ಪ್ರಿಯಾಗೆ ಕನ್ನಡದಲ್ಲೇ ಬಿಜಿ ಆಗುವಾಸೆ

ಬೆಂಗಳೂರು: ‘ಜೂಮ್ ಚಿತ್ರದ ಬಳಿಕ ‘ಗೋಲ್ಡನ್ ಸ್ಟಾರ್’ ಗಣೇಶ್ ಮತ್ತು ನಿರ್ದೇಶಕ ಪ್ರಶಾಂತ್ ರಾಜ್ ಕಾಂಬಿನೇಷನ್​ನಲ್ಲಿ ಬರುತ್ತಿರುವ ಎರಡನೇ ಚಿತ್ರ ‘ಆರೆಂಜ್’. ಪಕ್ಕಾ ಕಮರ್ಷಿಯಲ್ ಅಂಶಗಳನ್ನಿಟ್ಟುಕೊಂಡು ಸಿದ್ಧಗೊಳ್ಳುತ್ತಿರುವ ‘ಆರೆಂಜ್’ನಲ್ಲಿ ಗಣೇಶ್​ಗೆ ಜೋಡಿಯಾಗಿ ಬಹುಭಾಷಾ ನಟಿ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಆ ಸಿನಿಮಾದ ಶೂಟಿಂಗ್, ಗಣೇಶ್ ಜತೆ ನಟಿಸಿದ ಅನುಭವವನ್ನು ಪ್ರಿಯಾ ಹಂಚಿಕೊಂಡಿದ್ದಾರೆ. ‘ಆರಂಭದಲ್ಲಿ ‘ಆರೆಂಜ್’ ಸಿನಿಮಾ ಅವಕಾಶ ಬಂದಾಗ ಕಾಲ್​ಶೀಟ್ ಸಮಸ್ಯೆ ಇತ್ತು. ಆದರೂ ಅದೆಲ್ಲವನ್ನು ಬಗೆಹರಿಸಿಕೊಂಡು ಸಿನಿಮಾ ಒಪ್ಪಿಕೊಂಡೆ. ಪುನೀತ್ ರಾಜ್​ಕುಮಾರ್ ಜತೆ ನಟಿಸಿದ ‘ರಾಜಕುಮಾರ’ ಸೂಪರ್ ಹಿಟ್ ಆಗಿತ್ತು. ‘ಆರೆಂಜ್’ ಚಿತ್ರವೂ ವಿಶೇಷವಾಗಿರಲಿದೆ. ಮೊದಲ ಕನ್ನಡ ಚಿತ್ರದ ಹಿಟ್​ನ ಬಳಿಕ ಒಳ್ಳೆಯ ಚಿತ್ರದಲ್ಲೇ ನಟಿಸುತ್ತಿರುವ ಖುಷಿ ಇದೆ’ ಎಂಬುದು ಪ್ರಿಯಾ ಮಾತು.

ನಟ ಗಣೇಶ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುವ ಅವರು, ‘ಗಣೇಶ್ ನಿಜಕ್ಕೂ ತುಂಬ ಉತ್ತಮ ವ್ಯಕ್ತಿತ್ವ ಇರುವ ಮನುಷ್ಯ. ಹೊರಗಿನಿಂದ ಬಂದ ನಾನು, ಅವರಿಂದ ಸಾಕಷ್ಟು ಕಲಿತುಕೊಂಡೆ. ಸ್ಪೂರ್ತಿದಾಯಕ ಮಾತುಗಳನ್ನಾಡಿ ಎಲ್ಲರಿಗೂ ಇಷ್ಟವಾಗುತ್ತಾರೆ. ಅವರ ಜತೆ ಮಾತಿಗಿಳಿದರೆ, ಬೇರೆಯರೊಂದಿಗೆ ಮಾತನಾಡುತ್ತಿದ್ದೇನೆ ಎಂಬ ಫೀಲ್ ಆಗುವುದಿಲ್ಲ. ಬದಲಿಗೆ ನಮ್ಮ ಕುಟುಂಬ ಸದಸ್ಯರೊಟ್ಟಿಗೆ ಸಂಭಾಷಣೆ ನಡೆಸುತ್ತಿದ್ದೇನೆ ಎಂದೆನಿಸುತ್ತದೆ’ ಎನ್ನುತ್ತಾರೆ ಪ್ರಿಯಾ. ವಿಶೇಷವೆನೆಂದರೆ, ಈ ಹಿಂದೆ ‘ರಾಜ್​ಕುಮಾರ’ ಚಿತ್ರದಲ್ಲಿ ಕೆಲಸ ಮಾಡಿದ್ದ ಕೆಲ ತಂತ್ರಜ್ಞರು ‘ಆರೆಂಜ್’ನಲ್ಲಿ ಮುಂದುವರಿದಿದ್ದಾರೆ. ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದಕ್ಕೂ ಖುಷಿಯಲ್ಲಿದ್ದಾರೆ ಪ್ರಿಯಾ. ಬೇರೆ ಭಾಷೆಗಳಂತೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮುಂದುವರಿಯುವ ಆಸೆ ಪ್ರಿಯಾಗೆ ಇದೆಯಂತೆ. ಕನ್ನಡದ ಸಿನಿಮಾ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿರುವ ಅವರು, ಮತ್ತಷ್ಟು ಸಿನಿಮಾ ಅವಕಾಶ ಬಂದರೆ ನಟಿಸಲು ತಯಾರಿದ್ದಾರಂತೆ. ಅಲ್ಪ ಸ್ವಲ್ಪ ಕನ್ನಡ ಭಾಷೆ ತಿಳಿದುಕೊಂಡಿರುವ ಅವರು, ‘ಕಲಾವಿದರಿಗೆ ಭಾಷೆ ಎಂಬುದು ಅಡೆತಡೆಯೇ ಅಲ್ಲ. ನಟನೆಯೊಂದೆ ನಮ್ಮ ಕೆಲಸ’ ಎಂದಿದ್ದಾರೆ. ಜುಲೈ 2 ಗಣೇಶ್ ಜನ್ಮ ದಿನದ ಪ್ರಯುಕ್ತ ‘ಆರೆಂಜ್’ ಚಿತ್ರದ ಟೀಸರ್ ಬಿಡುಗಡೆಮಾಡಲಾಗಿತ್ತು. ಕಲರ್​ಫುಲ್ ಕಾಸ್ಯೂ ್ಟå್ನಲ್ಲಿ ಗಣೇಶ್ ಮಿಂಚು ಹರಿಸಿದ್ದರು. ಈ ಹಿಂದಿನ ಅವರ ಸಿನಿಮಾಗಳಿಗೆ ಹೋಲಿಸಿದರೆ, ತುಂಬ ಡಿಫರೆಂಟ್ ಲುಕ್​ನಲ್ಲಿ ಗಣೇಶ್ ಕಾಣಿಸಿಕೊಂಡಿದ್ದಾರೆ.