ಮುಳಬಾಗಿಲು: ಸಹಕಾರಿ ಕ್ಷೇತ್ರ ಪಾವಿತ್ರ್ಯತೆ ಕಳೆದುಕೊಳ್ಳುತ್ತಿದ್ದು ಭ್ರಷ್ಟಾಚಾರಕ್ಕೆ ಆಸ್ಪದವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲೆ ಎಚ್ಚೆತ್ತು ಹಿರಿಯ ಧುರೀಣರು ಹಾಕಿಕೊಟ್ಟಿರುವ ಮಾರ್ಗಸೂಚಿಗಳಂತೆ ನಡೆದುಕೊಳ್ಳಬೇಕು ಎಂದು ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ಹೇಳಿದರು.
ನಗರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಇತ್ತೀಚೆಗೆ ರಾಜ್ಯ ಸಹಕಾರಿ ಮಹಾಮಂಡಳಿ ಮತ್ತು ಕೋಲಾರ ಜಿಲ್ಲಾ ಸಹಕಾರ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ಡೇರಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಸಹಕಾರ ಕಾಯ್ದೆ ಇತ್ತೀಚಿನ ತಿದ್ದುಪಡಿ ಮತ್ತು ಸಹಕಾರ ಸಂಘಗಳ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
1959ರಲ್ಲಿ ಆಗಿನ ಸನ್ನಿವೇಶಕ್ಕೆ ಅನುಗುಣವಾಗಿ ಸಹಕಾರ ಕಾಯ್ದೆ ತಿದ್ದುಪಡಿಯಾಗಿದ್ದು, ಇತ್ತೀಚೆಗೆ ಈಗಿನ ಬೆಳವಣಿಗೆಗಳಿಗೆ ಅನುಗುಣವಾಗಿ ಹೊಸ ಕಾನೂನು ಅಳವಡಿಕೆ ಮಾಡಿಕೊಳ್ಳಲಾಗಿದೆ. ಈ ಎಲ್ಲ ಅಂಶಗಳ ತಿಳಿವಳಿಕೆ ಬಗ್ಗೆ ವಿಶೇಷ ಗಮನಹರಿಸಬೇಕು ಎಂದರು.
ರೈತರಿಗೆ ಹಾಲು ಉತ್ಪನ್ನದಿಂದ 25 ಕೋಟಿ ರೂ.ಗಳನ್ನು ಕೋಚಿಮುಲ್ ಮೂಲಕ ನೀಡಲಾಗುತ್ತಿದೆ. ಇದಲ್ಲದೆ ವಿವಿಧ ರೀತಿಯ ರಿಯಾಯಿತಿ ಸೌಲಭ್ಯಗಳ ರೂಪದಲ್ಲಿ 58 ಕೋಟಿ ರೂ. ಸಿಗುತ್ತಿದ್ದು, ಖಾಸಗಿ ಡೇರಿಗಳು ಸಹಕಾರಿ ಡೇರಿಗಳಿಗೆ ಪೈಪೋಟಿಗೆ ಇಳಿದಿವೆ. ಇದಕ್ಕೆ ರೈತರು ಅವಕಾಶ ನೀಡದೆ ಸಹಕಾರಿ ಕ್ಷೇತ್ರ ಉಳಿಸಿ ಬೆಳೆಸಬೇಕು ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಉಗಿನಿ ಆರ್.ನಾರಾಯಣಗೌಡ ಮಾತನಾಡಿ, ಡೇರಿಗಳ ಲೆಕ್ಕಪುಸ್ತಕ ನಿರ್ವಹಣೆ ಕಾರ್ಯದರ್ಶಿಗಳು ಪ್ರತಿದಿನ ದಿನವಹಿ ನಮೂದು ಮಾಡುವುದು, ಪ್ರತಿವರ್ಷ ಲೆಕ್ಕಪರಿಶೋಧನೆ ಮಾಡಿಸುವ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಡೇರಿಗಳ ಅಭಿವೃದ್ಧಿಗೆ ಕಾರಣರಾಗಬೇಕು ಎಂದರು.
1959ರ ಸಹಕಾರಿ ಕಾಯ್ದೆಯ ಇತ್ತೀಚಿನ ತಿದ್ದುಪಡಿ ಕುರಿತು ಸಹಕಾರಿ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಎಸ್.ವಿ.ಬಸವರಾಜಪ್ಪ ಉಪನ್ಯಾಸ ನೀಡಿದರು.
ಕೋಚಿಮುಲ್ ಶಿಬಿರ ಕಚೇರಿ ಉಪವ್ಯವಸ್ಥಾಪಕ ಶ್ರೀಧರ್‌ಮೂರ್ತಿ, ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಕೆ.ಎಂ.ಭಾರತಿ, ಡೇರಿ ವಿಸ್ತೀರ್ಣಾಧಿಕಾರಿ ಶ್ರೀರಾಮ್, ಡೇರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಚಿನ್ನಹಳ್ಳಿ ಗೋಪಾಲ್, ಕವತನಹಳ್ಳಿ ಡೇರಿ ಅಧ್ಯಕ್ಷ ಮುನಿಸ್ವಾಮಿಗೌಡ ಇತರರು ಇದ್ದರು.