ಬಹುಗುಣಗಳ ಗುಲ್ಕನ್

ಗುಲ್ಕನ್ ಅಥವಾ ರೋಸ್ ಪೆಟಲ್ ಜಾಮ್ ಎನ್ನುವುದು ಭಾರತೀಯರ ಒಂದು ಸಿಹಿಪದಾರ್ಥ. ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿಯೂ ಇದರ ಆರೋಗ್ಯ ಸಹಕಾರಿ ಗುಣಗಳು ಹಾಗೂ ಉಪಯುಕ್ತತೆಗಳನ್ನು ಗುರುತಿಸಿ ಔಷಧೀಯ ವಸ್ತುವಾಗಿ ಬಳಸಲಾಗುತ್ತಿದೆ ಎಂಬುದು ಇದರಲ್ಲಿನ ಪೋಷಕಾಂಶಗಳ ಮಹತ್ವವನ್ನು ತಿಳಿಸುತ್ತದೆ.

ಮುಂಬೈ ಮೂಲದ ಆಹಾರತಜ್ಞೆ ಶಿಲ್ಪಾ ಮಿತ್ತಲ್​ರ ಪ್ರಕಾರ ಗುಲ್ಕನ್ ಅನೇಕ ಆರೋಗ್ಯ ಅನುಕೂಲಕಾರಿ ಗುಣಗಳನ್ನು ಹೊಂದಿದ್ದು, ಮೌಥ್ ಫ್ರೆಷ್ನರ್ ಆಗಿ ಹಾಗೂ ಆರೋಗ್ಯವರ್ಧನೆಗೆ ಸಹಾಯ ಮಾಡುವಂತಹ ಉತ್ತಮ ಮಾಧ್ಯಮ ಆಗಬಲ್ಲುದು. ಇದು ದೇಹವನ್ನು ತಂಪು ಮಾಡುವ ಗುಣವನ್ನು ಹೊಂದಿದೆ. ಸುಸ್ತು, ಆಲಸ್ಯ, ತುರಿಕೆ, ನೋವನ್ನು ನಿಯಂತ್ರಿಸುವ ಗುಣಗಳನ್ನೂ ಹೊಂದಿದೆ. ಅಲ್ಲದೆ ಅಂಗೈ ಮತ್ತು ಅಂಗಾಲುಗಳಲ್ಲಿ ಸೆಕೆ, ಉರಿ ಆಗುತ್ತಿದ್ದಲ್ಲಿ ಅದನ್ನೂ ನಿಯಂತ್ರಿಸಲು ಇದು ಅನುಕೂಲಕಾರಿ. ಆಂಟಿ ಆಕ್ಸಿಡೆಂಟ್​ಗಳಿಂದ ತುಂಬಿರುವಂತಹ ಇದು ದೇಹದ ಕೋಶಗಳು ಪುನರುತ್ಪತ್ತಿಯಾಗಲು ನೆರವಾಗುತ್ತದೆ. ಒಂದರಿಂದ ಎರಡು ಚಮಚ ಗುಲ್ಕನ್ ಸೇವಿಸುವುದರಿಂದ ವೇಗವಾಗಿ ಹೈಪರ್ ಅಸಿಡಿಟಿ ಹಾಗೂ ಹೊಟ್ಟೆ ಉರಿ ಕಡಿಮೆಯಾಗಲು ಸಾಧ್ಯ. ಗುಲ್ಕನ್ ಸೇವನೆಯು ಅಲ್ಸರ್ ಹಾಗೂ ಕರುಳಿನಲ್ಲಿ ಬಾವು ಇದ್ದಲ್ಲಿ ಅದನ್ನು ಕಡಿಮೆ ಮಾಡಲು ಸಹಕಾರಿ. ಬಾಯಿಹುಣ್ಣು ಕಡಿಮೆ ಮಾಡಲು, ಹಲ್ಲಿನ ಬಲವನ್ನು ಹೆಚ್ಚಿಸಲು, ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆನೋವನ್ನು ಕಡಿಮೆ ಮಾಡಲು, ಜೀರ್ಣಶಕ್ತಿಯನ್ನು ಹೆಚ್ಚಿಸಲು ಗುಲ್ಕನ್ ಸಹಾಯ ಮಾಡುತ್ತದೆ.

ದೇಹದಿಂದ ವಿಷ ವಸ್ತುಗಳನ್ನು ಹೊರಹಾಕಿ ಶುದ್ಧಿ ಮಾಡುವ ಕಾರ್ಯವನ್ನು ಮಾಡಲು ಗುಲ್ಕನ್ ಉಪಯೋಗಕಾರಿ. ಚರ್ಮದ ಆರೋಗ್ಯಕ್ಕೂ ಉತ್ತಮ. ಇಷ್ಟೆಲ್ಲ ಉಪಯುಕ್ತತೆಯನ್ನು ಹೊಂದಿರುವಂತಹ ಗುಲ್ಕನ್ ಸೇವನೆಯನ್ನು ವಿವೇಚನೆಯಿಂದ ಮಾಡುವುದು ಮುಖ್ಯ. ಇದರ ತಯಾರಿಯಲ್ಲಿ ಸಕ್ಕರೆಯನ್ನು ಬಳಸಲಾಗುತ್ತದೆ. ಆದರೆ ಹೆಚ್ಚಿನ ಸಕ್ಕರೆ ಸೇವನೆಯು ಆರೋಗ್ಯಕ್ಕೆ ಮಾರಕವಷ್ಟೆ. ಆದ್ದರಿಂದ ತೊಳೆದ ಗುಲಾಬಿದಳಗಳನ್ನು ನೆರಳಿನಲ್ಲಿ ಒಣಗಿಸಿ ಜೇನುತುಪ್ಪವನ್ನು ಉಪಯೋಗಿಸಿ ಮನೆಯಲ್ಲಿಯೇ ಗುಲ್ಕನ್ ತಯಾರಿಸಿ ಬಳಸುವುದು ಉತ್ತಮ.