More

  ನಷ್ಟದಿಂದ ಪಾರಾಗಲು ಬಹು ಬೆಳೆ ಪದ್ಧತಿ ಸೂಕ್ತ

  ಶೃಂಗೇರಿ: ಅಡಕೆ ಬೆಳೆಗಳಿಗೆ ತಗುಲಿದ ರೋಗದಿಂದ ಮಲೆನಾಡಿನ ರೈತರು ಹೈರಾಣಾಗಿದ್ದಾರೆ. ಆದರೆ ಕೃಷಿಕರು ಅಡಕೆ ಜತೆಗೆ ಬಹು ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಅಡಕೆ ಜತೆ ಬಾಳೆ, ಕಾಳುಮೆಣಸು, ಏಲಕ್ಕಿ ಮುಂತಾದವುಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಿವಮೊಗ್ಗ ನವುಲೆ ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ನಾಗರಾಜ್ ಅಡಿವಪ್ಪರ್ ತಿಳಿಸಿದರು.

  ಜೆಸಿಬಿಎಂ ಕಾಲೇಜಿನಲ್ಲಿನ ಐಕ್ಯೂಎಸಿ ಅರ್ಥಶಾಸ ಮತ್ತು ಕಲಾ ವಿಭಾಗದಿಂದ ಸೋಮವಾರ ಆಯೋಜಿಸಿದ್ದ ಅಡಕೆ ಸಮಸ್ಯೆಗಳು ಮತ್ತು ನಿರೀಕ್ಷೆ ಕುರಿತ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
  ಮೈದಾನ್ ತಳಿ, ತೀರ್ಥಹಳ್ಳಿ ಲೋಕಲ್, ಸ್ವರ್ಣಮಂಗಳ, ಮೋಹಿತ್ ನಗರ್ ಹೀಗೆ ಅಡಕೆಗಳ ತಳಿಗಳನ್ನು ಬೆಳೆಸಿ ಉತ್ತಮ ಇಳುವರಿ ಪಡೆಯಬಹುದು. ಕಾಲ ಕಾಲಕ್ಕೆ ಅಡಕೆಗೆ ಬೇಕಾದ ಪೋಷಕಾಂಶ ನೀಡುವುದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ. ಬೆಳೆಗಳಿಗೆ ಬಂದ ರೋಗದಿಂದ ರೈತರು ಹತಾಶರಾಗದೆ ಇರುವ ಅಡಕೆ ತೋಟಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.
  ಧನ್ವಂತರಿ ನಿಘಂಟುಗಳಲ್ಲಿ ಐದು ದ್ರವ್ಯಗಳಲ್ಲಿ ಅಡಕೆ ಅತ್ಯಂತ ಶ್ರೇಷ್ಠ. ವೇದ, ಉಪನಿಷತ್ ಹಾಗೂ ಸಂಹಿತೆಗಳಲ್ಲಿ ಅಡಕೆ ಕುರಿತು ಉಲ್ಲೇಖವಿದೆ. ಸಾವಿರಾರು ರುದ್ರಾಕ್ಷಿಯನ್ನು ಹೊಂದಿರುವ ಎತ್ತರದ ಸನ್ಯಾಸಿ ಎಂದು ಜನಪದದಲ್ಲಿ ಅಡಕೆ ಕುರಿತು ಗುಣಗಾನ ಮಾಡಲಾಗಿದೆ. ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಜೀವನದಲ್ಲಿ ಹಾಸುಹೊಕ್ಕಾದ ಅಡಕೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ತಿಳಿಸಿದರು.
  ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಕೃಷ್ಣ ಮಾತನಾಡಿ, ಅಡಕೆ ಮಲೆನಾಡಿನ ಜನರ ಜೀವನಾಡಿ. ಅಧಿಕ ತೇವಾಂಶದಿಂದ ಎಲೆಚುಕ್ಕೆ ರೋಗ ಬಂದು ಬೆಳೆ ನಾಶವಾಗುತ್ತಿದೆ. ರೈತರು ಸೂಕ್ತ ಸಮಯದಲ್ಲಿ ತೋಟಗಳಿಗೆ ಪೋಷಕಾಂಶ ನೀಡಬೇಕು ಎಂದು ಹೇಳಿದರು.
  ಇಲ್ಲಿರುವ ವಿದ್ಯಾರ್ಥಿಗಳು ಕೃಷಿ ಕುಟುಂಬದ ಹಿನ್ನೆಲೆ ಹೊಂದಿದ್ದು ವಾಣಿಜ್ಯ ಬೆಳೆಗಳ ಉಳಿವಿಗೆ ಮುನ್ನುಡಿ ಬರೆಯಬೇಕು. ನೂರು ಮರಗಳನ್ನು ಆಯ್ಕೆ ಮಾಡಿ ತಜ್ಞರ ಶಿಾರಸು ಪಡೆದು ಅದರ ನಿರ್ವಹಣೆಗೆ ಯುವಜನತೆ ಗಮನ ಹರಿಸುವ ಅನಿವಾರ್ಯತೆ ಇದೆ. ಪ್ರಸ್ತುತ ಅಡಕೆ ತೋಟ ಪ್ರದೇಶ ವಿಸ್ತರಣೆಯಾಗುತ್ತಿದೆ. ಮಲೆನಾಡಿಗೆ ಮಾತ್ರ ಸೀಮಿತವಾಗಿದ್ದ ಸಾಂಪ್ರದಾಯಿಕ ಬೆಳೆ ಬಯಲುಸೀಮೆಯನ್ನೂ ಆವರಿಸಿದೆ. ಆದರೆ ಹೆಚ್ಚು ಸಮಸ್ಯೆಗಳನ್ನು ಎದುರಿಸುವ ಮಲೆನಾಡಿನ ಕೃಷಿಕರ ಜತೆ ಯುವಜನತೆ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಿದೆ ಎಂದರು.
  ಮ್ಯಾಮ್ಕೋಸ್ ನಿರ್ದೇಶಕ ಸುರೇಶ್ಚಂದ್ರ ಕಾರ್ಯಾಗಾರ ಉದ್ಘಾಟಿಸಿದರು. ತಾಲೂಕು ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾರಾಯಣ ಸ್ವಾಮಿ, ಪ್ರಾಧ್ಯಾಪಕರಾದ ನಾಗಭೂಷಣ್, ಬಿ.ಆರ್.ವಿದ್ಯಾಧರ್, ಎಂ.ವಿ.ಪ್ರಶಾಂತ್, ಎನ್.ಎಚ್.ಲಕ್ಷ್ಮೀನಾರಾಯಣ, ಡಾ. ಕೆ.ಪಿ.ಪ್ರಕಾಶ್, ಕಲಾ ವಿಭಾಗದ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಂಜಿತ್ ಉಪಸ್ಥಿತರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts