ಮಂಡ್ಯ: ವಾಣಿಜ್ಯ ನಗರಿ ಮುಂಬೈನಿಂದ ಮೃತದೇಹವನ್ನು ಮಂಡ್ಯಕ್ಕೆ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹ ತರಲು ಅನುಮತಿ ಕೊಟ್ಟಿದ್ದು ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ಮುಂಬೈನಿಂದ ಶವ ತಂದು ಮಂಡ್ಯದಲ್ಲಿ ಅಂತ್ಯಕ್ರಿಯೆ ನಡೆಸಿದ ಪ್ರಸಂಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅನುಮತಿ ನೀಡಿದ್ದರ ಬಗ್ಗೆ ಮಂಡ್ಯ ಜಿಲ್ಲಾಡಳಿತ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಶವ ತರಲಾಗಿದೆ ಎಂದು ಆರೋಪಿಸಿದ್ದರು, ಇದೀಗ ಶವ ಸಾಗಿಸಲು ಅನುಮತಿ ನೀಡಿದ್ದೆ ಮುಂಬೈ ಮಹಾನಗರ ಪಾಲಿಕೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮುಂಬೈನಿಂದ ಮಂಡ್ಯಕ್ಕೆ ತಂದು ಶವ ಸಂಸ್ಕಾರ: ಮೇಲುಕೋಟೆ ಸುತ್ತಮುತ್ತ ಹೆಚ್ಚಿದ ಆತಂಕ
ಮುಂಬೈ ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಮಹೇಂದ್ರ ಶಿಂಗನಾಂಟಕರ್ ಅವರು ಪಾಂಡವಪುರಕ್ಕೆ ಶವ ಕೊಂಡೊಯ್ಯಲು ಅನುಮತಿ ನೀಡಿದ್ದಾರೆಂದು ಮಂಡ್ಯ ಜಿಲ್ಲಾಧಿಕಾರಿ ಡಾ ವೆಂಕಟೇಶ್ ಹೇಳಿದ್ದಾರೆ. ಶವ ಸಾಗಾಟಕ್ಕೆ ಅನುಮತಿ ನೀಡಿರುವ ಸಂಬಂಧ ಮುಂಬೈನ ದೇಸಾಯಿ ಆಸ್ಪತ್ರೆಗೆ ಮಂಡ್ಯ ಡಿಸಿ ಪತ್ರ ಬರೆದು ವರದಿ ನೀಡುವಂತೆ ಸೂಚನೆ ನೀಡಿದ್ದರು. ಬಳಿಕ ಮಂಡ್ಯ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ತಾವೇ ಅನುಮತಿ ನೀಡಿದ್ದಾಗಿ ಮುಂಬೈ ಆರೋಗ್ಯ ಅಧಿಕಾರಿ ಹೇಳಿದ್ದಾರೆ ಎನ್ನಲಾಗಿದೆ.
ಮೃತದೇಹಕ್ಕೆ ಕೋವಿಡ್- 19 ಟೆಸ್ಟ್ ನಡೆಸಲಾಗಿದೆಯೇ ಎಂಬ ಪ್ರಶ್ನೆಗೆ ಪತ್ರದಲ್ಲಿ ಉತ್ತರವಿಲ್ಲ. ಮುಂಬೈನಿಂದ ಶವ ತಂದಿರುವ ಜತೆಗೆ ಅಲ್ಲಿ ಶವದ ಕೋವಿಡ್ ಟೆಸ್ಟ್ ಆಗಿದೆಯೋ? ಇಲ್ಲವೊ? ಎಂಬ ವಿಚಾರವೂ ಸಹ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಶವದ ಕೊವಿಡ್ ಟೆಸ್ಟ್ ಸಹ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.
ಇದನ್ನೂ ಓದಿ: ತನ್ನ ಕುಟುಂಬವನ್ನೇ ಸರ್ವನಾಶ ಮಾಡಿದ ಪಾಪಿ: ತಂದೆ, ತಾಯಿ, ಅಣ್ಣ, ಅತ್ತಿಗೆ, ಮಕ್ಕಳಿಬ್ಬರನ್ನು ಕೊಂದು ಪೊಲೀಸರಿಗೆ ಶರಣು
ಸದ್ಯ ಶವ ಸಾಗಿಸಲು ಅನುಮತಿ ಬಗ್ಗೆ ಸ್ಪಷ್ಟನೆ ಪಡೆದುಕೊಂಡಿರುವ ಮಂಡ್ಯ ಡಿಸಿ, ಕೊವಿಡ್-19 ಟೆಸ್ಟ್ ಬಗೆಗಿನ ಉತ್ತರಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)
ವಿದ್ಯುತ್ ಬಿಲ್ ನೀಡಲು ತೆರಳಿದ ಮನೆ ಮಾಲೀಕರು ನವ ದಂಪತಿಯ ಸ್ಥಿತಿ ಕಂಡು ಕಂಗಾಲಾಗಿದ್ದೇಕೆ?