ಯುಗಾದಿ ಪುರುಷ ಈ ಬಾರಿ ಹಣ್ಣು ತಿಂದಿದ್ದನಾ?

ಪ್ರತಿ ವರ್ಷ ಯುಗಾದಿಯಂದು ನಮ್ಮೂರ ದೇವಸ್ಥಾನದಲ್ಲಿ ನಡೆಯುವ ಪಂಚಾಂಗ ಶ್ರವಣ ಕಾರ್ಯಕ್ರಮಕ್ಕೆ ಹಿರಿಯರ್ಯಾರನ್ನಾದರೂ ಜತೆಯಾಗಿಸಿಕೊಂಡು ಹೋಗಿ ಕೂತು ಭಟ್ಟರು ಹೊಸ ಪಂಚಾಂಗದ ಕುರಿತು ನಡೆಸಿಕೊಡುವ ‘ವಿಮರ್ಶಾಗೋಷ್ಠಿ’ಯಲ್ಲಿ ಭಾಗವಹಿಸುವುದು ನನಗಂತೂ ರೋಚಕ ಅನುಭವ ನೀಡುತ್ತಿತ್ತು. ಯುಗಾದಿ ಮಹತ್ವ, ಯುಗಾದಿ ಪುರುಷನ ವರ್ಣನೆ, ದೇಶಕ್ಕೆ ಈ ಬಾರಿ ಯುಗಾದಿ ಹೇಗೆ? ಎಂದೆಲ್ಲ ಆಕರ್ಷಕವಾಗಿ ವಿವರಿಸಿ ಮಳೆ-ಬೆಳೆ ವಿಚಾರ ತಿಳಿಸಿ ಹೇಳಿ ಕೊನೆಯಲ್ಲಿ ದ್ವಾದಶ ರಾಶಿಯವರಿಗೆ ಇಡೀ ವರ್ಷ ಏನೇನು ವಿಶೇಷಗಳನ್ನು ಹೊತ್ತು ತರಲಿದೆ ಎಂದು ವಿವರಿಸಿ ಕಾರ್ಯಕ್ರಮಕ್ಕೆ ಮಂಗಳ ಹಾಡುತ್ತಿದ್ದರು.

ಟಿ.ವಿ.ಯಿಲ್ಲದ ಕಾಲ. ಮಾಮೂಲು ಶೈಲಿಯಲ್ಲಿ ಪುರೋಹಿತರ ‘ಯುಗಾದಿಯ ಮಹತ್ವ’ ಪ್ರವರ ಶುರುವಾಗಿ ಮುಂದೆ ಯುಗಾದಿಪುರುಷನು ಯಾವುದರ ಮೇಲೆ, ಯಾವ ದಿಕ್ಕಿಗೆ ಏನನ್ನು ಧರಿಸಿ, ತಿಂದು ಸಾಗಿದ್ದಾನೆ… ಎಂದು ಹೇಳುವಾಗ ಇಡೀ ಹಳ್ಳಿಯ ಜನ ಕಿವಿ ನೆಟ್ಟಗಾಗಿಸಿ ಕೇಳುತ್ತಿದ್ದರು. ಆ ವರ್ಣನೆಯ ಒಕ್ಕಣೆಯೇ ವಿಶಿಷ್ಟ ಧಾಟಿಯಲ್ಲಿರುತ್ತಿತ್ತು. ‘ಈ ವರ್ಷ ಕಾಲಪುರುಷನು ಲಾಕ್ಷಾ ತೈಲವನ್ನು ಮೈಗೆ ಹಚ್ಚಿಕೊಂಡು ಸರಸ್ವತೀ ನದಿಯಲ್ಲಿ ಸ್ನಾನ ಮಾಡಿ, ಕಂಬಳಿಯನ್ನು ಧರಿಸಿ, ಮುತ್ತಿನಾಭರಣಗಳಿಂದ ಅಲಂಕೃತನಾಗಿ ಬಜೆ ಹಚ್ಚಿಕೊಂಡು, ಪಾಟಲೀ ಪುಷ್ಪಗಳಿಂದ ಶೋಭಿತನಾಗಿ ಕಡಲೆ ಹಣೆಗೆ ಹಚ್ಚಿ, ತಾಮ್ರಪಾತ್ರೆಯಲ್ಲಿ ಮೊಸರನ್ನು ತಿನ್ನುತ್ತ, ತಾಳೆ ಹಣ್ಣನ್ನು ಕೈಯಲ್ಲಿ ಹಿಡಿದು, ಎಮ್ಮೆ ಮೇಲೆ ಕುಳಿತು, ಪಾಲಾಶ ಛತ್ರ ಹಿಡಿದು ಪಿನಾಕೀ ವಾದ್ಯಗಳೊಂದಿಗೆ ಗೋವುಗಳ ಗುಂಪಿನಲ್ಲಿ ಲೋಲ ಮುಖಿ ವದನನಾಗಿ ಪೂರ್ವದಿಕ್ಕಿನಿಂದ ಬಂದು ಈಶಾನ್ಯ ದಿಕ್ಕನ್ನು ನೋಡುತ್ತ ಉತ್ತರಾಭಿಮುಖವಾಗಿ ಪ್ರಯಾಣ ಮಾಡುತ್ತಾನೆ. ಈತ ಧರಿಸಿದ ಹಾಗೂ ಉಪಯೋಗಿಸಿದ ವಸ್ತುಗಳೆಲ್ಲವೂ ತುಟ್ಟಿಯಾಗುವವು. ಅವನು ಹೋದ ಮತ್ತು ನೋಡಿದ ದಿಕ್ಕಿಗೆ ಹಾನಿಯುಂಟು ಮಾಡುತ್ತಾನೆ. ಅವನು ಬಂದ ದಿಕ್ಕಿಗೆ ಶುಭವನ್ನುಂಟು ಮಾಡುತ್ತಾನೆ….’ ಎಂದು ಮುಗಿಸಿ ಮೌನ ತಳೆಯುತ್ತಾರೆ. ಇಡೀ ಸಭಾಂಗಣ ಮೌನವಾಗಿ ಮನಸ್ಸಿನಲ್ಲೇ ಲೆಕ್ಕಾಚಾರ, ಊಹೆ ಶುರು ಮಾಡುತ್ತದೆ. ಒಳಗಣ್ಣ ಮುಂದೆ ಕಾಲಪುರುಷ.

ಒಂದು ವರ್ಷ, ಕಾಲಪುರುಷನು ಈ ಬಾರಿ ಎಲೆ, ಅಡಿಕೆ, ಸುಣ್ಣ ಮೆಲ್ಲುತ್ತ ತಾಂಬೂಲತುಟಿಯಿಂದ ನಸುನಗು ಸೂಸುತ್ತ ಉತ್ತರ ದಿಕ್ಕಿಗೆ ಸಾಗುತ್ತಾನೆ ಎಂದಿದ್ದೇ ತಡ ಹಷೋದ್ಗಾರವೆದ್ದಿತು. ಅಡಿಕೆ ಬೆಳೆಯುವವರಿಗೆಲ್ಲ ಉತ್ತರ ಭಾರತದ, ಗುಜರಾತಿನ ವ್ಯಾಪಾರಿಗಳೇ ಹಣವೊದಗಿಸುವ ಗಿರಾಕಿಗಳು. ಈ ವರ್ಷ ಅಡಿಕೆಗೆ ಒಳ್ಳೇ ರೇಟು ಬರುತ್ತದೆ! ಒಳ್ಳೇ ಎಮ್ಮೆ ತಂದು ಕಟ್ಟಬಹುದು, ಕೂಸಿಗೆ ಬಂಗಾರ ಮಾಡಿಸ್ಲಕ್ಕು. ಮಾಣಿಗೆ ಬೈಕು ಕೊಡಿಸ್ಲಕ್ಕು … ಎಂದು ಕನಸು ಕಾಣತೊಡಗಿದರು.

ಆದರೆ ಆಗಿದ್ದೇ ಬೇರೆ. ಯಾವುದೋ ತಲೆಬುಡವಿಲ್ಲದ ವರದಿಯೊಂದರಲ್ಲಿ ಅಡಿಕೆಯಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶವಿರುವುದರಿಂದ ಗುಟ್ಕಾ ನಿಷೇಧ ಮಾಡಬೇಕು ಎಂದು ಶಿಫಾರಸು ಮಾಡಲ್ಪಟ್ಟಿತು. ಅಡಿಕೆ ರೇಟು ಢಮಾರ್ ಎಂದಿತು. ಕಾಳು ಮೆಣಸು, ಕೋಕೋಗಳು ಅಡಿಕೆ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳದಂತೆ ಕೈಹಿಡಿದವು. ದೆಹಲಿಗೆ (ಉತ್ತರ ದಿಕ್ಕಿಗೆ?) ಬೆಳೆಗಾರರ ನಿಯೋಗ ಹೋಯಿತು. ದೇಶಪುರುಷನಿಗೆ (ಪ್ರಧಾನಿ?) ಮನವರಿಕೆ ಮಾಡಲಾಯಿತು. ಗುಟ್ಕಾಕ್ಕೆ ಸೇರಿಸುವ ರಾಸಾಯನಿಕವು ಹಾನಿಕರವಾಗಿರಬಹುದು. ಆದರೆ ತಲತಲಾಂತರದಿಂದ ತಾಂಬೂಲ ಸೇವನೆಯನ್ನು ಆರೋಗ್ಯಕರ ಹವ್ಯಾಸವನ್ನಾಗಿಸಿಕೊಂಡು ಬಂದಿರುವುದರಿಂದ ಅಡಿಕೆಯನ್ನು ನಿಷೇಧಿಸಬಾರದು ಎಂದು ವಾದಿಸಿದ್ದನ್ನು ಒಪ್ಪಿ ದೇಶಪುರುಷನು-‘ಠೀಕ್ ಹೈ, ಚಿಂತಾ ಮತ್ ಕರೋ ಮೈ ಹೂನಾ’ ಎಂದು ಹಿಂದಿಯಲ್ಲಿ ಸಮಾಧಾನಿಸಿ ಕಳಿಸಿದರು.

ಅಷ್ಟರ ಬಳಿಕ ತೆಂಗಿನೆಣ್ಣೆ ಪೂಸಿಕೊಂಡು, ಯಾಲಕ್ಕಿ ತಿನ್ನುತ್ತ (ಕಾಫಿ ಕುಡಿಯುತ್ತ?) ಮೊದಲಾದ ವರ್ಣನೆಗಳಿಗೆ ಉದ್ಗಾರಗಳೇ ಏಳುವುದಿಲ್ಲ. ನಮ್ಮೂರಲ್ಲಿ ಅಡಿಕೆ, ತೆಂಗು, ಏಲಕ್ಕಿ, ಕಾಫಿ ಬೆಳೆಯುತ್ತವೆ. ಯುಗಾದಿ ಪುರುಷ ಅವುಗಳನ್ನು ಬಳಸಿದರೆ ಅವುಗಳಿಗೆ ಬೆಲೆ ಏರುತ್ತದೆಯೆಂಬ ಖುಷಿಗಿಂತ ಅವು ಸಂಕಷ್ಟಕ್ಕೀಡಾದರೆ? ಎಂಬ ಚಿಂತೆಯೇ ಹೆಚ್ಚಿ ಮೌನವಾಗುತ್ತಾರೆ. ಪುರೋಹಿತರಲ್ಲಿ ಅದಕ್ಕೆ ವಿವರಣೆಯಿಲ್ಲ.

ನಮ್ಮ ರಾಜ್ಯದಲ್ಲಿ ಎಷ್ಟು ಪಂಚಾಂಗಗಳಿವೆಯೋ ಲೆಕ್ಕವಿಲ್ಲ. ಉತ್ತರ ಕನ್ನಡ ಜಿಲ್ಲೆಯ ನನ್ನ ಹಳ್ಳಿಯ ಸುತ್ತಮುತ್ತ ಚಾಲ್ತಿಯಲ್ಲಿರುವುದು ‘ಬಗ್ಗೋಣ ಪಂಚಾಂಗ’. ಹೆಚ್ಚಾಗಿ ಪಂಚಾಂಗ ಕರ್ತೃಗಳು ಪುರುಷರೇ ಆಗಿರುತ್ತಾರೆ. ಆದರೆ ಮನೆ-ಮನೆಯಲ್ಲೂ ದಿನ, ತಿಥಿ, ವಿಶೇಷ ಮುಹೂರ್ತಗಳಿಗಾಗಿ ಆಶ್ರಯಿಸಿರುವ ಬಗ್ಗೋಣ ಪಂಚಾಂಗವನ್ನು ರಚಿಸಿ ಮುದ್ರಿಸಿರುವವರು ಓರ್ವ ಮಹಿಳೆ! ಕುಮಟಾದ ಬಳಿಯ ಬಗ್ಗೋಣದ ಪಂಡಿತರ ಮಗಳು ಜಯಕ್ಕ. ಗೋಕರ್ಣದಲ್ಲಿ ನೆಲೆಸಿದ್ದಾರೆ.

ಈ ಸರಳ ಮೇಧಾವಿ ಮಹಿಳೆಯನ್ನು ಪಂಚಾಂಗಕರ್ತೆಯನ್ನು ಒಮ್ಮೆ ಭೆಟ್ಟಿಯಾಗಬೇಕೆಂಬ ನನ್ನ ಮನದಿಚ್ಛೆಯನ್ನು ಗೋಕರ್ಣದ ವನಿತೆಯರು ಪೂರೈಸಿದರು. ವನಿತಾ ಬಳಗದ ಕಾರ್ಯಕ್ರಮಕ್ಕೆ ಗೋಕರ್ಣಕ್ಕೆ ಹೋದಾಗ ಬಗ್ಗೋಣ ಪಂಚಾಂಗಕರ್ತೆ ಜಯಕ್ಕ ವೇದಿಕೆಯಲ್ಲಿದ್ದರು. ಅವರನ್ನು ಸನ್ಮಾನಿಸುವ ಸುಯೋಗ ನನಗೆ ಪ್ರಾಪ್ತವಾಯಿತು. ‘ಯಾವುದೇ ಜ್ಞಾನದ ಶಾಖೆಯನ್ನು ತಪಸ್ಸಿನಂತೆ ಶ್ರಮವಹಿಸಿ ಸಾಧಿಸಿಕೊಂಡವರಿಗೆ ಹಮ್ಮುಬಿಮ್ಮು ಹತ್ತಿರ ಸುಳಿಯುವುದಿಲ್ಲ. ಕಬ್ಬಿಣದ ಕಡಲೆಯಂತಿರುವ ದೃಗ್ಗಣಿತ, ಗ್ರಹ ನಕ್ಷತ್ರಗಳ ಚಲನೆಯ ಕರಾರುವಾಕ್ ಲೆಕ್ಕ, ಶಾಸ್ತ್ರ, ಪರಂಪರೆಗಳ ಅರಿವು… ಇಂಥವುಗಳನ್ನು ಪಡೆದೂ ನಿಗರ್ವಿ ಮಹಿಳೆಯೋರ್ವಳು ನಿಮ್ಮೂರಲ್ಲಿ ನೆಲೆಸಿದ್ದಾರೆಂಬುದೇ ಹೆಮ್ಮೆಯ ವಿಚಾರ’ ಎಂದು ಹೇಳಿದೆ. ಕಾರ್ಯಕ್ರಮ ಮುಗಿದ ಬಳಿಕ ‘ಹತ್ತು ನಿಮಿಷ ನಿಮ್ಮ ಮನೆಗೆ ಬರಲೆ?’ ಎಂದು ಕೇಳಿದೆ. ಸಂತೋಷದಿಂದ, ‘ಓಹ್, ಮುದ್ದಾಂ ಬನ್ನಿ’ ಎಂದರು ಜಯಕ್ಕ. ಆರೋಗ್ಯ ಇಲಾಖೆಯ ಸರ್ಕಾರಿ ನೌಕರಿ, ಮನೆಯಲ್ಲಿನ ಅಡುಗೆ, ಆದರಾತಿಥ್ಯ, ಅಧ್ಯಯನ, ಗ್ರಂಥ ಪಂಚಾಂಗ ಪರಾಮರ್ಶನ, ಜಾತಕ ಫಲ ಪರಿವೀಕ್ಷಣೆ… ಹೇಗೆ ನಿಭಾಯಿಸುತ್ತೀರಿ ಜಯಕ್ಕ? ಎಂದು ಕೇಳಿದರೆ ಮುಗುಳ್ನಗೆ.

ತಂದೆಯಿಂದ ಬಂದ ಅಧ್ಯಯನಶೀಲತೆ, ಶ್ರದ್ಧೆ, ತರಬೇತಿಗಳೇ ಪಂಚಾಂಗ ರಚನೆಯಲ್ಲಿ ತನಗೆ ಸಹಾಯಕ್ಕೆ ಬರುವಂಥದ್ದು. ಗೋಕರ್ಣದಲ್ಲಿರುವ ಹಿರೇಭಟ್ಟರಂಥವರ ಸಲಹೆ, ಸಹಕಾರ… ಅಪ್ಪನ ನಿಧನಾನಂತರ ಪ್ರತಿ ವರ್ಷ ಹೊರತರುತ್ತಿರುವ ಬಗ್ಗೋಣ ಪಂಚಾಂಗದಲ್ಲಿ ಎಂದೂ ದೋಷಗಳು, ಪ್ರಮಾದಗಳು ನುಸುಳಿಲ್ಲ. ಗ್ರಹಣ, ಅಧಿಕ ಮಾಸಗಳ ನಿಖರ ದಿನಾಂಕಗಳೂ ನಿಯಮ ತಪ್ಪಿಲ್ಲ. ಈಗೀಗ ಕಂಪ್ಯೂಟರ್ ಬಳಕೆಯಿಂದ ಶ್ರಮ ಕಡಿಮೆಯಾಗಿದೆಯಾದರೂ ಮೊದಮೊದಲು ಪಾಟಿ ಕಡ್ಡಿ, ಕೋಲುಗಳನ್ನೆಲ್ಲ ಬಳಸಿ ಲೆಕ್ಕದ ನಿಖರತೆ ಸಾಧಿಸುವ ಸವಾಲಿತ್ತು. ರಾತ್ರಿಯೆಲ್ಲ ನಿದ್ದೆಗೆಟ್ಟು ಬರೆದದ್ದಿದೆ. ಈಗ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆಗೊಂದರಂತೆ ಬಗ್ಗೋಣ ಪಂಚಾಂಗವಿರುವುದೂ ಶುಭ ಕಾರ್ಯಗಳಿಗೆ ಆಕರಶಾಸ್ತ್ರದಂತೆ ಬಳಕೆಯಾಗುತ್ತಿರುವುದೂ ಖುಷಿಯ ಸಂಗತಿ ಎಂದರು. ಜ್ಯೋತಿಷ ಶಾಸ್ತ್ರ, ಜಾತಕ ರಚನೆ, ಪಂಚಾಂಗ ನಿರ್ವಣಗಳೆಲ್ಲ ಸ್ತ್ರೀಯರಿಂದ ದೂರವೇ ಇದ್ದ ಕಾಲದಲ್ಲಿ ಸಂಸ್ಕೃತ, ಜ್ಯೋತಿಷ ಇತ್ಯಾದಿಗಳನ್ನು ಮಗಳಿಗೆ ಕಲಿಸಿಟ್ಟು ಹೋದ ಬಗ್ಗೋಣ ಪಂಡಿತರೂ ಅಭಿನಂದನಾರ್ಹರೇ.

ಆಸ್ತಿಕ ಜನರು ಅದರಲ್ಲೂ ಹೆಚ್ಚಾಗಿ ಹಳ್ಳಿಗರು ಸಾಮಾನ್ಯವಾಗಿ ಪಂಚಾಂಗ ನೋಡದೆ ಯಾವುದೇ ಹೊಸ ಕೆಲಸ ಪ್ರಾರಂಭಿಸುವುದಿಲ್ಲ. ಬಾವಿ ತೋಡಿಸುವುದು, ಗದ್ದೆ ನೆಟ್ಟಿ ಪ್ರಾರಂಭ-ಕೊನೆ ಕೊಯ್ಲು ಶುರು ಮಾಡುವುದು, ಮನೆ ಕಟ್ಟಿಸುವ ಮುಹೂರ್ತ, ಮಕ್ಕಳ ಜನನ, ಹೆಸರಿಡುವುದು, ಹೆಣ್ಣು ನೋಡಲು ಹೋಗುವುದು, ಮದುವೆ ದಿನಾಂಕ, ಕೊನೆಗೆ ಸತ್ತಾಗ ಸಹ ಸತ್ತ ಮುಹೂರ್ತ ಒಳ್ಳೆಯದಿದೆಯೇ… ಎಂದು ನೋಡುತ್ತಾರೆ. ರಾಜಕೀಯದವರೂ ನಾಮಿನೇಶನ್ ಫೈಲ್ ಮಾಡಲು, ಪ್ರಮಾಣವಚನ ಸ್ವೀಕರಿಸಲು ಮುಹೂರ್ತಗಳ ಮೊರೆ ಹೋಗುತ್ತಾರೆ. ಭಾರತೀಯ ಮಣ್ಣಿನಿಂದ ಪಂಚಾಂಗವನ್ನು ಕಿತ್ತೋಡಿಸಬೇಕೆಂಬ ನಾಸ್ತಿಕರ ಹುಯಿಲು ಕಾರ್ಯಗತಗೊಳ್ಳಲು ಅವರು ಏಳು ಜನ್ಮ ತಾಳಿ ಬಂದರೂ ಸಾಧ್ಯವಾಗದು ಎಂಬಂತಿದೆ ನಮ್ಮ ಆಸ್ತಿಕತೆಯ ಆಳ. ‘ರಾಹುಕಾಲದಲ್ಲಿ ಮದುವೆಯಾದೆವು’, ‘ಅಮಾವಾಸ್ಯೆಯ ದಿನ ಗೃಹಪ್ರವೇಶ ಮಾಡಿದೆವು’ ಎಂದು ಗುಲ್ಲೆಬ್ಬಿಸುವ ವಿಚಾರವಾದಿಗಳೂ ಅಮಾವಾಸ್ಯೆ ಎಂದು ಬರುತ್ತದೆ ಎಂದು ತಿಳಿಯಲು ಪಂಚಾಂಗವನ್ನೇ ತೆರೆದು ನೋಡಬೇಕಾಗುತ್ತದೆ. ಇನ್ನು ಕೆಲವರಂತೂ ಸಾರ್ವಜನಿಕವಾಗಿ ತಾನು ಮುಹೂರ್ತ, ಪೂಜೆ, ಪಂಚಾಂಗ, ಜ್ಯೋತಿಷ ನಂಬುವವನಲ್ಲ ಎಂದು ಹೇಳಿಕೊಳ್ಳುತ್ತ ಗುಟ್ಟಾಗಿ ಪೂಜೆ ಪುನಸ್ಕಾರ ಮಾಡಿಸಿ ಪುನೀತರಾಗುತ್ತಾರೆ. ಇಂಥವರನ್ನು ಕಂಡರೆ ನಮ್ಮ ಕಾಲಪುರುಷ ವ್ಯಂಗ್ಯದ ಮುಗುಳ್ನಗೆ ಬೀರದಿದ್ದಾನೆಯೆ?

ಕಳೆದ ಕೆಲ ದಿನಗಳಿಂದ ನಿಫಾ ವೈರಸ್ಸಿನ ಕುರಿತು ಬರುತ್ತಿರುವ ಸಚಿತ್ರ ಸಂದೇಶಗಳಲ್ಲಿ ಬಾವಲಿಯು ಚೀಪುವ ಹಣ್ಣುಗಳ ಚಿತ್ರವೂ ಬರುತ್ತಿದೆಯಷ್ಟೆ. ಅದರಲ್ಲಿ ಈ ಬಾರಿಯ ಸಂಕ್ರಾಂತಿ ಪುರುಷ ಕೈಯಲ್ಲಿ ಹಿಡಿದುಕೊಂಡಿರುವ ತಾಳೆಯ ಹಣ್ಣೂ ಒಂದಿದೆ! ಅದನ್ನು ನೋಡಿ ನನಗೆ ನಮ್ಮ ಹಳ್ಳಿಯ ಪಂಚಾಂಗ ಶ್ರವಣದ ಕ್ಷಣದಲ್ಲಿನ ಮೌನವೇ ನೆನಪಿಗೆ ಬಂತು.

ಕರಾವಳಿಯಲ್ಲಿ ಹುಲುಸಾಗಿ ಬೆಳೆಯುವ ಈ ತಾಳೆಯ ಹಣ್ಣು ನಮ್ಮ ಎಳೆ ಎಳನೀರಿನ ಹಾಗೇ ಚಿಕ್ಕವಿರುತ್ತದೆ. ತಳ್ಳು ಗಾಡಿಯಲ್ಲಿ ಅವುಗಳನ್ನು ತುಂಬಿಕೊಂಡು ಟಕ ಟಕ ಎಂದು ಕತ್ತಿವರಸೆ ಮಾಡುತ್ತ, ಕುಟ್ಟುತ್ತ ‘ಈರೋಳ್ ಈರೋಳ್’ ಎಂದು ಶ್ರುತಿಬದ್ಧವಾಗಿ ಬರುವ ಗಾಡಿಯ ಸುತ್ತ ಜನ ನೆರೆಯುತ್ತಾರೆ. ಅದನ್ನಾತ ಕೆತ್ತಿ ಕೆತ್ತಿ ಕೊಡುತ್ತಿದ್ದಂತೆ ಎಳನೀರಿನ ಒಳಗಿರುವ ಬಾವು (ತಿಳಿ ತೆಂಗು) ಇರುವಂತೇ ರುಚಿಯಾದ ಹಣ್ಣನ್ನು ತಿಂದು ಪಾರ್ಸೆಲ್ ಮಾಡಿಸಿ ಒಯ್ಯುವ ದೃಶ್ಯ ಕರಾವಳಿಯ ಮಂಗಳೂರು, ಉಡುಪಿ, ಕುಂದಾಪುರಗಳಲ್ಲಿ ಸಾಮಾನ್ಯ.

ಇನ್ನೀಗ ಇವಕ್ಕೆ ಬಾವಲಿ ಕಚ್ಚಿದ ಹಣ್ಣು ಎಂದು ಅಪವಾದ ಬಂದ ಬಳಿಕ ಈ ತಳ್ಳುಗಾಡಿಗಳ ಒಡೆಯರು ಕೆಲಸ ಕಳೆದುಕೊಳ್ಳುತ್ತಾರೆ. ‘ಈರೊಳ್’ಗಳು ನೀರೋಳ್ ಮುಳುಗುತ್ತವೆ. ಒಂದು ಆರ್ಥಿಕ ಮೂಲವೇ ಮೂಲೆಗುಂಪಾದರೆ ಅದಕ್ಕಿಂತ ದೊಡ್ಡ ಹೊಡೆತ ಬೇರುಂಟೆ? ಹಾಗೆಯೇ ಉಳಿದ ಹಣ್ಣುಗಳೂ ನಿಫಾಪವಾದಕ್ಕೆ ತುತ್ತಾಗಿ ಬೇಡಿಕೆ ಕಳೆದುಕೊಳ್ಳುತ್ತಿರುವ ದೃಶ್ಯಗಳು ಕರುಳು ಹಿಂಡುತ್ತವೆ. ಎಲ್ಲ ಹಣ್ಣಿನ ಬೆಳೆಗಾರರ, ಮಾರುವವರ, ತಿನ್ನುವವರ ಪರವಾಗಿ ನಿಫಾ ವೈರಸ್ಸೇ ಕರುಣೆಯಿಟ್ಟು ತೊಲಗು ಎಂದು ಬೇಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇನೆ.

(ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

Leave a Reply

Your email address will not be published. Required fields are marked *