ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ: ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರ ವಿರುದ್ಧ ದೂರು

ಮೂಲ್ಕಿ: ತನ್ನ ವಾಹನ ಅಪಘಾತಕ್ಕೀಡಾಗಲು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಆರೋಪಿಸಿಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್‌ಸನ್ ವಿಜಯಕುಮಾರ್ ವಿರುದ್ಧ ವಾಹನ ಮಾಲೀಕರೊಬ್ಬರು ಮೂಲ್ಕಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮೀನು ಸಾಗಾಟದ ಪಿಕ್‌ಅಪ್ ವಾಹನ ಮಾಲೀಕ ಮಹಮ್ಮದ್ ರಫೀಕ್ ದೂರು ನೀಡಿದವರು. ಏಪ್ರಿಲ್ 8ರಂದು ಅಪರಾಹ್ನ 2.45ಕ್ಕೆ ಮಂಗಳೂರಿನಿಂದ ಉಡುಪಿಗೆ ಮೀನು ಸಾಗಿಸುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿಯಿಂದಾಗಿ ಟಯರ್ ಸ್ಪೋಟಿಸಿ ಪಿಕ್‌ಅಪ್ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ವಾಹನದ ಚಕ್ರ ಹಾಗೂ ಇಂಜಿನ್‌ಗೆ ಹಾನಿಯಾಗಿ ಅದರ ದುರಸ್ತಿಗೆ 60 ಸಾವಿರ ರೂ ಖರ್ಚಾಗಿತ್ತು. ವಾಹನದಲ್ಲಿದ್ದ 1.5 ರೂ ಮೌಲ್ಯದ ಮೀನು ಕೂಡ ಹಾಳಾಗಿತ್ತು. ಅಪಘಾತ ನಡೆದ ಸ್ಥಳದಲ್ಲಿ ಸಂಪೂರ್ಣ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆದಿದೆ. ಈ ಬಗ್ಗೆ ಯೋಜನಾ ನಿರ್ದೇಶಕರಿಗೆ ಹಲವು ಬಾರಿ ದೂರು ನೀಡಿದ್ದರೂ ಅವರು ಕ್ರಮ ಕೈಗೊಂಡಿಲ್ಲ. ಇಲಾಖೆ ನಿರ್ಲಕ್ಷೃದ ಪರಿಣಾಮ ತನ್ನ ವಾಹನ ಅಪಘಾತಕ್ಕೀಡಾಗಿ ನಷ್ಟವುಂಟಾಗಿದೆ. ಈ ನಷ್ಟವನ್ನು ಸ್ಯಾಮ್‌ಸನ್ ವಿಜಯಕುಮಾರ್ ಅವರಿಂದ ವಸೂಲಿ ಮಾಡಿಕೊಡಬೇಕು ಎಂದು ಅವರು ಠಾಣೆಗೆ ನೀಡಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.

ವಾಹನ ಖರೀದಿ ಸಂದರ್ಭ ರಸ್ತೆ ತೆರಿಗೆ ಕಟ್ಟಿದ್ದು, ಉಡುಪಿಗೆ ತೆರಳುವ ವೇಳೆ ಸುರತ್ಕಲ್‌ನಲ್ಲಿ ಟೋಲ್ ಕೂಡ ಪಾವತಿಸಲಾಗಿದೆ. ಅಪಘಾತದಲ್ಲಿ ತನಗಾದ ನಷ್ಟ ಭರಿಸುವ ನಿಟ್ಟಿನಲ್ಲಿ ವಿಜಯಕುಮಾರ್ ವಿರುದ್ಧ ಕೇಸು ದಾಖಲಿಸಿ, ರಸ್ತೆ ದುರಸ್ತಿ ಮಾಡಿಸುವುದಲ್ಲದೆ, ವಾಹನ ದುರಸ್ತಿಗೆ ಖರ್ಚಾದ ಮೊತ್ತವನ್ನು ಅವರಿಂದ ವಸೂಲು ಮಾಡಿಕೊಡಬೇಕು ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.

ಹದಗೆಟ್ಟ ರಸ್ತೆಯಲ್ಲಿ ಅಪಘಾತ ಸಂಭವಿಸಿದರೆ ಆ ರಸ್ತೆ ನಿರ್ಮಿಸಿದ ಹಾಗೂ ನಿರ್ವಹಣೆ ಮಾಡುತ್ತಿರುವ ವ್ಯಕ್ತಿಯೇ ಅಪಘಾತಕ್ಕೆ ನೇರ ಹೊಣೆ. ಅವರ ವಿರುದ್ಧ ದೂರು ದಾಖಲಿಸಬಹುದು ಎಂದು ಕಳೆದ ವರ್ಷ ಸುಪ್ರೀಂಕೋರ್ಟ್ ತೀರ್ಪು ನೀಡಿರುವುದಾಗಿ ತಮ್ಮ ದೂರಿನಲ್ಲಿ ಠಾಣೆ ಅಧಿಕಾರಿಗಳಿಗೆ ಮನವರಿಕೆ ಅವರು ಮಾಡಿಕೊಟ್ಟಿದ್ದಾರೆ.

Leave a Reply

Your email address will not be published. Required fields are marked *