ಬಪ್ಪನಾಡು ದೇವಿ ಸಾನ್ನಿಧ್ಯದಲ್ಲಿ ಭಕ್ತಸಾಗರ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವರ ಶಯನೋತ್ಸವಕ್ಕಾಗಿ ಈ ಬಾರಿ ಭಕ್ತರಿಂದ 1.5ಲಕ್ಷಕ್ಕೂ ಅಧಿಕ ಮಲ್ಲಿಗೆ ಚೆಂಡು (ಸುಮಾರು 38 ಸಾವಿರ ಅಟ್ಟೆ) ಸಮರ್ಪಣೆಯಾಗಿದ್ದು, ಇದು ಕ್ಷೇತ್ರದ ದಾಖಲೆಯಾಗಿದೆ.

ಮಂಗಳವಾರ ತಡರಾತ್ರಿಯವರೆಗೆ ಭಕ್ತರು ಸರತಿ ಸಾಲಿನಲ್ಲಿ ಮಲ್ಲಿಗೆ ಸಮರ್ಪಿಸಲು ಕಾಯುತ್ತಿರುವುದು ಕಂಡುಬಂತು. ಮುಂಜಾನೆ ಕ್ಷೇತ್ರದಲ್ಲಿ ಕವಾಟೋದ್ಘಾಟನೆ ನಡೆದ ಬಳಿಕ ಪ್ರಸಾದ ರೂಪದಲ್ಲಿ ಮಲ್ಲಿಗೆ ಪಡೆಯಲು ಬಂದ ಭಕ್ತರ ಸಾಲು ದೇಗುಲಕ್ಕೆ ಹಲವು ಸುತ್ತು ಬಂದಿತ್ತು. ಜ್ಞಾನ ಮಂದಿರದಲ್ಲಿ ಮಲ್ಲಿಗೆ ಹೂ ಚೆಂಡು ವಿತರಣೆ ನಡೆಯಿತು.

ಈ ಬಾರಿ ಮುಂಜಾನೆ ಬರುವ ಭಕ್ತರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಇದು ಉಪವಾಸದಲ್ಲಿ ದೇವರ ದರ್ಶನ ಪಡೆದು ಉದ್ದ ಸರತಿ ಸಾಲಿನಲ್ಲಿ ಮಲ್ಲಿಗೆ ಸ್ವೀಕರಿಸಿ ದಣಿದ ಭಕ್ತರಿಗೆ ಅನುಕೂಲವಾಗಿದೆ ಎಂದು ಭಕ್ತರು ತಿಳಿಸಿದ್ದಾರೆ.

ಮಧ್ಯಾಹ್ನ ವಿಶೇಷ ಪೂಜೆ, ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಕ್ಷೇತ್ರದಲ್ಲಿ ಓಕುಳಿ ಮಡಸ್ತನ ಬಲಿ, ವಿಶ್ರಾಂತಿ ಪೂಜೆ, ಪೇಟೆ ಸವಾರಿ, ಸಸಿಹಿತ್ಲು ಭಗವತಿ ಮತ್ತು ಪರಿವಾರ ಶಕ್ತಿಗಳ ಆಗಮನದ ಬಳಿಕ ರಥೋತ್ಸವ ವೈಭವದಿಂದ ನೆರವೇರಿತು.