More

    ಲಲಿತ ಪ್ರಬಂಧವೆಂಬ ಮೋಹಕ ಗದ್ಯ : ಭುವನೇಶ್ವರಿ ಹೆಗಡೆ ಅವರ ಮುಗುಳು ಅಂಕಣ

    ಲಲಿತ ಪ್ರಬಂಧವೆಂಬ ಮೋಹಕ ಗದ್ಯ : ಭುವನೇಶ್ವರಿ ಹೆಗಡೆ ಅವರ ಮುಗುಳು ಅಂಕಣಲಲಿತ ಪ್ರಬಂಧಗಳನ್ನು ‘ಗದ್ಯದ ಭಾವಗೀತೆ’ ಎಂದು ಕರೆಯುತ್ತಾರೆ. ಭಾವಗೀತೆಗಳು ಭಾವಲೋಕವನ್ನು ತುಂಬಿ ಬಿಡುವ ಸಾಮರ್ಥ್ಯ ಹೊಂದಿರುವಂತೆ ಲಲಿತ ಪ್ರಬಂಧಗಳು ಓದುಗರ ಚಿತ್ತವೃತ್ತಿಯ ಮೇಲೆ ಲಲಿತವಾದ ಮೋಡಿಯನ್ನು ಹಾಕಬಲ್ಲವು. ಲಲಿತ ಪ್ರಬಂಧ ಪ್ರಕಾರದಲ್ಲಿ ಲಾಲಿತ್ಯ ಮಿಳಿತವಾಗಿರುವುದರಿಂದ ಹಾಸ್ಯಕ್ಕೆ ಸಾಕಷ್ಟು ಪ್ರಾಧಾನ್ಯ ಇದೆ. ಪ್ರಬಂಧಗಳಲ್ಲಿ ವೈಜ್ಞಾನಿಕ ಪ್ರಬಂಧಗಳು, ವೈಚಾರಿಕ ಪ್ರಬಂಧಗಳು, ವೈಯಕ್ತಿಕ ಅನುಭವಗಳನ್ನು ಆಧರಿಸಿದ ಪ್ರಬಂಧಗಳು ಹಾಗೂ ಲಲಿತ ಪ್ರಬಂಧಗಳು ಎಂಬ ಅನೇಕ ಪ್ರಭೇದಗಳಿವೆಯಾದರೂ ಲಲಿತ ಪ್ರಬಂಧಕ್ಕೆ ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ಸ್ಥಾನಮಾನಗಳು ಪ್ರಾಪ್ತವಾಗಿವೆ.

    ನಮಗೆಲ್ಲ ತಿಳಿದಿರುವಂತೆ ಕನ್ನಡ ಸಾಹಿತ್ಯವನ್ನು ಪುಷ್ಟೀಕರಿಸಿದ ಅನೇಕ ಸಾಹಿತ್ಯ ಪ್ರಕಾರಗಳು ನವೋದಯ ಕಾಲದಲ್ಲಿ ಪಾಶ್ಚಾತ್ಯರಿಂದ ನಮ್ಮಲ್ಲಿಗೆ ಬಂದು ಸೇರಿದವು. ವಿವಿಧ ಭಾಷೆಗಳ ವಿವಿಧ ಪ್ರಕಾರಗಳನ್ನು ಶ್ರೀಮಂತಗೊಳಿಸಿದ ನವೋದಯ ಕಾಲದ ಅನೇಕ ಲೇಖಕರು ಪ್ರಬಂಧದಿಂದಲೂ ಪ್ರಭಾವಿತರಾದರು. ಇಂಗ್ಲಿಷಿನಲ್ಲಿ ‘ಎಸ್ಸೆ’ ಎಂದು ಕರೆಯಲ್ಪಡುವ ಈ ಪ್ರಬಂಧ ಪ್ರಕಾರಕ್ಕೆ ಹೀಗೇ ಎಂಬ ನಿಯಮಿತವಾದ ಚೌಕಟ್ಟಾಗಲೀ ಕಟ್ಟುಪಾಡುಗಳಾಗಲಿ ಇಲ್ಲದಿರುವುದು ಈ ಪ್ರಕಾರಕ್ಕೆ ಇರುವ ವಿಶೇಷತೆಯಾಗಿದೆ. ಹಾಗೂ ಈ ಸ್ವಾತಂತ್ರ್ಯ ಅಥವಾ ಸ್ವಚ್ಛಂದತೆ ಪ್ರಬಂಧ ಪ್ರಕಾರಕ್ಕೆ ಇರುವ ಮಿತಿಯಾಗಿಯೂ ಕೆಲವು ಕಡೆ ಭಾಸವಾಗುತ್ತದೆ.

    ಶಾಸ್ತ್ರೀಯ ಸಂಗೀತಕ್ಕಿರುವ ಕಟ್ಟುಪಾಡುಗಳು, ಸ್ವರ ವಿಧಾನಗಳ ಚೌಕಟ್ಟು ಸುಗಮ ಸಂಗೀತಕ್ಕೆ ಇರುವುದಿಲ್ಲ. ಆದರೆ ಸುಗಮ ಸಂಗೀತವೂ ಸ್ವರ, ತಾಳ, ಲಯಗಳನ್ನು ಬಿಟ್ಟು ತನ್ನಷ್ಟಕ್ಕೆ ತಾನು ಒಂದು ಪ್ರಕಾರವಾಗಿ ಬೆಳೆಯಲಾರದು. ಸುಗಮ ಸಂಗೀತಗಾರನಿಗೆ ಸ್ವರ, ತಾಳ, ಲಯಗಳ ಜ್ಞಾನ ಸರಿಯಾಗಿದ್ದರೆ ಆತ ಅಥವಾ ಆಕೆ ಹಾಡುವ ಹಾಡಿಗೆ ಶಾಸ್ತ್ರೀಯತೆಯ ಸ್ಪರ್ಶವೂ ಸುಸಂಬದ್ಧತೆಯ ಸೊಗಸು ತನ್ನಿಂತಾನೇ ಪ್ರಾಪ್ತವಾಗುತ್ತದೆ. ಹಾಗೆಯೇ ಲಲಿತ ಪ್ರಬಂಧಕಾರ ಇತರ ಪ್ರಕಾರಗಳಲ್ಲಿಯೂ ಪರಿಣಿತನಾಗಿದ್ದರೆ ಹೆಚ್ಚು ಹೆಚ್ಚು ಭಾಷೆಗಳ ಪರಿಚಯ ಉಳ್ಳವನಾಗಿದ್ದರೆ ಆತನ ಲಲಿತ ಪ್ರಬಂಧಕ್ಕೆ ಸಾಹಿತ್ಯಿಕ ಪುಷ್ಟಿ ಮತ್ತು ಸೌಂದರ್ಯ ತಾನೇ ತಾನಾಗಿ ಪ್ರಾಪ್ತವಾಗಿರುತ್ತದೆ. ನವೋದಯ ಕಾಲದ ಹೆಚ್ಚಿನ ಲಲಿತ ಪ್ರಬಂಧಗಳನ್ನು ಬರೆದವರು ನಮ್ಮ ಪೂರ್ವಸೂರಿಗಳು. ಕನ್ನಡ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಹೆಸರು ಮಾಡಿದ ಕಾದಂಬರಿಕಾರರು, ನಾಟಕಕಾರರು, ಕವಿಗಳು ಆಗಿದ್ದಾರೆ. ಡಿವಿಜಿಯಂಥ ದಾರ್ಶನಿಕ ಕವಿಗಳಿಂದ ಹಿಡಿದು ಜಿ.ಪಿ. ರಾಜರತ್ನಂ, ಕುವೆಂಪು ಬೇಂದ್ರೆ… ಹೀಗೆ ಪ್ರಸಿದ್ಧ ಕವಿಗಳು ಉತ್ಕ ೃ್ಟ ಲಲಿತ ಪ್ರಬಂಧಗಳನ್ನೂ ಬರೆದಿದ್ದಾರೆ. ಕುವೆಂಪು ಅವರ ‘ಅಜ್ಜಯ್ಯನ ಅಭ್ಯಂಜನ’, ಬೇಂದ್ರೆ ಅವರ ‘ನಿರಾಭರಣ ಸುಂದರಿ’, ಪುತಿನ ಅವರ ‘ಗೋಕುಲಾಷ್ಟಮಿ’ಗಳಂಥ ಪ್ರಬಂಧಗಳನ್ನು ಇಂದಿಗೂ ಓದುಗರು ನೆನಪಿಸಿಕೊಳ್ಳುತ್ತಾರೆ.

    1580ರಲ್ಲಿಯೇ ಮೊಂಟೇಗ್ನ ಎಂಬ ಇಂಗ್ಲಿಷ್ ಪ್ರಬಂಧಕಾರ ‘ಪ್ರಬಂಧಗಳ ಜನಕ’ ಎಂದೆನಿಸಿಕೊಂಡ. ಜಾರ್ಜ್ ಆರ್ವೆಲ್ ಅವರ ‘ಶೂಟಿಂಗ್ ಎಲಿಫೆಂಟ್’, ವರ್ಜೀನಿಯಾ ವೂಲ್ಪ್ ಅವರ ‘ಡೆತ್ ಆಫ್ ಎ ಮೋಥ್’, ಬರ್ಟಂಡ್ ರಸ್ಸಲ್ ಅವರ ‘ಇನ್ ಪ್ರೆಸ್ ಆಫ್ ಐಡಲ್ನೆಸ್’ ಮೊದಲಾದ ಪ್ರಬಂಧಗಳು ಕನ್ನಡ ಲೇಖಕರಿಗೆ ಹೊಸ ಹಾದಿಯನ್ನು ತೋರಿಸಿದವು. ವೋಡ್​ಹೌಸ್, ಮಾರ್ಕ್​ಟ್ವೇನ್ ಲೀಕಾಕ್… ಅಂಥವರ ಹಾಸ್ಯ ಪ್ರಬಂಧಗಳು ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡಿವೆ.

    ಲಲಿತ ಪ್ರಬಂಧ ಹಾಸ್ಯ ಸಾಹಿತ್ಯದ ಒಂದು ಪ್ರಾತಿನಿಧಿಕವಾದ ಮತ್ತು ಸಶಕ್ತವೂ ಆದ ಪ್ರಕಾರವಾಗಿದೆ. ಹಾಸ್ಯ ಸಾಹಿತ್ಯದಲ್ಲಿ ಲಲಿತ ಪ್ರಬಂಧ, ಹರಟೆ, ನಗೆಲೇಖನ, ಲಘುಪ್ರಬಂಧ, ವಿಡಂಬನೆ ಹೀಗೆ ಅನೇಕ ಪ್ರಬೇಧಗಳಿದ್ದು, ಅವುಗಳ ವೈಶಿಷ್ಟ್ಯ ಲಕ್ಷಣ ಹಾಗೂ ಭಿನ್ನತೆಯ ಕುರಿತಾಗಿ ಕನ್ನಡದಲ್ಲಿ ಚರ್ಚೆಯೇ ನಡೆದಿಲ್ಲ. ಹೇಗೆ ಒಂದು ನದಿ ತನಗೆ ಒದಗಿದ ಭೌಗೋಳಿಕ ಸನ್ನಿವೇಶಕ್ಕೆ ತಕ್ಕ ಹಾಗೆ ಅಂದರೆ ಶಾಂತವಾಗಿ ಹರಿಯುತ್ತಿದ್ದಾಗ ಕೊಳದ ದೃಶ್ಯ, ಧುಮ್ಮಿಕ್ಕುವಾಗ ಜಲಪಾತ, ತೀರಾ ಕೊರಕಲಾದ ಬಳುಕು ಹಾದಿಯಲ್ಲಿ ಹರಿದಾಗ ಹೆಣ್ಣಿನ ಬಳುಕು ನಡೆ (ಕಾಳಿದಾಸನಿಗೆ ಅದು ಅಭಿಸಾರಿಕೆಯ ತಾರಾಟದ ನಡಿಗೆಯಾಗಿ ತೋರುತ್ತದೆ) ಹೀಗೆ ನದಿ ಅದೇ ಆಗಿದ್ದರೂ ಅದು ತೆರೆದು ತೋರುವ ದೃಶ್ಯವೈಭವ ಭಿನ್ನವಾಗಿರುತ್ತದೆ. ಆದರೆ ನದಿ, ಅದು ಹೊಳೆಯಾಗಿ ಹರಿಯಲಿ ರಭಸವಾಗಿ ಧುಮ್ಮಿಕ್ಕಲಿ ಏನೇ ದೃಶ್ಯವೈಭವ ತೋರಿಸಿದರೂ ಅದರ ಮೂಲದ್ರವ್ಯ ಮಾತ್ರ ನೀರು ಹಾಗೂ ನೀರು ಮಾತ್ರ. ಹಾಗೆಯೇ ಲಲಿತ ಪ್ರಬಂಧ, ಹರಟೆ, ಲಘುಲೇಖನ ಎಲ್ಲವುಗಳಿಗೂ ಜೀವನಪ್ರೀತಿ, ಜೀವನೋತ್ಸಾಹವೇ ಮೂಲ. ಅದಿಲ್ಲದವರಿಗೆ ಹಾಸ್ಯ ದಕ್ಕುವುದಿಲ್ಲ. ಸಿನಿಕರು, ಸಿಡುಕರು, ವಿರಕ್ತರು, ಬದುಕಿಗೆ ಬೆನ್ನು ಹಾಕಿದವರು ಹಾಸ್ಯವನ್ನು ಸೃಷ್ಟಿಸಲಾರರು. ಮಾತ್ರವಲ್ಲ ಹಾಸ್ಯವನ್ನು ಆಸ್ವಾದಿಸಲಾರರು ಸಹ. ಉಲ್ಲಾಸವಿಲ್ಲದ ಕಡೆ ಲಲಿತ ಪ್ರಬಂಧ ಅರಳಲಾರದು.

    ಉಳಿದ ಪ್ರಕಾರಗಳಿಗೆ ಹೋಲಿಸಿದರೆ ಪ್ರಬಂಧಕಾರನಿಗೆ ಸ್ವಾತಂತ್ರ್ಯ ಜಾಸ್ತಿ. ಏನನ್ನು ಬೇಕಾದರೂ ಯಾವ ರೂಪದಲ್ಲಿ ಬೇಕಾದರೂ ಬರೆಯಬಹುದು ಎನ್ನುವ ಈ ಅಪಾರ ಸ್ವಾತಂತ್ರ್ಯವೇ ಅನೇಕ ಬಾರಿ ಪ್ರಬಂಧಕಾರನ ಮಿತಿಯಾಗಿ ಪರಿಣಮಿಸುತ್ತದೆ. ‘ಘನತೆಯಿರಬೇಕು, ತುಂಬ ಗಂಭೀರವಾಗಬಾರದು, ವಿಚಾರವಿರಬೇಕು ಒಣತರ್ಕವಾಗಬಾರದು, ಹಾಸ್ಯವಿರಬೇಕು ಆದರೆ ನಗೆಹನಿಯ ರೂಪ ತಾಳಬಾರದು…’ ಹೀಗೆ ಇಂಥ ಅನೇಕ ವಿರೋಧಗಳನ್ನು ಒಟ್ಟಿಗೆ ನಿಭಾಯಿಸುವ ಚಾಕಚಕ್ಯತೆ ಲಲಿತ ಪ್ರಬಂಧಕಾರನಿಗೆ ಇರಬೇಕಾಗುತ್ತದೆ. ಆತ ಘಟನೆಗಳಿಗಷ್ಟೇ ಬದ್ಧನಾಗಿದ್ದರೆ ಅದು ವರದಿ ಎನ್ನಿಸಿಕೊಳ್ಳುತ್ತದೆ, ಕಾಲ್ಪನಿಕತೆಯನ್ನು ಆಶ್ರಯಿಸಿದರೆ ಫಿಕ್ಷನ್ ಆಗಿ ಬಿಡುತ್ತದೆ. ಆದ್ದರಿಂದ ಬುದ್ಧಿವಂತನಾದ ಲಲಿತ ಪ್ರಬಂಧಕಾರ ಈ ಎರಡರ ನಡುವಿನಲ್ಲಿ ಕಲಾತ್ಮಕವಾಗಿ ಬರೆದಿಡುವ ಜಾಣನಾಗಿರುತ್ತಾನೆ. ಲಲಿತ ಪ್ರಬಂಧಕ್ಕೆ ಅದರದ್ದೇ ಆದ ಒನಪು, ಹೊಳಪು ಪ್ರಾಪ್ತವಾಗುವುದು ಪ್ರಬಂಧಕಾರನ ಅಧ್ಯಯನ, ಜೀವನಾನುಭವ ಹಾಗೂ ಸ್ವಾರಸ್ಯಕರವಾಗಿ ಹರಟುವ ಮನೋಭೂಮಿಕೆಗಳು ಗಟ್ಟಿಯಾಗಿದ್ದಾಗ ಮಾತ್ರ.

    ಹರಟೆ ಮತ್ತು ಲಲಿತ ಪ್ರಬಂಧಗಳಲ್ಲಿ ಇರುವ ವ್ಯತ್ಯಾಸ ತುಂಬ ಸೂಕ್ಷ್ಮವಾದುದು. ಹರಟೆ ಕಟ್ಟುಪಾಡು ಚೌಕಟ್ಟುಗಳಿಲ್ಲದೇ ಬರಹಗಾರನ ವಿಚಾರಲಹರಿಯನ್ನು ಆಶ್ರಯಿಸಿದರೆ ಲಲಿತ ಪ್ರಬಂಧ ಒಂದು ಕೇಂದ್ರದಿಂದ ಹೊರಟು ಮನಸ್ವಿಯಾಗಿ ಸುತ್ತಾಡಿ ಮತ್ತೆ ಅದೇ ಕೇಂದ್ರಕ್ಕೆ ಬಂದು ತಲುಪುವ ಬದ್ಧತೆಯನ್ನು ಹೊಂದಿರುತ್ತದೆ. ಉತ್ತಮ ಲಲಿತ ಪ್ರಬಂಧಗಳನ್ನು ಓದುವಾಗ ಮಾತುಗಾರನಾದ ಸ್ನೇಹಿತನ ಜತೆ ಬೆಳದಿಂಗಳಲ್ಲಿ ವಾಕ್ ಹೋಗಿ ಬಂದ ಚೇತೋಹಾರಿ ಅನುಭವ ನಮಗೆ ದಕ್ಕುತ್ತದೆ. ನದಿಯಲ್ಲಿಯೋ ಜಲಾಶಯದಲ್ಲಿಯೋ ದೋಣಿ ವಿಹಾರ ಹೊರಟಾಗ ನಾವಿಕನ ವ್ಯಕ್ತಿತ್ವ ಎಷ್ಟು ಸ್ವಾರಸ್ಯಕರವಾಗಿತ್ತು ಎನ್ನುವುದರ ಮೇಲೆ ನಮ್ಮ ದೋಣಿ ವಿಹಾರದ ಉಲ್ಲಾಸ ಅವಲಂಬಿಸಿರುತ್ತದೆ. ಆದ್ದರಿಂದ ಲಲಿತ ಪ್ರಬಂಧಗಳಲ್ಲಿ ಗುರಿ ಮುಟ್ಟುವ ಧಾವಂತಕ್ಕಿಂತಲೂ ಮಾರ್ಗದ ದರ್ಶನದಲ್ಲಿ ದೊರಕುವ ಸ್ವಾರಸ್ಯವನ್ನು ಸವಿಯುವುದೇ ಮುಖ್ಯವಾಗಿರುತ್ತದೆ. ಲಲಿತವಾದ ವಿಚಾರಧಾರೆಯನ್ನು ಓದುಗನೊಂದಿಗೆ ಆತ್ಮೀಯ ಹರಟೆಯ ರೂಪದಲ್ಲಿ ಹಂಚಿಕೊಳ್ಳುವ ಗೆಳೆಯನಂತೆ ಲಲಿತ ಪ್ರಬಂಧಕಾರ ಭಾಸವಾಗಬೇಕು. ಎಲ್ಲಿಯೂ ಭಾರವಾಗದ, ಹಗುರಾಗಿಸುವ ನಿರೂಪಣೆ ಯಶಸ್ವಿ ಲಲಿತ ಪ್ರಬಂಧದ ಲಕ್ಷಣ. ಶಬ್ದಚಿತ್ರ, ವಿನೋದ ಚಿತ್ರ ಎಂದು ಕರೆಯಲ್ಪಡುವ ಲಲಿತ ಪ್ರಬಂಧಕ್ಕೆ ಗಪದ್ಯ ಎಂದು ಸಹ ಹೆಸರಿದೆ. ಲಲಿತ ಪ್ರಬಂಧಕಾರನ ಓದು ವ್ಯಾಪಕವಾಗಿದ್ದರೆ ಓದುಗನಿಗೆ ಮಾರ್ಗಾಯಾಸ ಪರಿಹಾರವಾಗಿ ಲವಲವಿಕೆಯ ಸ್ಪರ್ಶ ತಾನಾಗಿಯೇ ಆಗಿರುತ್ತದೆ. ನಮ್ಮನ್ನು ನಗಿಸುವ, ತಿದ್ದುವ, ಹೃದಯವನ್ನು ಅರಳಿಸುವ, ಬುದ್ಧಿಯನ್ನು ಬೆಳೆಸುವ, ಜ್ಞಾನವನ್ನು ವೃದ್ಧಿಸುವ ಲಲಿತ ಪ್ರಬಂಧಗಳಲ್ಲಿ ನೇರವಾಗಿ ನೀತಿಬೋಧನೆ ಇರುವುದಿಲ್ಲ. ಹಿನ್ನೆಲೆಯಲ್ಲಿ ಸೂಚ್ಯವಾದ ಮಾತುಗಳಲ್ಲಿ ತಿಳಿಸಬಹುದು.

    ಪ್ರಬಂಧಗಳಲ್ಲಿ ಘಟನಾಪ್ರಧಾನ ಪ್ರಬಂಧಗಳು, ವಿಚಾರಪ್ರಧಾನ ಪ್ರಬಂಧಗಳು ಎಂದು ವಿಂಗಡಿಸಿ ಕೊಳ್ಳುವುದಾದರೆ ಘಟನಾಪ್ರಧಾನ ಪ್ರಬಂಧಗಳು ಹಾಸ್ಯಲೇಖನಗಳು ಎನಿಸಿಕೊಳ್ಳುತ್ತವೆ. ವಿಚಾರಪ್ರಧಾನ ಪ್ರಬಂಧಗಳಲ್ಲಿ ವಿಚಾರವೊಂದರ ಸುತ್ತಮುತ್ತ ತಮಾಷೆಯ ಮಾತುಗಳಲ್ಲಿ ಸ್ವಾರಸ್ಯಕರ ವಾದಗಳನ್ನು ಹೂಡುತ್ತ ಕೂತು ಹರಟುವ ಅನುಭವ ದಕ್ಕುತ್ತದೆ. ಕನ್ನಡದ ಹರಟೆಗಳ ಪಿತಾಮಹರಾದ ಲಾಂಗೂಲಾಚಾರ್ಯ ಅವರ ಪ್ರಬಂಧಗಳನ್ನು ಓದುವಾಗ ಬುದ್ಧಿ, ಭಾವ ಎರಡಕ್ಕೂ ಹಿತವಾಗುವ ವಾದಸರಣಿಯೊಂದನ್ನು ನಮ್ಮ ಮುಂದಿಡುತ್ತ ಹೋಗುತ್ತಾರೆ. ಅವರ ‘ಆಸ್ಪತ್ರೆಯಲ್ಲಿ ಆಚಾರ್ಯರು’ ಎಂಬ ಹರಟೆ ಲಲಿತ ಪ್ರಬಂಧಗಳ ಮಾದರಿಯಲ್ಲಿ ಮೂಡಿಬಂದಿದೆ.

    ಲಲಿತ ಪ್ರಬಂಧಗಳಲ್ಲಿ ಹಾಸ್ಯದ ಪ್ರಮಾಣ ಎಷ್ಟಿರಬೇಕು ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ. ವಿತಂಡವಾದ ಹೂಡಬಹುದು. ಆದರೆ ಕಟಕಿ, ಅಣಕ, ಚುಚ್ಚುಮಾತು, ಕುಹಕಗಳು ಲಲಿತ ಪ್ರಬಂಧಕ್ಕೆ ಅಗತ್ಯವಿಲ್ಲ. ವಿಡಂಬನೆಯ ಅಂಶ ಕೂಡ ಲಲಿತ ಪ್ರಬಂಧದಲ್ಲಿ ಹೆಚ್ಚು ಕಾಣಸಿಗದು. ಓದುತ್ತ ಹೋದಂತೆ ಲಲಿತವಾದ ಲಹರಿಯೊಂದರಲ್ಲಿ ನಾವು ತೇಲುತ್ತ ಕನಸು ಕಾಣುತ್ತ ನೆನಪುಗಳನ್ನು ಬೆಚ್ಚಗೆ ಅನುಭವಿಸುತ್ತ ತಿಳಿಯಾಗಿ ತುಟಿಯರಳಿಸಿಕೊಂಡು ಹಾಯಾದ ಚೇತರಿಕೆಯನ್ನು ಪಡೆಯಬಹುದಾದ ಪ್ರಕಾರ ಲಲಿತ ಪ್ರಬಂಧ.

    ಲಲಿತ ಪ್ರಬಂಧಗಳಲ್ಲಿ ಗಂಭೀರ ಸಂಗತಿಗಳು ಪ್ರತಿಪಾದಿತವಾದರೂ ಅಪಚಾರವೇನಲ್ಲ. ಆದರೆ ವಿಚಾರದ ಭಾರದಿಂದ ಪ್ರಬಂಧಗಳು ತುಳುಕಬಾರದು. ಚಿಕ್ಕಪುಟ್ಟ ಸಂಗತಿಗಳನ್ನು ಮನಸ್ಸು ಅರಳಿಸುವ ಕ್ರಿಯೆಗೆ ಬಳಸಿಕೊಳ್ಳುವ ಚಾಕಚಕ್ಯತೆ, ಸೌಂದರ್ಯಪ್ರಜ್ಞೆ, ಪ್ರಕೃತಿಪ್ರೇಮ, ಮಾನವಪ್ರೀತಿ ಮುಖ್ಯವಾಗಿ ಜೀವನಪ್ರೀತಿ, ಜೀವನೋಲ್ಲಾಸಗಳು ಲಲಿತಪ್ರಬಂಧದ ಹಿಂದೆ ಸಾಂದ್ರವಾಗಿರುತ್ತವೆ. ವ್ಯಕ್ತಿಗತ ವಿಚಾರಗಳಿಗಿಂತಲೂ ಸಂಗತಿಯೊಂದರ ಸುತ್ತ ಹೆಣೆದುಕೊಂಡು ಹೋಗುವ ಪ್ರಬಂಧಗಳು ಹೆಚ್ಚು ಆಕರ್ಷಕವಾಗಿರುತ್ತವೆ.

    ಒಟ್ಟಾರೆಯಾಗಿ ಕನ್ನಡದ ಲಲಿತ ಪ್ರಬಂಧಕ್ಕೆ ಹಿರಿಯರ ಕೊಡುಗೆ ಎಷ್ಟು ಇದೆಯೋ ಹೊಸಬರ ಪ್ರವೇಶವೂ ಅಷ್ಟೇ ಅಗತ್ಯವಾಗಿದೆ. ಕನ್ನಡದ ಪ್ರಮುಖ ಪತ್ರಿಕೆಗಳು ಪ್ರತಿವರ್ಷ ಲಲಿತ ಪ್ರಬಂಧಗಳ ಸ್ಪರ್ಧೆಯನ್ನು ಏರ್ಪಡಿಸಿ ಗಣನೀಯ ಮೊತ್ತದ ಬಹುಮಾನಗಳನ್ನು ನೀಡುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರತಿವರ್ಷ ನೀಡುತ್ತಿರುವ ಪುಸ್ತಕ ಬಹುಮಾನಗಳಲ್ಲಿ ಲಲಿತ ಪ್ರಬಂಧ ಪ್ರಕಾರವೂ ಲೇಖಕ-ಲೇಖಕಿಯರನ್ನು ಆಕರ್ಷಿಸುತ್ತಿದೆ. ಕನ್ನಡ ಪ್ರಬಂಧ ಪ್ರಕಾರದಲ್ಲಿ ಉತ್ತಮ ಕೃತಿಗಳು ಕೈಸೇರುವಂತೆ ಮಾಡಿದೆ. ಮುಂಬರುವ ದಿನಗಳಲ್ಲಿ ಹೊಸ ಶಿಸ್ತಿನಲ್ಲಿ, ವೃತ್ತಿಯಲ್ಲಿ ತೊಡಗಿಕೊಂಡಿರುವ ಯುವಜನಾಂಗ ಪ್ರಬಂಧ ರಚನೆಯಲ್ಲಿ ತೊಡಗುವಂಥ ದಿನಗಳು ಕನ್ನಡದಲ್ಲಿ ಬರಲೆಂದು ಆಶಿಸೋಣ.

    (ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    46,000 ದಾಟಿದ ಸೆನ್ಸೆಕ್ಸ್; 13,500 ದಾಟಿತು ನಿಫ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts