ಕುಂದಗನ್ನಡಕ್ಕೆ ಕುಂದಣವಿಟ್ಟ ಅಮ್ಮಚ್ಚಿ

| ಭುವನೇಶ್ವರಿ ಹೆಗಡೆ

ಕನ್ನಡ ಭಾಷೆಯ ಸೌಂದರ್ಯದ ಸಮಗ್ರ ಪರಿಚಯ ನಮಗಾಗ ಬೇಕೆಂದರೆ ಕನ್ನಡ ನಾಡಿನ ಬೇರೆ ಬೇರೆ ಪ್ರದೇಶಗಳಲ್ಲಿರುವ ‘ಆಡುಗನ್ನಡ’ದ ಪರಿಚಯ ನಮಗಿರಬೇಕು. ಒಂದೇ ತರಕಾರಿ ಹೇಗೆ ಬೇರೆ ಬೇರೆ ಜಾಗಗಳಲ್ಲಿ ಬೆಳೆದಾಗ (ಗದ್ದೆಯಲ್ಲಿ, ತೋಟದಲ್ಲಿ) ಬೇರೆ ಬೇರೆ ರುಚಿ ಕೊಡುವ ಚೋದ್ಯದ ಹಾಗೆ! ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಕನ್ನಡಕ್ಕೆ ಒಂದು ಕ್ರಮಬದ್ಧವಾದ ಗಾಂಭೀರ್ಯ ಆವರಿಸಿ ಬಿಡುತ್ತದೆ. ‘ಬಸ್ ನಿಲ್ಲಿಸಿ. ಇಳಿತೀವಿ’ ಎಂದು ಅರೆಕ್ಷಣದಲ್ಲಿ ಹೇಳಿ ಬಿಡಬಹುದಾದದನ್ನು ಮಂಗಳೂರು ಕನ್ನಡತಿಯೊಬ್ಬರು, ‘ಕಂಡಕ್ಟರರೆ ಡ್ರೖೆವರನಿಗೆ ಬಸ್ಸು ನಿಲ್ಲಿಸಲು ಹೇಳಿ ನೋಡುವಾ. ನಾವು ಇಲ್ಲಿ ಇಳಿಯಲಿಕ್ಕೆ ಉಂಟು ಆಯ್ತಾ’ ಎಂದೇ ವಾಕ್ಯ ಪೂರ್ತಿ ಮಾಡಿಯೇ ಹೇಳುತ್ತಾರೆ.

ಇದೇ ಮಾತನ್ನು ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನೀವು ಕೇಳಿದರೆ ಅದರ ಜವಾರಿ ಸೊಗಸೆ ಬೇರೆ. ಬಸ್ಸನ್ನು ಮನೆಯ ಮುಂದೆ ನಿಲ್ಲಿಸಬಲ್ಲ ಬಾಯಿ ಛಾತಿ ಹೊಂದಿರುವ ದುರ್ಗವ್ವ ಸಂಕವ್ವನಂಥವರು ‘ಬಸ್ ತರುಬ್ರೋ ಯಪ್ಪಾ ನಾವು ಇಳಿಯಾಕ್ಹತ್ತಿವಿ ಕಣ್ ಕಾಣಂಗಿಲ್ಲೆನು’ ಎಂದು ಆವಾಜು ಹಾಕಿಯೇ ಬಸ್ಸನ್ನು ನಿಲ್ಲಿಸಿ ಬಿಡುತ್ತಾರೆ. ಹಣ್ಣುತರಕಾರಿ ಬುಟ್ಟಿ ಸಮೇತ ಮನೆ ಮುಂದೆ ಇಳಿದು ‘ದೇವರು ಒಳ್ಳೆಯದು ಮಾಡ್ಲೊ ತಮ್ಮ’ ಅಂತ ಆಶೀರ್ವಾದ ಬೇರೆ ಮಾಡುತ್ತಾರೆ. ವಿಜಯಪುರದ ವಿಶ್ವವಿದ್ಯಾನಿಲಯಕ್ಕೆ ಒಮ್ಮೆ ಹೋಗಿದ್ದ ನನಗೆ ಅಲ್ಲಿಯ ಪ್ರಾಧ್ಯಾಪಕರು ಕನ್ನಡವನ್ನೇ ಮಾತಾಡುತ್ತಿದ್ದರೂ ಅರ್ಥವಾಗುತ್ತಿರಲಿಲ್ಲ. ಉಪಕುಲಪತಿಗಳ ಚೇಂಬರಿನಲ್ಲಿ ನಾವೆಲ್ಲ ಚಹಾಕೂಟವೊಂದರಲ್ಲಿ ಕುಳಿತಿದ್ದೆವು. ನಮಗೆಲ್ಲ ಚಹಾ ಬಂತು. ಉಪ ಕುಲಪತಿಗಳು ತಮ್ಮ ಆಪ್ತ ಕಾರ್ಯದರ್ಶಿಯ ಬಳಿ ‘ತೋಂತೀನ್ ಪಾ?’ ಎಂದರು. ನನಗಂತೂ ಅದು ಯಾವ ಭಾಷೆ ಎಂದು ಅರ್ಥವಾಗದೇ ಪಕ್ಕದಲ್ಲಿ ಕುಳಿತಿದ್ದ ಕುಲಸಚಿವರ ಬಳಿ ‘ಈಗ ಅವರೇನು ಹೇಳಿದ್ದು?’ ಎಂದು ಪಿಸುನುಡಿಯಲ್ಲಿ ಕೇಳಿದೆ. ‘(ಚಹಾ) ತಗೋತಿಯೆನಪ್ಪಾ? ಎಂದಿದ್ದು’ ಎಂದು ಕನ್ನಡೀಕರಿಸಿ ಹೇಳಿದಾಗ ಬಂದ ನಗುವನ್ನು ಹೇಗೋ ನಿಯಂತ್ರಿಸಿಕೊಂಡೆ. ಮೈಸೂರಿಗೆ ಬಂದಿರೋ ಕನ್ನಡಕ್ಕೆ ಕಾವ್ಯದ ಕಂಪು. ‘ಕಾಫಿಗೆ ಬೆಲ್ಲ ಹಾಕಿದ್ರುನುವೇ ಒಂಥರಾ ದಿವ್ಯವಾದ ರುಚಿ ಬರುತ್ತೇಂತ ನಮ್ಮಜ್ಜಿ ಹೇಳೋವ್ರು ಕಣ್ರೀ’ ಎನ್ನುವ ಇಲ್ಲಿಯ ಜನರು ಸಾಂಸ್ಕೃತಿಕ ನಗರಿಯ ಭವ್ಯ ಗತಇತಿಹಾಸವನ್ನು ನೆನಪಿಸಿಕೊಳ್ಳುತ್ತ ಓಡಾಡುವ ಪುಣ್ಯಜೀವಿಗಳು.

ಶಿರಸಿ-ಸಿದ್ದಾಪುರಕ್ಕೆ ಬಂದಿರೋ ಎಲೆಯಡಿಕೆಯ ಜತೆ ‘ಕವಳಗನ್ನಡ’ದಲ್ಲಿ ಯಕ್ಷಗಾನದ ಸುದ್ದಿ, ಅಡಿಕೆಗೆ ಬಂದ ಕೊಳೆರೋಗದ ಕುರಿತು ಮಾತು. ‘ಭಾವ ಎಂಥ ಆದ್ರೂ ಈ ಸಲ ಕಷ್ಟಇದ್ದಾ, ಕೂಸಿಗೆ ಈ ವರ್ಷ ಮದುವೆ ಮಾಡವು, ಮಾಣಿ ಬೇರೆ ಮನೆ ಮಾಡ್ತಿ ಅಂಬ’ ಎಂದು ಗಂಡಸರು ಹಚ್ಚಿಕೊಂಡರೆ ಹೆಂಗಸರದ್ದೇ ಬೇರೆ ಛಾಪು, ‘ಸರಸತ್ಗೆ ಸಿರ್ಸಿಗೆ ಬತ್ತಯ ಗಜಾನನ ಸ್ಟೋರ್ಸ್​ನಲ್ಲಿ ಚಲೋ ಸೀರೆ ತರಿಸಿದ್ದ ಬೆಲೆನೂ ರಾಶಿ ಕಡಿಮೆ ಇದ್ದು ಹೇಳಿ ಗಿರಿಜಕ್ಕ ಹೇಳಿತು’ ಎಂಬ ಮಾತು ಕೇಳಿದರೆ ಕುಮಟಾ-ಕಾರವಾರಗಳದ್ದೆ ಇನ್ನೊಂದು ಪರಿ. ಪ್ರಶ್ನೆಯೋ ಉತ್ತರವೋ ಎಂದು ತಿಳಿಯದ ರೀತಿಯ ಮಾತುಗಳು. ‘ತಂಗಿ ಬಂದದೆ?’ ‘ನಾಕ್ ದಿನ ಉಳಿತ್ರಿ?’ ‘ಬೈಕ್ ಹೊಸ ತಗೊಂಡ್ರಿ?’ ‘ಹೌದು?’ ‘ಚಲೋ ಬತ್ತದೆ?’ ಹೀಗೆ ಪ್ರಶ್ನಾರ್ಥಕ ಚಿಹ್ನೆ ತೆಗೆದುಬಿಟ್ಟರೆ ಉತ್ತರಗಳ ರೂಪದಲ್ಲಿ ಇರುವ ಪ್ರಶ್ನೆಗಳು. ಇಲ್ಲಿಯವರದ್ದೊಂದು ಬಗೆಯ ‘ಮುಗ್ಧಕನ್ನಡ’.

ಸಾಗರದ ಕಡೆ ಬಂದಿರೋ ಬಾಯಿ ಎಳೆದು ಮಾತಾಡುವ ‘ಎಳೆಗನ್ನಡ’. ‘ಅಪ್ಪಿ ಆರಾಮಾ? ಅಮ್ಮಿ ಬರ್ಲ್ಯಾ? ದನಾನು ಮಾರಿ ಬಿಟ್ರಾ’. ‘ಹಾಲು ತರಿಸದೆ ಸೈ ಹಂಗಾರೆ. ಜಮೀನು ಮನೆ ಯಾರಿಗೂ ಬ್ಯಾಡಾಯ್ದು ತಗ, ಎಲ್ಲಾ ಬೆಂಗಳೂರಿಗೆ ಹೋಪದೆ ಸೈ’ ಎನ್ನುತ್ತ ತಾಳಗುಪ್ಪ ಎಕ್ಸೆ್ಪ್ರಸ್ ಹತ್ತಿ ನೀವು ಬೆಂಗಳೂರಿಗೆ ಬಂದಿಳಿದಿರಿ ಅಂತಿಟ್ಕೊಳ್ಳಿ.

ಬೆಂಗಳೂರು ಕನ್ನಡ ಪಾಪ! ಅವರಿವರು ಬಂದು ಇಲ್ಲಿಯ ಸುಂದರ ತಿಳಿಗನ್ನಡವನ್ನೇ ನಾಶಮಾಡಿದ್ದಾರೆ. ಮೂಲ ಬೆಂಗಳೂರಿನವರ ಬಾಯಲ್ಲಿ ಬೆಣ್ಣೆಯಂತೆ ಮೃದುವಾದ ಕನ್ನಡ ಶಬ್ದಗಳು ಇಂದಿಗೂ ಇವೆ. ಪಕ್ಕದ ಮನೆಯ ಮಗುವಿನ ಬಳಿಯೂ ‘ಬಾರೋ ರಾಜ, ಅವರೆಕಾಳು ಉಪ್ಪಿಟ್ಟು ಮಾಡಿದ್ದೀನಿ. ತಿಂದು ಬಿಟ್ಟು ಆಟ ಆಡ್ಕೊ’ ಎನ್ನುತ್ತ ಪ್ರೀತಿ ಹಂಚುವ ಹಿರಿಯ ಅಜ್ಜಿಯರು. ಬೆಂಗಳೂರಿನ ಗುಣಗಾನ ಮಾಡುವ ಹಿರಿಯರ ಕನ್ನಡ ದೇವಸ್ಥಾನಗಳಲ್ಲಿ, ಪಾರ್ಕಗಳಲ್ಲಿ ಮಾತ್ರ ಕೇಳುತ್ತದೆ. ಬಸ್ಸಲ್ಲಿ, ಟ್ರೖೆನಿನಲ್ಲಿ ಏನಿದ್ರೂ ‘ಫಸ್ಟ್ ಲೆಫ್ಟ್, ಆಮೇಲೆ ರೈಟ್​ಗೆ ಟರ್ನ್ ತಗೋಂಡು ಬಿಡಿ’ ಮಾದರಿಯ ಕಂಗ್ಲಿಷ್ ಕಲಬೆರಕೆ ಭಾಷೆಯೇ ಕಿವಿಯ ಮೇಲೆ ಬೀಳುವುದು.

ಬೆಂಗಳೂರಿನ ಮೆಟ್ರೋ ಏರಿದಂತೆ ಯಾವ ಭಾಷೆಯಲ್ಲೂ ಮಾತು ಬೇಕಿಲ್ಲದ ಮೂಕ ಹೆಣ್ಣು-ಗಂಡು ಜೀವಿಗಳು. ಕಿವಿ ಕಣ್ಣುಗಳೆರಡೂ ಮೊಬೈಲಿನಲ್ಲಿ. ಮಾತೆ ಬೇಕಿಲ್ಲದ ಈ ಲೋಕದಲ್ಲಿ ಕನ್ನಡಕ್ಕೆ ಏನು ಕೆಲಸ ಎಂದು ನೀವು ಬೇಸರಿಸಿಕೊಳ್ಳುತ್ತಿರುವಾಗಲೇ ಕಿವಿಗೆ ಮಧುರವಾಗಿ ಬೀಳುವುದು ನಮ್ಮ ಅಚ್ಚ ಕನ್ನಡತಿ ಅಪರ್ಣಾರ ಇಂಪಾದ ಸ್ವರ. ಮೆಟ್ರೋದಿಂದ ಇಳಿದು ಹೊರಬಂದಿರೋ ಆಟೋದವನ ಬಳಿ ‘ಬನಶಂಕರಿಗೆ ಬರ್ತೀರಾ?’ ಎಂದು ಯಾವ ಕನ್ನಡದಲ್ಲಿ ಗೋಗರೆದರೂ ಆತ ಬರುವುದಿಲ್ಲ. ಕಲಬೆರಕೆಯಿಲ್ಲದ ಶುದ್ಧ ಕನ್ನಡ ಬೇಕೆಂದಾದರೆ ನೀವು ಯಕ್ಷಗಾನಕ್ಕೆ ಇಲ್ಲವೆ ಹರಿಕಥೆಗೆ ಹೋಗಿ ಕೂಡಬೇಕು. ಇದೊಂದು ವೇದಿಕೆಯ ಪಾತ್ರಧಾರಿಗಳ ಬಾಯಿಗೆ ಮಾತ್ರ ಇಂಗ್ಲಿಷ್ ಪದಗಳು ಇನ್ನೂ ನುಗ್ಗಿಲ್ಲ. ಆಯಾ ಪ್ರದೇಶಗಳ ಕನ್ನಡವನ್ನು ತಮ್ಮ ಕೃತಿಗಳಲ್ಲಿ ಬಳಸಿ ಹೆಸರು ತಂದ ಸಾಹಿತಿಗಳ ಸಾಲೇ ನಮ್ಮಲ್ಲಿದೆ. ಪ್ರತಿ ಕವಿಯೂ, ಸಾಹಿತಿಯೂ ತಾನು ಹುಟ್ಟಿ ಬೆಳೆದ ಪ್ರದೇಶದ ಕನ್ನಡದ ಸೊಗಡನ್ನು ತಮ್ಮ ಕೃತಿಗಳಲ್ಲಿ ಕಾಣಿಸಿದ ಹಿರಿಮೆ ಕನ್ನಡಕ್ಕಿದೆ.

ಇದೀಗ ಕನ್ನಡದ ಖ್ಯಾತ ಲೇಖಕಿ ವೈದೇಹಿಯವರ ‘ಅಕ್ಕು’, ‘ಪುಟ್ಟಮ್ಮತ್ತೆ’ ಮತ್ತು ‘ಅಮ್ಮಚ್ಚಿ’ ಎಂಬ ಮೂರು ಕಥೆಗಳು ಒಟ್ಟು ಸೇರಿ ಸಿನಿಮಾ ಆಗಿ ನಮ್ಮೆದುರು ನಿಂತಿವೆ. ‘ಅಮ್ಮಚ್ಚಿ ಎಂಬ ನೆನಪು’ ಒಂದು ನೆನಪಿನದೋಣಿಯಾಗಿ ತನ್ನ ಕುಂದಗನ್ನಡದ ಪರಿಮಳ ಬೀರಿದೆ. ಕರಾವಳಿಯ ಸುಂದರ ಪ್ರಕೃತಿಯ ನಡುವೆ ಮನುಷ್ಯನ ಪ್ರಕೃತಿಯ ಕ್ರೌರ್ಯವನ್ನು ಅನಾವರಣ ಮಾಡುತ್ತ ಎಂಬತ್ತರ ದಶಕದ ಸಾಂಪ್ರದಾಯಿಕ ಸಮಾಜದ ಹೆಣ್ಣು ಬಾಳಿದ ಬವಣೆಯ ಬದುಕನ್ನು ತೆರೆದಿಡುತ್ತ ಹೋಗುವ ಪರಿ ಮನಸೂರೆಗೊಳ್ಳುತ್ತದೆ.

ಬಂಗಾರದಂಥ ಬಾಲ್ಯವನ್ನು ಅನುಭವಿಸುತ್ತಿರುವ ಎರಡು ಸುಕುಮಾರ ಪಾತ್ರಗಳ ಸಂಭಾಷಣೆ ನೋಡಿ. ‘ಅಮ್ಮಚ್ಚಿ ಈ ಕನಸೆಂದರೆ ಯಂಥದಾ?’ ‘ಹೂಂ ಎಲ್ಲಾ ಹುಡುಗಿರಿಗೂ ಇತ್ತಂಬ್ರಲೆ ಅದೇ’ ‘ಅಮ್ಮಚ್ಚಿ, ನಿಂಗೂ ಎಂತಾರೆ ಕನ್ಸ್ ಇತ್ತನಾ?’ ‘ಹೂಂ ಇತ್ತ್. ನಾನು ಸಮಾ ಕಲ್ತು ದೊಡ್ಡ ಸಂಗತಿ ಆಯಿ ನಂಗ್ ಹ್ಯಾಂಗ್ ಬೇಕು ಹಾಂಗ್ ಇರ್ಕ. ಗ್ರಾ್ಯಂಡ್ ಆಗಿ ಮದುವೆ ಆಯ್ಕು. ಹುಡುಗ ರಾಜನ ಕಣಂಗಿರ್ಕ’ ಎಂದು ಕನಸು ಕಾಣುವ ಬಾಲೆ ಅಮ್ಮಚ್ಚಿಯ ಅಜ್ಜಿ ಪುಟ್ಟಮ್ಮತ್ತೆ ಯಾರದೋ ಮನೆಯಲ್ಲಿ ಚಾಕರಿ ಮಾಡುತ್ತ ಬದುಕುತ್ತಿರುವ ನತದೃಷ್ಟ ವಿಧವೆ. ಅಮ್ಮಚ್ಚಿಗೆ ಇಷ್ಟವಿಲ್ಲದ ಗಂಡಿನೊಂದಿಗೆ ವಿವಾಹ ಮಾಡುವ ಅಸಹಾಯಕತೆ ಅವರದ್ದು. ಅಮ್ಮಚ್ಚಿಯ ಉತ್ಸಾಹ, ನಗೆಯ ಬೆಳಕು ಆರಿಹೋಗುತ್ತದೆ. ಬಾಲವಿಧವೆಯಾಗಿ ಬಾಳು ಸವೆಸಿದ ಪುಟ್ಟಮ್ಮತ್ತೆಯ ಬಡತನ, ಅಸಹಾಯಕತೆಗಳನ್ನು ಪ್ರೇಕ್ಷಕರು ಕಣ್ಣೊರೆಸಿಕೊಳ್ಳುತ್ತ ಅನುಭವಿಸುತ್ತಾರೆ. ಈ ವಿಧವೆಯ ಪಾತ್ರವನ್ನು ರಾಧಾಕೃಷ್ಣ ಉರಾಳರು ಹೆಣ್ಣಿಗೆ ಸಮವೆಂಬ ರೀತಿಯಲ್ಲಿ ಅಭಿನಯಿಸಿದ್ದಾರೆ. ಎಲ್ಲ ಪಾತ್ರಗಳಿಂದಲೂ ಅದ್ಭುತ ಅಭಿನಯ ಮಾಡಿಸಿ ಪಡೆದವರು ನಿರ್ದೇಶಕಿ ಚಂಪಾ ಶೆಟ್ಟಿ. ಚಿತ್ರಕಥೆ-ಸಂಭಾಷಣೆ ಹಾಗೂ ಹಾಡುಗಳನ್ನು ಕುಂದಗನ್ನಡದ ಸೊಗಸಾದ ಭಾಷೆಯಲ್ಲಿ ನೇಯ್ದು ಕೊಟ್ಟಿರುವ ಕಥೆಗಾರ್ತಿ ವೈದೇಹಿ ಈ ಸಿನಿಮಾ ಮೂಲಕವೂ ಕನ್ನಡಿಗರ ಹೃದಯದಲ್ಲಿ ನೆಲೆ ನಿಲ್ಲುತ್ತಾರೆ.

ಕುಶಾಲು, ಚೇಷ್ಟೆ ಕೀಟಲೆಗಳಿಗೆ ಚೆನ್ನಾಗಿ ಹೊಂದುವ ಕುಂದಾಪುರದ ಕುಂದಗನ್ನಡದ ಅಂತಃಸತ್ವಕ್ಕೆ ಕನ್ನಡಿ ಹಿಡಿದ ಸಿನಿಮಾ ಅಮ್ಮಚ್ಚಿಯೆಂಬ ನೆನಪು. (ಹಾಗಂದೆಳಿ ನಮ್ಮ ಕುಂದಾಪುರ ಭಾಷೆ ಏನು ಕಮ್ಮಿ ಇಲ್ಲೆ. ಅಡಿಗರೇ ಹೇಳಿದಂಗೆ ನೀವ್ ದೊಡ್ಡವರು, ನಾವೇನು ಕಮ್ಮಿ ಅಲ್ಲ. ಕುಂದಾಪುರ ಕನ್ನಡದ ಒಂದೇ ಒಂದು ಮಾತು ‘ಅವ್ನ ಬೊಜ್ಜ’ ಸಾಕು ಎಂಥವರ ರಾಪನ್ನಾರು ಇಳ್ಸುಕೆ-ಪಟ್ಟಾಭಿ.)ಈ ರಾಪನ್ನಡಗಿಸುವ ( ಸೊಕ್ಕಡಗಿಸುವ) ಕೆಲಸವನ್ನು ಅಮ್ಮಚ್ಚಿಯ ಖಡಕ್ ಮಾತುಗಳು ಸೊಗಸಾಗಿ ಮಾಡುತ್ತವೆ. ಅವಳ ಗಂಡನಾಗುವ ರಾಜ್ ಶೆಟ್ಟಿಯನ್ನು ‘ಬೋಳ್ ಮಂಡೆ ಕಾಕಾ’ ಎಂದು ಸಂಬೋಧಿಸಿ ಬಾಯಿ ಮುಚ್ಚಿಸುತ್ತಾಳೆ. ವಯೋಸಹಜ ಉತ್ಸಾಹದಿಂದ ಪೇಟೆಗೆ ಹೊರಟ ಅಮ್ಮಚ್ಚಿಯನ್ನು ‘ವಾರಿ ಬೈತಲೆ ತೆಕ್ಕಂಡ್ ಎರಡೆರಡು ಜಡೆ ಹಾಕ್ಕಂಡು ಬೊಂಬಾಯಿಗೆ ಹೊಂಟಿದ್ದ ಹೆಂಗೆ? ಹೋಗ ಮನಿಗ್ ಹೋಗಾ… ಸಮ ಬಾಚ್ಕಂಡ್ ಬಾ…’ ಎಂದು ಗಂಡಿನ ದರ್ಪದ ಎದುರು ಸೋಲುವ ಅಸಹಾಯಕ ಹೆಣ್ಣುಮಗಳ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ದಿಗ್ದರ್ಶನ ಮಾಡಿದ ಅಭಿನಂದನೀಯ ಸಾಧನೆ ಚಂಪಾ ಶೆಟ್ಟಿ ಅವರದ್ದು .

ಓಡಿ ಹೋದ ತಿರುಬೋಕಿ ಗಂಡನಿಂದಾಗಿ ತವರನ್ನು ಆಶ್ರಯಿಸಿರುವ ಅಕ್ಕು ತನ್ನದೊಂದು ಮಗು ಬೇಕು ಎಂಬ ಆಸೆಯನ್ನು ಹತ್ತಿಕ್ಕಿ ಕೊಳ್ಳಲಾರದೆ ಅಕ್ಷರಶಃ ಹುಚ್ಚಿಯಾಗಿ ಬಿಟ್ಟಿರುತ್ತಾಳೆ. ಊರವರು, ನೆಂಟರು, ಕೊನೆಗೆ ಸ್ವಂತಮನೆಯವರು ಅವಳನ್ನು ಹುಚ್ಚಿ ಎಂದು ಅಣಕಿಸಿ ನಗುತ್ತಾರೆ. ಯಾರದೇ ಮನೆಯಲ್ಲಿ ಮಗುವನ್ನು ತೊಟ್ಟಿಲಿಗೆ ಹಾಕುವಾಗಲೂ ಇವಳು ಹೋಗಿ ಸಂಭ್ರಮಿಸುತ್ತಾಳೆ. ಕರುಳು ಚುರುಗುಟ್ಟುವ ಅಭಿನಯ. ಕುಂದಾಪುರದ ಈ ಕಥೆ ಕರ್ನಾಟಕದ ಕಥೆ. ಶೋಷಿತ ಹೆಣ್ಣುಕುಲದ ಕಥೆ. ಕೌಟುಂಬಿಕ ದೌರ್ಜನ್ಯ, ಸಾಮಾಜಿಕ ಕ್ರೌರ್ಯಗಳಡಿ ಸಿಲುಕಿ ನಲುಗುವ ಹೆಣ್ಣುಗಳ ಕಥೆ. ಬಹುಕಾಲ ಕಾಡುವ ಹಾಡುಗಳು, ಕಾವ್ಯಮಯ ಸಿನಿಮಾದ ಸಂಗೀತ, ಚಿತ್ರೀಕರಣದ ಸೊಗಸನ್ನು ಅಮ್ಮಚ್ಚಿಯೆಂಬ ನೆನಪು ಸಿನಿಮಾವನ್ನು ನೋಡಿಯೇ ಸವಿಯಬೇಕು.

(ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಹಾಸ್ಯ ಸಾಹಿತಿ)