More

    ಆಚಾರ್ಯ ಶ್ರೀ ಶಂಕರ ಚಿತ್ರೀಕರಣಕ್ಕೆ ಮುಹೂರ್ತ

    ಶೃಂಗೇರಿ: ಬೆಂಗಳೂರಿನ ‘ಯಮ್ಮನೂರು ಕ್ರಿಯೇಷನ್ಸ್ ಪ್ರೖೆವೇಟ್ ಲಿಮಿಟೆಡ್’ನ ‘ಆಚಾರ್ಯ ಶ್ರೀ ಶಂಕರ’ ಚಿತ್ರೀಕರಣ ಮುಹೂರ್ತ ಭಾನುವಾರ ತುಂಗಾ ನದಿ ತೀರದಲ್ಲಿ ನೆರವೇರಿತು.

    ಚಿತ್ರೀಕರಣದ ಆರಂಭ ಮುಹೂರ್ತದ ಫಲಕಕ್ಕೆ ಶ್ರೀಮಠದ ಆಡಳಿತಾಧಿಕಾರಿ ಡಾ.ವಿ.ಆರ್.ಗೌರೀಶಂಕರ್ ಚಾಲನೆ ನೀಡಿದರು. ಚಲನಚಿತ್ರಕ್ಕೆ ಸಂಸ್ಕೃತ ಸಂಭಾಷಣೆ ಬರೆದಿರುವ ಬೆಂಗಳೂರಿನ ಸಿದ್ಧಾರೂಢ ಮಿಷನ್ ಆಶ್ರಮದ ಡಾ. ಆರೂಢಾ ಭಾರತಿ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಶ್ರೀ ಶಂಕರಾಚಾರ್ಯರು ಪ್ರಖರ ಜ್ಞಾನಸೂರ್ಯ. ಚಿಕ್ಕ ವಯಸ್ಸಿನಲ್ಲೇ ನಾಲ್ಕು ವೇದಗಳ ಅಧ್ಯಯನ ಮಾಡಿ, ಉಪನಿಷತ್ತಿಗೆ ಭಾಷ್ಯ ಬರೆದ ಪ್ರಜ್ಞಾನಿ. 32 ವರ್ಷಗಳ ಜೀವಿತಾವಧಿಯಲ್ಲಿ ಅವರು ಸನಾತನ ಧರ್ಮದ ಏಳಿಗೆಗಾಗಿ ಅವಿರತ ದುಡಿದ ಗುರು. ನಾಲ್ಕು ಮಠಗಳ ಮೂಲಕ ಅವರು ನೀಡಿರುವ ಆದ್ವೈತ ತತ್ವ, ಅವರ ಸರಳ ಸಂದೇಶ ಜನಸಾಮಾನ್ಯರನ್ನೂ ಮುಟ್ಟಬೇಕು ಎಂದರು.

    ನಿರ್ದೇಶಕ ರಾಜಾ ರವಿಶಂಕರ್ ಮಾತನಾಡಿ, ಈ ಚಿತ್ರಕ್ಕೆ ನಮಗೆ ಪ್ರೇರಣೆ ನಿರ್ವಪಕರಾದ ವೈ.ಎನ್.ಕೆ. ಶರ್ಮ. ಅವರ ಗುರುಗಳಾದ ಜಿ.ವಿ.ಅಯ್ಯರ್ ಶ್ರೀ ಶಂಕರರ ಕುರಿತು 1985ರಲ್ಲಿ ಚಲನಚಿತ್ರ ಮಾಡಿದ್ದರು. ಈಗ ಚಿತ್ರೀಕರಣವು ಶೃಂಗೇರಿ, ಬೈಂದೂರು, ತೀರ್ಥಹಳ್ಳಿ, ಕುಂದಾಪುರ, ಬೆಂಗಳೂರು, ಬದರಿ, ಕೇದಾರನಾಥ ಮುಂತಾದ ಕಡೆ ನಡೆಯಲಿದೆ. ತೆಲುಗು, ಸಂಸ್ಕೃತ, ಕನ್ನಡ ಭಾಷೆಗಳಲ್ಲಿ ಚಿತ್ರ ಹೊರ ಬರಲಿದೆ ಎಂದು ತಿಳಿಸಿದರು. ಪ್ರಥಮ ವಿನಯಾಪ್ರಸಾದ್, ಓಂ ಸಾಯಿಪ್ರಕಾಶ್, ರಮೇಶ್ ಭಟ್, ಮಾಗು ಸುರೇಶ್, ರಾಮಪ್ರಕಾಶ್, ರಾಮಕೃಷ್ಣ, ಮೈಕೋ ಮಂಜು ಮುಂತಾದವರು ತಾರಾಗಣದಲ್ಲಿದ್ದಾರೆ. ವಿ.ಮನೋಹರ್ ಸಂಗೀತ, ಸಿ.ನಾರಾಯಣ ಛಾಯಾಗ್ರಹಣ, ಎನ್.ಕುಮಾರ್ ಕಲೆ ಈ ಚಿತ್ರಕ್ಕಿದೆ.

    ಶೃಂಗೇರಿ ಮಠದ ಯತಿವರ್ಯರ ಅನುಗ್ರಹದಿಂದ ದೊಡ್ಡ ಬಜೆಟ್​ನಲ್ಲಿ ಚಿತ್ರ ತಯಾರಿಸಲು ಹೊರಟಿದ್ದೇವೆ. 278 ಪ್ರಮುಖ ಪಾತ್ರಧಾರಿಗಳು ಇದ್ದಾರೆ. ಕನ್ಯಾಕುಮಾರಿ, ಕಾಶ್ಮೀರ, ನೇಪಾಳದ ಪಶುಪತಿ ದೇವಸ್ಥಾನಗಳಲ್ಲಿ ಚಿತ್ರೀಕರಣ ಮಾಡಬೇಕಿದೆ. ಯೋಗದಂತೆಯೇ ಶ್ರೀ ಶಂಕರರ ಅದ್ವೈತ ಸಿದ್ಧಾಂತಕ್ಕೆ ವಿಶ್ವಸಂಸ್ಥೆಯ ಮನ್ನಣೆ ದೊರೆಯಬೇಕು. ಅವರ ತತ್ವ ಆಡುಭಾಷೆಯಲ್ಲಿ ಜನಸಾಮಾನ್ಯರನ್ನು ತಲುಪಿ ವಿಶ್ವವ್ಯಾಪಿಯಾಗಬೇಕು.

    | ವೈ.ಎನ್.ಕೆ.ಶರ್ಮ ಚಿತ್ರ ನಿರ್ವಪಕ

    ಮಮತೆ, ವಾತ್ಸಲ್ಯದ ಪ್ರತಿರೂಪವಾದ ಶ್ರೀ ಶಂಕರರ ತಾಯಿ ಆರ್ಯಾಂಬೆಯ ಪಾತ್ರ ವೈಶಿಷ್ಟ್ಯೂರ್ಣವಾದುದು. ಅವರು ಜಗತ್ತಿಗೆ ಅಪರೂಪದ ಸನ್ಯಾಸಿಯನ್ನು ಕೊಡುಗೆ ನೀಡಿದ ಮಹಾತಾಯಿ. ಜಿ.ವಿ.ಅಯ್ಯರ್ ಚಿತ್ರದಲ್ಲಿ ಎಲ್.ವಿ.ಶಾರದಾ ಆರ್ಯಾಂಬೆ ಪಾತ್ರ ಮಾಡಿದ್ದಾರೆ. ಆ ಚಿತ್ರಕ್ಕೆ ನನ್ನ ತಂದೆ ವಿ.ಆರ್.ಕೆ.ಪ್ರಸಾದ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಆರ್ಯಾಂಬೆ ಪಾತ್ರ ಸಿಕ್ಕಿದ್ದು ಪೂರ್ವಜನ್ಮದ ಪುಣ್ಯ.

    | ಪ್ರಥಮ ವಿನಯಾಪ್ರಸಾದ್

    ಶ್ರೀ ಶಂಕರರ ಪಾತ್ರ ಮಾಡುವ ದೊಡ್ಡ ಸವಾಲು ನನ್ನ ಮುಂದಿದೆ. ಪಾತ್ರಕ್ಕೆ ಜೀವ ತುಂಬುವ ಶಕ್ತಿ ನನಗೆ ಶ್ರೀ ಶಾರದೆ ಹಾಗೂ ಯತಿವರ್ಯರ ಅನುಗ್ರಹದಿಂದ ಮಾತ್ರ ಸಾಧ್ಯ.

    | ರವೀಂದ್ರ ಭಾಗವತ್ ಯಲ್ಲಾಪುರ ಪ್ರಮುಖ ಪಾತ್ರಧಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts