ಮತದಾನದ ಬಗ್ಗೆ ಯುವಕರಲ್ಲಿ ಜಾಗೃತಿ

ಮೊಳಕಾಲ್ಮೂರು: ಇಂದಿನ ಮಕ್ಕಳು ಭವಿಷ್ಯದ ನಾಯಕರು. ಅವರಿಗೆ ಶಿಕ್ಷಣದೊಂದಿಗೆ ನ್ಯಾಯ ಸಮ್ಮತ ಮತದಾನದ ಮಹತ್ವ ತಿಳಿಸುವುದು ಶಿಕ್ಷಕರ ಕರ್ತವ್ಯ ಎಂದು ತಹಸೀಲ್ದಾರ್ ಎಸ್. ಅನಿತಾಲಕ್ಷ್ಮೀ ತಿಳಿಸಿದರು.

ಇಲ್ಲಿನ ಬಿಆರ್‌ಸಿ ಕೇಂದ್ರದಲ್ಲಿ ಮತದಾರರ ಸಾಕ್ಷರತಾ ಕ್ಲಬ್ ಕುರಿತು ಉಪನ್ಯಾಸಕರು ಹಾಗೂ ಪ್ರೌಢ ಶಾಲೆಗಳ ಶಿಕ್ಷಕರಿಗೆ ಬುಧವಾರ ಆಯೋಜಿಸಿದ್ದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.

ಭಾರತದ ಸಂವಿಧಾನದ ಆಶಯದಂತೆ ಪ್ರಜಾತಂತ್ರ ವ್ಯವಸ್ಥೆಯಡಿ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕು ಪ್ರತಿಯೊಬ್ಬ ಮತದಾರರಿಗೆ ನೀಡಲಾಗಿದೆ. ಮತದಾನದ ಮಹತ್ವ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಆಮಿಷಗಳಿಗೆ ಬಲಿಯಾಗಿ ಅಮೂಲ್ಯ ಮತ ಮಾರಿಕೊಳ್ಳಬಾರದು. ಕ್ರಿಯಾಶೀಲ, ಉತ್ತಮ ಗುಣ ನಡತೆ, ಸಮಾಜಮುಖಿ ಚಿಂತನೆ ವ್ಯಕ್ತಿ ಆಯ್ಕೆ ಮಾಡುವಂತೆ ವಿದ್ಯಾರ್ಥಿಗಳು ಪಾಲಕರಿಗೆ ಪ್ರೇರಣೆ ನೀಡುವಂತೆ ಸಜ್ಜಗೊಳಿಸಬೇಕು ಎಂದು ತಿಳಿಸಿದರು.

ಬಿಇಒ ಎನ್. ಸೋಮಶೇಖರ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಬಿ. ರಾಮಚಂದ್ರಯ್ಯ ಇತರರಿದ್ದರು.