳಿಗೆ ದಿಢೀರ್ ಕುಸಿದ ಡೆಲ್ಲಿ ಕ್ಯಾಪಿಟಲ್ಸ್ 19 ಓವರ್‌ಗಳಲ್ಲಿ 193 ರನ್‌ಗಳಿಗೆ ಸರ್ವಪತನ ಕಂಡಿತು. ಅಂತಿಮ 12 ಎಸೆತಗಳಲ್ಲಿ 23 ರನ್ ಬೇಕಿದ್ದಾಗ ಬುಮ್ರಾ ಎಸೆತದ 19ನೇ ಓವರ್‌ನ ಮೊದಲ 3 ಎಸೆತಗಳಲ್ಲಿ ಅಶುತೋಷ್ 2 ಬೌಂಡರಿ ಸಿಡಿಸಿದರು. ನಂತರದ 3 ಎಸೆತಗಳಲ್ಲಿ ಅಶುತೋಷ್ ಸಹಿತ ಕುಲದೀಪ್ ಯಾದವ್ (1), ಮೋಹಿತ್ ಶರ್ಮರನ್ನು (0) ರನೌಟ್ ಮಾಡಿದ ಮುಂಬೈ ರೋಚಕ ಗೆಲುವು ಒಲಿಸಿಕೊಂಡಿತು.