ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡ ಮಗನ ವಿರುದ್ಧ ಮುಲಾಯಂ ಸಿಂಗ್‌ ಕಿಡಿ

ಲಖನೌ: ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದಕ್ಕೆ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ತಮ್ಮ ಪುತ್ರ ಮತ್ತು ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ವಿರುದ್ಧ ಕಿಡಿಕಾರಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಎರಡು ಪಕ್ಷಗಳ ನಡುವಿನ ಸೀಟು ಹಂಚಿಕೆ ಕುರಿತಂತೆಯೂ ಪ್ರಶ್ನಿಸಿದ್ದಾರೆ.

ಮೂರು ಭಾರಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಅವರು, ಮಾಯಾವತಿ ಅವರ ಪಕ್ಷಕ್ಕೆ ಅರ್ಥದಷ್ಟು ಸೀಟು ಹಂಚಿಕೆ ಮಾಡಿರುವ ಕುರಿತು ಅಖಿಲೇಶ್‌ ಯಾದವ್‌ ಅವರನ್ನು ಪ್ರಶ್ನಿಸಿದ್ದಾರೆ.

ಯಾವ ಆಧಾರದ ಮೇಲೆ ಅರ್ಧದಷ್ಟು ಸೀಟುಗಳನ್ನು ಬಿಟ್ಟುಕೊಡಲಾಗಿದೆ ಎಂಬುದನ್ನು ತಿಳಿಸು. ಈಗ ನಮಗೆ ಕೇವಲ ಅರ್ಧ ಸೀಟುಗಳು ಉಳಿದಿವೆ. ನಾವು ಬಲಿಷ್ಠವಾಗಿದ್ದೇವೆ. ಆದರೆ ನಮ್ಮವರೇ ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ. ನಾವು ಪಕ್ಷವನ್ನು ಪ್ರಬಲವಾಗಿ ಕಟ್ಟಿದ್ದರಿಂದಲೇ ನಾನು ಮುಖ್ಯಮಂತ್ರಿ ಮತ್ತು ರಕ್ಷಣಾ ಸಚಿವನಾಗಿದ್ದೆ. ಪಕ್ಷವು ನನ್ನ ಅವಧಿಯಲ್ಲಿ ಉತ್ತಮವಾದ ದಿನಗಳನ್ನು ಕಂಡಿತ್ತು ಎಂದು ಹೇಳಿದ್ದಾರೆ.

ಎಸ್‌ಪಿ ಮುಖ್ಯ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ಚುನಾವಣೆ ಸಿದ್ಧತೆ ಚೆನ್ನಾಗಿದೆ. ಪಕ್ಷದ ಕಾರ್ಯಕರ್ತರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಚುನಾವಣೆ ಅಭ್ಯರ್ಥಿಗಳನ್ನು ಶೀಘ್ರದಲ್ಲೇ ಘೋಷಿಸಬೇಕು. ಹೀಗಾಗಿ ನಾವು ತಳಮಟ್ಟದಿಂದಲೂ ಕೆಲಸವನ್ನು ಪ್ರಾರಂಭಿಸಬಹುದು ಎಂದು ಸಲಹೆ ನೀಡಿದರು.

ಲೋಕಸಭಾ ಚುನಾವಣೆಗೆ ಸ್ವರ್ಧಿಸಲು ಬಯಸುವವರು ಟಿಕೆಟ್ ಬಯಸಿ ನನ್ನ ಬಳಿ ಬನ್ನಿ. ಒಂದು ವೇಳೆ ಅಖಿಲೇಶ್ ಟಿಕೆಟ್‌ ನೀಡಿದರೆ, ಅದನ್ನು ನಾನು ಬದಲಾಯಿಸಬಲ್ಲೆ. ಎಷ್ಟು ಜನ ನನಗೆ ಅರ್ಜಿಗಳನ್ನು ಕೊಟ್ಟಿದ್ದೀರಿ? ಯಾರು ಕೊಟ್ಟಿಲ್ಲ. ಹೀಗಿದ್ದಮೇಲೆ ನೀವು ಹೇಗೆ ಟಿಕೆಟ್‌ ಪಡೆಯುತ್ತೀರಿ. ಅಖಿಲೇಶ್‌ ಟಿಕೆಟ್‌ ನೀಡಬಹುದು, ಆದರೆ ಅದನ್ನು ನಾನು ಬದಲಾಯಿಸಬಹುದು ಎಂದು ಹೇಳಿದರು. (ಏಜೆನ್ಸೀಸ್)