ಮುದೂರು ದಲಿತರಿಗೆ ದಿಗ್ಬಂಧನ!

ನೀರಿಗೂ ಬೇಕು ದೊಣ್ಣೆ ನಾಯಕನ ಅಪ್ಪಣೆ ಕಾಯಿಲೆ ಬಿದ್ದವರ ಆಸ್ಪತ್ರೆಗೆ ಸಾಗಿಸಲು ಬೇಕು ಒಪ್ಪಿಗೆ>> 

– ಶ್ರೀಪತಿ ಹೆಗಡೆ ಹಕ್ಲಾಡಿ ಮುದೂರು
ರಸ್ತೆಯಲ್ಲಿ ಸಂಚರಿಸುವುದಕ್ಕೆ ಪಡೆಯಬೇಕು ಪಾಸ್. ಸ್ವಂತ ಮನೆಯ ಕಾರ್ಯಕ್ರಮಕ್ಕೂ ಒಪ್ಪಿಗೆ ಕಡ್ಡಾಯ, ಅನಾರೋಗ್ಯ ಪೀಡಿತರ ಆಸ್ಪತ್ರೆಗೆ ಸಾಗಿಸಲೂ ಬೇಕು ಅನುಮತಿ. ಹೊರಗೆ ಹೋದವರು ರಾತ್ರಿ ಎಂಟರ ಒಳಗೆ ಬಾರದಿದ್ದರೆ ಬೆಳಕು ಹರಿಯುವವರೆಗೂ ರಸ್ತೆ ಬದಿ ಕೂತು ಕಾಯಬೇಕು!
-ಇದಾವುದೋ ಪಾಳೆಗಾರರ ಕಪಿಮುಷ್ಠಿಗೆ ಸಿಕ್ಕಿ ನಲುಗುತ್ತಿರುವ ಊರಿನ ಕಥೆಯಲ್ಲ, ಅತ್ಯಂತ ಸುಸಂಸ್ಕೃತ, ವಿದ್ಯಾವಂತ, ಬುದ್ಧಿವಂತ ನಾಗರಿಕರಿರುವ ಉಡುಪಿ ಜಿಲ್ಲೆಯಲ್ಲಿನ ಒಂದು ಪ್ರದೇಶದಲ್ಲಿ ಹೀಗೆ ದಲಿತರಿಗೆ ದಿಗ್ಭಂದನ ವಿಧಿಸಲಾಗಿದ್ದು, ನಾಗರಿಕ ಪ್ರಪಂಚವೇ ತಲೆ ತಗ್ಗಿಸುವಂತೆ ಮಾಡಿದೆ.
ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮದ ಮುದೂರು ರಾಮ್‌ಪುರ ಎಸ್ಟೇಟ್ ಪ್ರವೇಶ ಬಳಿ ವಾಸವಿರುವ ನಿವಾಸಿಗಳು ಭೂಮಾಲೀಕರ ದೌಜರ್ನ್ಯಕ್ಕೆ ಸಿಕ್ಕಿ ನಲುಗುತ್ತಿದ್ದಾರೆ. ಕಬ್ಬಿನಕೋಣು, ನುಗ್ಗೆಗದ್ದೆ, ಕೇರಿ ಜನರು ಸ್ವಾತಂತ್ರ್ಯ ಕಳೆದುಕೊಂಡಿದ್ದಾರೆ. ಭಾನುವಾರ, ರಜಾ ದಿನಗಳಲ್ಲಿ ಇವರಿಗೆ ಮನೆಯೇ ಬಂದೀಖಾನೆ. ಅಂಗನವಾಡಿಗೆ ಹೋಗುವ ಪುಟಾಣಿಗಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಲಿಂಗಭೇದವಿಲ್ಲದೆ ಎಲ್ಲರಿಗೂ ಈ ನಿಯಮ ಅನ್ವಯಿಸುತ್ತದೆ.

ಎಸ್ಟೇಟ್‌ನಿಂದ ಸಮಸ್ಯೆ: ನುಗ್ಗೆಗದ್ದೆ, ಕಬ್ಬಿನಕೋಣು, ಕೇರಿ ಪರಿಸರದಲ್ಲಿ 12 ಮನೆಗಳಿದ್ದು, ಎಸ್ಸಿ ಕುಟುಂಬದವರೇ ಹೆಚ್ಚಿದ್ದಾರೆ. ಅಲ್ಪ ಜಮೀನಿನಲ್ಲಿ ಕೃಷಿ ಜತೆಗೆ ಹೊರಗಡೆ ದುಡಿದು ಜೀವನ ಸಾಗಿಸುತ್ತಾರೆ. ಅಜ್ಜನ, ಮುತ್ತಜ್ಜನ ತಲೆಮಾರುಗಳು ಯಾರೂ ಸಂಚಾರ ಸಮಸ್ಯೆ, ದಿಗ್ಬಂಧನಕ್ಕೆ ಸಿಕ್ಕಿರಲಿಲ್ಲ. ಆದರೆ ಯಾವಾಗ ಖಾಸಗಿ ಎಸ್ಟೇಟ್ ಜಾಗ ವಿಕ್ರಯಿಸಿತೋ ಅಂದಿನಿಂದ ಕೇರಿ ನಿವಾಸಿಗಳಿಗೆ ಸಮಸ್ಯೆ ಆರಂಭವಾಗಿದೆ. ಮೂರನೇ ತಲೆಮಾರಿನ ಜನ ಮಾತ್ರ ಸಂಚಾರಕ್ಕೂ ಪಾಸ್ ಪಡೆದು ಓಡಾಡುವಂತಾಗಿದೆ.

ಅರಣ್ಯ ಇಲಾಖೆ ಜಾಣ ಕುರುಡು?
ರಾಮ್‌ಪುರ ಎಸ್ಟೇಟ್ ವಿಶಾಲ ಭೂಭಾಗ ಹೊಂದಿದ್ದು, ಇನ್ನೂ ವಿಸ್ತರಿಸಿಕೊಳ್ಳುತ್ತಲೇ ಇದೆ. ವಿಸ್ತರಿಸುವ ಭರದಲ್ಲಿ ಶತಮಾನ ಕಂಡ ಮರಗಳು ಧರೆಗುರುಳುತ್ತಿವೆ. ಬಡವರು ಮನೆ ಕಟ್ಟಿ ಕೂತರೆ ರಕ್ಷಿತಾರಣ್ಯ, ಡೀಮ್ಡ್ ಫಾರೆಸ್ಟ್ ಎಂದು ಒಕ್ಕಲೆಬ್ಬಸುವ ಅರಣ್ಯ ಇಲಾಖೆಯು ಎಸ್ಟೇಟ್ ಮಾಲೀಕರು ಮರಗಳನ್ನು ಕಡಿದು ರಬ್ಬರ್ ಬೆಳೆದರೂ ಸುಮ್ಮನಿರುವುದೇಕೆ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.

ಹೊಳೆಯ ದಿಕ್ಕೇ ಬದಲು!
ಕಬ್ಬಿನಕೋಣು, ಕೇರಿ, ನುಗ್ಗೆಗದ್ದೆ ಬಳಸಿ ಗುಂಡಿನಹೊಳೆ ಸಂಸ್ಸೆಹೊಳೆ ಹರಿಯುತ್ತಿತ್ತು. ಎಸ್ಟೇಟ್‌ನವರು ಹೊಳೆಗೆ ಎರೆಡೆರೆಡು ಡ್ಯಾಮ್ ನಿರ್ಮಿಸಿ ಕುಡ್ತೆ ನೀರು ಹರಿಯದಂತೆ ಬಂದ್ ಮಾಡಿದ್ದಾರೆ. ಅಡಕೆ, ತೆಂಗು ತೋಟಕ್ಕೂ ನೀರಿಲ್ಲದೆ ಕೃಷಿ ಅವನತಿಯತ್ತ ಹೊರಳುತ್ತಿದೆ. ಎಸ್ಟೇಟ್ ಮಾಲೀಕರು ಕಟ್ಟಿದ ಕಟ್ಟದಿಂದ ಇಡೀ ಗುಡ್ಡದಲ್ಲಿರುವ ರಬ್ಬರ್ ಇನ್ನಿತರ ಬೆಳೆಗೆ ಪೈಪ್‌ಲೈನ್ ಮೂಲಕ ನೀರುಣಿಸಲಾಗುತ್ತಿದೆ. ಸ್ವಾಭಾವಿಕವಾಗಿ ಹರಿವ ಹೊಳೆ ನೀರು ತಿರುಗಿಸಿ ಸ್ವಂತಕ್ಕೆ ಬಳಸಿಕೊಳ್ಳಲು ಖಾಸಗಿ ವ್ಯಕ್ತಿಗಳಿಗೆ ಒಪ್ಪಿಗೆ ಕೊಟ್ಟಿದ್ದು ಯಾರು ಎಂಬುದು ಸ್ಥಳೀಯರ ಪ್ರಶ್ನೆ. ಹೀಗೆ ಪೈಪ್‌ಲೈನ್ ಮೂಲಕ ನೀರು ಬಳಕೆ ಪ್ರಶ್ನಿಸಿದವರ ವಿರುದ್ಧ ದೂರು ನೀಡಿದ ಕಾರಣ ಯಾವುದೇ ಅಪರಾಧ ಮಾಡಿಲ್ಲದಿದ್ದರೂ ಮೂರು ತಿಂಗಳು ಇಲ್ಲಿನವರು ಭೂಗತರಾಗಬೇಕಾಯಿತು. ಹಳೇ ಶೆಡ್ಡಿನಲ್ಲಿ ಗುಜರಿ ಬೈಕ್ ಇಟ್ಟು ಬೆಂಕಿ ಹಚ್ಚಿ ಸುಳ್ಳು ದೂರು ನೀಡಲಾಯಿತು. ಯಾರಾದರೂ ಪ್ರಶ್ನಿಸಿದರೆ ತಮ್ಮ ಮೇಲೆ ಮತ್ತೆಲ್ಲಿ ದೂರು ನೀಡುತ್ತಾರೋ ಎನ್ನುವ ಭಯ ಹುಟ್ಟಿಸಲಾಗಿದೆ.

ಇದೆಂಥ ವ್ಯವಸ್ಥೆ?: ಮುದೂರು ರಾಮ್‌ಪುರ ಎಸ್ಟೇಟ್ ಹಿಂದೆ ಅಯ್ಯಂಗಾರ್ ಭೂಮಿ ಆಗಿದ್ದು, ಮರಗಳ ನಡುವೆ ಏಲಕ್ಕಿ ಬೆಳೆ ಬೆಳೆಯಲಾಗುತ್ತಿತ್ತು. ಈ ಭೂಮಿ ಕುಟ್ಟಿ ಎಂಬವರು ಖರೀದಿಸಿದ್ದು, ಕುಟ್ಟಿ ಅವರಿಂದ ರಾಮಪುರ ಪ್ರೈವೇಟ್ ಲಿಮಿಟೆಡ್ ಹೆಸರಲ್ಲಿ (1982ರಲ್ಲಿ) ವಿಕ್ರಯಿಸಲಾಗಿದೆ. ಹಿಂದೆ ಎಸ್ಟೇಟ್ ಬಾಗಿಲಲ್ಲಿದ್ದ ನಾಗರಿಕರು ಬೇಕೆಂದಾಗ ಬರುವುದಕ್ಕೆ ಹೋಗುವುದಕ್ಕೆ ಯಾವುದೇ ಅಡ್ಡಿ ಆತಂಕ ಇರಲಿಲ್ಲ. ಪ್ರಸಕ್ತ ಗೇಟ್ ಅಳವಡಿಸಿ ಬೀಗ ಹಾಕುವ ವ್ಯವಸ್ಥೆ ಮಾಡಲಾಗಿದೆ. ದಲಿತರೇ ಹೆಚ್ಚಿರುವ ಕೇರಿ ಕಬ್ಬಿನಕೋಣು ನಿವಾಸಿಗಳು ಮನೆಯಿಂದ ಹೊರಗೆ ಹೋಗಬೇಕಿದ್ದರೆ, ಎಸ್ಟೇಟ್ ಬಳಿ ಇರುವ ಆಫೀಸಿಗೆ ಹೋಗಿ ಪಾಸ್ ಪಡೆದು ತೋರಿಸಿ ಹೋಗಬೇಕು. ಅದೂ ಸಮಯದ ಪರಿಮಿತಿಯಲ್ಲಿ. ಇದರಿಂದಾಗಿ ರಾತ್ರಿಯ ಕಾರ್ಯಕ್ರಮಗಳಿಗೆ ಹೋಗುವಂತಿಲ್ಲ, ಇನ್ನು ತಮ್ಮ ಸ್ವಂತ ಮನೆಯಲ್ಲೂ ರಾತ್ರಿ ಕಾರ್ಯಕ್ರಮ ಮಾಡಲು ಆಗುತ್ತಿಲ್ಲ. ರಾತ್ರಿ ಗೇಟ್ ಬಂದ್ ಮಾಡುವುದರಿಂದ ಒಳಗಿನವರು ಹೊರಗೆ, ಹೊರಗಿನವರು ಒಳಕ್ಕೆ ಬರುವುದಕ್ಕೆ ಅವಕಾಶವಿಲ್ಲ.

ಅನುಮತಿಗೆ ವಿಳಂಬ ದಾರಿ ಮಧ್ಯೆಯೇ ಹೆರಿಗೆ
ಹಿಂದೆ ವರ್ಷಕ್ಕೆ ಒಮ್ಮೆ ಪಾಸ್ ಕೊಡುತ್ತಿದ್ದು, ಪ್ರಸಕ್ತ ದಿನಾ ಪಾಸ್ ಪಡೆದು ಹೋಗಬೇಕಿದೆ. ಮನೆಗೆ ಯಾರೇ ನೆಂಟರಿಷ್ಟರು ಬರಬೇಕಿದ್ದರೆ ಅವರ ಅನುಮತಿ ಪಡೆಯಬೇಕು. ಹೆರಿಗೆ ನೋವು ಆರಂಭವಾದ ಮಹಿಳೆಯನ್ನು ಕರೆದುಕೊಂಡು ಹೋಗಲು ರಾತ್ರಿ ಅವರ ಮನೆಗೆ ಹೋಗಿ ಪರ್ಮಿಷನ್ ಪಡೆದು ಕರೆದುಕೊಂಡು ಹೋಗುವ ದಾರಿಮಧ್ಯೆ ಹೆರಿಗೆ ಆಯಿತು ಎಂದು ತಮ್ಮ ಸ್ಥಿತಿ ವಿವರಿಸುತ್ತಾರೆ ಸ್ಥಳೀಯ ನಿವಾಸಿ ಸುಂದರ ಬೋವಿ.

ನಾವು ಎಲ್ಲ ಹಕ್ಕು, ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಶಾಲೆಗೆ ಹೋಗಿ ಬರುವ ಮಕ್ಕಳಿಗೂ ಪಾಸ್ ಬಿಸಿ ಮುಟ್ಟಿದೆ. ನಾವೇನಾದರೂ ಸ್ವರ ಎತ್ತಿದರೆ ನಮಗೆ ಧಮ್ಕಿ ಹಾಕುವುದಲ್ಲದೆ ಕೇಸ್ ಹಾಕುವ ಮೂಲಕ ನಮ್ಮ ಸ್ವರ ಅಡಗಿಸುತ್ತಾರೆ. ಹೊಂಡಗುಂಡಿ ಬಿದ್ದ ರಸ್ತೆಗೆ ಒಂದು ಹಾರೆ ಮಣ್ಣು ಹಾಕಿದರೂ ನಮ್ಮ ಮೇಲೆ ಕೇಸ್ ಬೀಳುತ್ತದೆ. ವಾಹನ ಒಳಕ್ಕೆ ಬಿಡದ ಕಾರಣ ಅಂಗನವಾಡಿಗೆ ಹೋಗುವ ಮಕ್ಕಳು ಮನೆಯಲ್ಲಿ ಉಳಿದಿದ್ದಾರೆ.
– ಲಕ್ಷ್ಮಿ ಬೋವಿ, ಹಿರಿಯ ಮಹಿಳೆ, ಕಬ್ಬಿನಕೋಣು (ಚಿತ್ರ ಇದೆ: ಕೆಎನ್‌ಡಿ_10 ಲಕ್ಷ್ಮೀ))

ರಸ್ತೆ ಅಭಿವೃದ್ಧಿಗೆ ಜಡ್ಕಲ್ ಗ್ರಾಪಂ ಅನುದಾನ ಕಾದಿರಿಸಿದ್ದರೂ ಹಣ ಖರ್ಚು ಮಾಡದಂತೆ ಸ್ಟೇ ತಂದಿದ್ದಾರೆ. ಗ್ರಾಪಂ ಕೂಡ ರಸ್ತೆ ಗ್ರಾಮ ಪಂಚಾಯಿತಿಗೆ ಸೇರಿದ್ದು ಎಂದು ನಿರ್ಣಯ ಮಾಡಿದೆ. ಜಿಲ್ಲಾಡಳಿತ ಗೇಟ್ ತೆರವು ಮಾಡಿ ಪರಿಸರದ ಜನರ ಸರಾಗ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.
– ಶೇಖರ ಬೋವಿ, ಉಪಾಧ್ಯಕ್ಷ, ವ್ಯವಸಾಯ ಸೇವಾ ಸಹಕಾರಿ ಸಂಘ,ಮುದೂರು

Leave a Reply

Your email address will not be published. Required fields are marked *