ಭುವನ ಸುಂದರೀ ಪತ್ನಿಯ ಕಾಟಕ್ಕೆ ಭೂಪತಿಯ ಕೋಪತಾಪ! 

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮಂಗಳವಾರ ಜಲಪ್ರಳಯವೇ ಸಂಭವಿಸಿದೆ. ವರುಣನ ಅಬ್ಬರಕ್ಕೆ ಮುಂಬೈನ ಬಹುಭಾಗ ಜಲಾವೃತಗೊಂಡು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ ಮಾಜಿ ಭುವನ ಸುಂದರಿ ಲಾರಾ ದತ್ತಾ ಅವರು ಮನೆಗೆ ನೀರು ನುಗ್ಗದಿರಲೆಂದು ಮಾಡಿರುವ ನೂತನ ಪ್ರಯತ್ನ ವಿಭಿನ್ನವಾಗಿಯೇನೋ ಇದೆ. ಆದರೆ ಅದು ಗಂಡ, ಖ್ಯಾತ ಟೆನಿಸ್​ ಆಟಗಾರ ಮಹೇಶ್​ ಭೂಪತಿಯ ಕೋಪತಾಪಕ್ಕೆ ಕಾರಣವಾಗಿದೆ.

ಗಂಡನನ್ನು ನೆನಸುತ್ತಾ ಹಿಂಡಿ ಹಿಂಡಿ ನೀರನ್ನು ಹೊರಹಾಕಿದ ಮಹಾತಾಯಿ!ದಾಖಲೆಯ ಮಳೆ ನಿನ್ನೆ ಮುಂಬೈ ನಗರವನ್ನು ತಲ್ಲಣಗೊಳಿಸಿದೆ. ದಿನವೊಂದರಲ್ಲೇ ನಿನ್ನೆ 29.8 ಸೆಂ.ಮೀ. ಮಳೆಯಾಗಿದೆ. ಎತ್ತ ನೋಡಿದರೂ ನೀರೋ ನೀರು! ಈ ಮಧ್ಯೆ, ಮುಂಬೈ ಮಹಾಮಳೆಗೆ ಬೆಚ್ಚಿಬಿದ್ದ ಮಾಜಿ ಭುವನ ಸುಂದರಿ ಲಾರಾ ದತ್ತಾ ಅವರು ಮಳೆಯಿಂದ ಮನೆಯನ್ನು ರಕ್ಷಿಸಲು ಟೆನ್ನಿಸ್​ ಗಂಡ ಮಹೇಶ್​ ಭೂಪತಿ ಅವರು ಟೆನಿಸ್ ಅಂಕಣದಲ್ಲಿ ಬೆವರು ಸುರಿಸಿ, ಬೆವರೊರಸಿಕೊಳ್ಳಲು ಬಳಸುತ್ತಿದ್ದ ಟೆನಿಸ್​ ಟವಲ್​ಅ​ನ್ನು ಬಳಸಿ, ನೀರನ್ನು ಹಿಂಡಿ ಹಿಂಡಿ ಹೊರಹಾಕಿದ್ದಾರೆ.

ಸಖತ್​ ಐಡಿಯಾ ಅಲ್ವಾ!?

ಅದೂ ಸಾಲ್ದು ಅಂತ ಟ್ವಿಟ್ಟರಿನಲ್ಲಿ ಬೇರೆ ಮಾನ ಹರಾಜು! ಲಾರಾ ದತ್ತಾ ಅವರು ಮನೆಯ ಬಾಗಿಲನ್ನು ಮುಚ್ಚಿ ಬಾಗಿಲ ಸಂದಿಯಲ್ಲಿ ನೀರು ಒಳ ಬರದಿರಲೆಂದು ಮಹೇಶ್​ ಭೂಪತಿಯ ಟೆನಿಸ್​ ಟವಲ್​ನನ್ನು ಸಾಲಾಗಿ ಜೋಡಿಸಿ, ಅದನ್ನು ಫೋಟೋ ತೆಗೆದು, ಯುಎಸ್​ ಓಪನ್​, ಆಸ್ಟ್ರೇಲಿಯನ್​ ಓಪನ್​, ವಿಂಬಲ್ಡನ್​ ಓಪನ್​ ಹಾಗೂ ಫ್ರೆಂಚ್​ ಓಪನ್​ ಟವೆಲ್​ಗಳನ್ನು ಹೀಗೆ ಒಳ್ಳೆಯ ಕಾರ್ಯಕ್ಕಾಗಿ ಬಳಸಿಕೊಂಡಿದ್ದೇನೆ ಎಂದು ಷರಾ ಬರೆದು ಟ್ವಿಟ್ಟರ್​ನಲ್ಲಿ ಷೇರ್​ ಬೇರೆ ಮಾಡಿದ್ದಾರೆ.

ಇದು ಸಹಜಯವಾಗಿಯೇ ಗಂಡನ ಕೋಪಕ್ಕೆ ಕಾರಣವಾಗಿದೆ. ಅಲ್ವೇ! ಅದು ಟೆನಿಸ್ ಅಂಕಣದಲ್ಲಿ ನಾನು ಬೆವರು ಸುರಿಸಿ ಗಳಿಸಿರುವ ಟವಲ್ಲು. ಬೆವರೊರಸಿಕೊಳ್ಳಲು ನಾನು ಬಳಸುತ್ತಿದ್ದ ಟವಲ್ಲು. ಅದನ್ನು ಹೀಗಾ ಬಳಸುವುದು? ಎಂದು ಹೆಂಡತಿಯತ್ತ ಹುಸಿಕೋಪ ತೋರಿದ್ದಾರೆ ಲಾರಾ ಪತಿ ಭೂಪತಿ.  (ಏಜೆನ್ಸೀಸ್​)

Leave a Reply

Your email address will not be published. Required fields are marked *