ಹೆದ್ದಾರಿ ಸಮಸ್ಯೆಯಿಂದ ಮೂಲ್ಕಿ ನಾಗರಿಕರು ಹೈರಾಣು

ಭಾಗ್ಯವಾನ್ ಸನೀಲ್ ಮೂಲ್ಕಿ

ಮೂಲ್ಕಿ ಬಸ್ ನಿಲ್ದಾಣ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸರಿಯಾಗಿ ನಡೆಯದ ಕಾರಣ ಸಾರ್ವಜನಿಕರು ಸಮಸ್ಯೆಗೆ ಒಳಗಾಗಿದ್ದಾರೆ. ಪ್ರತೀದಿನ ಈ ಪ್ರದೇಶದಲ್ಲಿ ದ್ವಿಚಕ್ರ ವಾಹನ ಅಪಘಾತ ಹಾಗೂ ಸತತ ಧೂಳು ಏಳುವ ಕಾರಣ ಪರಿಸರದ ಅಂಗಡಿ ಮುಂಗಟ್ಟುಗಳ ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಸರ್ವೀಸ್ ರಸ್ತೆ ವಿಸ್ತರಣಾ ಕಾಮಗಾರಿ ಅರ್ಧಕ್ಕೆ ನಿಂತ ಕಾರಣ ಸಮಸ್ಯೆ ಉಲ್ಭಣಿಸಿದೆ. ಮಾ.20ರಿಂದ ಮೂಲ್ಕಿ ಬಪ್ಪನಾಡು ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಸಹಸ್ರಾರು ಮಂದಿ ಪಾದಚಾರಿಗಳು ಹಾಗೂ ವಾಹನ ಸಂಚಾರ ಈ ಪ್ರದೇಶದಲ್ಲಿ ನಡೆಯಲಿರುವ ಕಾರಣ ಅತೀ ಶೀಘ್ರ ರಿಪೇರಿಯಾಗಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಮೂಲ್ಕಿ ಬಸ್ ನಿಲ್ದಾಣದ ಲಲಿತ್ ಮಹಾಲ್ ಕಟ್ಟಡದ ಎದುರು ಬಪ್ಪನಾಡಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆ ಇದ್ದು, ಹೆದ್ದಾರಿ ಸುಮಾರು 15 ಅಡಿ ಎತ್ತರದಲ್ಲಿ ಹಾದು ಹೋಗುವ ಕಾರಣ ಸಂಪರ್ಕ ರಸ್ತೆಗೆ ಇಳಿಯಲು ಜಲ್ಲಿ ಮಿಕ್ಸ್ ರಾಶಿ ಹಾಕಿ ಸಂಪರ್ಕ ನಿರ್ಮಿಸಲಾಗಿತ್ತು. ಆದರೆ ಹಲವು ತಿಂಗಳುಗಳೇ ಕಳೆದರೂ ಇಲಾಖೆ ಡಾಂಬರು ಅಳವಡಿಕೆ ಮಾಡದೆ ಹಾಗೇ ಬಿಟ್ಟಿರುವ ಕಾರಣ ಜಲ್ಲಿಗಳು ಕಳಚಿ ಬೀಳುತ್ತಿವೆ. ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಪ್ರಯಾಣಿಕರು ಮೂಳೆ ಮುರಿಸಿಕೊಳ್ಳುತ್ತಿದ್ದಾರೆ. ಪ್ರತೀ ದಿನವೂ ಅವಘಡಗಳ ಸರಮಾಲೆ ನಡೆಯುತ್ತಿದೆ. ಸರ್ವೀಸ್ ರಸ್ತೆಯ ಪಾರ್ಶ್ವದಲ್ಲಿ ಮಳೆ ನೀರು ಹರಿಯುವ ತೋಡು ಕಾಮಗಾರಿ ಅರ್ಧಕ್ಕೆ ನಿಂತಿದ್ದು ಅದರ ಕಬ್ಬಿಣದ ಸರಳುಗಳು ಶೂಲದಂತೆ ಹೊರ ಚಾಚಿವೆ. ಅಫಘಾತ ಈ ಬದಿಯಲ್ಲಿ ಸಂಭವಿಸಿದರೆ ಪ್ರಾಣ ಹಾನಿ ಗ್ಯಾರಂಟಿ.

ದುರ್ವಾಸನೆ: ಅರ್ಧ ನಿರ್ಮಿಸಿದ ತೋಡಿನಿಂದ ದುರ್ವಾಸನೆ ಹಬ್ಬುತ್ತಿದ್ದು, ಸ್ಥಳಿಯರನ್ನು ಸಂಕಷ್ಟಕ್ಕೀಡು ಮಾಡಿದೆ. ಇಲ್ಲಿನ ಧೂಳು ಮತ್ತು ವಾಸನೆ ನಮ್ಮ ಆರೋಗ್ಯವನ್ನೇ ಹಾಳು ಮಾಡಿದೆ ಎಂದು ಸ್ಥಳೀಯ ವ್ಯಾಪಾರಿಗಳು ದೂರಿದ್ದಾರೆ. ಒಟ್ಟಾರೆ ಹೆದ್ದಾರಿ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು. ಬಪ್ಪನಾಡು ಜಾತ್ರೆ ಒಳಗೆ ಕನಿಷ್ಠ ಡಾಂಬರನ್ನು ಜಲ್ಲಿಯ ಮೇಲೆ ಹಾಕಬೇಕು ಎನ್ನುವುದು ಸ್ಥಳೀಯರ ಅಪೇಕ್ಷೆ.

ಹೆದ್ದಾರಿಯಿಂದ ಇಳಿಯುವ ಅಥವಾ ಮೇಲೇರುವ ಸಂದರ್ಭ ದೊಡ್ಡ ವಾಹನಗಳು ಬಂದಲ್ಲಿ ದ್ವಿಚಕ್ರ ವಾಹನಕ್ಕೆ ಜಾಗ ಸಾಲದೆ ಬದಿಗೆ ಸರಿದರೆ ಜಲ್ಲಿ ಕುಸಿದು ಅಪಘಾತ ಗ್ಯಾರಂಟಿ. ಒಂದು ಬದಿ ಹೊಂಡ ಹಾಗೂ ಸರಳುಗಳಿಂದ ಕೂಡಿದ್ದು ಅಪಾಯಕಾರಿಯಾಗಿದೆ.
| ವಸಂತ, ಸ್ಥಳೀಯರು

ದಿನವೂ ಇಲ್ಲಿ ಅಪಘಾತಗಳಾಗುತ್ತಿವೆ. ಧೂಳು ಮತ್ತು ವಾಸನೆಯಿಂದ ಕುಳಿತುಕೊಳ್ಳಲು ಅಸಾಧ್ಯ ಎಂಬ ಸ್ಥಿತಿ ಇದೆ. ನಮ್ಮ ಆರೋಗ್ಯ ಸಂಪೂರ್ಣ ಹಾಳಾಗುತ್ತಿದೆ.
| ನಝೀರ್, ಹೂ ವ್ಯಾಪಾರಿ