ಮುಂಬೈನಲ್ಲಿ ಚುರುಕುಗೊಂಡ ರಾಜಕೀಯ ಬೆಳವಣಿಗೆ

<< ಪವಾಯಿ ಹೋಟೆಲ್​ನಲ್ಲಿ ಕಾಂಗ್ರೆಸ್​ ಅತೃಪ್ತ ಶಾಸಕರ ಸಭೆ ನಿಗದಿ >>

ಮುಂಬೈ: ಇಬ್ಬರು ಪಕ್ಷೇತರ ಶಾಸಕರು ಸಂಕ್ರಾಂತಿ ದಿನದಂದೇ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಬೆನ್ನಲ್ಲೇ ಮುಂಬೈನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಇಂದು ಕಾಂಗ್ರೆಸ್​ನ ಅತೃಪ್ತ ಶಾಸಕರು ಸಭೆ ನಡೆಸಿ ಮುಂದಿನ ನಡೆಯ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಮುಂಬೈನ ಪವಾಯಿ ಹೋಟೆಲ್​ನಲ್ಲಿ ಇಂದು ಬೆಳಗ್ಗೆ 9.30 ಕ್ಕೆ ಸಭೆ ನಿಗದಿಯಾಗಿದ್ದು, ಕಾಂಗ್ರೆಸ್​ನ 7 ಅತೃಪ್ತ ಶಾಸಕರು ಮತ್ತು ಇಬ್ಬರು ಪಕ್ಷೇತರ ಶಾಸಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಗೆ ಬಿಜೆಪಿಯ ಓರ್ವ ಶಾಸಕ ಹಾಗೂ ಇಬ್ಬರು ಮಾಜಿ ಶಾಸಕರು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮಂಗಳವಾರ ರಾತ್ರಿ ಮಸ್ಕಿಯ ಶಾಸಕ ಪ್ರತಾಪಗೌಡ ಪಾಟೀಲ್​ ಕೊಲ್ಲಾಪುರದಿಂದ ಮುಂಬೈಗೆ ಆಗಮಿಸಿದ್ದಾರೆ. ಪ್ರತಾಪಗೌಡ ಆಗಮನದಿಂದ ಕಾಂಗ್ರೆಸ್​ ಅತೃಪ್ತ ಶಾಸಕರ ಸಂಖ್ಯೆ 7ಕ್ಕೆ ಏರಲಾಗಿದೆ ಎನ್ನಲಾಗುತ್ತಿದೆ.

ಇಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಅವರು ಮುಂಬೈಗೆ ಆಗಮಿಸಬೇಕಿತ್ತು ಆದರೆ ಅತೃಪ್ತ ಶಾಸಕರು ಸಂಪರ್ಕಕ್ಕೆ ಸಿಗದಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಪ್ರವಾಸವನ್ನು ರದ್ದುಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಅತೃಪ್ತ ಶಾಸಕರು ಉಳಿದುಕೊಂಡಿರುವ ಮುಂಬೈನ ರೆನಾಸನ್ ಮ್ಯಾರಿಯಟ್ ಹೋಟೆಲ್‌ ಸುತ್ತಲೂ ಭಾರಿ ಭದ್ರತೆ ಒದಗಿಸಲಾಗಿದೆ. ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಿ ಹೋಟೆಲ್​ ಒಳಗೆ ಬಿಡಲಾಗುತ್ತಿದೆ.