ಬಡ ನೂರು ವರುಷಾನ ಹರುಷಾದಿ ಕಳೆಯೋಣ…

ಅಪ್ಪನಿಗೊಂದು ದಿನ, ಅಮ್ಮನಿಗೊಂದು ದಿನ, ಮಗುವಿಗೊಂದು ದಿನ, ಹಕ್ಕಿಗೊಂದು ದಿನ ಹಿಕ್ಕೆಗೊಂದು ದಿನ… ಹೀಗೆ 365 ದಿನವೂ ‘ದಿನಕ್ಕೊಂದು ದಿನ’ ಘೋಷಿಸುವ ವಿಶ್ವಸಂಸ್ಥೆ ಇವತ್ತಿನ (ಜ.10) ದಿನವನ್ನು ‘ವಿಶ್ವ ನಗುವಿನ ದಿನ’ ಎಂದು ಘೋಷಿಸಿದೆಯಂತೆ. ವರ್ಷದಲ್ಲಿ ಒಂದು ದಿನ ನೆನಪಿಟ್ಟುಕೊಂಡು ನಕ್ಕು ಬಿಟ್ಟರೆ ಸಾಕೆ? ಎಂದು ವಾದಿಸುವವರನ್ನು ಸದ್ಯಕ್ಕೆ ಬದಿಗಿಡೋಣ. ನಗಲೂ ಒಂದು ದಿನ ನಿಗದಿಯಾಗಬೇಕೆ? ಎಂದು ನಕ್ಕಾರವರು. ಆದರೆ ನಗುವನ್ನೇ ಮರೆತ ಚಿಂತಾಕ್ರಾಂತ ಜಗತ್ತಿಗೆ ‘ಅಯ್ಯಾ ನರನಾರೀಗಳೇ, ಪುರುಸೊತ್ತಿಲ್ಲದೆ ಅದೆಲ್ಲಿಗೋ ಓಡುತ್ತಿರುವವರೇ, ಹೇಳಿದ್ದೇನನ್ನೂ ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದವರೆ ಚಿಂತೆಬಿಟ್ಟು ನಗಲು ಆಗೀಗ ಸ್ವಲ್ಪ ಸಮಯ ಕೊಡಿಯಪ್ಪ, ದಿನಕ್ಕೊಮ್ಮೆ ನಕ್ಕರೆ ಒಳ್ಳೆಯದಿತ್ತು. ಹೋಗಲಿ ವರ್ಷಕ್ಕೊಮ್ಮೆಯಾದರೂ ನಗಿರಪ್ಪ, ನಗುವೆಂಬ ಆರೋಗ್ಯ ಟಾನಿಕ್ಕನ್ನು ಕುಡಿದು ಆರೋಗ್ಯ ವರ್ಧಿಸಿಕೊಳ್ಳಿ’ ಎಂದು ಕರೆಕೊಡುವ ಮಟ್ಟಿಗೆ ನಗು ವಿಶ್ವದಿಂದ ಮಾಯವಾಗುತ್ತಿದೆಯೇ?

ದಿನನಿತ್ಯ ನಮ್ಮನಾಳುವ ಉಳಿದ ಅನೇಕ ಭಾವಗಳನ್ನು ನೋಡಿ, ಸಿಟ್ಟು, ಹತಾಶೆ, ಕೋಪ, ಭಯ, ಉದ್ವೇಗ, ಚಿಂತೆ, ಆತಂಕ, ಕೀಳರಿಮೆ, ನಿರುತ್ಸಾಹ. ಅಬ್ಬಾ ಒಂದಕ್ಕಿಂತ ಒಂದು ಋಣಾತ್ಮಕ ಶಕ್ತಿಗಳೇ! ಒಂದಕ್ಕೊಂದು ಪೂರಕ. ಮುಖ್ಯ ದೇವರ ಜತೆ ಪರಿವಾರ ದೈವಗಳು ಬರುವ ಹಾಗೆ ಇವು ಒಂದರ ಹಿಂದೊಂದು ಬರುವಂಥವು. ಈ ಎಲ್ಲ ಭಾವಗಳ ಕಾರಣ ಮತ್ತು ಪರಿಣಾಮ ಎರಡೂ ದುಃಖವೇ. ಈ ಭಾವಗಳ ಅಳ್ವಿಕೆಗೆ ತುತ್ತಾದ ವ್ಯಕ್ತಿ ಒಂದೋ ತಾನು ದುಃಖಿತನಾಗುತ್ತಾನೆ, ಇಲ್ಲವೇ ಪರರಿಗೆ ದುಃಖ ನೀಡುತ್ತಾನೆ.

ಹೆಚ್ಚಿನ ಸಲ ಅದವನಿಗೆ ಗೊತ್ತಿಲ್ಲದೆ ಘಟಿಸುತ್ತಿರುತ್ತದೆ. ಈ ನಕಾರಾತ್ಮಕ ಭಾವಗಳಲ್ಲಿ ಯಾವುದನ್ನೇ ಆದರೂ ನಾವೇ ನಿಯಂತ್ರಣಕ್ಕೊಳಪಡಿಸದಿದ್ದರೆ, ಪರಿಹರಿಸಿ ಹೊರಬರದಿದ್ದರೆ ಅದು ನಮ್ಮ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು ನಮ್ಮ ಕೈ ಮೀರಿದಾಗಿರುತ್ತವೆ. ಅದಕ್ಕೇ ನಮ್ಮ ಮಾನಸಿಕ ವೈದ್ಯರು, ಯೋಗಿಗಳು, ಚಿಂತಕರು, ದಾರ್ಶನಿಕರು ಹೇಳುವುದೊಂದೇ. ಪ್ರಯತ್ನ ಪಟ್ಟಾದರೂ ಸಕಾರಾತ್ಮಕ ಧೋರಣೆಗಳನ್ನು ಅಳವಡಿಸಿಕೊಳ್ಳಿ. ಉಲ್ಲಸಿತರಾಗಲು ಅದು ನಿಮಗೆ ಸಹಾಯ ಮಾಡುತ್ತದೆ.

‘ದುಃಖ’ದ ವಿರುದ್ಧ ಪದ ‘ಸುಖ’ ತಾನೇ? ಆದರೆ ಭೌತಿಕ ಸುಖದ ಸೋಪಾನಗಳಾದ ಮನೆ, ಕಾರು, ಹಣ, ಫೋನು, ಫ್ಯಾನುಗಳಂಥ ವಿಲಾಸಿ ವಸ್ತುಗಳು ನಿಮಗೆ ‘ಸಂತೋಷ’ವನ್ನು ತರುತ್ತವೆಂದು ಹೇಳಲಾಗದು. ಅಲ್ಲವೆ? ಅಸೂಯೆ, ಅಹಂಕಾರಗಳಂಥ ಅಪಸವ್ಯಗಳಿಗೂ ದಾರಿ ಮಾಡಿಕೊಟ್ಟಾವು. ಅಂದ ಬಳಿಕ ಅರಿವಿಲ್ಲದೆ ಹೋಗಿ ಈ ನಕಾರಾತ್ಮಕ ಜಾಲದೊಳಗೆ ಸಿಲುಕಿಕೊಳ್ಳುವುದಕ್ಕಿಂತ ನಮ್ಮನ್ನು ಸಂತೋಷವಾಗಿಡಬಲ್ಲ ಸಕಾರಾತ್ಮಕ ಚಿಂತನೆಗಳನ್ನು ಪ್ರಯತ್ನ ಪಟ್ಟಾದರೂ ಬೆಳೆಸಿಕೊಳ್ಳಿ ಎಂಬುದು ವರ್ತನಾ ಶಾಸ್ತ್ರಜ್ಞರ ಅಂಬೋಣ.

‘ಅಳು’ವನ್ನು ಇಲ್ಲವಾಗಿಸುವ ‘ನಗು’ಮೂಡುವುದಾದರೂ ಎಲ್ಲಿಂದ! ನಮ್ಮ ಮನಸ್ಸು ಸಂತೋಷದಿಂದ ತುಂಬಿದ್ದಾಗ ಮಾತ್ರ ನಮಗೆ ನಗಲು ಸಾಧ್ಯ.

ದುಃಖವಾದಾಗ, ಕೋಪ ಬಂದಾಗ ನಗಬಲ್ಲವರು ಕಾಣಸಿಗರು. ಅಂದ ಬಳಿಕ ನಗುವಿನ ಕಾರಣ ಸಂತೋಷ ಎಂದಾಯ್ತು. ‘ನಮಗೆ ಸಂತೋಷವಾಗಿದೆ ಹಾಗಾಗಿ ನಾವು ನಗುತ್ತೇವೆ’, ಸರಿ ಆ ನಮ್ಮ ನಗುವಿನಲ್ಲಿ ಭಾಗಿಯಾದವರು, ನಗುವನ್ನು ಹಂಚಿಕೊಂಡವರು ಸಹ ಸಂತೋಷ ಪಡುತ್ತಾರೆ. ನಮ್ಮ ನಗು ಅವರ ಸಂತೋಷಕ್ಕೆ ಕಾರಣವಾಯಿತು. ಹಾಗೂ ಪರಿಣಾಮವೂ ಸಂತೋಷವೇ ಆಯಿತು. ಅಂದ ಬಳಿಕ ನಗುವಿನ ಕಾರಣ ಮತ್ತು ಪರಿಣಾಮ ಎರಡೂ ಸಂತೋಷವೇ. ನಿಖರವಾಗಿ ಹೇಳಬೇಕೆಂದರೆ ‘ನಗು’ ಅಂದರೆ ಇನ್ನೇನಲ್ಲ ಸಂತೋಷದ ವ್ಯಕ್ತರೂಪ ಎಂದಂತಾಯ್ತು. ಈ ‘ಸಂತೋಷ’, ‘ಆನಂದ’ಗಳೇ ನಮ್ಮ ಜೀವನದ ಗಮ್ಯ ಆಗಬೇಕೆಂಬುದೇ ನಮ್ಮ ಋಷಿಮುನಿಗಳ, ಉಪನಿಷತ್ಕಾರರ ಚಿಂತನೆಯೂ ಆಗಿತ್ತು. ಅದನ್ನು ಅರ್ಥಮಾಡಿಕೊಂಡ ನಮ್ಮ ಶ್ರೇಷ್ಠ ಕವಿಗಳು ನಗುವಿನ ಮಹತ್ವವನ್ನು ಇನ್ನಿಲ್ಲದಂತೆ ಸದಾ ಹಾಡಿ ಹೊಳಗಳುತ್ತಲೇ ಬಂದಿದ್ದಾರೆ.

ಹುಸಿ ‘ನಗು’ತ ಬಂದೇವ,/ನಸು ನಗುತ ಬಾಳೋಣ 

ತುಸು ನಗುತ ತೆರಳೋಣ./ಬಡ ನೂರು ವರುಷಾನ

ಹರುಷಾದಿ ಕಳೆಯೋಣ/ಯಾಕಾರ ಕೆರಳೋಣ?

| ಬೇಂದ್ರೆ

ಇದ್ದೊಂದು ನಾಲ್ಕು ದಿನ ಯಾರ್ಯಾರ ಮೇಲೆ ಸಿಟ್ಟು, ದ್ವೇಷ, ಹಠ ಸಾಧಿಸುತ್ತ ಕಳೆಯುವ ಬದಲು ತುಸು ನಗುತ್ತ ಕಳೆದರೆ ಎಷ್ಟು ಹಗುರ ಬದುಕು! ನಮ್ಮದೂ, ನಮ್ಮ ಸುತ್ತಮುತ್ತಲಿನವರದ್ದೂ!

ಈ ನಗುವನ್ನು ಪಡೆಯಲು ಕಷ್ಟ ಪಡಬೇಕಾಗಿಲ್ಲ. ನಮ್ಮ ಸುತ್ತಮುತ್ತಲಿನವರನ್ನು, ಸಂಗಾತಿ, ಮಕ್ಕಳನ್ನು ಪ್ರೀತಿಯಿಂದ ಕಾಣತೊಡಗಿದರೆ ಅಲ್ಲೇ ಸಂತೋಷದ ಒಂದು ಲೋಕ ಅರಳಿಕೊಳ್ಳುತ್ತದೆ.

ಬಡತನ, ಸಿರಿತನ ಕಡೆತನಕುಳಿದಾವೇನ ಎದೆ ಹಿಗ್ಗು ಕಡೆ ಮುಟ್ಟಿ |

ಬಾಳೀನ ಕಡಲಾಗ ಅದನು ಮುಳುಗಿಸಬ್ಯಾಡ ಕಡಗೋಲು ಹಿಡಿ ಹುಟ್ಟ… ಎಂದರು ಬೇಂದ್ರೆ. ‘ಎದೆ ಹಿಗ್ಗು’ ಎಂಬ ಅಮೃತಕಲಶವನ್ನೇ ತೋರಿದರು.

ಬಡವನಾದ ಎಂಡ್ಕುಡ್ಕ ರತ್ನ ಹೇಳುವುದೇನು?/ಏಳ್ಕೊಳ್ಳಾಕೊಂದೂರು, ತಲೆ ಮ್ಯಾಗೊಂದ್ಸೂರು/ಮಲಗಾಕೆ ಭೂಮ್ತಾಯಿ ಮಂಚ/ಕೈ ಹಿಡ್ದೋಳ್ ಪುಟ್ನಂಜಿ ನಗ್​ನಗ್ತಾ ಉಪ್ಗಂಜಿ/ಕೊಟ್ರಾಯ್ತು ರತ್ನನ್ ಪರ್ಪಂಚ
| ರಾಜರತ್ನಂ

ಪ್ರೀತಿ ತುಂಬಿದ ಉಪು್ಪಗಂಜಿಯೂ ಮೃಷ್ಟಾನ್ನ ಭೋಜನದ ದವಿಯನ್ನೊದಗಿಸುತ್ತದೆ. ಜೀವನಪ್ರೀತಿ ತುಂಬಿದೆಡೆ ಇರುವುದೇ ನಗು ‘ಫಕ್ಕನೊಮ್ಮೆ ನಕ್ಕು ಬಿಡು ಚಿಂತೆ ತೊಲಗಲಿ’ ಎಂದು ಕರೆ ನೀಡಿದವರು ನಮ್ಮ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ. ಚಿಂತೆಯನ್ನು (ಸಿಟ್ಟನ್ನೂ) ತೊಲಗಿಸಬಲ್ಲ ಏಕೈಕ ಅಸ್ತ್ರ, ಅಹಿಂಸಾತ್ಮಕ ಅಸ್ತ್ರವೆಂದರೆ ನಗು. ಈ ನಗುವಿನ ಅಸ್ತ್ರವನ್ನು ಸದಾ ಜಳಪಿಸುತ್ತ ನಮ್ಮ ಬತ್ತಳಿಕೆಯಲ್ಲಿಟ್ಟುಕೊಂಡರಾಯ್ತು. ನಮ್ಮ ಲೋಕ ಸದಾ ತುಂಬಿಕೊಂಡ ಸೇಫ್ ಲೋಕವಾಗಿಬಿಡುತ್ತದೆ. ‘ನಮ್ದೇ ಲೋಕ ವುಟ್ಟುಸ್ಗೋಬೇಕು, ಈ ಲೋಕಾನೇ ಮರ್ತ…’ ಎಂಬ ರಾಜರತ್ನಂ ವಾಣಿ ಹೇಳಿದ್ದು ಇದನ್ನೇ.

‘ಸರಿಯಪ್ಪ ನಗು ನಮಗೂ ಬೇಕು. ಆದರೆ ಎಲ್ಲಿ ಹುಡುಕೋದು ನಗುವನ್ನು?’ ಎನ್ನುವವರಿಗಾಗಿ ನಗುವನ್ನು ಮೊಗೆ ಮೊಗೆದು ಪೂರೈಕೆ ಮಾಡಲು ಟೊಂಕಕಟ್ಟಿ ನಿಂತ ಮನುಜರು ಬೇಕಷ್ಟಿದ್ದಾರೆ. ಕಳ್ಳರು, ಖದೀಮರು, ಲೋಭಿಗಳು, ಆಲಸಿಗಳು, ಕಪಟಿಗಳು ಸಹ ನಗುವನ್ನು ತಮಗರಿವಿಲ್ಲದೆ ಹುಟ್ಟಿಸುತ್ತಿರುತ್ತಾರೆ. ಅದನ್ನು ನೋಡಿ ಕೇಳಿ ನಗುವ ಪ್ರವೃತ್ತಿ ನಮ್ಮದಾಗಬೇಕು ಅಷ್ಟೆ.

ಇಬ್ಬರು ಶತ ಆಲಸಿಗಳು ಜೀವನೋಪಾಯಕ್ಕಾಗಿ ಯಾವ ದುಡಿಮೆಯನ್ನೂ ಮಾಡಲಾರದೇ ಕಳ್ಳತನಕ್ಕೆ ಇಳಿದಿರುತ್ತಾರೆ. ರಾತ್ರಿ ಯಶಸ್ವಿಯಾಗಿ ಬ್ಯಾಂಕೊಂದನ್ನ ದೋಚಿ ಅಲ್ಲಿದ್ದ ಹಣವನ್ನೆಲ್ಲ ಮೂಟೆ ಕಟ್ಟಿಕೊಂಡು ಮನೆಗೆ ಬರುತ್ತಾರೆ. ಮಲಗುವ ಮೊದಲು ಒಬ್ಬ ಕಳ್ಳ ‘ಎಲ್ಲ ಸರಿ, ಕದ್ದು ತಂದ ಹಣ ಎಷ್ಟಿದೆ ಅಂತ ಎಣಿಸಿ ಬಿಡೋಣ. ನಾಳೆ ಹಂಚಿಕೊಳ್ಳಬೇಕಲ್ಲ?’ ಎನ್ನುತ್ತಾನೆ. ಪರಮ ಆಲಸಿಯಾದ ಮತ್ತೋರ್ವ ಕಳ್ಳ ‘ಸುಮ್ನೆ ಮಲಗು. ನಾವೀಗ ಎಣಿಸಿ ಸಮಯ ವ್ಯರ್ಥ ಮಾಡೋದು ಬೇಡ. ನಾಳೆ ಹೇಗೂ ಪೇಪರ್​ನಲ್ಲಿ ನಿಖರವಾಗಿ ಲೆಕ್ಕ ಕೊಟ್ಟು ಪ್ರಕಟಿಸುತ್ತಾರೆ, ಆಗ ಓದಿಕೊಂಡ್ರಾಯ್ತು ಬಿಡು,’ ಅನ್ನುತ್ತಾನೆ.

‘ನಗುಲೋಕ’ದ ಅದ್ಭುತ ಸವಿಯನ್ನು ನಾನು ಸವಿದಿದ್ದು ನನ್ನ ವಿದ್ಯಾರ್ಥಿದೆಸೆಯಲ್ಲಿ, ಧಾರವಾಡದ ಹಾಸ್ಟೆಲ್​ವಾಸದಲ್ಲಿ (ಅದೇ ಕಾರಣಕ್ಕೆ ಇಂದಿಗೂ ನನ್ನ ವಿದ್ಯಾರ್ಥಿಗಳು ಕಾರಣವಿಲ್ಲದೇ ನಗುತ್ತಿದ್ದಾಗ ನಾನು ಬೈಯುವುದಿಲ್ಲ. ಅದು ವಯೋಸಹಜ ಪ್ರಕ್ರಿಯೆಯೆಂಬಂತೆ ಆಹ್ಲಾದಪೂರ್ಣವಾಗಿ ಸವಿಯ ಬಿಡುತ್ತೇನೆ).

ನಾನು ಎಂ.ಎ ಓದಲು ಧಾರವಾಡದ ಅಕ್ಕ ಮಹಾದೇವಿ ಹಾಸ್ಟೆಲ್​ಗೆ ಹೋಗಿಳಿದಾಗ ಮೊದಲ ಕೆಲ ದಿನ ಮನೆ ಬಿಟ್ಟು ಬಂದ ಅನಾಥಪ್ರಜ್ಞೆ ಕಾಡತೊಡಗಿತ್ತು. ಕ್ರಮೇಣ ನನ್ನಂತೇ ದಯನೀಯ ಮುಖವಿಟ್ಟುಕೊಂಡು ಓಡಾಡುತ್ತಿದ್ದ ಅನೇಕ ಹುಡುಗಿಯರು ಸಿಗತೊಡಗಿ ಒಂದು ‘ಲಾಫಿಂಗ್ ಗರ್ಲ್ಸ್’ ಎಂಬ ಟೀಮೇ ರೆಡಿಯಾಯ್ತು. ಅಸಾಧ್ಯ ಕಿಲಾಡಿ ಹುಡುಗಿಯರು ನಗುವುದಷ್ಟೇ ಕೆಲಸವೆಂಬಂತಿದ್ದ ಕೆಲ ನಗೆ(ಕು)ಮಾರಿಗಳು ಅಲ್ಲಿದ್ದರು. ಕ್ಲಾಸ್ ಮುಗಿಸಿ ಬಂದು ತಮ್ಮ ಅನುಭವ ಹೇಳುತ್ತ ನಗಿಸ ತೊಡಗಿದರೆ ರಾತ್ರಿ ಊಟದ ಬೆಲ್ ಆಗುವ ತನಕ ನಗು ಕೇಳಿಬರುತ್ತಿತ್ತು. ಯಾರಾದರೊಂದು ರೂಮಿನಲ್ಲಿ ಸೇರಿ ನಗುವ ನಮ್ಮನ್ನು ವಾರ್ಡನ್ ಆಗಾಗ ಗದರುವುದಿತ್ತು.

‘ಹೇಳಿದ್ದಾನೋರ ಕೇಳಿಸ್ಕೋತಾವೇನ್ರಿ ಅವು? ಯಾವಾಗ್ಲೂ ಪಿಸಿಪಿಸಿ ನಗ್ತಿರ್ತಾವೆ ಖೋಡಿಗಳು’ ಅಂತ ಬೈದಾಗಲೂ ನಗುತ್ತಿದ್ದೆವು. ಕ್ಲಾಸು, ನೋಟ್ಸುಗಳಿಂದ ಸುಸ್ತಾಗಿ ಹಾಸ್ಟೆಲ್ಲಿಗೆ ಬಂದರೆ ನಮ್ಮ ನಗುಗುಂಪು ನಕ್ಕು ಹಗುರಾಗುತ್ತಿತ್ತು. ನಗುವಿನ ಹೊಳೆ ಹರಿಸುತ್ತ ಸುಳಿದಾಡುತ್ತಿತ್ತು.. ಈ ನಡುವೆ ಕನ್ನಡ ಬಾರದ ನನ್ನ ರೂಮ್ಮೇಟು ಒಂದು ಬೆಳಗ್ಗೆ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿತ್ತು. ಅವಳ ತಪು್ಪ ಕನ್ನಡ ಕೇಳಿ (ದೃಷ್ಟಿಕೋಣ ಎನ್ನುತ್ತಿತ್ತು) ನಾನು ನಕ್ಕಿದಿತ್ತಾದರೂ ಅವತ್ತಿನ ಅವಳ ಅಳುವಿಗೆ ನಾನು ಯಾವುದೇ ರೀತಿಯಲ್ಲಿ ಕಾರಣಳಾಗಿರಲಿಲ್ಲ. ಆದರೂ, ಇಡೀ ಹಾಸ್ಟೆಲ್ಲಿಗೆ ನನ್ನ ಮೇಲೇ ಅನುಮಾನ. ರೂಮ್ಮೇಟೇ ಏನೋ ತೊಂದರೆ ಕೊಟ್ಟಿರಬಹುದು ಎಂಬ ತೀರ್ವನ. ಯಾರು ಕಾರಣ ಕೇಳಿದರೂ ಹೇಳದೇ ಬಿಕ್ ಬಿಕ್ ಎಂದು ಬಿಕ್ಕುತ್ತಲೇ ಇದ್ದಳು. ಎಲ್ಲರ ಸಂಶಯದ ದೃಷ್ಟಿ ಎದುರಿಸಿ ನನಗೂ ರೋಸಿ ಹೋಯಿತು. ಅವಳಿಗೆ ದುಂಬಾಲು ಬಿದ್ದು ಕೇಳಿದೆ-‘ಅಮ್ಮಾ ಮರಾಠಿಣಿ, ನಾವು ಕನ್ನಡಿಗರು ಶಾಂತಿಪ್ರಿಯರು. ಯಾರನ್ನೂ ಅಳಿಸುವ ಇರಾದೆ ನಮಗಿಲ್ಲ. ನಿಮ್ಮ ಶಿವಾಜಿ ಮೇಲಾಣೆ. ನಿನ್ನ ಅಳುವಿಗೆ ಏನು ಕಾರಣವೆಂಬುದನ್ನು ನನ್ನ ಸ್ನೇಹಿತೆಯರಿಗೆ ಹೇಳಿಬಿಡು. ನಿನ್ನ ದುಃಖದ ನಿವಾರಣೆಗೆ ಬೇಕಾದರೆ ನನ್ನ ಕೈಲಾದ ಸಹಾಯ ಮಾಡ್ತೇನೆ ತಾಯಿ ಅಳು ನಿಲ್ಲಿಸು’ ಎಂದು ಕೈ ಮುಗಿದೆ. ಹುಡುಗಿ ಕಣ್ಣೊರೆಸಿಕೊಂಡು ರೂಂ ಬಾಗಿಲು ಓಪನ್ ಮಾಡಿ ಕಾದು ನಿಂತಿದ್ದ ಸ್ನೇಹಿತೆಯರಿಗೆ-‘ನನ್ನ ಅಳುವಿಗೆ ಇವಳು ಕಾರಣವಲ್ಲ. ನನಗೆ ನಾಳೆ ಗಣಿತ ಟೆಸ್ಟ್ ಇದೆ. ಏನೂ ಬರ್ತಿಲ್ಲ..’ ಪುನಃ ಅಳು ಶುರು. ಅವತ್ತು ಸಂಜೆಯೇ ಗಣಿತ ಎಂ.ಎಸ್ಸಿ. ಸೀನಿಯರ ಹುಡುಗಿಯೋರ್ವಳನ್ನು ತಂದು ಒಂದು ತಾಸು ಟ್ಯೂಶನ್ ಹೇಳಿಸಿದೆವು. ಹುಡುಗಿ ಪಾಸಾಯಿತು. ಮುಗುಳ್ನಗುತ್ತ ಓಡಾಡತೊಡಗಿತು. ನನಗೆ ಬಂದ ಅಪವಾದ ದೂರವಾಯ್ತು. ಅಷ್ಟರ ಬಳಿಕ ಆ ಹುಡುಗಿ ಎದುರಿಗೆ ಬಂದಾಗೆಲ್ಲ ‘ಅಳು ಮುಂಜಿ ಬಂದ್ಳು ನೋಡು’ ಎಂದು ತಮಾಶೆ ಮಾಡಿ ನಕ್ಕಾಗೆಲ್ಲ ಅರ್ಥವಾಗದ ಆ ಮರಾಠಿಣಿ ಮುಗುಳ್ನಕ್ಕು ಮುಂದೆ ಹೋಗುತ್ತಿತ್ತು. ಮತ್ತೆ ನಗುಬಾಂಬ್ ಸ್ಪೋಟ. ಹೀಗೆ ಅಂದು ನಾವು ಕಟ್ಟಿಕೊಂಡಿದ್ದ ‘ನಗೆಯದೊಂದು ನಾಡು’ ಇಂದಿಗೂ ನನ್ನ ಧಮನಿಗಳಲ್ಲಿ ಹರಿದಾಡಿಕೊಂಡಿದೆ.

ನನ್ನ ಕೈಯ ಹಿಡಿದಾಕೆ/ಅಳು ನುಂಗಿ ನಗು ಒಮ್ಮೆ ಎಂದು ಬೇಂದ್ರೆಯವರು ಮಡದಿಯಲ್ಲಿ ಕೇಳಿಕೊಂಡರು. ಅಳು ಅದರ ಪಾಡಿಗೆ, ನಗು ನಮ್ಮ ಪಾಲಿಗೆ ಎಂಬುದೇ ವಿಶ್ವ ನಗುವಿನ ದಿನದ ನಮ್ಮ ಮಂತ್ರವಾಗಲಿ. ‘ನಗೆಗನ್ನಡಂ ಗೆಲ್ಗೆ’.

(ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಹಾಸ್ಯ ಸಾಹಿತಿ)

Leave a Reply

Your email address will not be published. Required fields are marked *