ಬಹು ಆಯ್ಕೆ ಇವಿಎಂ ಸಿದ್ಧ

ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗೆ ಅವಶ್ಯವಿರುವ ಬಹು ಆಯ್ಕೆ ವಿದ್ಯುನ್ಮಾನ ಮತ ಯಂತ್ರ(ಇವಿಎಂ) ತಯಾರಾಗಿವೆ.

ಬಿಇಎಲ್ ಹಾಗೂ ಹೈದರಾ ಬಾದ್​ನ ಇಸಿಐಎಲ್ ಸರ್ಕಾರಿ ಸಂಸ್ಥೆಗಳು ಈ ಇವಿಎಂಗಳನ್ನು ವಿನ್ಯಾಸ ಗೊಳಿಸಿದ್ದು, ದೆಹಲಿಯಲ್ಲಿ ವಿವಿಧ ರಾಜ್ಯಗಳ ಚುನಾವಣಾ ಆಯೋಗದ ಆಯುಕ್ತರ ಎದುರು ಈ ಯಂತ್ರಗಳ ಪ್ರಾತ್ಯಕ್ಷಿಕೆ ನೀಡಿವೆ.

ಬಹು ಸದಸ್ಯರ ಆಯ್ಕೆಗೆ ಸಂಬಂಧಿಸಿದಂತೆ ಈ ಪ್ರತ್ಯೇಕ ವಾಗಿ ಇವಿಎಂಗಳನ್ನು ವಿನ್ಯಾಸ ಗೊಳಿಸಿದ್ದು, ಮೊದಲಿನ ಇವಿಎಂಗಳಿಗಿಂತ ತುಸು ಭಿನ್ನವಾಗಿದೆ. ವಿಶೇಷವಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರ ಹಾಗೂ ಹೆಚ್ಚು ಮಂದಿ ಚುನಾವಣೆಗೆ ಸ್ಪರ್ಧಿಸುವುದರಿಂದ ಪ್ರತ್ಯೇಕ ಬಹು ಆಯ್ಕೆ ಇವಿಎಂಗಳ ಅವಶ್ಯಕತೆಯಿತ್ತು. ಹಲವು ರಾಜ್ಯಗಳ ರಾಜ್ಯ ಚುನಾವಣಾ ಆಯುಕ್ತರು ಈ ಸಂಬಂಧ ಸಭೆ ನಡೆಸಿ ರ್ಚಚಿಸಿ ಹೊಸ ವಿನ್ಯಾಸದ ಇವಿಎಂಗೆ ಬೇಡಿಕೆ ಇಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಬಿಇಎಲ್ ಹಾಗೂ ಇಸಿಐಎಲ್ ಸಂಸ್ಥೆಗಳು ಮಲ್ಟಿ ಚಾಯ್ಸ್‌ ಇವಿಎಂಗಳನ್ನು ಸಿದ್ಧ ಪಡಿಸಿವೆ. ಇವಿಎಂಗಳ ಕಾರ್ಯನಿರ್ವಹಣೆ, ಭದ್ರತೆ, ಗೌಪ್ಯತೆ ಬಗ್ಗೆ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್​ಸೈನ್ಸ್ ಹಾಗೂ ಐಐಟಿಯ ತಜ್ಞರ ಸಮಿತಿ ರಚಿಸಿ ಪರಿಶೀಲನೆಗೆ ಒಳಪಡಿಸಲು ದೆಹಲಿ ಯಲ್ಲಿ ನಡೆದ ವಿವಿಧ ರಾಜ್ಯಗಳ ಚುನಾವಣಾ ಆಯುಕ್ತರ ಸಭೆ ನಿರ್ಧರಿಸಿದೆ.

ಏಕೆ ಅವಶ್ಯ?: ಗ್ರಾಮ ಪಂಚಾಯಿತಿ ಗಳಲ್ಲಿ ಏಕಕಾಲಕ್ಕೆ ನಾಲ್ಕೈದು ಸದಸ್ಯರನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಮತ್ತೆ ಕೆಲವೆಡೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೇಯರ್ ಹಾಗೂ ಕಾಪೋರೇಟರ್​ಗಳನ್ನು ಒಂದೇ ಬಾರಿಗೆ ಚುನಾಯಿಸಲಾಗುತ್ತದೆ. ಅಂತಹ ಚುನಾವಣೆ ನಡೆಸಲು ಬಹು ಆಯ್ಕೆ ಇವಿಎಂಗಳು ಅವಶ್ಯ.

ಬೇರೆ ಬೇರೆ ಚುನಾವಣೆಗಳಿಗೂ ಉಪಯೋಗ

ಈಗ ರೂಪಿಸಿರುವ ಬಹು ಆಯ್ಕೆ ಇವಿಎಂಗಳನ್ನು ಬೇರೆ ಬೇರೆ ಚುನಾವಣೆಗೂ ಬಳಸಿಕೊಳ್ಳಬಹುದಾಗಿದೆ. ರಾಜ್ಯ ಚುನಾವಣಾ ಆಯೋಗ ಬಳಿ ಸ್ವಲ್ಪ ಇವಿಎಂಗಳಿವೆ. ಕೇಂದ್ರ ಚುನಾವಣಾ ಆಯೋಗದ ಇವಿಎಂಗಳನ್ನೇ ಬಳಸಿ ಚುನಾವಣೆ ನಡೆಸುತ್ತ ಬರಲಾಗುತ್ತಿದೆ. 2016 ರಿಂದ ಈಚೆಗೆ ಸಿದ್ಧಪಡಿಸಲಾದ ಇವಿಎಂಗಳನ್ನು ಕೇಂದ್ರ ಚುನಾವಣಾ ಆಯೋಗ ತನ್ನ ವ್ಯಾಪ್ತಿ ಹೊರತುಪಡಿಸಿ ನಡೆಯುವ ಚುನಾವಣೆಗೆ ನೀಡದಂತೆ ಸೂಚನೆ ನೀಡಿದೆ. ಹಾಗಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ಪ್ರತ್ಯೇಕ ಇವಿಎಂಗಳ ಅವಶ್ಯಕತೆಯಿದೆ. ಆಯೋಗ ಈಗಾಗಲೇ ನಗರ ಸ್ಥಳೀಯ ಸಂಸ್ಥೆಗೆ ಅವಶ್ಯವಿರುವ 24 ಸಾವಿರ ಕಂಟ್ರೋಲ್ ಯುನಿಟ್, 25 ಸಾವಿರ ಬ್ಯಾಲೆಟ್ ಯುನಿಟ್​ಗೆ 3 ಕೋಟಿ ರೂ., ಗ್ರಾಮ ಪಂಚಾಯಿತಿ ಚುನಾವಣೆಗೆ ಬೇಕಾಗುವ 43 ಸಾವಿರ ಕಂಟ್ರೋಲ್ ಯುನಿಟ್, 51,000 ಬ್ಯಾಲೆಟ್ ಯುನಿಟ್​ಗಳಿಗೆ 95 ಕೋಟಿ ರೂ.ಗಳ ಪ್ರಸ್ತಾವನೆಗಳನ್ನು 2 ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಸಲ್ಲಿಸಿ ಅನುದಾನಕ್ಕೆ ಕಾಯುತ್ತಿದೆ.

Leave a Reply

Your email address will not be published. Required fields are marked *