More

    ಮತ್ತೆ ಶಾಲೆಗೆ ಹೋಗೋಣ ಬನ್ನಿ…| ಭುವನೇಶ್ವರಿ ಹೆಗಡೆ ಅವರ ಮುಗುಳು ಅಂಕಣ

    ಮತ್ತೆ ಶಾಲೆಗೆ ಹೋಗೋಣ ಬನ್ನಿ...| ಭುವನೇಶ್ವರಿ ಹೆಗಡೆ ಅವರ ಮುಗುಳು ಅಂಕಣ‘ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು. ಜನನಿಯಿಂದ ಪಾಠ ಕಲಿತ ಜನರು ಧನ್ಯರು’ ಎಂಬ ಕವಿವಾಣಿಯೇ ಆಗಲಿ ‘ಮಕ್ಕಳ ಸ್ಕೂಲ್ ಮನೇಲಲ್ವೇ?’ ಎಂಬ ಕೈಲಾಸಂ ಡೈಲಾಗ್ ಆಗಲಿ ರಚಿತವಾಗುವ ಸಂದರ್ಭದಲ್ಲಿ ಮುಂದೊಂದು ದಿನ ಮನೆಯೇ ಶಾಲೆಯಾಗುವ ದಿನ ಬಂದೀತು ಎಂಬ ನಿರೀಕ್ಷೆಯೂ ಇದ್ದಿರಲಿಲ್ಲ. ಅವರದ್ದೇನಿದ್ದರೂ ಮಕ್ಕಳು ಮನೆಯಲ್ಲಿ ಕಲಿಯಬಹುದಾದ ಸಂಸ್ಕಾರ, ಸಂಸ್ಕೃತಿಗಳ ಮನೆಪಾಠವೇ ಹೊರತು ಶಾಲೆಯಲ್ಲಿ ಕಲಿಯಬೇಕಾದುದೆಲ್ಲವನ್ನೂ ಮನೆಯಲ್ಲೇ ಕಲಿಯಬೇಕೆಂಬ ಉದ್ದೇಶವೂ ಆಗಿರಲಿಲ್ಲ. ಆ ಕಾಲಕ್ಕೆ ಮಕ್ಕಳಿಗೆ ಶಾಲೆ ಎಂಬುದು ಆಡುವ ಬಾಲ್ಯದ ಸುಂದರ ನೆನಪುಗಳ ಅಡಗುತಾಣ. ಸಾಮಾನ್ಯವಾಗಿ ನಾಲ್ಕನೇ ತರಗತಿಯವರೆಗೂ ಕಿರಿಯ ಪ್ರಾಥಮಿಕ ಶಾಲೆ ಎಂದು ಕರೆಯಲ್ಪಡುವ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ, ಅಂಕಿಸಂಖ್ಯೆಗಳ ಪರಿಚಯ, ಅಕ್ಷರಗಳನ್ನು ಸ್ವಚ್ಛವಾಗಿ ಬರೆಯಲು, ಓದಲು ಕಲಿಸುವಷ್ಟರಮಟ್ಟಿಗೆ ತರಬೇತಿ ಆಗುತ್ತಿತ್ತು.

    ನಂತರದ ತರಗತಿಗಳಲ್ಲಿ ಇಂಗ್ಲಿಷ್, ಹಿಂದಿ ಭಾಷೆಗಳು, ಗಣಿತದ ಲೆಕ್ಕಗಳು, ಸಣ್ಣಪುಟ್ಟ ಕವಿತೆಗಳು ಕಲಿಕಾ ಪ್ರಪಂಚವನ್ನು ಪ್ರವೇಶಿಸುವಂತೆ ಮಾಡಲಾಗುತ್ತಿತ್ತು. ಅಂದು ಓದಿದ ಮಕ್ಕಳು ಮುಂದಿನ ಹಂತಗಳಲ್ಲಿ ಬದ್ಧತೆಯಿಂದ ಕಲಿಸುವ ಶಿಕ್ಷಕರಿಂದ ಹಾಗೂ ಅವರ ಗುಣಮಟ್ಟದ ಕಲಿಸುವ ಸಾಮರ್ಥ್ಯಗಳಿಂದ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯವಾಗುತ್ತಿತ್ತು. ಇಂಜಿನಿಯರು ಡಾಕ್ಟರು, ಲಾಯರು, ಅಧ್ಯಾಪಕರು, ಪಂಡಿತರು, ಕೃಷಿಕರು ಹೀಗೆ ಜೀವನದ ವಿವಿಧ ರಂಗಗಳನ್ನು ಆತ್ಮವಿಶ್ವಾಸದಿಂದ ಪ್ರವೇಶಿಸುವಷ್ಟು ತರಬೇತಿಯನ್ನು ಶಿಕ್ಷಣ ಕ್ಷೇತ್ರದಲ್ಲಿ ಗಳಿಸಲು ಸಾಧ್ಯವಿತ್ತು. ನೂರಕ್ಕೆ ನೂರು ಅಂಕ ತೆಗೆಯಲೇಬೇಕೆಂಬ ಒತ್ತಡ ಇರುತ್ತಿರಲಿಲ್ಲ. ಅವರವರ ಕಲಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ವೃತ್ತಿಗಳನ್ನು ಪ್ರವೇಶಿಸುವ ಮುಕ್ತ ಅವಕಾಶವಿತ್ತು. ಕೃಷಿಯನ್ನು ಹೀನಾಯವೆಂದು ಪರಿಗಣಿಸಿದ ಪ್ರಸಂಗಗಳು ಇರುತ್ತಿರಲಿಲ್ಲ. ಜನಸಂಖ್ಯೆಯು ಹದದಲ್ಲಿ ಇತ್ತಾದ್ದರಿಂದ ಆಳುವ ಸರ್ಕಾರಗಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸುವುದು ದುಸ್ತರವಾಗಿರಲಿಲ್ಲ.

    ಯಾವಾಗ ನಮ್ಮ ದೇಶ ಖಾಸಗೀಕರಣ, ಉದಾರೀಕರಣಗಳ ಚಕ್ರವ್ಯೂಹವನ್ನು ಪ್ರವೇಶಿಸಿತೋ ಅಂದಿನಿಂದ ಶೈಕ್ಷಣಿಕ ಕ್ಷೇತ್ರ ಹಿಂದೆಂದೂ ಕಾಣದ ಗೋಜಲುಗಳ ನಡುವೆ ಸಿಲುಕಿಕೊಂಡು ಹೊರಬರುವ ಮಾರ್ಗ ತಿಳಿಯದೆ ಒದ್ದಾಡುವಂತಾಗಿದೆ. ಅಂಕಗಳ ಬೇಟೆಯ ಶಿಕ್ಷಣ ಪದ್ಧತಿ ನಮ್ಮ ನೆಲಕ್ಕೆ ಸಲ್ಲದು ಎಂಬ ಅರಿವಾಗುತ್ತಿದ್ದರೂ ಪ್ರವಾಹದ ವಿರುದ್ಧ ಈಜುವ ಬಗೆ ತಿಳಿಯದೆ ಪೋಷಕವರ್ಗ ಕಂಗೆಟ್ಟಿದೆ. ಎಳವೆಯ ಶಿಶುಸಹಜ ಮುಗ್ಧತೆಯನ್ನೇ ಕಂದಮ್ಮಗಳು ಕಳೆದುಕೊಂಡಂತಿವೆ. ಉರು ಹೊಡೆಯುವ ಶೈಕ್ಷಣಿಕ ಸಾಧನೆಯನ್ನು, ಇಂಗ್ಲಿಷ್​ನಲ್ಲಿ ಮಾತಾಡುವ ಹೆಚ್ಚುಗಾರಿಕೆಯನ್ನು ಶಿಕ್ಷಣವೆಂದು ಭಾವಿಸಿ ಬದುಕಿನ ಇತರ ಸುಂದರ ಅಗತ್ಯಗಳಾದ ಸಾಹಿತ್ಯ, ಸಂಗೀತ, ನೃತ್ಯ, ಕ್ರೀಡೆಗಳತ್ತ ಮುಖ ಮಾಡಲು ಪುರುಸೊತ್ತಿಲ್ಲದ ಮಣಭಾರದ ಚೀಲ ಹೊರುವುದರಲ್ಲೇ ಬಸವಳಿದ ತಲೆಮಾರೊಂದು ಸಿದ್ಧವಾಗಿ ನಿಂತಿದೆ. ಐಟಿ ಕ್ಷೇತ್ರಗಳ ಉದ್ಯೋಗವೇ ಶ್ರೇಷ್ಠ ಎಂಬ ಭಾವನೆಯೂ ಬಲಿತಿದ್ದು ಉಳಿದ ಕ್ಷೇತ್ರಗಳನ್ನು ಆರಿಸಿಕೊಂಡವರು ನಿಕೃಷ್ಟ ಎಂಬ ಸಾಮಾಜಿಕ ತಾರತಮ್ಯವೊಂದು ಮೆಲ್ಲನೆ ಬಲಿತಾಗಿದೆ. ಚಿಂತಕರು ತಲೆಕೆಡಿಸಿಕೊಂಡು ಈ ಬಗೆಯ ಶಿಕ್ಷಣ ಕ್ರಮದ ದೀರ್ಘಕಾಲೀನ ಪರಿಣಾಮಗಳ ಕುರಿತು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಆದರೆ ಕುದುರೆಗೆ ಕಣ್ಣಿನ ಪಟ್ಟಿ ಕಟ್ಟಿ ಓಡಿಸಲು ಹೊರಟ ಬಳಿಕ ಅದಕ್ಕೆ ಆಚೀಚೆಯ ಪ್ರಪಂಚದ ದರ್ಶನವೇ ಆಗದಂತೆ ನಾಗಾಲೋಟದಲ್ಲಿ ಓಡುತ್ತ ಇದೆ.

    ಒಂದು ನಿಮಿಷ ನಿಲ್ಲಿ. ಓಡುತ್ತ ಇದೆ ಎಂಬ ವಾಕ್ಯವನ್ನು ಸರಿಪಡಿಸಿ ಬಿಡುತ್ತೇನೆ. ಓಡುತ್ತ ಇತ್ತು ಎಂದಾಗಬೇಕು ಅದು. ಕಳೆದ ವರ್ಷದ ಮಾರ್ಚ್ ತಿಂಗಳಿನ ತನಕವೂ ಈ ವೇಗದ ನಾಗಾಲೋಟ ತನ್ನೆಲ್ಲ ವಿಕಾರಗಳೊಂದಿಗೆ ಆರ್ಭಟಿಸುತ್ತಲೇ ಇತ್ತು. ಕೂಸು ಹುಟ್ಟುವ ಮೊದಲೇ ಸೀಟು ಕಾದಿರಿಸುವ, ಹಣ ತೆತ್ತು ಯಾವುದೇ ಬಗೆಯ ಸೀಟು ದೊರಕಿಸಿಕೊಳ್ಳುವ, ಫೀಸು, ಡೊನೇಷನ್ನು ಹೆಚ್ಚಿದಷ್ಟೂ ಆ ಶಾಲೆಯ ಘನತೆ ಹೆಚ್ಚುತ್ತದೆ ಎಂಬ ಭ್ರಮೆ ಪಾಲಕರನ್ನು ಅಮರಿಕೊಂಡಿತ್ತು. ಇದ್ದಕ್ಕಿದ್ದಂತೆ ಬಂದೆರಗಿದ ಕರೊನಾ ಇಡೀ ಶೈಕ್ಷಣಿಕ ಲೋಕವನ್ನೇ ಒಮ್ಮೆ ಸ್ತಬ್ಧಗೊಳಿಸಿಬಿಟ್ಟಿತು. ಶಾಲೆಗಳು ಮುಚ್ಚಲ್ಪಟ್ಟವು. ಶಿಕ್ಷಕರು ಕಿಂಕರ್ತವ್ಯ ಮೂಢರಾದರು. ಮೊದಮೊದಲು ಮಕ್ಕಳಿಗೂ ಮೋಜು. ಶಿಕ್ಷಕರಿಗೂ ರಜಾ ಮಜಾ. ಮನೆಯಲ್ಲಿ ಕುಳಿತು ರಿಲ್ಯಾಕ್ಸ್ ಮಾಡಿದರು. ಮಕ್ಕಳು ಪರೀಕ್ಷೆಯಿಲ್ಲದೆ ಮುಂದಿನ ತರಗತಿಗೆ ಹೋಗುವ ದಿವ್ಯ ಅನುಭವವನ್ನು ಪಡೆದರು. ಸರಿ ಎಷ್ಟು ದಿನವೆಂದು ಲೋಕ ಸ್ತಬ್ಧವಾಗಿ ಇರಬಲ್ಲದು? ಮೆಲ್ಲನೆ ಆನ್​ಲೈನ್ ತರಗತಿಗಳೆಂಬ ಪರ್ಯಾಯ ವ್ಯವಸ್ಥೆಯೊಂದು ಉದಯಿಸಿತು. ಶಿಕ್ಷಕರಿಗೂ ಹೊಸಬಗೆಯ ಪಠ್ಯಕ್ರಮಕ್ಕೆ ಸಿದ್ಧತೆ ನಡೆಸಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿತು. ಆದರೂ ‘ಸಮ್ಂಗ್ ಈಸ್ ಬೆಟರ್​ದ್ಯಾನ್ ನಥಿಂಗ್’ ಎಂಬ ಅಭಿಪ್ರಾಯಕ್ಕೆ ಕಟ್ಟುಬಿದ್ದ ಪಾಲಕರು ಮಕ್ಕಳಿಗೆ ಮೊಬೈಲ್​ಗಳನ್ನು ತೆಗೆದು ಕೊಡತೊಡಗಿದ ಪರಿಣಾಮ ಮೊಬೈಲ್ ಸೆಟ್ಟುಗಳಿಗೆ ಇನ್ನಿಲ್ಲದ ಬೇಡಿಕೆ ಬಂತು. ಉಳ್ಳವರ ಮನೆಗಳಲ್ಲಿ ಲ್ಯಾಪ್​ಟಾಪ್ ಎದುರು ಮಕ್ಕಳನ್ನು ಪ್ರತಿಷ್ಠಾಪಿಸಿದರೆ ಇಲ್ಲದ ಹಳ್ಳಿಯ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಕೆಲವರು ಮೊಬೈಲ್ ಕೊಡಿಸಿದರು. ಮೊಬೈಲ್​ಗಾಗಿ ಜಗಳ, ಹೊಡೆದಾಟ, ಆತ್ಮಹತ್ಯೆಗಳಂಥ ದುರಂತಗಳು ನಡೆದು ಹೋದವು. ಹಳ್ಳಿಗಳಲ್ಲಿ ಸಿಗ್ನಲ್ ಹುಡುಕುತ್ತ ಗುಡ್ಡ, ಬೆಟ್ಟ ಏರಿ ಕೂತ ಮಕ್ಕಳು ಬೇಟೆಗಾರರ ಗುಂಡಿಗೆ ತುತ್ತಾದ ಘಟನೆಗಳು ನಡೆದವು. ಆದರೂ ಶಿಕ್ಷಕಲೋಕ ಹಟಬಿಡದ ತ್ರಿವಿಕ್ರಮನಂತೆ ಮಕ್ಕಳನ್ನು ಅವರವರ ತರಗತಿಯ ಜತೆ ಹೇಗೋ ಸಮೀಕರಿಸಿಕೊಂಡು ಪಾಠ ಮಾಡುತ್ತ ಶಿಕ್ಷಣಸೇವೆಯನ್ನು ಮುಂದುವರಿಸಿಯೆ ಇದ್ದರು.

    ವಿದ್ಯಾಗಮವೆಂಬ ಪ್ರಾಥಮಿಕ ಶಾಲೆಯ ಪ್ರಯೋಗವಂತೂ ಹಳ್ಳಿಗಳ ಶಿಕ್ಷಕರ ಪಾಲಿಗೆ ಸವಾಲಿನ ಕೆಲಸವಾಗಿಬಿಟ್ಟಿತ್ತು. ದೇವಸ್ಥಾನದ ಪ್ರಾಂಗಣ, ಮಸೀದಿಯ ಚರ್ಚುಗಳ ಆವರಣ, ಗ್ರಾಮ ಪಂಚಾಯಿತಿಯ ಅಂಗಳ ಹೀಗೆ ಕಂಡಕಂಡಲ್ಲಿ ಮಕ್ಕಳನ್ನು ಕೂರಿಸಿಕೊಂಡು ಪಾಠ ನಡೆಸುವ ಕೆಲಸವನ್ನು ನಮ್ಮ ಶಿಕ್ಷಕರು ಮಾಡಿದರು. ಪರಿಣಾಮ ಅನೇಕರಿಗೆ ಕರೊನಾ ತಗುಲಿಕೊಂಡಿತ್ತು. ಅನೇಕ ಶಿಕ್ಷಕರ ಬಲಿದಾನವಾಯಿತು. ಪರಿಣಾಮ ವಿದ್ಯಾಗಮ ನಿಲ್ಲಿಸಲಾಯಿತು. ದಸರಾ-ದೀಪಾವಳಿ ರಜೆಗಳು ಅಯೋಮಯವಾಗಿ ಶಿಕ್ಷಕರು-ಶಿಕ್ಷಕಿಯರು ಶಾಲೆಗಳಿಗೆ ಹೋಗಿ ಕೂತು ಬರುವಂಥ ದಿನಗಳು ಪ್ರಾಪ್ತವಾದವು. ನನ್ನ ಹಳ್ಳಿಯ ಶಾಲೆಯೊಂದರಲ್ಲಿ ನಡೆಯುತ್ತಿದ್ದ ವಿದ್ಯಮಾನವೊಂದು ನನ್ನ ಹೃದಯವನ್ನು ತಟ್ಟಿತು. ಆ ಘಟನೆಯನ್ನು ಹೇಳಲೇಬೇಕು. ಸುಮ್ಮನೆ ದಿನಾ ಬೆಳಗ್ಗೆ ಊಟ ಕಟ್ಟಿಕೊಂಡು ಬಂದು ಕೂತು ಸಂಜೆಯತನಕ ಕಾಲಹರಣ ಮಾಡಿ ಹೋಗುವುದೆಂದರೆ ಬೇಜಾರಿನ ಸಂಗತಿ ಎಂಬುದನ್ನು ಮನಗಂಡ ಆ ಶಾಲೆಯ ಶಿಕ್ಷಕ ವೃಂದ ಗುಟ್ಟಾದ ಕಾರ್ಯಕ್ರಮವನ್ನು ಇಲಾಖೆಯ ಆದೇಶವಿಲ್ಲದೆ ಪ್ರಾರಂಭಿಸಿತ್ತು. ಇದ್ದ ಕೆಲವೇ ಮಕ್ಕಳನ್ನು ಯಾವುದೋ ಒಬ್ಬ ಅನುಕೂಲವಂತರ ಮನೆಯ ಜಗುಲಿಯಲ್ಲಿ ಸೇರುವಂತೆ ನೋಡಿಕೊಳ್ಳುವುದು. ಒಬ್ಬೊಬ್ಬ ಶಿಕ್ಷಕರು ಒಂದೊಂದು ಗಂಟೆ ಅಲ್ಲಿಗೆ ಹೋಗಿ ಮಕ್ಕಳಿಗೆ ಅತ್ಯಗತ್ಯವಾದ ಪಾಠಗಳನ್ನು ಮಾಡಿ ಬರುವುದರ ಮೂಲಕ ವೃತ್ತಿ ಸಾರ್ಥಕತೆ ಕಂಡುಕೊಂಡಿದ್ದರು. ಕೆಲ ದಿನಗಳ ನಂತರ ಇಲಾಖೆಗೆ ಈ ವಿಷಯ ತಿಳಿದು ನಿಲ್ಲಿಸುವಂತೆ ಆದೇಶ ಬಂತು. ಇನ್ನು ಕೆಲ ಶಿಕ್ಷಕರು ಸೈಕಲ್ ಏರಿ ಹಳ್ಳಿಗಳ ಮನೆಮನೆಗೆ ತೆರಳಿ ಪಾಠ ಮಾಡಿದರು. ನಗರಗಳಲ್ಲಿ ಆನ್​ಲೈನ್ ತರಗತಿಗಳು ಅಬಾಧಿತವಾಗಿ ನಡೆದುಕೊಂಡೇ ಇವೆ. ಲ್ಯಾಪ್​ಟಾಪ್​ಗಳಲ್ಲಿ ತಮ್ಮ ಅಕೌಂಟನ್ನು ಮ್ಯೂಟ್ ಮಾಡಿಕೊಂಡು ಅತ್ತಿತ್ತ ಸಂಚರಿಸುತ್ತ, ಆಟವಾಡುತ್ತ ಕಾಲಕಳೆಯುವ ಚಾಕಚಕ್ಯತೆಯನ್ನು ಕೆಲಮರಿಗಳು ಬೆಳೆಸಿಕೊಂಡಿವೆ. ‘ವರ್ಕ್ ಫ್ರಮ್ ಹೋಮ್ ಎಂಬ ಕೊನೆ ಮೊದಲಿಲ್ಲದ ಶೋಷಣೆಗೆ ಒಳಗಾಗಿರುವ ಉದ್ಯೋಗಸ್ಥ ತಾಯಿ-ತಂದೆಗಳು ತಂತಮ್ಮ ರೂಮಿನಲ್ಲಿ ಸೇರಿಕೊಂಡು ಈ ಮಕ್ಕಳ ಉಪಟಳದಿಂದ ಹೇಗೋ ತಪ್ಪಿಸಿಕೊಂಡಿರತೊಡಗಿದರು.

    ಇದೀಗ ಶಾಲೆಗಳು ಅಧಿಕೃತವಾಗಿ ತೆರೆಯಲ್ಪಟ್ಟಿವೆ. ಪ್ರಾರಂಭದಲ್ಲಿದ್ದ ಕರೊನಾ ಭಯವೂ ಕಡಿಮೆಯಾಗಿದೆ. ಜನರ ಓಡಾಟ ನಡೆದೇ ಇರುವುದರಿಂದ ಚಿಕ್ಕ ಮಕ್ಕಳ ಪಾಲಕರಿಗೂ ಶಿಕ್ಷಕರಿಗೂ ಸವಾಲು ತಪ್ಪಿದ್ದಲ್ಲ. ಮಕ್ಕಳನ್ನು ಸುರಕ್ಷತಾ ಕ್ರಮಗಳ ಹೊಸ ಜಾಗೃತಿಗೆ ಒಗ್ಗಿಸಿಕೊಳ್ಳುವುದು ಶಿಕ್ಷಕರ ಮುಂದಿನ ಸವಾಲು (ಅಂತರ ಕಾಯ್ದುಕೊಳ್ಳುವಿಕೆ ಎಂಬುದು ಆ ವಯಸ್ಸಿನ ಮಕ್ಕಳ ಜಾಯಮಾನವಲ್ಲ ನೋಡಿ). ತರಗತಿಗಳಲ್ಲಿ ಶಿಸ್ತುಬದ್ಧವಾಗಿ ಕುಳಿತುಕೊಳ್ಳುವ ಅಭ್ಯಾಸವೇ ತಪ್ಪಿಹೋದ ಮಕ್ಕಳನ್ನು ಶಿಸ್ತಿಗೆ ಒಳಪಡಿಸುವುದು ಸವಾಲೇ ಆಗಬಹುದು. ಪಾಲಕರು ಈ ಹಂತದಲ್ಲಿ ತಾಳ್ಮೆಯಿಂದ ಕೆಲ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ನೋಡಿಕೊಳ್ಳಬೇಕು. ಇಡೀ ದಿನ ಮಾಸ್ಕ್ ಧರಿಸಿ ಕುಳಿತುಕೊಳ್ಳಬೇಕಾದ ಮಗು ಕಿವಿಯ ಎಳೆತಕ್ಕೆ ತುತ್ತಾಗಿ ನೋವನ್ನು ಅನುಭವಿಸಬಹುದು. ಅದನ್ನು ತಪ್ಪಿಸಲು ಮಾಸ್ಕ್​ನ್ನು ಕಿವಿಗೆ ಸಿಕ್ಕಿಸುವ ಬದಲು ಹಿಂದೆ ಕಟ್ಟಿಕೊಳ್ಳುವಂತೆ ಉದ್ದದ ದಾರವಿರುವ ಮಾಸ್ಕ್​ಗಳನ್ನು ಸಿದ್ಧಪಡಿಸುವುದು ಉತ್ತಮ. ಕೈ-ಮುಖಗಳ ನೈರ್ಮಲ್ಯದ ಅರಿವು ಮಗುವಿಗೆ ಮೂಡುವಂತೆ ಮನೆಯಲ್ಲೇ ತರಬೇತಿ ನೀಡಿದರೆ ಶಿಕ್ಷಕರ ಕೆಲಸ ಸುಗಮವಾದೀತು. ಅಂತೂ ಕರೊನಾ ಮುಂಜಾಗ್ರತೆಯೊಂದಿಗೆ ಮಕ್ಕಳನ್ನು ಶಿಕ್ಷಣ ವಾಹಿನಿಯಲ್ಲಿ ತೊಡಗಿಸಿಕೊಳ್ಳುವ ಕೆಲಸದಲ್ಲಿ ಪಾಲಕರಿಗೂ ಶಿಕ್ಷಕರಿಗೂ ಜಯ ಲಭಿಸಲೆಂದು ಆಶಿಸುತ್ತೇನೆ.
    (ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts