ಸ್ಥಳೀಯರಿಂದಲೇ ಪಾರ್ಕಿಂಗ್ ಟಾವರ್ ನಿರ್ಮಾಣ

ಸಂತೋಷ ವೈದ್ಯ ಹುಬ್ಬಳ್ಳಿ

ಸರ್ಕಾರಿ ಒಪ್ಪಿಗೆ, ಟೆಂಡರ್ ಪ್ರಕ್ರಿಯೆ, ಕಡತ ವ್ಯವಹಾರದಲ್ಲೇ ಹಲವು ವರ್ಷಗಳನ್ನು ಕಳೆದ ಸ್ಮಾರ್ಟ್ ಪಾರ್ಕಿಂಗ್ ಟಾವರ್ (ಮಲ್ಟಿ ಲೆವಲ್ ಕಾರ್ ಪಾರ್ಕಿಂಗ್) ನಿರ್ಮಾಣ ಕೊನೆಗೂ ಖಚಿತವಾಗಿದೆ.

50 ಕೋಟಿ ರೂ. ವೆಚ್ಚದ ಸ್ಮಾರ್ಟ್ ಪಾರ್ಕಿಂಗ್ ಟಾವರ್ ನಿರ್ಮಾಣ ಕಾಮಗಾರಿಯ ಗುತ್ತಿಗೆ ಸ್ಥಳೀಯ ಸುರೇಶ ಎಂಟರ್​ಪ್ರೖೆಸಸ್ ಪ್ರೖೆವೇಟ್ ಲಿಮಿಟೆಡ್ (ಎಸ್​ಇಪಿಎಲ್) ಪಾಲಾಗಿದೆ. ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಕರೆದ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಏಕೈಕ ಸಂಸ್ಥೆ ಇದಾಗಿತ್ತು. ನಗರದ ಎಸ್​ಇಪಿಎಲ್ ಗುಣಮಟ್ಟದ ನಿರ್ವಣಕ್ಕೆ ಹೆಸರಾಗಿದೆ. ರಿಯಲ್ ಎಸ್ಟೇಟ್, ನಿರ್ಮಾಣ ಕಾಮಗಾರಿಯಲ್ಲಿ ಮುಂಚೂಣಿಯಲ್ಲಿದೆ.

ನಗರದ ಕೋರ್ಟ್ ವೃತ್ತಕ್ಕೆ ಹೊಂದಿಕೊಂಡು ಇರುವ 1.5 ಎಕರೆ ಜಾಗದಲ್ಲಿ ಸ್ಮಾರ್ಟ್ ಪಾರ್ಕಿಂಗ್ ಟಾವರ್ ನಿರ್ಮಾಣ ಹಲವು ವರ್ಷಗಳ ಹಿಂದಿನ ಯೋಜನೆ. ಇದನ್ನು ಅನುಷ್ಠಾನಕ್ಕೆ ತರುವುದು ಸವಾಲಿನ ಕೆಲಸವಾಗಿತ್ತು. ಇಷ್ಟೊಂದು ಮೊತ್ತವನ್ನು ಪಾಲಿಕೆಯಾಗಲೀ, ರಾಜ್ಯ ಸರ್ಕಾರವಾಗಲೀ ನೀಡಲು ತಯಾರಿರಲಿಲ್ಲ. ಖಾಸಗಿ ಬಂಡವಾಳ ಹೂಡಿಕೆಯ ಪಿಪಿಪಿ ಮಾದರಿಯಲ್ಲಿ 2 ಬಾರಿ ಟೆಂಡರ್ ಕರೆದರೂ ಯಾರೂ ಸ್ಪಂದಿಸಿರಲಿಲ್ಲ. ಇದೀಗ ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ)ದಡಿ ಈ ಯೋಜನೆಯನ್ನು ತಂದು ಕಾರ್ಯಗತಗೊಳಿಸಲಾಗಿದೆ.

ಈ ಯೋಜನೆಯ ಇ-ಟೆಂಡರ್ ಪ್ರಕ್ರಿಯೆಯಲ್ಲಿ ಹೊರ ರಾಜ್ಯ, ದೇಶ-ವಿದೇಶದವರು ಪಾಲ್ಗೊಳ್ಳಲು ಅವಕಾಶವಿತ್ತು. ಆದರೆ, ಅವರ್ಯಾರೂ ಆಸಕ್ತಿ ತೋರಿಸಲಿಲ್ಲ. ಹುಬ್ಬಳ್ಳಿಯ ಎಸ್​ಇಪಿಎಲ್ ಇಂಥ ಅವಕಾಶ ಗಿಟ್ಟಿಸಿಕೊಂಡಿದೆ. ಸ್ಥಳೀಯ ನಿರ್ಮಾಣ ಸಂಸ್ಥೆಯೊಂದು ಗುತ್ತಿಗೆ ಪಡೆದಿರುವುದು ವಿಶೇಷವಾಗಿದೆ. ಟೆಂಡರ್ ಶರತ್ತಿನಂತೆ 2 ವರ್ಷದ ಅವಧಿಯಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕಿದೆ.

375 ಕಾರ್ ಪಾರ್ಕಿಂಗ್: 2 ಕೆಳ ಅಂತಸ್ತಿನ ಬೇಸಮೆಂಟ್, ನೆಲಮಹಡಿ, 1ನೇ ಮಹಡಿ ಹಾಗೂ 2ನೇ ಮಹಡಿ ಒಳಗೊಂಡ ಬಹು ಅಂತಸ್ತಿನ ಕಟ್ಟಡವಿದು. ನೆಲಮಹಡಿಯಲ್ಲಿ ವಾಣಿಜ್ಯ ಸಂಕೀರ್ಣ ಬರಲಿದೆ. ಉಳಿದ ಎಲ್ಲ ಮಹಡಿಗಳಲ್ಲೂ ಪಾರ್ಕಿಂಗ್ ವ್ಯವಸ್ಥೆಯಿರುತ್ತದೆ. ಸುಮಾರು 375 ಕಾರ್ ಪಾರ್ಕಿಂಗ್​ಗೆ ಸ್ಥಳಾವಕಾಶ ಇರುವಂತೆ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಗುತ್ತಿಗೆ ಕರಾರಿನಂತೆ ವಿನ್ಯಾಸದಲ್ಲಿ ಮಾರ್ಪಾಡು ಮಾಡಲು ಎಸ್​ಇಪಿಎಲ್​ಗೆ ಸ್ವಾತಂತ್ರ್ಯ ನೀಡಲಾಗಿದೆ. ಇದರಲ್ಲಿಯೇ ದ್ವಿಚಕ್ರ ವಾಹನಗಳಿಗೆ ಸ್ಥಳವಕಾಶ ಲಭ್ಯವಾಗಲಿದೆ. ಪ್ರತಿ ಕಾರ್​ಗೆ 18 ಚದರ ಮೀಟರ್​ನಂತೆ ಸ್ಥಳವನ್ನು ಗೊತ್ತು ಪಡಿಸಲಾಗಿದೆ.

ಇದರ ನಿರ್ವಣದಲ್ಲಿ ಎಸ್​ಇಪಿಎಲ್ 40 ಕೋಟಿ ರೂ. ತೊಡಗಿಸಲಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ 10 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಅನುದಾನವನ್ನು ನಿರ್ವಣದ ವಿವಿಧ ಹಂತದಲ್ಲಿ ವೆಚ್ಚದ ಶೇ. 25ರಂತೆ ಹಣವನ್ನು ಎಚ್​ಡಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಬಿಡುಗಡೆ ಮಾಡಲಿದೆ. ನಿರ್ವಣದ ಬಳಿಕ ಇದರ ನಿರ್ವಹಣೆಯ ಹೊಣೆಯನ್ನು 30 ವರ್ಷಗಳ ಅವಧಿಗೆ ಎಸ್​ಇಪಿಎಲ್ ಲೀಸ್ ಪಡೆದುಕೊಂಡಿದೆ. ರ್ಪಾಂಗ್ ಶುಲ್ಕ, ವಾಣಿಜ್ಯ ಮಳಿಗೆಯ ಬಾಡಿಗೆ ಹಾಗೂ ಡಿಜಿಟಲ್ ಜಾಹೀರಾತು ಫಲಕಗಳ ಶುಲ್ಕದಿಂದ ಎಸ್​ಇಪಿಎಲ್ ಆದಾಯ ಗಳಿಸಲಿದೆ.

ಪಾಲಿಕೆಗೆ 67 ಲಕ್ಷ ರೂ.: ಗುತ್ತಿಗೆ ಕರಾರಿನಂತೆ ಎಸ್​ಇಪಿಎಲ್ ವಾರ್ಷಿಕ ರಿಯಾಯಿತಿ ಶುಲ್ಕವಾಗಿ ಪಾಲಿಕೆಗೆ 67 ಲಕ್ಷ ರೂ. ಪಾವತಿಸಲಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಈ ಮೊತ್ತದಲ್ಲಿ ಶೇ. 15ರಷ್ಟು ಏರಿಕೆಯಾಗಲಿದೆ.

ಸ್ಮಾರ್ಟ್ ಪಾರ್ಕಿಂಗ್ ಟಾವರ್ ನಿರ್ಮಾಣ ಕಾಮಗಾರಿಯ ಕಾರ್ಯಾದೇಶವನ್ನು ಇನ್ನೆರಡು ದಿನಗಳಲ್ಲಿ ಎಸ್​ಇಪಿಎಲ್​ಗೆ ನೀಡಲಿದ್ದೇವೆ. ನಿರ್ಮಾಣ ಅವಧಿ 24 ತಿಂಗಳುಗಳಿದ್ದು, ಅದಕ್ಕೂ ಪೂರ್ವವೇ ಪೂರ್ಣಗೊಳಿಸುವುದಾಗಿ ಎಸ್​ಇಪಿಎಲ್ ವಿಶ್ವಾಸ ವ್ಯಕ್ತಪಡಿಸಿದೆ.

| ಎಸ್.ಎಚ್. ನರೇಗಲ್, ವಿಶೇಷಾಧಿಕಾರಿ, ಎಚ್​ಡಿ ಸ್ಮಾರ್ಟ್ ಸಿಟಿ ಲಿಮಿಟೆಡ್