ಮೂಲ್ಕಿ ತಾಲೂಕು ಘೋಷಣೆ

< 4 ದಶಕದ ಹೋರಾಟಕ್ಕೆ ಜಯ * ಹೋರಾಟಗಾರಲ್ಲಿ ಸಂತಸ>

ಭಾಗ್ಯವಾನ್ ಸನಿಲ್ ಮೂಲ್ಕಿ

ರಾಜ್ಯ ಸರ್ಕಾರ ಮೂಲ್ಕಿ ತಾಲೂಕಾಗಿ ಘೋಷಣೆ ಮಾಡಿರುವುದರಿಂದ ಸ್ಥಳೀಯರ, ಜನನಾಯಕರ ನಾಲ್ಕು ದಶಕಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದಂತಾಗಿದ್ದು, ಜನತೆಯಲ್ಲಿ ಸಂತಸ ಮೂಡಿದೆ.

ಎಲ್ಲ ಅರ್ಹತೆ ಇದ್ದರೂ ಆಡಳಿತಾತ್ಮಕವಾಗಿ ನಿರ್ಲಕ್ಷೃ ತೋರಿದ್ದರಿಂದ ಮೂಲ್ಕಿ ತಾಲೂಕು ರಚನೆ ನನೆಗುದಿಗೆ ಬಿದ್ದಿತ್ತು. ಮೂಲ್ಕಿ ಹೋಬಳಿಯ ಹತ್ತು ಗ್ರಾಮ ಪಂಚಾಯಿತಿ ಸಹಿತ ಒಂದು ಪಟ್ಟಣ ಪಂಚಾಯಿತಿಯಲ್ಲಿ 32 ಗ್ರಾಮವನ್ನು ಹೊಂದಿರುವ ಮೂಲ್ಕಿ ಬಗ್ಗೆ ಸರ್ಕಾರದಿಂದ ನೇಮಿಸಲ್ಪಟ್ಟ ಗದ್ದಿಗೌಡರ್, ವಾಸುದೇವರಾವ್, ಪ್ರಕಾಶ್, ಹುಂಡೇಕರ್ ಸಮಿತಿ ಸಹಿತ ಎಲ್ಲ ಸಮಿತಿಗಳು ಮೂಲ್ಕಿ ತಾಲೂಕಿಗೆ ಶಿಫಾರಸು ನೀಡಿತ್ತು. ಈ ನಡುವೆ ಮೂಲ್ಕಿ ಹೋಬಳಿಯನ್ನು ಮೂಡುಬಿದಿರೆಗೆ ಸೇರಿಸುವ ಪ್ರಯತ್ನ ಮಾಡಿದಾಗ ಅದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಮೂಲ್ಕಿಯ ಬಳಿಕ ಬೆಳವಣಿಗೆ ಕಂಡಿರುವ ಮೂಡುಬಿದಿರೆ, ಕಾಪು ತಾಲೂಕು ಘೋಷಣೆ ಮಾಡಿರುವುದರಿಂದ ಮೂಲ್ಕಿಯನ್ನು ತಾಲೂಕಾಗಿ ಘೋಷಣೆ ಮಾಡಬೇಕು ಎಂಬ ಹೋರಾಟ ನಿರಂತರವಾಗಿ ನಡೆದಿತ್ತು.

ಮೂಲ್ಕಿಯಲ್ಲಿ ಈಗಾಗಲೇ ಶಿಕ್ಷಣ ಸಂಸ್ಥೆ, ಧಾರ್ಮಿಕ ಕೇಂದ್ರಗಳು, ಕೈಗಾರಿಕಾ ಪ್ರಾಂಗಣ, ವೃತ್ತ ನಿರೀಕ್ಷಕ ಕಚೇರಿ, ರಿಜಿಸ್ಟ್ರಾರ್ ಕಚೇರಿ ಹೀಗೆ ಎಲ್ಲವೂ ಇದೆ. ಎರಡು ವರ್ಷದ ಹಿಂದೆ ಇಲ್ಲಿ ವಿಶೇಷ ತಹಸೀಲ್ದಾರನೂ ನೇಮಿಸಿ ತಾಲೂಕಿಗೆ ಪೂರಕ ವಾತಾವರಣ ನಿರ್ಮಾಣವಾಗಿತ್ತು. ಜತೆಗೆ ಅಗ್ನಿಶಾಮಕ ದಳದ ಕೇಂದ್ರಕ್ಕೆ ರಾಷ್ಟ್ರೀಯ ಹೆದ್ದಾರಿಗೆ ಸನಿಹವಾದ ಕೈಗಾರಿಕಾ ಕೇಂದ್ರ ಹತ್ತಿರ ಸ್ಥಳವನ್ನು ಸಹ ಗುರುತಿಸಲಾಗಿದೆ. ಮಂಗಳೂರಿನ ವೆನ್‌ಲಾಕ್‌ಗೆ ಪರ್ಯಾಯವಾಗಿರುವ ಮೂಲ್ಕಿಯ ಕಾರ್ನಾಡುವಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಸುಸಜ್ಜಿತವಾಗಿದೆ.

ಹೋರಾಟ ಪರ್ವ: ನಾಲ್ಕು ದಶಕಗಳಿಂದ ಮೂಲ್ಕಿಯನ್ನು ತಾಲೂಕಾಗಿ ಘೋಷಣೆ ಮಾಡಬೇಕು ಎಂಬ ಹೊರಾಟವನ್ನು ಮುನ್ನೆಡೆಸಿದವರು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು. ಅವರಿಗೆ ಸಾಥ್ ನೀಡಿದವರು ಹಿರಿಯ ಶಿಕ್ಷಕ ಗುಂಡಾಲು ಮಹಾಬಲ ಶೆಟ್ಟಿ ಮತ್ತು ಸ್ವಾತಂತ್ರ್ಯ ಸೇನಾನಿಯಾಗಿದ್ದ ಸಂಜೀವನಾಥ ಐಕಳ, ಎಂ.ಆರ್.ಎಚ್. ಪೂಂಜಾ, ನೂರ್ ಮೊಹಮ್ಮದ್, ಸೋಮಪ್ಪ ಸುವರ್ಣ, ಅಮರನಾಥ ಶೆಟ್ಟಿ, ಕೆ.ಅಭಯಚಂದ್ರ ಜೈನ್‌ರೊಂದಿಗೆ ಸ್ಥಳೀಯ ಯುವಕರು ಸಂಘ ಸಂಸ್ಥೆಗಳು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸಹಿತ ಎಲ್ಲ ರಾಜಕೀಯ ಪಕ್ಷಗಳು ಹೊರಾಟಕ್ಕೆ ಬೆಂಬಲ ನೀಡಿದ್ದರು. ಮೂಲ್ಕಿ ಬಂದ್‌ನಂತಹ ಉಗ್ರ ಹೋರಾಟದ ಜತೆಗೆ 2017ರ ಮಾರ್ಚ್‌ನಲ್ಲಿ ಒಂದು ವಾರಗಳ ಕಾಲ ಮೂಲ್ಕಿ ಬಸ್ ನಿಲ್ದಾಣದಲ್ಲಿ ನಿರಶನ ಕೈಗೊಂಡು ತಮಟೆ ಬಾರಿಸಿ, ಅರೆಬೆತ್ತಲೆ ಪ್ರದರ್ಶನ, ಭಜನೆ, ಕಾರ್ಡ್ ಚಳವಳಿ, ರಾಷ್ಟ್ರೀಯ ಹೆದ್ದಾರಿ ತಡೆಯಂತಹ ಪ್ರತಿಭಟನೆಗಳು ನಡೆದಿದ್ದವು.

ಮೂಲ್ಕಿಯಲ್ಲಿದೆ ಏನಿದೆ: ಮೂಲ್ಕಿ ಹೋಬಳಿಯಲ್ಲಿ 10 ಗ್ರಾಮ ಪಂಚಾಯಿತಿ, ಒಂದು ಪಟ್ಟಣ ಪಂಚಾಯಿತಿ, 32 ಗ್ರಾಮಗಳು, ಸಬ್‌ರಿಜಿಸ್ಟ್ರಾರ್ ಕಚೇರಿ, ಸರ್ಕಾರಿ ಮತ್ತು ಖಾಸಗಿ ಪ್ರಥಮ ದರ್ಜೆ ಪದವಿ ಪೂರ್ವ ಕಾಲೇಜು, ಎಲ್ಲಾ ಪ್ರಮುಖ ರಾಷ್ಟ್ರೀಯ ಮಟ್ಟದ ಬ್ಯಾಂಕ್‌ಗಳ ಶಾಖೆಗಳು, ನಾಡ ಕಚೇರಿ, ವಿಶೇಷ ತಹಸೀಲ್ದಾರ್, ಕೈಗಾರಿಕಾ ಪ್ರಾಂಗಣ, ಜನ ವಸತಿ ಪ್ರದೇಶಗಳು, ರೈಲ್ವೆ ನಿಲ್ದಾಣ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿರುವ ಸರ್ಫಿಂಗ್‌ನ ಸಸಿಹಿತ್ಲು ಮುಂಡಾ ಪ್ರದೇಶ, ಬೋಟ್‌ಗಳಿಗೆ ಲಂಗರು ಹಾಕಲು ಜೆಟ್ಟಿ, ಮಂಗಳೂರು ಪೊಲೀಸ್ ಕಮಿಷನರೇಟ್‌ನ ಗಡಿಭಾಗ, ಮೂಲ್ಕಿ ಸೀಮೆಯ ಅರಮನೆ, ಸೀಮೆಯ ಕಂಬಳ, ಬಪ್ಪನಾಡು ಕ್ಷೇತ್ರ, ಚರ್ಚ್, ಮಸೀದಿಗಳ ಸಹಿತ ಜೈನ ಬಸದಿ, ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಯ ಮೂಲ ಕೇಂದ್ರಗಳು ಇಲ್ಲಿವೆ.

ಏನು ಬೇಕು: ಸಮುದ್ರ ಕರಾವಾಳಿಯಾಗಿದ್ದರೂ ಬಂದರು ಇಲ್ಲ. ಅಗ್ನಿಶಾಮಕ ಕೇಂದ್ರ, ನ್ಯಾಯಾಲಯ, ವಿವಿಧ ಇಲಾಖೆಗಳ ಕಚೇರಿಗಳು, ಮೂಲ್ಕಿಯಲ್ಲಿ ಸೂಕ್ತವಾದ ಬಸ್ ನಿಲ್ದಾಣವಿಲ್ಲ, ಮುಖ್ಯ ಪೇಟೆಯಲ್ಲಿ ವ್ಯವಸ್ಥಿತವಾದ ಪಾರ್ಕಿಂಗ್ ವ್ಯವಸ್ಥೆಯಿಲ್ಲ, ಹೆದ್ದಾರಿಯ ಕಾಮಗಾರಿ ಮುಗಿದಿಲ್ಲ, ಒಳ ಚರಂಡಿ ಸಮಸ್ಯೆ, ಸಂಚಾರಿ ಉಪಠಾಣೆಯ ಅಗತ್ಯವಿದೆ.

ಮೂಲ್ಕಿ ಜನತೆಯ ಸುದೀರ್ಘ ಹೋರಾಟದ ಫಲವಾಗಿದೆ. ಕೇವಲ ಘೋಷಣೆಯಾದರೆ ಸಾಲದು ಇದರ ಬಗ್ಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು. ಶೀಘ್ರವಾಗಿ ತಾಲೂಕಿಗೆ ಸಂಬಂಧಿಸಿದ ಪ್ರಕ್ರಿಯೆಗಳು ತ್ವರಿತವಾಗಿ ನಡೆಯಬೇಕು. ಎಲ್ಲ ಇಲಾಖೆಗಳು ಒಂದೇ ಸೂರಿನಡಿ ಕಾಣಲು ಮಿನಿ ವಿಧಾನಸೌಧ ಬೇಕು. ಮುಖ್ಯವಾಗಿ ನ್ಯಾಯಾಲಯವೂ ಅಗತ್ಯವಾಗಿದೆ. ಮೂಲ್ಕಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ವಂದನೆಗಳು.
ಹರಿಕೃಷ್ಣ ಪುನೂರೂರು, ಮೂಲ್ಕಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ

ಮೂಲ್ಕಿ ತಾಲೂಕಾಗಿಸಲು ಅಗತ್ಯ ವ್ಯವಸ್ಥೆಯನ್ನು ತಾನು ಶಾಸಕನಾಗಿ, ಸಚಿವನಾಗಿ ನಡೆಸಿದ್ದೇನೆ. ಮೂಲ್ಕಿಗೆ ನಾಡಕಚೇರಿ ಹಾಗೂ ವಿಶೇಷ ತಹಸೀಲ್ದಾರ್ ನೇಮಕ ಮೂಲಕ ತಾಂತ್ರಿಕವಾಗಿ ಚಾಲನೆ ಸಿಕ್ಕಿತ್ತು. ಇದು ತಾಲೂಕು ಘೋಷಣೆಗೆ ಪೂರಕವಾಗಿತ್ತು. ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಎರಡು ತಾಲೂಕು ಸಿಕ್ಕಿರುವುದು ರಾಜ್ಯದಲ್ಲಿಯೇ ವಿಶೇಷ. ಮೈತ್ರಿ ಸರ್ಕಾರಕ್ಕೆ ಇಲ್ಲಿನ ಸ್ಥಿತಿಗತಿಯನ್ನು ತಿಳಿ ಹೇಳಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್, ಹಿಂದಿನ ಶಕ್ತಿಯಾಗಿ ಅಮರನಾಥ ಶೆಟ್ಟಿಯವರ ಪ್ರಯತ್ನ, ಹರಿಕೃಷ್ಣ ಪುನೂರೂರು ನೇತೃತ್ವದ ಹೋರಾಟವೂ ಕಾರಣ. ಇದು ಪ್ರತಿಯೊಬ್ಬ ಮೂಲ್ಕಿ ನಾಗರಿಕನ ಕನಸು ನನಸಾಗಿದೆ.
ಕೆ.ಅಭಯಚಂದ್ರ ಜೈನ್ ಮಾಜಿ ಸಚಿವ

ಮೂಲ್ಕಿ ತಾಲೂಕು ಘೋಷಣೆಯಾಗಿರುವುದು ಸಂತಸ ತಂದಿದೆ. ಈಗಾಗಲೇ ಘೋಷಣೆ ಮಾಡಿದ ಮೂಡುಬಿದಿರೆ ಹಾಗೂ ಮೂಲ್ಕಿಗೆ ಪೂರ್ಣ ಪ್ರಮಾಣದ ಸವಲತ್ತು ನೀಡಲು ಮುಖ್ಯಮಂತ್ರಿಗಳಿಗೆ ವಿಶೇಷ ಮನವಿಯನ್ನು ಈ ಮೊದಲೇ ಸಲ್ಲಿಸಿದ್ದೇನೆ. ಎರಡೂ ಕಡೆಯ ಜನತೆಯ ನಿರೀಕ್ಷೆ ಹಾಗೂ ಹೋರಾಟಗಾರರ ಪ್ರಯತ್ನಕ್ಕೆ ಸರ್ಕಾರ ಸ್ಪಂದಿಸುತ್ತಿರುವುದು ಸ್ವಾಗತಾರ್ಹ.
ಉಮಾನಾಥ ಕೋಟ್ಯಾನ್ ಶಾಸಕ

ನಾನು ಶಾಸಕ ನಾಗಿದ್ದ ಸಂದರ್ಭ ಮೂಲ್ಕಿ ತಾಲೂಕು ಆಗಿ ಪರಿವರ್ತಿಸಲು ಅಗತ್ಯವಿದ್ದ ನಿರೀಕ್ಷಣಾ ಬಂಗಲೆ, ಕಂದಾಯ ಕಚೇರಿಗಳು ಬರುವಂತೆ ಮಾಡಿದ್ದೇನೆ. ತಾಲೂಕು ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ವರದಿಗಳನ್ನು ಅಂದಿನ ಸರ್ಕಾರ ಹಾಗೂ ಈಗಿನ ಸರ್ಕಾರಕ್ಕೆ ನೀಡಿದ್ದೇನೆ. ಮೂಲ್ಕಿಯ ಜನತೆಯ ಆಶೋತ್ತರಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಿರುವುದು ಸಂತಸ ತಂದಿದೆ.
ಕೆ.ಅಮರನಾಥ ಶೆಟ್ಟಿ ಮಾಜಿ ಸಚಿವ