ಮುಂಬೈ: ಮಹಾರಾಷ್ಟ್ರ, ರಾಷ್ಟ್ರದ ಕೋವಿಡ್ 19 ಸೋಂಕು ಹಬ್ಬುವಿಕೆಯ ಕೇಂದ್ರಬಿಂದು ಎನಿಸಿಕೊಂಡಿದೆ. ಈ ರಾಜ್ಯದಲ್ಲೇ ಅತ್ಯಧಿಕ ಕರೊನಾ ಸೋಂಕಿತರು ಇದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಒಟ್ಟು 381 ಪ್ರದೇಶಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ. ರಾಜ್ಯದ ಉಳಿದೆಡೆಯಲ್ಲಿ ಕೂಡ ಸೀಲ್ ಮಾಡುವ ಬಗ್ಗೆ ಅಲ್ಲಿನ ಸರ್ಕಾರ ಚಿಂತನೆ ನಡೆಸಿದೆ.
ಸೀಲ್ ಮಾಡಲಾದ ಪ್ರದೇಶಗಳಲ್ಲಿ ಜನ ಯಾವುದೇ ಕಾರಣಕ್ಕೂ ಮನೆಗಳಿಂದ ಹೊರಬರುವಂತಿಲ್ಲ. ವಾಹನಗಳನ್ನು ಕೂಡ ಹೊರತೆಗೆಯುವಂತಿಲ್ಲ.
ಇದರ ಹೊರತಾಗಿಯೂ ಮುಂಬೈನ ಡೋಂಗ್ರಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ವಿನಾಕಾರಣ ದ್ವಿಚಕ್ರವಾಹನದಲ್ಲಿ ಓಡಾಡುತ್ತಿದ್ದ. ಇದನ್ನು ಗಮನಿಸಿದ ಪೊಲೀಸ್ ಪೇದೆಯೊಬ್ಬರು ಆತನನ್ನು ತಡೆಯಲು ಯತ್ನಿಸಿದರು. ಆದರೆ ವಾಹನವನ್ನು ನಿಲ್ಲಿಸದ ಆತ ಪರಾರಿಯಾಗಲು ಯತ್ನಿಸಿದ. ಆಗ ಪೊಲೀಸ್ ಪೇದೆ ವಾಹನದ ಹಿಂಬದಿಯನ್ನು ಹಿಡಿದು ನಿಲ್ಲಿಸಲು ಯತ್ನಿಸಿದರು.
ದ್ವಿಚಕ್ರ ವಾಹನ ಸವಾರ ತನ್ನ ವಾಹನದ ವೇಗವನ್ನು ಹೆಚ್ಚಿಸಿದ್ದರಿಂದ, ಅದನ್ನು ಹಿಡಿದುಕೊಂಡಿದ್ದ ಪೇದೆ ಕೆಳಬಿದ್ದು, ಸಾಕಷ್ಟು ದೂರದವರೆಗೆ ದರದರನೆ ಎಳೆದೊಯ್ಯಲ್ಪಟ್ಟರು. ಹೀಗಾಗಿ ಅವರು ಗಂಭೀರವಾಗಿ ಗಾಯಗೊಂಡರು.
ಕೊನೆಗೆ ದ್ವಿಚಕ್ರ ವಾಹನ ಸವಾರ ಕೂಡ ಆಯ ತಪ್ಪಿ ಕೆಳಗೆ ಬಿದ್ದಿದ್ದರಿಂದ, ಆತನಿಗೂ ಗಾಯಗಳಾಗಿವೆ. ಇದೀಗ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 30 ರವರೆಗೆ ಲಾಕ್ಡೌನ್ ವಿಸ್ತರಣೆ: ಒಡಿಶಾ ಮುಖ್ಯಮಂತ್ರಿಯಿಂದ ಆದೇಶ