ಕೃಷಿ ಕಾರ್ಯ ಚುರುಕು

ಭಾಗ್ಯವಾನ ಸನಿಲ್ ಮೂಲ್ಕಿ
ರಾವೋ ರಾವು ಕೊರುಂಗು… ರಾವರೆನೇ ಕೇನುಜಲೆ… ಎನ್ನುವ ಮಹಿಳೆಯರ ಹಾಡು ಮೂಲ್ಕಿ ಪರಿಸರದ ಗದ್ದೆಗಳಲ್ಲಿ ಪ್ರಾರಂಭಗೊಂಡಿದೆ. ಮುಂಗಾರು ಮಳೆ ಕೈಕೊಟ್ಟರೂ ಬಂದ ಮಳೆ ಹಾಗೂ ಬಾವಿಯಲ್ಲಿದ್ದ ನೀರು ಸೇರಿಸಿ ಕೃಷಿಕರು ಕೃಷಿ ಕಾರ್ಯ ಶುರು ಮಾಡಿದ್ದಾರೆ. ತಗ್ಗು ಸಾಲಿನ ಗದ್ದೆಗಳಿಗೆ ಈಗಾಗಲೇ ನೀರಾಶ್ರಯ ಲಭ್ಯವಾಗಿದ್ದು ಎತ್ತರ ಪ್ರದೇಶದ ಗದ್ದೆಗಳಲ್ಲಿ ಕೃಷಿ ಕಾರ್ಯ ವಿಳಂಬವಾಗಿದೆ.

ನಾಟಿ ಕಾರ್ಯ: ಮಳೆ ವಿಳಂಬವಾದ ಕಾರಣ ರೈತರಿಗೆ ನೇಜಿ ಸಮಸ್ಯೆ ಎದುರಾಗಿದೆ. ಪ್ರಥಮ ಮಳೆಗೆ ನೀರಾದಾಗ ಗದ್ದೆ ಹುಡಿ ಮಾಡಿ ಭತ್ತ ಬಿತ್ತಿ ನೇಜಿ ಬೆಳೆದ ಬಳಿಕ ನಾಟಿ ಕಾರ್ಯ ನಡೆಯಬೇಕಾಗಿದೆ. ಆದರೆ ಮಾನವ ಸಂಪನ್ಮೂಲವಿದ್ದರೂ ನೇಜಿ ಇಲ್ಲದೆ ರೈತರು ಸಮಸ್ಯೆ ಎದುರಿಸುವಂತಾಗಿದೆ.

ಚಾಪೆ ನೇಜಿ: ಸದ್ಯ ನೇಜಿ ನೆಡುವ ಯಂತ್ರಗಳೂ ಆಗಮಿಸಿದ್ದು ಸುಮಾರು 20 ಜನ ದಿನವಿಡೀ ಮಾಡುವ ಕಾರ್ಯವನ್ನು ಕೆಲವು ಗಂಟೆಗಳಲ್ಲಿ ಒಂದೇ ಯಂತ್ರ ಮುಗಿಸುತ್ತದೆ. ಇದಕ್ಕೆ ಮನೆಯ ಸಿಮೆಂಟ್ ಅಂಗಳದಲ್ಲೇ ಮಣ್ಣಿನ ಹುಡಿ ಗೊಬ್ಬರ ಹುಡಿ ಹಾಗೂ ಮರದ ಹುಡಿ ಸೇರಿಸಿ ಅದನ್ನು ಬಿಡಿಸಿ ಅದರಲ್ಲಿ ಬತ್ತ ಬಿತ್ತಿ ಚಾಪೆ ನೇಜಿ ತಯಾರಿಸಲಾಗುತ್ತದೆ ಇದಕ್ಕೆ ಅನುಭವಿಗಳ ಸಹಾಯ ಅಗತ್ಯ.

ಕಾಂಟ್ರಾಕ್ಟ್ ವ್ಯವಸ್ಥೆ
ಸದ್ಯ ಕೃಷಿಕರಿಗೆ ಹೊಸ ಕಾಂಟ್ರಾಕ್ಟ್ ವ್ಯವಸ್ಥೆ ಬಂದಿದೆ. ಗದ್ದೆ ಎಷ್ಟು ಎಕರೆ ಇದೆ ಎಂದು ತಿಳಿದು ಗುತ್ತಿಗೆದಾರರಿಗೆ ಹೇಳಿದರೆ ಸಾಕು ಅವರು ನೇಜಿ ಹಾಗೂ ನೆಡಲು ಜನರನ್ನು ಕರೆದುಕೊಂಡು ಬಂದು ನೇಜಿ ನೆಟ್ಟು ಒಂದು ಅಥವಾ ಎರಡು ದಿನದೊಳಗೆ ಸಂಪೂರ್ಣ ನಾಟಿ ಮುಗಿಸಿ ಹೋಗುತ್ತಾರೆ. ಅವರು ಬರುವ ದಿನದ ಮುಂಚಿತ ಉಳುಮೆ ಮಾಡಿದರೆ ಆಯಿತು. ಬಳಿಕ ಎಕರೆಗೆ 5,500 ರೂ. ನೀಡಿದರೆ ಆಯಿತು. ಈ ವ್ಯವಸ್ಥೆಯಡಿ ರೈತರಿಗೆ ಹೆಚ್ಚಿನ ಶ್ರಮ ಬಾರದು, ಹಣ ಮಾತ್ರ ಮೊದಲೇ ನೀಡಬೇಕು. ಒಟ್ಟಾರೆ ಮುಂಗಾರು ಹಿನ್ನಡೆಯ ನಡುವೆಯೂ ಕೃಷಿ ಚಟುವಟಿಕೆಗಳು ಚಿಗುರಿಕೊಂಡಿದ್ದು ರೈತರು ಮಳೆ ಇಲ್ಲದೆ ಹೈರಾಣಾಗಿದ್ದಾರೆ.

ಕೃಷಿ ಕಾರ್ಯಕ್ಕೆ ಜನರ ಕೊರತೆಯೊಂದಿಗೆ ಸದ್ಯ ಮಳೆ ಬಾರದೆ ಸಮಸ್ಯೆಯಾಗಿದೆ. ಯಂತ್ರೋಪಕರಣಗಳಿಂದ ನೇಜಿ ನೆಡುವ ಕಾರ್ಯ ಹಲವು ಸಮಸ್ಯೆಗಳಿಂದ ರೈತರನ್ನು ರಕ್ಷಿಸಿದೆ.
ಸುಂದರ ಪೂಜಾರಿ, ಕೃಷಿಕ ಮೂಲ್ಕಿ

ಕೃಷಿಯಲ್ಲಿ ಆಳುಗಳ ಕೊರತೆ ನೀಗಿಸಲು ಯಾಂತ್ರೀಕರಣ ವ್ಯವಸ್ಥೆ ವರದಾಯಕ. ಹಿರಿಯಡ್ಕದ ಸುರೇಶ್ ನಾಯ್ಕ ಅವರು ನೇಜಿಯೊಂದಿಗೆ ಬಂದು ನೆಡುವ ವ್ಯವಸ್ಥೆ ಮಾಡುತ್ತಿದ್ದಾರೆ. ಇವರಲ್ಲಿ ಯಾಂತ್ರಿಕ ಹಾಗೂ ಕೈಯಿಂದ ನೆಡುವ ವ್ಯವಸ್ಥೆ ಇದೆೆ.
ಜಯಕರ ಹೆಜ್ಮಾಡಿ, ಪ್ರಗತಿಪರ ಕೃಷಿಕ ಮೂಲ್ಕಿ

Leave a Reply

Your email address will not be published. Required fields are marked *