ನ್ಯೂಜಿಲೆಂಡ್​ನ ಕ್ರೈಸ್ಟ್​ಚರ್ಚ್​ನ ಮಸೀದಿಯಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ:  ಕೂದಲೆಳೆ ಅಂತರದಲ್ಲಿ ಪಾರಾದ ಬಾಂಗ್ಲಾ ಕ್ರಿಕೆಟ್​ ತಂಡ

6ಕ್ಕೂ ಹೆಚ್ಚು ಜನರು ಮೃತ

ಕ್ರೈಸ್ಟ್​ಚರ್ಚ್​: ನ್ಯೂಜಿಲೆಂಡ್​ನ ಕ್ರೈಸ್ಟ್​ಚರ್ಚ್​ನ ಮಸ್ಜಿದ್​ ಅಲ್​ ನೂರ್​ ಎಂಬ ಮಸೀದಿಯೊಂದರಲ್ಲಿ ಬಂದೂಕುಧಾರಿಯೊಬ್ಬ ಶುಕ್ರವಾರ ಬೆಳಗ್ಗೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಪ್ರಾಥಮಿಕ ವರದಿಯ ಪ್ರಕಾರ 6 ಜನರು ಮೃತಪಟ್ಟಿದ್ದು 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶುಕ್ರವಾರದ ಪ್ರಾರ್ಥನೆಗಾಗಿ ದೊಡ್ಡ ಸಂಖ್ಯೆಯಲ್ಲಿ ಜನರು ಮಸೀದಿಯಲ್ಲಿ ಜಮಾಯಿಸಿದ್ದರು. ಇದರಿಂದಾಗಿ ಸಾವುನೋವು ಹೆಚ್ಚಾಗುವ ಸಾಧ್ಯತೆ ಇದೆ.

ಬಾಂಗ್ಲಾ ಕ್ರಿಕೆಟ್​ ತಂಡ ಪಾರು
ನ್ಯೂಜಿಲೆಂಡ್​ ಪ್ರವಾಸಕ್ಕೆ ತೆರಳಿರುವ ಬಾಂಗ್ಲಾದೇಶ ಕ್ರಿಕೆಟ್​ ತಂಡ ಸದ್ಯ ಕ್ರೈಸ್ಟ್​ಚರ್ಚ್​ನಲ್ಲಿ ಪಂದ್ಯ ಆಡಬೇಕಿತ್ತು. ಈ ಹಿನ್ನೆಲೆಯಲ್ಲಿ ತಂಡವು ಹೋಟೆಲ್​ನಲ್ಲಿ ತಂಗಿತ್ತು. ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ತಂಡ ಇದೇ ಮಸೀದಿಗೆ ತೆರಳಿತ್ತು. ಆದರೆ, ಗುಂಡಿನ ದಾಳಿ ಆರಂಭವಾಗುತ್ತಲೇ ರಕ್ಷಣಾ ಕಾರ್ಯಾಚರಣೆಗೆ ಮುಂದಾದ ಪೊಲೀಸರು ಇಡೀ ತಂಡವನ್ನು ಸುರಕ್ಷಿತವಾಗಿ ಹೊರತಂದು, ಬಿಗಿ ಭದ್ರತೆಯಲ್ಲಿ ಹೋಟೆಲ್​ಗೆ ಕಳುಹಿಸಿಕೊಟ್ಟರು ಎನ್ನಲಾಗಿದೆ.

ಪಕ್ಕದ ಮಸೀದಿಯಿಂದ ಜನರ ತೆರವು
ಮಸ್ಜಿದ್​ ಅಲ್​ ನೂರ್​ ಮಸೀದಿ ಪಕ್ಕದಲ್ಲೇ ಮತ್ತೊಂದು ಮಸೀದಿ ಇದ್ದು, ಶುಕ್ರವಾರದ ಪ್ರಾರ್ಥನೆಗಾಗಿ ಈ ಮಸೀದಿಯಲ್ಲೂ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು ಎನ್ನಲಾಗಿದೆ. ಆದರೆ ಮಸ್ಜಿದ್​ ಅಲ್​ ನೂರ್​ ಮಸೀದಿಯಲ್ಲಿ ಗುಂಡಿನ ದಾಳಿ ಆರಂಭವಾಗುತ್ತಲೇ, ಈ ಮಸೀದಿಯಲ್ಲಿದ್ದ ಜನರನ್ನು ಪೊಲೀಸರು ಸುರಕ್ಷಿತವಾಗಿ ತೆರವುಗೊಳಿಸಿದರು ಎನ್ನಲಾಗಿದೆ.

ಮಿಲಿಟರಿ ಸಮವಸ್ತ್ರದಲ್ಲಿ ಮಸೀದಿಗೆ ನುಗ್ಗಿರುವ ಬಂದೂಕುಧಾರಿ
ಮಸ್ಜಿದ್​ ಅಲ್​ ನೂರ್​ ಮಸೀದಿಯಲ್ಲಿ ಗುಂಡಿನ ದಾಳಿ ನಡೆಸುತ್ತಿರುವ ಬಂದೂಕುಧಾರಿ ಮಿಲಿಟರಿ ಸಮವಸ್ತ್ರ ತೊಟ್ಟು, ಮಸೀದಿಯ ಒಳಪ್ರವೇಶಿಸಿದ್ದಾನೆ. ಬಳಿಕ ಪ್ರಾರ್ಥನೆ ಮಾಡುವವನಂತೆ ನಟಿಸುತ್ತಾ ಹಠಾತ್ತನೆ ಗುಂಡಿನ ದಾಳಿ ಆರಂಭಿಸಿದ್ದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಸದ್ಯ ಕ್ರೈಸ್ಟ್​ಚರ್ಚ್​ನ ಬಹುತೇಕ ಎಲ್ಲ ಶಾಲಾ ಕಾಲೇಜುಗಳನ್ನು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳನ್ನು ಮುಚ್ಚಲಾಗಿದೆ. ಪರಿಸ್ಥಿತಿ ತಿಳಿಯಾಗಿದೆ ಎಂದು ತಾವು ಹೇಳುವವರೆಗೂ ಶಾಲೆಗೆ ತೆರಳಿರುವ ಮಕ್ಕಳನ್ನು ಕರೆದುಕೊಂಡು ಹೋಗಲು ಬರದಂತೆ ವಿದ್ಯಾರ್ಥಿಗಳ ಪಾಲಕರಿಗೆ ಪೊಲೀಸರು ಸೂಚನೆ ನೀಡಿದ್ದಾರೆ. (ಏಜೆನ್ಸೀಸ್​)