ಮಕ್ಕಳ ಈ ಪ್ರೀತಿಗೆ ದೇವರು ಕರಗದಿರುತ್ತಾನೆಯೇ

‘ಕಾಲೇಜ್ ಡೇ’ ಬಂತೆಂದರೆ ವಿದ್ಯಾರ್ಥಿಗಳಿಗೆ ಉತ್ಸಾಹದ ಗಾಳಿ ಕಿವಿಗೆ ಹೊಕ್ಕಂತಾಗುತ್ತದೆ. ವರ್ಷವಿಡೀ ಪಾಠ, ನೋಟ್ಸು, ಪ್ರಾಕ್ಟಿಕಲ್ಸು, ಅಟೆಂಡೆನ್ಸು…. ಹೀಗೆ ಕಡ್ಡಾಯದ ಒಳಾಂಗಣ ಚಟುವಟಿಕೆಗಳು ಮುಗಿಯುವುದೇ ಇಲ್ಲ. ಸಿಲಬಸ್ ಮುಗಿಸದೇ ಪ್ರಾಧ್ಯಾಪಕರು ಉಸಿರು ಬಿಡುವುದೂ ಇಲ್ಲ. ಆಗ ತರಗತಿಗೆ ನೋಟೀಸೊಂದು ಬರುತ್ತದೆ. ಕಾಲೇಜು ವಾರ್ಷಿಕೋತ್ಸವ ಆಚರಣೆಯ ಕುರಿತು ರ್ಚಚಿಸಲು ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ತರಗತಿ ಪ್ರತಿನಿಧಿಗಳು ಹಾಗೂ ಪ್ರಾಧ್ಯಾಪಕ-ಪ್ರಾಧ್ಯಾಪಕಿಯರ ಸಭೆ ಕರೆಯಲಾಗಿದೆ. ದಿನಾಂಕ, ಅತಿಥಿಗಳ ನಿಗದಿಯಾಗಬೇಕಿದೆ ಎಂಬುದನ್ನು ಕೇಳಿದ ವಿದ್ಯಾರ್ಥಿ ಮುಖಂಡರು ಚುರುಕಾಗುತ್ತಾರೆ. ಸಭೆಯಲ್ಲಿ ಎಂದಿನಂತೆ ಪ್ರಾಂಶುಪಾಲರು ಒಂದೆರಡು ದಿನಾಂಕಗಳನ್ನು ಸೂಚಿಸಿ ಒಪ್ಪಿಗೆ ಪಡೆಯುತ್ತಾರೆ. ನಂತರದ್ದು ಅತಿಥಿಗಳ ಆಯ್ಕೆ. ಬಳಿಕ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಹೋಗುತ್ತದೆ. ಎಲ್ಲ ಬಾರಿಯೂ ಎಲ್ಲ ಕಾಲೇಜುಗಳಲ್ಲೂ ಹೀಗೇ ಆಗುತ್ತದೆಯೆಂದು ಹೇಳಲಾಗುವುದಿಲ್ಲ. ಉತ್ತಮ ವಾಗ್ಮಿಗಳು, ಹೆಸರಾಂತ ಹಳೆಯ ವಿದ್ಯಾರ್ಥಿಗಳು ಬರುತ್ತಾರೆ. ಬಹುಮಾನ ವಿತರಿಸುತ್ತಾರೆ. ಭಾಷಣ ಮಾಡುತ್ತಾರೆ (ವಿದ್ಯಾರ್ಥಿಗಳು ಕೇಳಿಸಿಕೊಳ್ಳುವುದಿಲ್ಲ ಎಂಬುದು ಬೇರೆ ಮಾತು). ಅಂತೂ ದೀರ್ಘ ಸಭಾ ಕಾರ್ಯಕ್ರಮ ಮುಗಿದಾಗ ಚಪ್ಪಾಳೆ ಮುಗಿಲು ಮುಟ್ಟುತ್ತದೆ.

ವೇದಿಕೆಯನ್ನು ವಿದ್ಯಾರ್ಥಿಗಳಿಗೆ ಬಿಟ್ಟುಕೊಡಲಾಗುತ್ತದೆ. ಕಾಲೇಜೆಂದರೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿಯಿರುವ ಮಕ್ಕಳ ಆಡುಂಬೊಲವೇ ಸರಿ. ಚೆನ್ನಾಗಿ ಹಾಡುವ ವಿದ್ಯಾರ್ಥಿಗಳು, ಭರತನಾಟ್ಯದ ವಿದ್ಯಾರ್ಥಿನಿಯರು, ಮಿಮಿಕ್ರಿ, ಸ್ಕಿಟ್ಟು, ನಾಟಕ, ಯಕ್ಷಗಾನ…. ನಿಗದಿತ ಸಮಯಕ್ಕೆ ಮುಗಿದ ದಾಖಲೆ ಇರಲಾರದು. ಮನರಂಜನಾ ಕಾರ್ಯಕ್ರಮದಲ್ಲಿ ಮುಳುಗೇಳುತ್ತಿರುವ ಯುವಸಮೂಹವನ್ನು ‘ಟೈಂ ಆಯ್ತು ಕಣ್ರಪ್ಪ, ಮನೆಗೆ ಹೋಗಿ’ ಎಂದು ಹೇಳಿ ಮಕ್ಕಳ ಇಚ್ಛೆಯ ವಿರುದ್ಧವಾಗಿ ಮನರಂಜನಾ ಕಾರ್ಯಕ್ರಮವನ್ನು ನಿಲ್ಲಿಸಬೇಕಾಗುತ್ತದೆ.

ವೇದಿಕೆಯ ಮೇಲೆ ನಡೆಯುವ ಭಾಷಣದಂತಹ ಗಂಭೀರ ಕಲಾಪಗಳನ್ನು ಯುವಸಮೂಹ ಗಂಭೀರವಾಗಿಯೇ ಕುಳಿತು ಕೇಳುತ್ತದೆ. ಮುಖ್ಯ ಅತಿಥಿಗಳ ಭಾಷಣ…. ಕೆಲವರು ವಿದ್ಯಾರ್ಥಿಗಳ ಹೃದಯ ತಟ್ಟುವಂಥವರಾದರೆ, ಕೆಲವರು ಮಕ್ಕಳ ಮಿದುಳಿಗೇ ಕೈಹಾಕಿ ಕೊರೆಯುವವರಿರುತ್ತಾರೆ. ಅಧ್ಯಕ್ಷ ಭಾಷಣ ಹೇಗೂ ಇರಲೇಬೇಕು. ವಿದ್ಯಾರ್ಥಿ ನಾಯಕರಲ್ಲೇ ಓರ್ವರು ವಂದನಾರ್ಪಣೆಗೈಯುತ್ತಾರೆ. ಇಲ್ಲಿಯವರೆಗೂ ವಿದ್ಯಾರ್ಥಿಗಳು ತಾಳ್ಮೆಯಿಂದ ಶಿಷ್ಟಾಚಾರ ಪಾಲಿಸಿಕೊಂಡು ಕೂತಿರುತ್ತಾರೆ. ತೀರಾ ತಮ್ಮ ಕ್ಲಾಸಿನವನು ಅದ್ಭುತ ಸಾಧನೆಗಾಗಿ ಮೆಡಲ್ ಪಡೆಯುವಾಗ ಚಪ್ಪಾಳೆ ಸೀಟಿಗಳು ಹೊಮ್ಮುತ್ತವೆಯಾದರೂ ಪ್ರಾಂಶುಪಾಲರು, ಅತಿಥಿಗಳು ಇರುವ ವೇದಿಕೆಯನ್ನು ಅವಮಾನಿಸುವ ಬಾಲಿಶ ಚೇಷ್ಟೆ ಮಾಡುವುದಿಲ್ಲ.

ಆದರೆ ಅಲ್ಪವಿರಾಮದ ಬಳಿಕ ಪ್ರಾರಂಭವಾಗುವ ಮಕ್ಕಳ ಪ್ರತಿಭಾ ಪ್ರದರ್ಶನದ ಮನರಂಜನಾ ಕಾರ್ಯಕ್ರಮದಲ್ಲಿ ಮಾತ್ರ ಪ್ರೇಕ್ಷಕವರ್ಗದ್ದು ಸಕ್ರಿಯ ಭಾಗವಹಿಸುವಿಕೆ! ಒಳ್ಳೆಯ ಹಾಡುಗಾರರಿಗೆ ಚಪ್ಪಾಳೆಯ ಸಾಥ್, ಚಕಾಚಕ್ ಡಾನ್ಸ್​ಗೆ ಕಳೆ ಏರಿತೆಂದರೆ ತಾವೂ ಕೂತಲ್ಲಿಂದ ಎದ್ದು ನಾಲ್ಕು ಹೆಜ್ಜೆ ಕುಣಿದೇ ಮೆಚ್ಚುಗೆ ವ್ಯಕ್ತಪಡಿಸಬೇಕು. ಕೆಲಬಾರಿ ಇಡೀ ಕ್ರೀಡಾಂಗಣವೇ ಎದ್ದು ನರ್ತಿಸತೊಡಗಿ ರಂಗದ ಕಡೆ ಬೆನ್ನುಹಾಕಿ ಪ್ರೇಕ್ಷಕರ ನಾಟ್ಯವನ್ನೇ ನೋಡುವಂತಿರುತ್ತದೆ. ಹುಡುಗಿಯರೂ ಕಡಿಮೆಯಿರುವುದಿಲ್ಲ. ಸಾಮೂಹಿಕ ನೃತ್ಯವೆಂಬ ‘ಸಮೂಹ ಸನ್ನಿ’ ಸನ್ನಿಹಿತವಾದಂತಿರುತ್ತದೆ. ಅದೇ ಕೀರಲುಕಂಠವೊಂದು ‘ನಿನ್ನಿಂದಲೇ… ನಿನ್ನಿಂದಲೇ..’ ಎಂದು ಕಿರ್ರೆಂದು ಹಾಡತೊಡಗಿದರೆ ಅದು ನಿಲ್ಲುವ ತನಕವೂ ಹೋಯೆಂದು ಬೊಬ್ಬಿರಿದು ಪ್ರತಿರೋಧ ಒಡ್ಡುವ ಕ್ರಿಯಾತ್ಮಕ ಪ್ರೇಕ್ಷಕಗಣ. ಹಾಡುವ ಪ್ರತಿಭೆಗಳೇನು ಕಡಿಮೆಯವರಲ್ಲ. ಸಹಪಾಠಿಗಳ ಪ್ರತಿರೋಧದ ನಡುವೆಯೂ ಹಾಡಿ ಮುಗಿಸಿಯೇಬಿಡುವ ಛಾತಿ ಉಳ್ಳವರೇ. ಆದರೆ ಇಂಥ ಕೀರಲು ಹಾಡುಗಳು ಅಪರೂಪವೇ. ಹೆಚ್ಚಿನ ಹಾಡುಗಾರರು ಪ್ರತಿಭಾವಂತರೇ. ವಾದ್ಯಗೋಷ್ಠಿ, ಆರ್ಕೆಸ್ಟ್ರಾ ಎಲ್ಲವನ್ನೂ ಲೀಲಾಜಾಲವಾಗಿ ನಿಭಾಯಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳಬಲ್ಲವರು. ಕಾಲೇಜು ಪ್ರತಿಭೆಗಳ ಅನಾವರಣದ ಒಂದು ಉತ್ಸವವೇ ಪ್ರತಿಭಾ ದಿನಾಚರಣೆ. ಈ ಉತ್ಸವದಿಂದ ಉತ್ಸಾಹ ತುಂಬಿಕೊಳ್ಳುವ ಪ್ರಾಧ್ಯಾಪಕ-ಪ್ರಾಧ್ಯಾಪಕಿಯರಿಗೂ ಇದೊಂದು ಚೇತೋಹಾರಿ ಅನುಭವ.

ಆದರೆ ಈ ಬಾರಿಯ ‘ಕಾಲೇಜ್ ಡೇ’ ದಿನ, ಕಾಲೇಜು ಯುವಕ-ಯುವತಿಯರ ಪ್ರೀತಿಯ ಮಾನವೀಯ ಕಳಕಳಿಗೆ ದೇವರೇ ಕರಗಿ ಆಶೀರ್ವದಿಸುತ್ತಿರುವಂತೆ ತೋರಿದ ಘಟನೆಯೊಂದು ನಡೆದುಹೋಯಿತು. ಶ್ರೀನಿವಾಸ ನಮ್ಮ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ. ತಾಯಿ ಟೀಚರ್, ತಂದೆ ಹವ್ಯಾಸಿ ಫೋಟೋಗ್ರಾಫರ್. ಅಜ್ಜಿಯ ಪ್ರೀತಿ, ಕುಟುಂಬದ ಸಂಸ್ಕಾರ, ಸಾಹಿತ್ಯಾಸಕ್ತಿ, ಯಕ್ಷಗಾನದ ತರಬೇತಿ…. ಹೀಗೆ ಬೆಳೆಯುವ ಮಕ್ಕಳಿಗೆ ಇರಬೇಕಾದ ಎಲ್ಲ ಸದ್ಗುಣಗಳು, ಜತೆಗೆ ವಿನಯವಂತ ಹಸನ್ಮುಖಿ. ಎಲ್ಲ ಪ್ರಾಧ್ಯಾಪಕ ವರ್ಗಕ್ಕೂ ಸಹಪಾಠಿಗಳಿಗೂ ಅಚ್ಚುಮೆಚ್ಚಿನ ಹುಡುಗ.

ನಾನು ಮಂಗಳೂರು ವಿಶ್ವವಿದ್ಯಾಲಯದ ಡಾ. ಶಿವರಾಮ ಕಾರಂತ ಪೀಠದ ನಿರ್ದೇಶಕಿಯಾಗಿದ್ದ ಸಂದರ್ಭದಲ್ಲಿ ಬಡಗುತಿಟ್ಟಿನ ಹೆಸರಾಂತ ಯಕ್ಷಗಾನ ಕಲಾವಿದರನ್ನು ಕರೆಸಿ ‘ಕೃಷ್ಣಸಂಧಾನ’ ಪ್ರದರ್ಶನ ಏರ್ಪಡಿಸಿದ್ದೆ. ನಿಮ್ಮ ವಿದ್ಯಾರ್ಥಿಗಳಿಗ್ಯಾರಿಗಾದರೂ ಆಸಕ್ತಿಯಿದ್ದರೆ ನಮ್ಮ ಜತೆ ಒಂದು ಪಾತ್ರಕ್ಕೆ ಬಣ್ಣ ಹಚ್ಚಿ ವೇದಿಕೆಯೇರಬಹುದು ಎಂದಿದ್ದರು ನಮ್ಮೂರ ಕಲಾವಿದರು. ಆಗ ಮುಂದೆ ಬಂದವನು ಇದೇ ಶೀನಣ್ಣ. ನೀಲಕೋಡ ಶಂಕರರ ದುರ್ಯೋಧನನ ಆರ್ಭಟದ ಜತೆಗೆ ದುಶ್ಶಾಸನನಾಗಿ ಈ ಹುಡುಗನಿಗೆ ವೇಷ ಹಾಕಿದ್ದರು. ತೆಂಕು ತಿಟ್ಟಿನ ಬಣ್ಣಗಾರಿಕೆಯನ್ನು ಕಂಡ ಹುಡುಗನಿಗೆ ಬಡಗಿನ ಪ್ರಸಿದ್ಧ ಕಲಾವಿದರ ಸೌಜನ್ಯ-ಪ್ರೀತಿಗಳು ವಿಶೇಷವೆನ್ನಿಸಿ ನನ್ನ ಬಳಿ ಅದೆಷ್ಟೋ ಸಲ ‘ಎಂಥ ಅವಕಾಶ ಕಲ್ಪಿಸಿಕೊಟ್ರಿ ಮೇಡಂ’ ಎನ್ನುತ್ತಲೇ ಇದ್ದ. ಆ ಯಕ್ಷಗಾನದ ಬಳಿಕ ಕಾಲೇಜಿನಲ್ಲಿ ಅವನಿಗೆ ಚೂರು ಸ್ಟಾರ್​ಗಿರಿ ಬಂದಂತಾಗಿ ಬಲು ಖುಷಿಯಿಂದ ಓಡಾಡಿಕೊಂಡಿದ್ದ. ನನ್ನ ಜತೆಗೆ ಧರ್ಮಸ್ಥಳ ಸಾಹಿತ್ಯ ಸಮ್ಮೇಳನ, ಆಳ್ವಾಸ್ ನುಡಿಸಿರಿ ಹೀಗೆ ನನ್ನ ಭಾಷಣಗಳಿಗೆಲ್ಲ ಕ್ಯಾಮರಾ ಹಿಡಿದು ಬರುತ್ತಿದ್ದ. ತನ್ನ ಮನೆಗೊಮ್ಮೆ ಕರೆದೊಯ್ದು ಊಟ ಹಾಕಿ ಕೃತಾರ್ಥನಾದೆ ಎಂದು ಹೇಳಿದ. ಕೇರಳದ ಗಡಿನಾಡ ಮೂಲೆಯ ಹಳ್ಳಿಯ ಅವನ ಮನೆಗೆ ಹೋಗಿ ಉಳಿದು ಸುತ್ತಲೂ ಇರುವ ಮಧೂರು, ಅನಂತಪುರ ದೇವಸ್ಥಾನಗಳ ದರ್ಶನ ಮಾಡಿಸಿ ಗುಡ್ಡ-ಬೆಟ್ಟ ತಿರುಗಾಡಿಸಿ ತಂದೆಯ ಕಾರನ್ನು ಜಾಗರೂಕತೆಯಿಂದ ಚಲಾಯಿಸಿ ಶಿಷ್ಯವಾತ್ಸಲ್ಯದ ಸಿಹಿ ಹಂಚಿದ್ದ. ಇಷ್ಟಾಗಿ ಕೆಲದಿನ ಕಳೆದಿರಬಹುದು. ಪರೀಕ್ಷೆ ಹತ್ತಿರವಾಗಿ ವಿದ್ಯಾರ್ಥಿಗಳು ಪುಸ್ತಕದತ್ತ ಮುಖಮಾಡಿದ್ದರಷ್ಟೆ. ಒಂದು ಬೆಳಗ್ಗೆ ‘ಶ್ರೀನಿವಾಸನಿಗೆ ಆಕ್ಸಿಡೆಂಟ್ ಆಗಿದೆಯಂತೆ, ಪ್ರಜ್ಞೆ ಬಂದಿಲ್ಲವಂತೆ…’ ಎಂಬ ಸುದ್ದಿ ಬಂತು. ಆಘಾತಗೊಂಡ ನಾವು ಕೆಲವು ಪ್ರಾಧ್ಯಾಪಕರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಧಾವಿಸಿದೆವು. ಐಸಿಯುನಲ್ಲಿ ಪ್ರಜ್ಞೆ ಇಲ್ಲದೆ ಮಲಗಿದ ಶಿಷ್ಯ. ಹೊರಗೆ ನಿಂತು ಕಣ್ಣೀರು ಸುರಿಸುತ್ತಿರುವ ಅವನ ಪ್ರೀತಿಯ ಕುಟುಂಬ. ಏನು ಧೈರ್ಯದ ಮಾತಂತ ಹೇಳುವುದು? ‘ದೇವರಿದ್ದಾನೆ, ಧೈರ್ಯ ತಂದುಕೊಳ್ಳಿ’ ಎಂದಷ್ಟೇ ಹೇಳಲು ಸಾಧ್ಯವಾಯ್ತು. ಒಳಗೆಹೋಗಿ ನೋಡಿದರೆ ಐದಾರು ಪೈಪುಗಳು, ಕಾಲಿಗೆ ಆಪರೇಷನ್ನು, ಕೈಗೆ ಬ್ಯಾಂಡೇಜು. ಅಷ್ಟು ನಿಧಾನವಾಗಿ ವಾಹನ ಚಲಾಯಿಸುವ ಈ ಹುಡುಗನ ಬೈಕಿಗೆ ಯಾವುದೋ ಕಾರು ಗುದ್ದಿದೆ. ಎಸೆಯಲ್ಪಟ್ಟ ಈತ ಯಾರದೋ ದಯೆಯಿಂದ ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದಾನೆ. ರಕ್ತ ನೀಡಲು, ಹಣ ಒದಗಿಸಿಕೊಡಲು… ನನ್ನ ಕಾಲೇಜಿನ ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತರು. ಒಂದು ಎರಡು…. ವಾರಗಳುರುಳಿದವು. ಕೋಮಾದಲ್ಲೇ ಇದ್ದಾನೆ. ಮಣಿಪಾಲಕ್ಕೆ ಒಯ್ದರು. ನಮಗೆಲ್ಲ ಹೋಗಿ ನೋಡುವುದು ಕಷ್ಟವಾಗತೊಡಗಿತು. ಆದರೆ ಅವನ ಸಹಪಾಠಿಗಳೂ ಪ್ರಾಣಸ್ನೇಹಿತರೂ ಆದ ಲೆವ್ಲಿನ್ ಲೋಬೋ, ಪವನ್ ಆಚಾರ್ಯ, ಒಂದಿಬ್ಬರು ಹುಡುಗಿಯರು ವಾರವಾರ ಮಣಿಪಾಲಕ್ಕೆ ಹೋಗಿಬರತೊಡಗಿದ್ದರು. ಇವತ್ತು ಶೀನ ಕಣ್ಬಿಟ್ಟ, ಕಾಲೆತ್ತಿದ…. ಎಂಬ ಸುದ್ದಿ ತರತೊಡಗಿದರು. ದಿನ ಉರುಳಿತು. ಇವರೆಲ್ಲ ಪರೀಕ್ಷೆ ಬರೆದರು. ಸ್ನೇಹಿತನಿಗೆ ಮಾತ್ರ ಕಾಲೇಜು, ಪರೀಕ್ಷೆ ಒಂದೂ ನೆನಪಿಲ್ಲ. ಇವರು ಆ ಸುದ್ದಿ ಎತ್ತಲೂ ಇಲ್ಲ. ಆರು ತಿಂಗಳು ಕಳೆಯಿತು. ಒಂದು ಸೆಮಿಸ್ಟರ್ ಉರುಳಿತು. ವರುಷ ಪೂರ್ತಿ ಆದಾಗ ಡಾಕ್ಟರು ಇನ್ನೀತ ಕಾಲೇಜಿಗೆ ಹೋಗಬಹುದು ಎಂದರು.

ಸ್ನೇಹಿತರು ಹೋಗಿಳಿದ ಕೂಡಲೇ ಶ್ರೀನಿವಾಸ ಮಗುವಿನ ಹಾಗೆ ನಗುತ್ತಿದ್ದ. ವಿಡಿಯೋ ಕಾಲ್​ನಲ್ಲಿ ನಮಗೆಲ್ಲ ‘ಹಾಯ್’ ಹೇಳಿಸುತ್ತಿದ್ದರು. ಮನೆಗೆ ಬಂದ ಬಳಿಕವೂ ಈ ವಿದ್ಯಾರ್ಥಿಗಳ ಆರೈಕೆ ಚೇತರಿಕೆ ಮುಂದುವರಿದೇ ಇತ್ತು. ಈ ವರ್ಷದ ಡಿಸೆಂಬರ್​ನಲ್ಲಿ ಶ್ರೀನಿವಾಸ ಪುನಃ ಕಾಲೇಜಿಗೆ ಸೇರಿದ್ದಾನೆ. ಅವನ ತರಗತಿಯ ಬೆಸ್ಟ್ ಫ್ರೆಂಡುಗಳು ಫೈನಲ್ ಇಯರ್​ನಲ್ಲಿ ಇವನು ದ್ವಿತೀಯ ಪದವಿಯಲ್ಲಿ. ಅದೇ ಕಾಲೇಜು, ಅದೇ ಪ್ರಾಧ್ಯಾಪಕರು. ಮಾತು ಕಳೆದುಕೊಂಡಿದ್ದ ಶ್ರೀನಿವಾಸ ಸ್ವಲ್ಪ ತೊದಲಿದರೂ ಮಾತನಾಡುತ್ತಾನೆ. ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತ ಕಾಲೇಜು ತುಂಬ ಓಡಾಡುತ್ತಾನೆ. ಕಾಲೇಜಿನ ಸಿಬ್ಬಂದಿ, ಗೇಟ್ ಕೀಪರ್​ಗಳು, ಕ್ಯಾಂಟೀನಿನವರು ಅವನ ತರಗತಿಯವರಲ್ಲದ ಹುಡುಗ-ಹುಡುಗಿಯರು ಈತನಿಗೆ ಪ್ರೀತಿಯ ಹಸ್ತ ಚಾಚುತ್ತಾರೆ. ಶ್ರೀನಿವಾಸ ಗೆಲುವಿನ ನಗೆ ಬೀರತೊಡಗಿದ್ದಾನೆ.

ಮೊನ್ನೆಯಷ್ಟೆ ‘ಕಾಲೇಜ್ ಡೇ’ ಜರುಗಿತು. ನಾನು ಹೇಳಿದಂತೆ, ಉತ್ಸಾಹದಲ್ಲಿ ಕೂತ ಯುವಪ್ರೇಕ್ಷಕರಿಗೆ ಒಂದು ಆಶ್ಚರ್ಯಾಘಾತ ತರುವ ಹೇಳಿಕೆ ಬಿತ್ತರವಾಯಿತು- ‘ಈಗ ನಮ್ಮ ಕಾಲೇಜಿನ ಮಗು ಶ್ರೀನಿವಾಸ ಪ್ರಸಾದ ಹಾಡಲಿದ್ದಾನೆ ಲೆವ್ಲಿನ್ ಜತೆಯಲ್ಲಿ’. ಇಬ್ಬರೂ ವೇದಿಕೆಯಲ್ಲಿ ಕಾಣಿಸಿಕೊಂಡಾಗ ಎದ್ದ ಚಪ್ಪಾಳೆಯ ಅಲೆ ಇಡೀ ಕಾಲೇಜಿನಲ್ಲಿ ಮನೆಮಾಡಿಕೊಂಡಿರುವ ಅಂತಃಕರಣಪೂರ್ವಕ ಪ್ರೀತಿಯ ಅನುರಣನದಂತಿತ್ತು. ಇನ್ನೂ ಹದಿನೆಂಟು ವರ್ಷದ ಸಹಪಾಠಿ. ತಾಯಿ ಮಗುವಿಗೆ ಹಾಡಲು ಕಲಿಸಿದಂತೆ, ಅನುನಯಿಸಿ ಹಾಡಿಸುತ್ತಿದ್ದಾನೆ. ಎಲ್ಲರ ಮೊಗದಲ್ಲೂ ಸಾರ್ಥಕತೆಯ ಭಾವ. ಇಡೀ ಹಾಡು ಮುಗಿಸಿ ಗೆಣೆಕಾರರಿಬ್ಬರೂ ಕೆಳಗಿಳಿಯುವ ತನಕವೂ ಸಾವಿರ ವಿದ್ಯಾರ್ಥಿಗಳ ಚಪ್ಪಾಳೆ. ‘ಮಕ್ಕಳ ಈ ಪ್ರೀತಿಗೆ ದೇವರು ಕರಗದಿರುತ್ತಾನೆಯೇ?’ ಎಂದುಸುರಿದ್ದೆ.

ಪ್ರೀತಿಯ ಪ್ರೋತ್ಸಾಹಕ್ಕೆ, ಪ್ರಾರ್ಥನೆಗೆ, ಅಂತಃಕರಣಪೂರ್ವಕ ಸ್ನೇಹಕ್ಕೆ ಅದೆಂಥ ಶಕ್ತಿಯಿದೆ. ಇನ್ನಾತ ಯಕ್ಷಗಾನದ ಪಾತ್ರಕ್ಕೂ ಬಣ್ಣ ಹಚ್ಚುವಂತಾದರೆ… ಅದು ನಮ್ಮ ಕಾಲೇಜಿನ ಆವರಣದೊಳಗೆ ನಡೆದುಬಿಡುವ ಪವಾಡವಾಗುತ್ತದೆ.

(ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)