Friday, 16th November 2018  

Vijayavani

Breaking News

‘ಗಜಮುಖದವಗೆ ಗಣಪಗೇ’ ಎಂದಾಗ ಮೈದಳೆದ ಗಣೇಶ

Thursday, 13.09.2018, 2:04 AM       No Comments

‘ಗಜಮುಖ ನಾನಿನ್ನ ಪಾದವ ನೆನೆವೇ

ನಿಜವಾಗಿ ಕರುಣಿಸೋ ವರಗಳ ಪ್ರಭುವೇ..’

-ನಾಲ್ಕೇ ಸಾಲುಗಳ ಈ ಪ್ರಾರ್ಥನೆಗಿರುವ ‘ಶಕ್ತಿ’ಯ ದರ್ಶನ ಮಾಡಿಸಿದವರು ಯಕ್ಷಗಾನದ ಭಾಗವತರುಗಳು. ಭಿನ್ನಭಿನ್ನ ಶೈಲಿ ರಾಗಗಳಲ್ಲಿ ಗಣಪನ ಸ್ತುತಿಮಾಡಿದ ಬಳಿಕವೇ ಪ್ರಸಂಗ ತೊಡಗುವುದು. ಯಕ್ಷಗಾನದ ಆಪದ್ಬಂಧುವೇ ಗಣಪತಿ. ಚೌಕಿಮನೆಯಲ್ಲಿ (ಪಾತ್ರಧಾರಿಗಳು ಬಣ್ಣ ಬಳಿದುಕೊಳ್ಳುವ ಜಾಗ) ಯಕ್ಷಗಾನದ ಕಿರೀಟವನ್ನಿಟ್ಟು ಪೂಜಿಸಿದ ಬಳಿಕವೇ ರಂಗಸ್ಥಳಕ್ಕೆ ಪಾತ್ರಗಳ ಪ್ರವೇಶವಾಗುವುದು. ಆಟ ಮುಗಿದ ಬಳಿಕವೂ ಕಿರೀಟವನ್ನು ರಂಗಸ್ಥಳದಲ್ಲಿ ತಂದಿಟ್ಟು ‘ಗಜಮುಖದವಗೆ ಗಣಪಗೆ ಚೆಲ್ವ ತ್ರಿಜಗವಂದಿತಗೆ ಆರತಿ ಎತ್ತಿರೆ ಆರತಿ ಬೆಳಗಿರೇ…’ ಎಂದು ಮಂಗಲ ಹಾಡಲಾಗುತ್ತದೆ.

ಹೀಗೆ ಯಕ್ಷಗಾನ ಕ್ಷೇತ್ರದಲ್ಲಿ ಪೂಜಿತನಾದ ಗಣಪತಿಗೆ ಯಕ್ಷಗಾನದ ವೇಷಭೂಷಣ ತೊಡಿಸಿ, ಯಕ್ಷಕಿರೀಟವಿಟ್ಟು, ಪೂರಾ ‘ಯಕ್ಷಗಣಪ’ನನ್ನೇ ಶಿಲೆಯಲ್ಲಿ ಸಾಕಾರಗೊಳಿಸಿ ಅವನಿಗೆಂದೇ ದೇವಾಲಯವನ್ನೇ ನಿರ್ವಿುಸಿ ಪೂಜಿಸಬೇಕೆಂಬ ಕನಸು ಕಂಡು ಅದನ್ನು ಸಾಕಾರಗೊಳಿಸಿದವರು ಯಕ್ಷಗಣಪ ಭಕ್ತ ಕಲಗದ್ದೆ ವಿನಾಯಕ ಎಂಬ ಯಕ್ಷಗಾನ ಕಲಾವಿದ. ತಾನು ಯಕ್ಷಗಾನ ಕಲಿಯುವಾಗ ಇಡಗುಂಜಿ ಮೇಳದ ‘ಗಣಪ ಭಕ್ತಿ’ಯನ್ನು ಕಣ್ಣಾರೆ ಕಂಡವರೀತ. ಪ್ರತಿವರ್ಷ ಇಡಗುಂಜಿಯಲ್ಲಿ ಗಣಪನಿಗೆ ಹರಕೆ ಆಟ ಆಡುವ ಕ್ರಮ ತಪ್ಪಿಲ್ಲ. ಕೆರೆಮನೆ ಶಂಭು ಹೆಗಡೆ ಅವರು, ತಮ್ಮ ಬದುಕಿನ ಕೊನೆಯ ಆಟದ ಸೇವೆಯನ್ನು ಇಡಗುಂಜಿ ಗಣಪನ ಮುಂದೆ ಅಭಿನಯಿಸುತ್ತಲೇ ನೇಪಥ್ಯಕ್ಕೆ ಸರಿದ ಮಹಾನ್ ಕಲಾವಿದ. ಕಲಗದ್ದೆ ವಿನಾಯಕರು ‘ಶಂಭುಶಿಷ್ಯ’.

ಹೀಗೆ ಯಕ್ಷಗಾನ ಲೋಕದ ಜಗದ್ವಂದ್ಯ ಗಣಪ ಇದೀಗ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಲಗದ್ದೆ (ಇಟಗಿ ಬಳಿ) ಎಂಬ ಪುಟ್ಟಹಳ್ಳಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ. ಇದು ಜಗತ್ತಿನಲ್ಲಿಯೇ ಪ್ರಥಮ ಯಕ್ಷಗಾನ ನಾಟ್ಯ ವಿನಾಯಕ ದೇಗುಲ. ಈ ಪ್ರಥಮಪೂಜಿತನ ಮೂರ್ತಿಯ ಮುಂದೆ ನಿಂತ ಎಂಥವನೂ ಒಂದು ಕ್ಷಣ ಮೈಮರೆಯುತ್ತಾನೆ. ಚೌಕಿಮನೆಯಲ್ಲಿ ಪೂಜಿಸಲ್ಪಡುವ ಯಕ್ಷಗಣಪ ಇಲ್ಲಿ ಪೂರ್ಣಾಂಗವಾಗಿ ಯಕ್ಷಗಾನದ ಕಿರೀಟ, ವೇಷಭೂಷಣ ಧರಿಸಿದ್ದಾನೆ.

ವಿನಾಯಕ ಹೆಗಡೆ ಕಲಗದ್ದೆ ನೇತೃತ್ವದಲ್ಲಿ ನಿರ್ವಣಗೊಂಡ ಈ ಕಲಾದೇಗುಲ, ನಾಟ್ಯ ವಿನಾಯಕನ ಮೂರ್ತಿಯನ್ನು ‘ನಿತ್ಯಪೂಜೆ’ಯ ಮೂಲಕ ಸಂಪ್ರೀತಗೊಳಿಸುವ ಆರಾಧನಾ ಕ್ಷೇತ್ರವಾಗಿ ಮೂಡಿಬಂದಿದೆ. ಕಲಗದ್ದೆಯ ಪಕ್ಕದಲ್ಲೇ ಜುಳುಜುಳು ಹರಿಯುವ ಸೋಮನದಿ (ಹಳ್ಳಿಗರಿಗೆ ಅದು ಮಳಲಹೊಳೆ)ಯಲ್ಲಿ ಶಿಲೆಯೊಂದನ್ನು ಗಣಪನೆಂದು ಆರಾಧಿಸುವ ವಿನಾಯಕಣ್ಣ, ಯಕ್ಷಗಣಪನನ್ನೂ ಪ್ರತಿಷ್ಠಾಪಿಸಿ ದೇವಾಲಯ ನಿರ್ವಣಕ್ಕೆ ತೊಡಗಿಯೇಬಿಟ್ಟರು.

‘ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಿ ಬಡವನಯ್ಯಾ’ ಎಂದು ಹಾಡುವ ಆರ್ಥಿಕ ಸ್ಥಿತಿಯಲ್ಲಿರುವ ಕಲಾವಿದ ವಿನಾಯಕ ಅವರು ದೇವಸ್ಥಾನ ಕಟ್ಟಿಸಬೇಕೆಂದು ತಾವಾಗಿಯೇ ಯಾರಲ್ಲಿಯೂ ಹಣಕಾಸಿನ ನೆರವು ಕೇಳಿಲ್ಲ. ಭಕ್ತರೇ ‘ನಾನೊಂದು ಕಂಬ, ನಾನೊಂದು ಬಾಗಿಲು’ ಎಂದು ಮುಂದೆಬಂದು ನೆರವಿನ ಹಸ್ತ ಚಾಚುತ್ತಿದ್ದಾರೆ. ಎಡನೀರು ಮಠದ ಕೇಶವಾನಂದ ಭಾರತೀ ಮಹಾಸ್ವಾಮಿಗಳಿಂದ ದೇವಾಲಯದ ಶಂಕುಸ್ಥಾಪನೆಯಾಗಿ, ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳಿಂದ ಈ ದೇಗುಲ ಲೋಕಾರ್ಪಣೆಗೊಂಡಿದೆ.

ಬೆಂಗಳೂರಿನಲ್ಲಿ ನೆಲೆಸಿರುವ ಖ್ಯಾತ ಶಿಲ್ಪಿ ಜಿ.ಎಲ್. ಭಟ್ ಅವರು ಮೂರ್ನಾಲ್ಕು ತಿಂಗಳು ಅವಿರತ ಶ್ರಮದಿಂದ ನಾಲ್ಕು ಅಡಿ ಎತ್ತರದ ಮೂರ್ತಿಯನ್ನು ಕೆತ್ತನೆ ಮಾಡಿ ಧನ್ಯರಾಗಿದ್ದಾರೆ. ಯಕ್ಷಗಾನದ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿರುವ ಈ ಮೂರ್ತಿಯ ಶಿರದಲ್ಲಿ ಶೋಭಿಸುತ್ತಿರುವುದು ಯಕ್ಷಗಾನದ ಕಿರೀಟ. ಈ ಯಕ್ಷಕಿರೀಟಕ್ಕೆ ವಿಶೇಷ ಶಕ್ತಿ, ಪ್ರಾಮುಖ್ಯ ಇರುವುದಾಗಿ ಭಕ್ತರ ನಂಬಿಕೆ. ಯಕ್ಷಗಾನ ಮೇಳಗಳು ಊರೂರು ತಿರುಗಾಟದಲ್ಲಿ ಈ ಕಿರೀಟವನ್ನು ಒಯ್ಯುತ್ತವೆ. ತಾವುಳಿದ ಮನೆಯಲ್ಲಿಯೇ ಅದನ್ನಿಟ್ಟು ಪೂಜಿಸುತ್ತಾರೆ. ಆಟದ ಪ್ರಾರಂಭದಲ್ಲಿ ಚೌಕಿಮನೆಯಲ್ಲಿ ಚಂಡೆಮದ್ದಳೆ ಸಮೇತ ಚೌಕಿಪೂಜೆ ನಡೆಸಲಾಗುತ್ತದೆ. ಇದೇ ಗಣಪನ ಪೂಜೆಯೂ ಹೌದು.

ಯಕ್ಷಗಾನದಲ್ಲಿ ಸಿದ್ಧ ಡೈಲಾಗ್​ಗಳೆಂಬುದಿಲ್ಲ. ಭಾಗವತರು ಕಥಾಭಾಗವನ್ನು ಹಾಡುತ್ತ ಹೋದಹಾಗೆ ಮೊದಲು ನರ್ತಿಸುವ ಪಾತ್ರಗಳು ಆ ಹಾಡುಗಳ ಭಾವವನ್ನು ಅಭಿನಯಿಸಿ ತೋರಿಸುತ್ತಾರೆ. ಅದು ಸ್ವಗತದ ರೂಪದಲ್ಲಿರುವ ವಿವರಣೆಯಾಗಿರಬಹುದು, ಎದುರು ಪಾತ್ರಗಳ ಜತೆ ನಡೆಸುವ ಸಂಭಾಷಣೆಯಿರಬಹುದು, ಸ್ತ್ರೀಪಾತ್ರಗಳ ಜತೆ ನಡೆಸುವ ಪ್ರೇಮನಿವೇದನೆಯಿರಬಹುದು, ತನ್ನ ಆರಾಧ್ಯದೈವವೇ ಎದುರು ಪ್ರಕಟವಾದಾಗ ತನ್ಮಯನಾಗಿ ಭಕ್ತಿಪರವಶನಾಗಿ ನಡೆಸುವ ಭಕ್ತಿನಿವೇದನೆಯಿರಬಹುದು… ಎಲ್ಲದಕ್ಕೂ ಅವಕಾಶವಿರುವ ರಸಪ್ರಕಾರ ಈ ಯಕ್ಷಗಾನ. ಕಲಾವಿದನ ಜ್ಞಾನ, ಜಾಣ್ಮೆ, ವಾಕ್ಪಟುತ್ವ, ಪ್ರತ್ಯುತ್ಪನ್ನಮತಿತ್ವ ಎಲ್ಲವನ್ನೂ ಅವಲಂಬಿಸಿ ಅದ್ಭುತ ಪಾತ್ರಗಳ ಅನಾವರಣ ರಂಗದ ಮೇಲಾಗುವ ಏಕೈಕ ಕಲೆ ಈ ಯಕ್ಷಗಾನ.

ಯಕ್ಷಗಾನದ ಆರಾಧ್ಯದೈವ ಆದಿಪೂಜಿತ ಗಣಪ ಯಕ್ಷಗಾನ ಕಥಾಭಾಗಗಳಲ್ಲಿ ಕಾಣಿಸಿಕೊಳ್ಳುವುದುಂಟು. ಭೂಕೈಲಾಸದಲ್ಲಿ ಆತನದು ಕಾಮಿಕ್ ಪಾತ್ರ. ದುಷ್ಟರಾವಣ ತಪಸ್ಸಿನ ಮೂಲಕ ಶಿವನ ಆತ್ಮಲಿಂಗವನ್ನೇ ಪಡೆದು ಲಂಕೆಗೆ ಹೊರಟುಬಿಟ್ಟಿದ್ದಾನೆ (ಉಗ್ರಗಾಮಿಗಳ ಕೈಯಲ್ಲಿ ಅಣುಶಕ್ತಿ ಕೇಂದ್ರದ ಕೀ ಸಿಕ್ಕರೆ ಹೇಗೆ?). ಜಗತ್ತಿಗೇ ಉತ್ಪಾತ ಕಾದಿದೆ. ದೇವಾನುದೇವತೆಗಳು, ಋಷಿಮುನಿಗಳು ಗಣಪತಿಯಲ್ಲಿ ಓಡುತ್ತಾರೆ, ‘ವಿಘ್ನನಿವಾರಕಾ ಕಾಪಾಡು, ನಿಮ್ಮ ತಂದೆ ಭೋಳೇಶಂಕರ ತನ್ನ ಆತ್ಮಲಿಂಗವನ್ನೇ ರಾವಣನ ಕೈಯಲ್ಲಿಟ್ಟು ಕಳಿಸಿದ್ದಾನೆ. ಅವನೀಗ ಲಂಕೆಯತ್ತ ಹೊರಟಿದ್ದಾನೆ. ಹೇಗಾದರೂ ಮಾರ್ಗಮಧ್ಯದಲ್ಲಿ ಅವನನ್ನು ತಡೆದು ಲಿಂಗವು ಲಂಕೆಗೆ ಸೇರದಂತೆ ಮಾಡು…’ ಎಂದು ಪ್ರಾರ್ಥಿಸುತ್ತಾರೆ.

ನಮ್ಮ ಗಣಪ ‘ಬುದ್ಧಿ’ವಂತ. ಶಕ್ತಿಯಿಂದ ರಾವಣನನ್ನು ಮಣಿಸಲಾಗದು, ‘ಯುಕ್ತಿ’ಯೇ ಸೂಕ್ತ ಎಂದರಿತವ.

‘ಗೋಗಳ ಕಾಯುತ ಬಂದನು ಗಣಪ

ವಿಪ್ರನ ವೇಷದೊಳುsss

ಪ್ರಸಿದ್ಧ ಹಾಸ್ಯ ಕಲಾವಿದರು ಈ ಪಾತ್ರವನ್ನು ನಿರ್ವಹಿಸುತ್ತಾರೆ. ‘ಓ ಗಂಗೇ….. ಬಾ ಬಾ, ತಾತ್ತಾ’ ಎಂದು ಡೊಂಕುಹೆಜ್ಜೆಯಲ್ಲಿ ಕುಣಿಯುತ್ತ ಬರುವ ವಿಪ್ರವೇಷಧಾರಿ ಗೋ ಕಾಯುವ ಹುಡುಗ ರಾವಣನ ಕಣ್ಣಿಗೆ ಬೀಳುತ್ತಾನೆ. ನಿರ್ಜನ ಪ್ರದೇಶ (ದೇವಾನುದೇವತೆಗಳೇ ಗೋವುಗಳ ವೇಷ ಧರಿಸಿ ಸುತ್ತಲೂ ಮೇಯ್ದುಕೊಂಡಿವೆ), ಸಂಜೆಯಾಗುತ್ತ ಬಂದಿದೆ. ರಾವಣನಿಗೆ ನಿತ್ಯಾಹ್ನಿಕವಾಗಬೇಕು, ಸಮುದ್ರದಲ್ಲಿ ಅರ್ಘ್ಯ ನೀಡಿ ಸಂಧ್ಯಾವಂದನೆ ಪೂರೈಸಬೇಕು. ಕೈಯಲ್ಲಿ ಲಿಂಗವಿರುವುದರಿಂದ ಸಂಧ್ಯಾವಂದನೆ, ಅರ್ಘ್ಯ್ರದಾನ ಮಾಡುವಂತಿಲ್ಲ. ಲಿಂಗ ನೆಲಕ್ಕಿಡುವಂತಿಲ್ಲ. ಆಗ ಹೇಗೋ ಈ ಹುಡುಗನ ಮನವೊಲಿಸಿ, ‘ಮಗೂ ಸ್ವಲ್ಪಹೊತ್ತು ಈ ಲಿಂಗವನ್ನು ಹಿಡಿದುಕೊಂಡಿರು, ನಾನು ಅರ್ಘ್ಯ ನೀಡಿ ಈಗ ಬರುತ್ತೇನೆ’ ಎನ್ನುತ್ತಾನೆ ರಾವಣ. ‘ಆಗಬಹುದು, ಆದರೆ ನಾನು 3 ಬಾರಿ ಕರೆಯುವುದರೊಳಗೆ ನೀನು ಬಂದುಬಿಡಬೇಕು. ಇಲ್ಲವಾದಲ್ಲಿ ನಾನು ಲಿಂಗವನ್ನು ನೆಲಕ್ಕಿಟ್ಟುಬಿಡುವವ’ ಎನ್ನುತ್ತಾನೆ. ರಾವಣ ಸಮುದ್ರಕ್ಕೆ ತೆರಳಿ ಸಂಧ್ಯಾವಂದನೆ ಪ್ರಾರಂಭಿಸುವಷ್ಟರಲ್ಲಿಯೇ ‘ರಾವಣಾ’ ಮೊದಲ ಕರೆ ಬಾಲಕನಿಂದ ಬಂದಾಯ್ತು. ಈತ ಹೊರಡುವಷ್ಟರಲ್ಲಿಯೇ 2ನೇ ಬಾರಿ ‘ರಾವಣಾ’, 3ನೇ ಬಾರಿ ‘ರಾವಣಾ’ ಎಂದು ಕರೆದ ಬಾಲಕ ಆತ್ಮಲಿಂಗವನ್ನು ನೆಲಕ್ಕಿಟ್ಟುಬಿಡುತ್ತಾನೆ. ಅದು ಭೂಮಿಯಲ್ಲಿ ಬೇರಿಳಿದುಬಿಡುತ್ತದೆ. ಆಗ ಅಲ್ಲಿಗೆ ಬಂದ ರಾವಣನಿಗೆ ಅನಾಹುತದ ಅರಿವಾಗಿ ಕ್ರೋಧಗೊಂಡು ಹುಡುಗನ ತಲೆಯ ಮೇಲೊಂದು ಮುಷ್ಟಿಗುದ್ದು ನೀಡುತ್ತಾನೆ. ಆತನ (ಗಣಪತಿಯ) ತಲೆಯಲ್ಲಿ ಹೊಂಡವಾಗಿಬಿಡುತ್ತದೆ. ಈ ಕತೆ ನಡೆದಿದೆಯೆಂದು ನಂಬಲಾಗುವ ಗೋಕರ್ಣದಲ್ಲಿರುವ ಗಣಪತಿಯ ತಲೆಯಲ್ಲಿ ಈ ಕುಳಿ ಇರುವುದು ಕತೆಗೆ ಪುಷ್ಟಿನೀಡುತ್ತದೆ. ನೆಲದಲ್ಲಿಟ್ಟ ಲಿಂಗವನ್ನು ಕೀಳಹೊರಟ ರಾವಣ ಅದು ಮೇಲೇಳದೇ, ಧಾರೆಧಾರೆಯಾಗಿ ಕೈಗೆ ಬಂದಾಗ ಅದನ್ನೆಸೆಯುತ್ತಾನೆ. ಅದು ಹೋಗಿ ಬಿದ್ದ ಜಾಗ ‘ಧಾರೇಶ್ವರ’ ಎನ್ನಿಸಿಕೊಂಡಿದೆ. ಮುರುಡೆ ಮುರುಡೆಯಾದ ಲಿಂಗದ ಅಂಶ ಹೋಗಿ ಬಿದ್ದ ಜಾಗ ಮುರುಡೇಶ್ವರ ಕ್ಷೇತ್ರವಾಗಿದೆ.

ಹೀಗೆ ಜಗತ್ತಿಗೆ ಬಂದ ಕಂಟಕವನ್ನು ತನ್ನ ಬುದ್ಧಿಮತ್ತೆಯ ಬಲದಿಂದ ನಿವಾರಿಸಿದ ವಿಘ್ನನಿವಾರಕ, ಕರಾವಳಿಯುದ್ದಕ್ಕೂ ಅಲ್ಲಲ್ಲಿ ಕ್ಷೇತ್ರಗಳಲ್ಲಿ ನೆಲೆಸಿ ಪೂಜೆಗೊಳ್ಳುತ್ತಿದ್ದಾನೆ. ಕುಂದಾಪುರದ ಆನೆಗುಡ್ಡೆ, ಹಟ್ಟಿಯಂಗಡಿ, ಹೊನ್ನಾವರದ ಇಡಗುಂಜಿ, ಮುಂದೆ ಗೋಕರ್ಣ ಹೀಗೆ ಗಣಪ ನಿಂತ ಕ್ಷೇತ್ರಗಳೆಲ್ಲ ಪುಣ್ಯಕ್ಷೇತ್ರಗಳೇ ಆಗಿವೆ.

ಹೀಗೆ ಯಕ್ಷಗಾನದೊಳಗೂ ಪಾತ್ರವಾಗಿ ಪ್ರವೇಶಿಸಿರುವ ನಮ್ಮ ಯಕ್ಷಾರಾಧ್ಯ ಗಣಪನಿಗೆ, ಕಲಗದ್ದೆಯ ದೇಗುಲದಲ್ಲಿ ಪಂಚೆಯ ಬದಲು ಕಸೆ ಸೀರೆ (ಚೌಕಳಿ ಪಂಚೆ) ಉಡಿಸಲಾಗಿದೆ. ಇದನ್ನು ಯಕ್ಷಗಾನದ ರಾಜ ವೇಷಧಾರಿಗಳು ಧರಿಸುತ್ತಾರೆ. ತಲೆಯಲ್ಲಿ ನವಿಲುಗರಿಯಿಂದ ಶೋಭಿತವಾದ ರಾಜಕಿರೀಟ, ಎದೆಹಾರ, ಭುಜಕೀರ್ತಿ, ಕೈಕಟ್ಟು, ಬಾಜುಬಂದಿ, ವೀರಗಾಸೆ, ಸೊಂಟದಪಟ್ಟಿ, ಸರಗಳು, ಕೈಗಳಿಗೂ ಕಾಲ್ಗಳಿಗೂ ಕಡಗ, ಯಕ್ಷಗಾನಕ್ಕೇ ವಿಶಿಷ್ಟವಾದ ಕಾಲ್ಗೆಜ್ಜೆ…. ನವಿರಾದ ಕೆತ್ತನೆಯಲ್ಲಿ ಅರಳಿನಿಂತ ಸುಂದರ ಯಕ್ಷಗಣಪನೀತ. ‘ಥೈ ಥೈಯತ್ತ ಧಿನ್ನ’ ಎಂಬಂತೆ ಯಕ್ಷನರ್ತನದ ಹೆಜ್ಜೆಯಿಕ್ಕುವ ಭಂಗಿಯಲ್ಲಿ ಕಂಗೊಳಿಸುವ ಮುದ್ದುಗಣಪನೀತ. ಆತನ ಪಾದಗಳಡಿ ಪವಡಿಸಿರುವ ಆತನ ವಾಹನ ಮೂಷಿಕಣ್ಣನಿಗೂ ಯಕ್ಷಗಾನದ ಕಸೆ ಸೀರೆಯದೇ ಹೊದಿಕೆ ಹೊದಿಸಿರುವುದು ಶಿಲ್ಪಿಯ ಯಕ್ಷಚಿಂತನೆಗೆ ದ್ಯೋತಕವಾಗಿದೆ.

ಈ ನಾಟ್ಯ ವಿನಾಯಕನಿಗೆ ನಿತ್ಯ ಕಡಲೆ ನೈವೇದ್ಯ, ಗರಿಕೆ, ಹೂಗಳ ಅಲಂಕಾರ, ಗಣಹೋಮ ಸೇವೆ ಹಾಗೂ ಹರಕೆ ಯಕ್ಷಗಾನ ಸೇವೆಗಳು ವಿಶೇಷ ಅನುಗ್ರಹಕ್ಕೆ ಪಾತ್ರವಾಗುವ ಸೇವೆಗಳಾಗಿವೆ. ಕಳೆದ ಜುಲೈ 18ರಂದು ಲೋಕಾರ್ಪಣೆಗೊಂಡಿರುವ ಈ ಯಕ್ಷಗಣಪನ ಗುಡಿ ಈಗಾಗಲೇ ಭಕ್ತರಿಗೆ ‘ಪ್ರಸಾದ’ ಕೊಡುವ ತನ್ನ ವಿಶಿಷ್ಟ ಔದಾರ್ಯದಿಂದ ಭಜಕರ ಆಸಕ್ತಿಯ ಆಸ್ತಿಕಕೇಂದ್ರವಾಗಿ ಮೆಲ್ಲನೆ ರೂಪುಗೊಳ್ಳುತ್ತಿದೆ. ಸಹ್ಯಾದ್ರಿ ಬೆಟ್ಟಗಳ ಸಾಲಿನ ತಪ್ಪಲಿನಲ್ಲಿ ಸೋಮನದಿಯ ದಂಡೆಯಲ್ಲಿ ಬಂದು ನೆಲೆನಿಂತ ನಮ್ಮೀ ‘ಯಕ್ಷಗಣಪ’ನಿಗೆ ‘ಕರದೊಳು ಪಾಶ ಅಂಕುಶಧಾರಿಗೆ, ಹರುಷದಿ ಭಕುತರ ಪೊರೆವವಗೆ, ಉರಗಭೂಷಣನ ಸುಕುಮಾರ ಗಜವದನನ ಚರಣಕಮಲಕೆ ಆರತಿ ಎತ್ತಿರೇ ಆರತಿಯ ಬೆಳಗಿರೇ, ಮಂಗಲಂ ಜಯಮಂಗಲಂ’ ಎಂದೇ ಭಾಗವತರ ಮಂಗಲಪದ್ಯಕ್ಕೆ ದನಿಗೂಡಿಸೋಣ.

(ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

Leave a Reply

Your email address will not be published. Required fields are marked *

Back To Top