Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ವಸ್ತ್ರಸಂಹಿತೆ ಸಂಕಟ, ತಳಮಳ…

Thursday, 18.01.2018, 3:05 AM       No Comments

ನಮ್ಮ ಮನೆಯಲ್ಲಾಗಲಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮೋಟಾರು ಗಾಡಿಗಳಿರಲಿಲ್ಲ. ಎತ್ತಿನ ಗಾಡಿಗಳು ಇದ್ದವು. ಶಿರಸಿ, ಸಿದ್ದಾಪುರ, ಸಾಗರಗಳಿಗೆ ಅಡಕೆ ಒಯ್ಯಲು ಖಾಸಗಿ ವ್ಯಾನುಗಳು ಬರುತ್ತಿದ್ದವು. ಬರುವಾಗ ಕೃಷಿಕರಿಗೆ ಬೇಕಾದ ಔಷಧ, ಗೊಬ್ಬರ, ದನಕರುಗಳಿಗೆ ಹಿಂಡಿ, ಹತ್ತಿಕಾಳು, ಚಹಾಪುಡಿ ಹೀಗೆ ಪೇಟೆಯ ವಸ್ತುಗಳನ್ನು ತುಂಬಿಸಿಕೊಂಡು ಬರುತ್ತಿದ್ದರು.

ಕೆಲ ವರ್ಷಗಳ ಹಿಂದೆ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಯೂನಿಫಾರ್ಮ್ ಅಳವಡಿಸುವ ಸಂದರ್ಭದಲ್ಲಿ ಅಧ್ಯಾಪಕರ ಜೊತೆ ಪ್ರಾಂಶುಪಾಲರು ಅನೇಕ ಸಭೆಗಳನ್ನು ನಡೆಸಿದರು. ಆಗ ವಿದ್ಯಾರ್ಥಿಗಳು ಬಣ್ಣ-ಬಣ್ಣದ ವಿವಿಧ ಆಕಾರ ವಿನ್ಯಾಸಗಳ ಉಡುಗೆಯಲ್ಲಿ ಮೆರೆಯುತ್ತಿದ್ದರು. ಕಾಸರಗೋಡು ಕೇರಳ ಪ್ರಾಂತ್ಯದ ಕೆಲ ವಿದ್ಯಾರ್ಥಿಗಳು ಬಿಳಿಯ ಲುಂಗಿ ಸಹ ಉಟ್ಟು ಬರುತ್ತಿದ್ದರು. ಕ್ರಮೇಣ ‘ಶಿಕ್ಷಕ ರಕ್ಷಕ’ ಸಂಘದ ಎಲ್ಲ ಪಿಟಿಎ ಸಭೆಗಳಲ್ಲಿ ಪಾಲಕರು-‘ನಮ್ಮ ಮಕ್ಕಳಿಗೆ ಸಹ ಯುನಿಫಾಮ್ರ್ ಇದ್ದರೆ ಒಳ್ಳೆಯದು’ ಎಂಬ ಒತ್ತಡ ಹೇರತೊಡಗಿದರು. ಅಂತೂ ನಮ್ಮ ಕಾಲೇಜಿಗೂ ಯೂನಿಫಾರ್ಮ್ ಬಂತು. ಬಣ್ಣ ಬಣ್ಣದ ದಿರಿಸಿನಲ್ಲಿ ಮೆರೆಯ ಬಯಸುವ ಯುವಕ-ಯುವತಿಯರಿಗೆ ಯೂನಿಫಾರ್ಮ್ ತಮ್ಮ ವಸ್ತ್ರಸ್ವಾತಂತ್ರ್ಯ ಕಸಿಯಲು ಬಂದ ದುಷ್ಟ ವ್ಯವಸ್ಥೆಯಂತೆ ಕಾಣುತ್ತಿತ್ತೇನೋ. ಯಾರ ಮುಖದಲ್ಲೂ ಗೆಲುವೇ ಇಲ್ಲ. ಕರುಣಾಜನಕ ಭಾವಭಂಗಿ.

ಆದರೆ ಯೂನಿಫಾರ್ಮ್ ಬಟ್ಟೆಯ ಹೊಳಪು ವಿನ್ಯಾಸಗಳೆಲ್ಲ ಚೆನ್ನಾಗಿದ್ದರಿಂದ ಕೆಲವೇ ದಿನಗಳಲ್ಲಿ ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರಸನ್ನವದನರಾಗಿ ಓಡಾಡತೊಡಗಿದರು. ‘ನೋಡಿ ಈಗ ಡ್ರೆಸ್ಸು ಎಷ್ಟು ಗೆಟಪ್ ಕಾಣ್ತಿದೆ. ಮುಖದಲ್ಲಿ ಸಹ ಕಳೆಬಂದಂತಿದೆ’ ಎಂದೆಲ್ಲ ನಾನು ಕ್ಲಾಸಲ್ಲಿ ಆಗೀಗ ಗಾಳಿ ಹಾಕುತ್ತಿದ್ದೆ. ನಮ್ಮ ಬಾಲ್ಯದ ಬಟ್ಟೆಯ ಕತೆ ಕೇಳಿದರೆ ನೀವೆಲ್ಲ ‘ಅಯ್ಯೋ ಪಾಪ’ ಅಂತೀರಿ. ಈಗಿನ ದಿನಗಳ ಹಾಗೆ ನಮ್ಮದು ಬಾಲಕಸ್ನೇಹಿ ವಸ್ತ್ರಸಂಹಿತೆ ಆಗಿರಲಿಲ್ಲ. ಅಪ್ಪ (ಅಮ್ಮನಿಗೆ ಸ್ವರವಿಲ್ಲ) ಹೇಳಿದ ಹಾಗೆ ಎಲ್ಲವೂ ನಡೆಯುತ್ತಿತ್ತು ಎಂದು ನಮ್ಮೂರ ಕತೆ ಬಿಚ್ಚಿಟ್ಟಿದ್ದೆ.

ಅಡಿಕೆ ಬೆಳೆಗಾರರೇ ಹೆಚ್ಚಿರುವ ಮಲೆನಾಡು ನಮ್ಮದು. ಮನೆಯಲ್ಲಿ ಕನಿಷ್ಠ ಏಳೆಂಟು ಮಕ್ಕಳು ಇರುತ್ತಿದ್ದರು. ಶ್ರೀಮಂತರೇ ಇರಲಿ ಬಡವರೇ ಇರಲಿ ಜೀವನಶೈಲಿ ಮಾತ್ರ ಸರಳವೇ. ಹಳ್ಳಿಗಳ ಮುಖಂಡರು ಬಿಳಿ ಉದ್ದ ತೋಳಿನ ಖಾದಿ ಜುಬ್ಬಾ ಧರಿಸುವುದು. ಕೆಲವೇ ಕೆಲವರು ಅದರ ಮೇಲೊಂದು ಕಪ್ಪು ಜಾಕೆಟ್ ಹಾಕುವುದು ಇತ್ತಾದರೂ ಪಂಚೆ ಮಾತ್ರ ಬಿಳಿಯ ಧೋತರವೇ ಆಗಿರುತ್ತಿತ್ತು. ಹೆಂಗಸರ ಸೀರೆಯಾದರೂ ಅಷ್ಟೇ, ಹದಿನಾರು ಮೊಳದ ಮೊಳಕಾಲ್ಮೂರು ಸೀರೆಗಳು, ಟೋಪನ್ ಸೆರಗು, ಗಾಜಿನ ಬಳೆಗಳು, ಕಾಸಗಲ ಕುಂಕುಮ, ಯಾರ ಕಾಲಲ್ಲೂ ಚಪ್ಪಲಿ ಇಲ್ಲ. ಮನೆಯಾಯಿತು ಕೊಟ್ಟಿಗೆ ತೋಟಗಳಾದವು. ಯಾರೂ ಅತೃಪ್ತಿಯಿಂದ ಗೊಣಗಿದ್ದು ಕೇಳಿರಲಿಲ್ಲ.

ನಮ್ಮ ಮನೆಯಲ್ಲಿ ನಾವೇ ಏಳೆಂಟು ಜನ ಮಕ್ಕಳು. ಅಲ್ಲದೆ ಹೊಳೆಯಾಚೆಯ ಹಳ್ಳಿಗಳಲ್ಲಿ ಶಾಲೆ ಇರದ ಮನೆಗಳು, ಸಂಬಂಧಿಕರ ಅನೇಕರ ಮಕ್ಕಳು ಸಹ ಶಾಲೆಗೆ ಹೋಗಲು ನಮ್ಮಲ್ಲಿ ಉಳಿಯುತ್ತಿದ್ದರು. ಮಕ್ಕಳ ಪಟಾಲಂ ಸಾಕಷ್ಟು ದೊಡ್ಡದಾಗಿ ಇರುತ್ತಿತ್ತು. ತಮಗಿಷ್ಟವಾದ ಆಟ ಆಡಿಕೊಂಡು ಹಣ್ಣುಹಂಪಲು ತಿಂದುಕೊಂಡು ಬೇಣಬೆಟ್ಟ ತಿರುಗಿಕೊಂಡು ಇರುತ್ತಿತ್ತು. ಆದರೆ ಮಕ್ಕಳು ಹಾಗೂ ಹೆಂಗಸರಿಗೆ ಉಡುಪಿನ ವಿಷಯದಲ್ಲಿ ಮಾತ್ರ ಸ್ವಲ್ಪವೂ ಸ್ವಾತಂತ್ರ್ಯ ಇರಲಿಲ್ಲ. ಹಿರಿಯಣ್ಣನ ಶರಟು ತಮ್ಮನಿಗೆ. ಅಕ್ಕನ ಲಂಗ ತಂಗಿಗೆ. ಪಾಟಿ ಚೀಲ ಇನ್ಯಾರದ್ದೋ… ಹೀಗೆ ಹಾಯ್ರಾರ್ಕಿ ಪಾಲನೆ ಮಾಡುತ್ತಿದ್ದ ಕುಟುಂಬಗಳೇ ಹೆಚ್ಚು. ನಮ್ಮ ಮನೆಯೂ ಇಂತಹ ವಸ್ತ್ರಾಭ್ಯಾಸಕ್ಕೆ ಹೊರತಾಗಿರಲಿಲ್ಲ. ವರ್ಷದಲ್ಲಿ ಒಂದೇ ಬಾರಿ ಇಡೀ ಮನೆಗೆ ಬಟ್ಟೆ ತರುವ ವಾರ್ಷಿಕ ಜವಳಿ ಕಾರ್ಯಕ್ರಮ ಇರುತ್ತಿತ್ತು. ಅಡಿಕೆ ಮಾರಿ ಬರುವಾಗ ವ್ಯಾನಿನಲ್ಲಿ ಜವಳಿ ಗಂಟು ಮನೆಗೆ ಬರುತ್ತಿತ್ತು. ಅಮ್ಮನಿಗೆ ನಿತ್ಯ ಉಡುವ ಎರಡು ಸೀರೆ, ಹೋಪಲ್ಲಿಗೆಂದು ಒಂದು ಪತ್ತಲ (ಮನೆಯಲ್ಲಿ ಮಂಗಳಕಾರ್ಯ ಇದ್ದಾಗ ಮಾತ್ರ ರೇಷ್ಮೆಸೀರೆ) ಯಜಮಾನನಿಗೆ ಎರಡು ಪಂಚೆ, ಬರುವ ನೆಂಟರಿಗೆಂದು ಒಂದಿಷ್ಟು ಟವೆಲ್ಲು ಚಾದರಗಳು.

ಮಕ್ಕಳಿಗೆ ನೇರವಾಗಿ ಬಟ್ಟೆಯಿಲ್ಲ. ಸಿದ್ದಾಪುರದ ಜವಳಿ ಗಣೇಶಣ್ಣನ ಅಂಗಡಿಯಲ್ಲಿ ಬಟ್ಟೆ ಖರೀದಿಸಿ ಅಲ್ಲೇ ಎದುರುಗಡೆ ಮಾಲ್ಗುಡಿ ಡೇಸ್​ನಲ್ಲಿ ಇರಬಹುದಾದ ಹೆಗಡೆ ಟೇಲರ್ಸ್​ಲಿ್ಲ ಹೊಲಿಸಲು ಕೊಟ್ಟು ಬರುತ್ತಿದ್ದರು. ಮುಂದಿನ ಬಾರಿ ಅಡಿಕೆ ಮಾರಲು ಪೇಟೆಗೆ ಹೋದಾಗಲೇ ಮಕ್ಕಳ ಜವಳಿ ಗಂಟು ಮನೆಗೆ ಬರುವುದು. ಅಣ್ಣಂದಿರಿಗೆ ಒಂದೇ ತಿಳಿನೀಲಿ ಬಣ್ಣದ ದಪ್ಪ ರಟ್ಟಿನ ಬಟ್ಟೆ-ಪಟ್ಟೆಪಟ್ಟೆ ಅಂಡರ್​ವೇರ್ ಖಾಕಿ ಚೆಡ್ಡಿ. ಹೆಣ್ಣುಮಕ್ಕಳಿಗೆ ಒಂದೆ ತಾನಿನ ಹಸಿರು ಲಂಗ, ಬಿಳಿ ಉದ್ದ ಪಲ್ಕ. ಅದನ್ನು ಸಹ ಅದೇ ಮಾಲ್ಗುಡಿ ಹೆಗಡೆ ಟೇಲರ್ ಎಂಬ ಹುಡುಗುವಿರೋಧಿ ಟೇಲರ್ ಹೊಲಿಯುವುದು. ಅಪ್ಪ ಅಳತೆ ಕೊಡುವ ವಿಧಾನವಾದರೂ ಹೇಗೆ? ‘ನೋಡ್ರಿ ಅಲ್ಲಿ ತಲೆ ಮೇಲೆ ಗೋಣಿಚೀಲ ಹೊತ್ತುಕೊಂಡು ಹೋಗ್ತಾ ಇದ್ದಾನಲ್ಲ ಸುಮಾರು ಅವನ ಸೈಜಿಗೆ ಒಂದು ಅಂಗಿ, ಒಂದು ಚೆಡ್ಡಿ ಹೊಲಿರಿ. ಮತ್ತೊಂದು ಇನ್ನೊಂದು ಚೂರು ದೊಡ್ಡದು’ ಎಂದು ಬಾಯಿಲೆಕ್ಕದಲ್ಲೇ ಅಳತೆ ಹೇಳುತ್ತಿದ್ದರು! ಹೆಣ್ಣುಮಕ್ಕಳ ಅಳತೆಯೂ ಅದೇ ರೀತಿ- ‘ಅಲ್ಲಿ ನೋಡಿ ಎದುರು ಬಳೆಅಂಗಡಿಲಿ ಒಂದು ಹುಡುಗಿ ಕೂತಿದ್ದು ಆ ಅಳತೆಗೆ ಒಂದು ಲಂಗ, ಒಂದು ಪಲ್ಕ ಹೊಲೀರಿ. ಇನ್ನೊಂದು ಹುಡುಗಿ ಸ್ವಲ್ಪ ದೊಡ್ಡದು. ಇನ್ನೊಂದು ಹನಿ ಸಣ್ಣದು. ಇಬ್ಬರಿಗೂ ಚೂರು ಸೈಜು ವ್ಯತ್ಯಾಸ ಅಷ್ಟೇ’.

ಆ ಪುಣ್ಯಾತ್ಮ ಟೇಲರ್ ಕೂಡ ಅಷ್ಟೇ. ಖಾದಿ ಚೆಡ್ಡಿ, ಬನಿಯನ್ನು ಹಾಕಿ ಒಂದು ಟೇಪನ್ನು ಕುತ್ತಿಗೆಗೆ ನೇತಾಡಿಸಿಕೊಂಡು ಅದೇನೋ ಗುರುತು ಹಾಕಿಕೊಳ್ಳುತ್ತಿದ್ದರು. ಹೀಗೆ ಆಗಿನ ನಮ್ಮ ದೊಡ್ಡ ವೈರಿ ಯಾರೆಂದು ಕೇಳಿದರೆ ಖಂಡಿತವಾಗಿ ಆ ಹೆಗಡೆ ಟೇಲರ್ ಆಗಿದ್ದರು (ಈಗ ಅವರಿಲ್ಲವಂತೆ. ಅವರ ಆತ್ಮಕ್ಕೆ ಶಾಂತಿ ಇರಲಿ).

ಒಂದು ದಿನ ಸಿದ್ದಾಪುರಕ್ಕೆ ಹೋಗಿ ಆ ಹೆಗಡೆಯ ತಲೆಯನ್ನು, ಅವನ ಮಷಿನನ್ನು ಕುಟ್ಟಿ ಒಡೆದು ಹಾಕಿದರೆ ಹೇಗೆ ಎಂದು ನಾವೆಲ್ಲ ಗುಟ್ಟಾಗಿ ಮಾತಾಡಿಕೊಂಡಿದ್ದೆವು. ಈ ವಸ್ತ್ರದಿಂದ ಆಗುವ ಅವಮಾನದ ಶಾಪದಿಂದ ಹೇಗೆ ಹೊರಗೆ ಬರುವುದೆಂಬ ಸಮಸ್ಯೆ ನಮ್ಮ ಹಿರಿಯಕ್ಕನಿಂದ ಬಗೆಹರಿಯಿತು. ಅವಳನ್ನು ಹತ್ತಿರದ ಹಳ್ಳಿಗೆ ಕೊಟ್ಟು ಮದುವೆ ಮಾಡಿದ್ದರು. ಅವಳ ಮಗನ ಉಪನಯನಕ್ಕೆ ನಾವು ಅಕ್ಕ-ತಂಗಿಯರೆಲ್ಲ ಹೋದಾಗಿನ ಸಂದರ್ಭ. ಅವರ ಮನೆಗೆ ನೆಂಟರಾದ ಸಿದ್ದಾಪುರದ ಜವಳಿ ಗಣೇಶಣ್ಣ ದಂಪತಿ ಬಂದಿದ್ದರು. ಅವರೇ ನಮ್ಮ ಮನೆಗೆ ಜವಳಿ ಕಳಿಸುವ ಜನವಂತೆ.. ಅಪ್ಪನ ಆಪ್ತರಂತೆ ಎಂದೆಲ್ಲ ನಮಗೆ ವಿವರಗಳು ಲಭ್ಯವಾದವು. ದೊಡ್ಡಕ್ಕನ ಬಳಿ ಗೋಳು ತೋಡಿಕೊಂಡೆವು. ಅವಳು- ‘ಗಣೇಶಣ್ಣ ಈ ಮಕ್ಕಳಿಗೆ ನಿನ್ನ ಬಳಿ ಏನೋ ಮಾತಾಡಲು ಇದೆಯಂತೆ’ ಎಂದು ನಮ್ಮನ್ನು ಪರಿಚಯಿಸಿಕೊಟ್ಟಳು. ಜವಳಿ ಗಣೇಶಣ್ಣ, ‘ಎಂತ ಮಕ್ಕಳೇ ಏನು ಸಂಗತಿ’ ಎಂದು ಅನುನಯದ ಧಾಟಿಯಲ್ಲಿ ಹೇಳಿದರು. ನಾವು ಮೂವರು ಅಕ್ಕ-ತಂಗಿಯರು ನಮ್ಮ ವಸ್ತ್ರಸಂಕಟದ ಕುರಿತು ಹೇಳಿಕೊಂಡೆವು. ‘ನಮಗೂ ಎಲ್ಲರ ಹಾಗೆ ಬಣ್ಣ-ಬಣ್ಣದ ಹೂವುಗಳಿರುವ ಸ್ವಲ್ಪ ಫ್ಯಾನ್ಸಿ ತರದ ಲಂಗ ಹಾಕುವ ಆಸೆ ಇದೆ. ನಮ್ಮ ಹೈಸ್ಕೂಲಿನ ಬಳಿ ಇರುವ ಇಟಗಿ ಟೇಲರ್ಸ್ ಚೆಂದ ಹೊಲಿದು ಕೊಡುತ್ತಾರೆ. ಆದರೆ ಅಪ್ಪ ನಮ್ಮ ಮಾತನ್ನು ಕೇಳಿಸಿಕೊಳ್ಳುವುದೇ ಇಲ್ಲ. ನೀವಾದರೂ ಅಪ್ಪನಿಗೆ ಹೇಳುತ್ತೀರಾ?’ ಎಂದು ಗೋಳು ತೋಡಿಕೊಂಡು ಬಿಟ್ಟೆವು. ಏನೆಂದರೆ ಏನು ಎಂದು ತಿಳಿಯದ ವಯಸ್ಸು. ಏನೋ ಮಕ್ಕಳು ಎಂದು ತಾತ್ಸಾರ ಮಾಡದೆ ವಿಷಯದ ಗಾಂಭೀರ್ಯ ಅರ್ಥ ಮಾಡಿಕೊಂಡ ಗಣೇಶಣ್ಣ ನಮ್ಮ ಅಪ್ಪನಿಗೆ ಏನು ಹೇಳಿದರೋ ಗೊತ್ತಿಲ್ಲ. ಒಂದು ದಿನ ಅಡಿಕೆ ಒಯ್ಯಲು ವ್ಯಾನು ಬಂದಾಗ ಎಲ್ಲ ಮಕ್ಕಳು ಸಿದ್ಧರಾಗಿ ಸಿದ್ದಾಪುರಕ್ಕೆ ಹೋಗೋಣ ಎಂದು ನಮ್ಮ ತಂದೆ ಅಣತಿ ಇತ್ತರು.

ಸಿದ್ದಾಪುರದಲ್ಲಿ ನಮ್ಮನ್ನು ಸೀದಾ ಜವಳಿ ಗಣೇಶಣ್ಣನ ಅಂಗಡಿಗೆ ಕರೆದೊಯ್ದು, ‘ಇವಕ್ಕೆ ಬೇಕಾದ ಬಟ್ಟೆಯನ್ನು ನೀನೆ ಆರಿಸು ಮಾರಾಯ’ ಎಂದು ಹೇಳಿ ಅಡಿಕೆ ವಖಾರಿಗೆ ಹೋಗಿಬಿಟ್ಟರು. ನಮಗೆಲ್ಲ ನಮ್ಮ ಇಷ್ಟದ ಬಣ್ಣ ಬಣ್ಣದ, ಹೂವು ಹೂವಿನ ಲಂಗ ಪಲ್ಕ, ಪುಗ್ಗಿತೋಳು, ಅಣ್ಣಂದಿರಿಗೆ ಲೈನ್ ಲೈನ್ ಶರ್ಟ್ ಹೀಗೆ ಏನು ಬೇಕು ಎಲ್ಲವನ್ನೂ ತೆಗೆಸಿಟ್ಟು ಹೆಗಡೆ ಟೇಲರ್​ನನ್ನು ಅಂಗಡಿಗೆ ಕರೆಸಿ, ‘ನೋಡು ಇವರ ಮೈ ಅಳತೆ ತೆಗೆದುಕೊಂಡು ಸ್ವಲ್ಪ ಡೀಸೆಂಟ್ ಆಗಿ ಕಾಣುವ ಬಟ್ಟೆ ಹೊಲಿದು ಕೊಡು. ಪಾಪ ಮಕ್ಕಳು ಇಷ್ಟು ವರ್ಷ ಬೇಸರ ಪಟ್ಟುಕೊಂಡು ನೀನು ಹೊಲಿದ ಬಟ್ಟೆಯನ್ನು ತೊಟ್ಟಿವೆ’ ಎಂದು ತಾಕೀತು ಮಾಡಿದ್ದರು.

ಆಮೇಲೆ ನಮ್ಮೆಲ್ಲರನ್ನು ಹೋಟೆಲ್ಲಿಗೆ ಕರೆದೊಯ್ದು ಊಟ ಮಾಡಿಸಿ ಬಳೆ, ರಿಬ್ಬನ್ನು ಕೊಡಿಸಿ ಅಪ್ಪನ ಜೊತೆಗೆ ತಾನೂ ಟೆಂಟ್ ಸಿನಿಮಾಕ್ಕೆ ಬಂದು ‘ಸತ್ಯ ಹರಿಶ್ಚಂದ್ರ’ ಸಿನಿಮಾ ತೋರಿಸಿ ಪುನಃ ವ್ಯಾನ್ ಹತ್ತಿಸಿ ಕಳಿಸಿದ ಜವಳಿ ಗಣೇಶಣ್ಣ ಹೃದಯ ಶ್ರೀಮಂತಿಕೆ ಇರುವ ಆ ತಲೆಮಾರಿನ ಸ್ನೇಹಮಯಿ ವ್ಯಕ್ತಿತ್ವದ ಪ್ರತಿನಿಧಿಯಂತೆ ತೋರಿಬಂದರು. ಅವರ ಸ್ನೇಹದ ಪ್ರಭಾವದಿಂದ ನಮ್ಮ ತಂದೆಯವರು ಹೆಣ್ಣುಮಕ್ಕಳೆಂದು ಅನಾದರ ಮಾಡದೆ ನಮ್ಮನ್ನು ಓದಿಸಿ ಸಮಾಜದಲ್ಲಿ ಮುಂದೆ ಬರಲು ಪ್ರೋತ್ಸಾಹ ನೀಡಿದ್ದು ನಮ್ಮ ಬಾಳಿನಲ್ಲಿ ಬೆಳಕೊಂದು ಮೂಡಿ ಬರಲು ಕಾರಣರಾದರು.

ಇಂಥ ಹೃದಯವಂಥ ಹಿರಿಯರನ್ನು ನೆನಪಿಸಿಕೊಂಡಾಗ ಕಣ್ಣು ತುಂಬಿ ಬರುತ್ತದೆ. ಈ ಕಥೆಯನ್ನೆಲ್ಲ ನನ್ನ ವಿದ್ಯಾರ್ಥಿಗಳಿಗೆ ಭಾವುಕಳಾಗಿ ಹೇಳುತ್ತಿದ್ದಾಗ ಅನೇಕ ವಿದ್ಯಾರ್ಥಿನಿಯರ ಕಣ್ಣಂಚಿನಲ್ಲಿ ನೀರಾಡಿದ್ದು ಕಂಡಿತು.

(ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

Leave a Reply

Your email address will not be published. Required fields are marked *

Back To Top